ಮಾಸ್ಕೋದಲ್ಲಿ ಬಾಂಬ್ ಸ್ಫೋಟ: ರಷ್ಯಾದ ಪರಮಾಣು ರಕ್ಷಣಾ ಪಡೆಗಳ ಮುಖ್ಯಸ್ಥ ಸಾವು

ರೇಡಿಯೋಲಾಜಿಕಲ್, ರಾಸಾಯನಿಕ ಮತ್ತು ಜೈವಿಕ ರಕ್ಷಣಾ ಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲೋವ್ ಅವರು ಎಲೆಕ್ಟ್ರಿಕ್ ಸ್ಕೂಟರ್​ನಲ್ಲಿ ಅಡಗಿಸಿಟ್ಟಿದ್ದ ಬಾಂಬ್​ ಸ್ಫೋಟಿಸಿ ಮೃತಪಟ್ಟಿದೆ.;

Update: 2024-12-17 14:02 GMT
ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲೋವ್

ಉಕ್ರೇನ್​ ಯುದ್ಧದ ಸಂದರ್ಭದಲ್ಲಿ ನಿಷೇಧಿತ ರಾಸಾಯನಿಕ ಸ್ಫೋಟಕಗಳನ್ನು ಬಳಸಿದ್ದಾರೆ ಎಂಬ ಆರೋಪ ಹೊಂದಿದ್ದ ರಷ್ಯಾದ ಪರಮಾಣು ರಕ್ಷಣಾ ಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲೋವ್ ಬಾಂಬ್​ ಸ್ಫೋಟವೊಂದರಲ್ಲಿ ಮೃತಪಟ್ಟಿದ್ದಾರೆ. ಮಂಗಳವಾರ (ಡಿಸೆಂಬರ್ 17) ಮಾಸ್ಕೋದ ಅಪಾರ್ಟ್​ಮೆಂಟ್ ಮುಂದೆ ಘಟನೆ ನಡೆದಿದೆ.

ಅವರು ಪ್ರಯಾಣಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್​​ನಲ್ಲಿಅಡಗಿಸಿಟ್ಟಿದ್ದ ಬಾಂಬ್​ ಸ್ಫೋಟಗೊಂಡು ಮೃತಪಟ್ಟಿದ್ದಾರೆ. ಕಾನೂನು ಜಾರಿ ಅಧಿಕಾರಿಯನ್ನು ಉಲ್ಲೇಖಿಸಿ ರಷ್ಯಾದ ಸುದ್ದಿ ಸಂಸ್ಥೆ ವರದಿ ಮಾಡಿದೆ. ಟಿಎನ್​ಟಿಗೆ ಸಮನಾದ ಸುಮಾರು 300 ಗ್ರಾಂ ಸಾಮರ್ಥ್ಯದ ಸ್ಫೋಟಕ ಹೊಂದಿತ್ತು ಎಂದು ಅವರು ಹೇಳಲಾಗಿದೆ.

ಕಿರಿಲೋವ್ ಮತ್ತು ಅವರ ಸಹಾಯಕನ ಹತ್ಯೆಯನ್ನು ರಷ್ಯಾದ ತನಿಖಾ ಸಮಿತಿ ದೃಢಪಡಿಸಿದೆ. ರಷ್ಯಾದ ಟೆಲಿಗ್ರಾಮ್ ಚಾನೆಲ್​ನಲ್ಲಿ ಪೋಸ್ಟ್ ಮಾಡಲಾದ ಫೋಟೊಗಳಲ್ಲಿ ಛಿದ್ರಗೊಂಡ ಕಟ್ಟಡದ ಪ್ರವೇಶದ್ವಾರ ಮತ್ತು ಸಾಕಷ್ಟು ಅವಶೇಷಗಳು ಕಂಡು ಬಂದಿವೆ.

ಉಕ್ರೇನ್​ನಲ್ಲಿ ನಿಷೇಧಿತ ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆ

ಉಕ್ರೇನ್ ಪ್ರಾಸಿಕ್ಯೂಟರ್​ಗಳು ನಿಷೇಧಿತ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಿದ್ದಾರೆ ಎಂದು ಆರೋಪ ಕಿರಿಲೋವ್ ಮೇಲಿತ್ತು. ಆ ಆರೋಪಗಳನ್ನು ರಷ್ಯಾ ನಿರಾಕರಿಸಿತ್ತು. ಕಿರಿಲೋವ್ ಥರ್ಮೋಬಾರಿಕ್ ರಾಕೆಟ್ ಲಾಂಚರ್, ಟಿಒಎಸ್ -2 ಅನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಷ್ಯಾದ ಮಿಲಿಟರಿ ಅದನ್ನು ಉಕ್ರೇನ್​ ಯುದ್ಧದಲ್ಲಿ ಬಳಸಿದೆ ಎಂದು ವರದಿಯಾಗಿದೆ.

ರಾಸಾಯನಿಕ ಶಸ್ತ್ರಾಸ್ತ್ರಗಳ ನಿಷೇಧ ಸಂಸ್ಥೆ (ಒಪಿಸಿಡಬ್ಲ್ಯೂ) ಬಳಸಲು ನಿಷೇಧಿಸಿರುವ ಕ್ಲೋರೊಪಿಕ್ರಿನ್ ಒಂದು ಎಣ್ಣೆಯುಕ್ತ ದ್ರವವಾಗಿದ್ದು, ಉಸಿರುಗಟ್ಟಿಸುವ ಗುಣ ಹೊಂದಿದೆ ಇದನ್ನು ಮೊದಲನೇ ಮಹಾಯುದ್ಧದ ಸಮಯದಲ್ಲಿ ಅಶ್ರುವಾಯುವಿನ ರೂಪದಲ್ಲಿ ಬಳಸಲಾಗಿತ್ತು.

ರಷ್ಯಾ ತನ್ನ ಬಳಿ ಮಿಲಿಟರಿ ರಾಸಾಯನಿಕ ಶಸ್ತ್ರಾಸ್ತ್ರಗಳಿಲ್ಲ ಎಂದು ಹೇಳಿಕೊಂಡಿದೆ. ಏತನ್ಮಧ್ಯೆ, ಉಕ್ರೇನ್ ಭದ್ರತಾ ಸೇವೆಯು ಫೆಬ್ರವರಿ 2022 ರಿಂದ ಯುದ್ಧಭೂಮಿಯಲ್ಲಿ 4,800 ಕ್ಕೂ ಹೆಚ್ಚು ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆಯನ್ನು ದಾಖಲಿಸಿದೆ ಎಂದು ಹೇಳಿಕೊಂಡಿದೆ. 

Tags:    

Similar News