ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದೇನೆ: ಕೇಟ್ ಮಿಡ್ಲ್‌ಟನ್
ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ವೇಲ್ಸ್‌ನ ರಾಜಕುಮಾರಿ ಕೇಟ್ ಶುಕ್ರವಾರ (ಮಾರ್ಚ್ 22) ಎಂದು ಬಹಿರಂಗಪಡಿಸಿದ್ದಾರೆ.
ಬಿಬಿಸಿ ಸ್ಟುಡಿಯೋಸ್ ದಾಖಲಿಸಿದ ವೀಡಿಯೊ ಹೇಳಿಕೆಯಲ್ಲಿ, ʻಇದೊಂದು ಆಘಾತವಾಗಿದ್ದು, ಒಂದೆರಡು ತಿಂಗಳಿನಿಂದ ಕಠಿಣ ಪರಿಸ್ಥಿತಿಯಲ್ಲಿದ್ದೇನೆ. ಆದರೆ, ನಾನು ಚೆನ್ನಾಗಿದ್ದೇನೆ ಮತ್ತು ಪ್ರತಿದಿನ ಬಲಶಾಲಿಯಾಗುತ್ತಿದ್ದೇನೆʼ ಎಂದು ಹೇಳಿದ್ದಾರೆ. ಜನವರಿಯಲ್ಲಿ ಹೊಟ್ಟೆಯ ಶಸ್ತ್ರಚಿಕಿತ್ಸೆ ನಂತರ ಪರೀಕ್ಷೆ ಮಾಡಿದಾಗ, ಕ್ಯಾನ್ಸರ್ ಪತ್ತೆಯಾಗಿದೆ. ವೈದ್ಯರು ಕೀಮೋಥೆರಪಿಗೆ ಶಿಫಾರಸು ಮಾಡಿದರು. ಫೆಬ್ರವರಿ ಅಂತ್ಯದಲ್ಲಿ ಕೀಮೋಥೆರಪಿ ಪಡೆದಿದ್ದು, ಕೇಟ್ ಮತ್ತು ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿರುವ ಕಿಂಗ್ ಚಾರ್ಲ್ಸ್ ಇಬ್ಬರೂ ಲಂಡನ್‌ನ ಖಾಸಗಿ ಆಸ್ಪತ್ರೆಯಲ್ಲಿ ಒಂದೇ ಸಮಯದಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಕ್ಯಾನ್ಸರ್ ಪೀಡಿತರಿಗೆ ಸಂದೇಶ: ಕೇಟ್(42) ಕ್ಯಾನ್ಸರ್ ಪೀಡಿತರಿಗೆ ಸಕಾರಾತ್ಮಕ ಸಂದೇಶ ನೀಡಿದ್ದಾರೆ, ʼಈ ರೋಗವನ್ನು ಎದುರಿಸುತ್ತಿರುವವರು ನಂಬಿಕೆ ಅಥವಾ ಭರವಸೆಯನ್ನು ಕಳೆದುಕೊಳ್ಳಬಾರದು. ನೀವು ಒಬ್ಬಂಟಿಯಾಗಿಲ್ಲʼ. ತಾವು ಹಾಗೂ ಪತಿ ತಮ್ಮ ಚಿಕ್ಕ ಮಕ್ಕಳಿಗೆ ಪರಿಸ್ಥಿತಿ ವಿವರಿಸಲು ಮತ್ತು ತಾವಿಬ್ಬರು ಸರಿ ಹೋಗುತ್ತಿದ್ದೇವೆ ಎಂಬ ಭರವಸೆ ಮೂಡಿಸಲು ಕೆಲ ಸಮಯ ಬೇಕಾಯಿತು ಎಂದು ಹೇಳಿದರು. ʻಚಿಕಿತ್ಸೆಯನ್ನು ಪೂರ್ಣಗೊಳಿಸುವವರೆಗೆ ಸಮಯ, ಖಾಸಗಿತನʼಕ್ಕೆ ಅವಕಾಶ ನೀಡಬೇಕೆಂದು ವಿನಂತಿಸಿಕೊಂಡಿದ್ದು, ಬಹಿರಂಗಗೊಳಿಸುವಿಕೆಯು ವದಂತಿಗಳು ಮತ್ತು ಊಹಾಪೋಹಗಳ ಗೊಂದಲವನ್ನು ತಡೆಯುವ ಪ್ರಯತ್ನ. ಕಿಬ್ಬೊಟ್ಟೆ ಶಸ್ತ್ರಚಿಕಿತ್ಸೆ ಬಳಿಕ ಅವರು ಕೆಲವು ತಿಂಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.
ʻಜನಸಾಮಾನ್ಯʼರ ರಾಜಕುಮಾರಿ: ಕೇಟ್ ಮಿಡಲ್‌ಟನ್ ಲಂಡನ್‌ನ ಪಶ್ಚಿಮದ ಬರ್ಕ್‌ಷೈರ್ ಕೌಂಟಿಯಲ್ಲಿ ನೆಲೆಸಿದ ಕುಟುಂಬದ ಮೂವರು ಮಕ್ಕಳಲ್ಲಿ ಹಿರಿಯಳು. ಮಿಡಲ್ಟನ್ಸ್ ಕುಟುಂಬದವರು ಶ್ರೀಮಂತರರಲ್ಲ. ಖಾಸಗಿ ಮಾರ್ಲ್‌ಬರೋ ಕಾಲೇಜಿನಲ್ಲಿ ಶಾಲಾ ಶಿಕ್ಷಣದ ಬಳಿಕ ಸ್ಕಾಟ್‌ಲ್ಯಾಂಡ್‌ನ ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದರು. ಅಲ್ಲಿ 2001 ರ ಸುಮಾರಿಗೆ ವಿಲಿಯಂ ಅವರನ್ನು ಭೇಟಿಯಾದರು. 2005 ರಲ್ಲಿ ಕಲಾ ಇತಿಹಾಸದಲ್ಲಿ ಪದವಿ ಪಡೆದರು.