ಲಡಾಖ್‌ನಲ್ಲಿ ಚೀನಾದಿಂದ 2 ಹೊಸ ಕೌಂಟಿಗಳು!: ಭಾರತದ ಖಂಡನೆ

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, "ಈ ಪ್ರದೇಶದಲ್ಲಿ ಭಾರತೀಯ ಭೂಪ್ರದೇಶವನ್ನು ಚೀನಾ ಅಕ್ರಮವಾಗಿ ಆಕ್ರಮಿಸಿಕೊಳ್ಳುವುದನ್ನು ಭಾರತ ಎಂದಿಗೂ ಒಪ್ಪಿಕೊಳ್ಳುವುದಿಲ್ಲ" ಎಂದಿದ್ದಾರೆ.;

Update: 2025-03-22 08:17 GMT

ಚೀನಾವು ಎರಡು ಹೊಸ ಕೌಂಟಿಗಳನ್ನು ನಿರ್ಮಾಣ ಮಾಡುತ್ತಿರುವುದು ಮತ್ತು ಅದರ ಕೆಲವು ಭಾಗಗಳು ಲಡಾಖ್ (Ladakh)ನಲ್ಲಿರುವುದು ನಮ್ಮ ಗಮನಕ್ಕೆ ಬಂದಿದ್ದು, ಈ ವಿಚಾರವನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ "ಗಂಭೀರ" ಪ್ರತಿಭಟನೆಯನ್ನು ದಾಖಲಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, "ಈ ಪ್ರದೇಶದಲ್ಲಿ ಭಾರತೀಯ ಭೂಪ್ರದೇಶವನ್ನು ಚೀನಾ ಅಕ್ರಮವಾಗಿ ಆಕ್ರಮಿಸಿಕೊಳ್ಳುವುದನ್ನು ಭಾರತ ಎಂದಿಗೂ ಒಪ್ಪಿಕೊಳ್ಳುವುದಿಲ್ಲ" ಎಂದಿದ್ದಾರೆ. ರಾಜತಾಂತ್ರಿಕ ಮಾರ್ಗಗಳ ಮೂಲಕ ಈ ಬೆಳವಣಿಗೆಗಳ ಬಗ್ಗೆ ಸರ್ಕಾರ ಗಂಭೀರ ಪ್ರತಿಭಟನೆಯನ್ನು ದಾಖಲಿಸಿದೆ ಎಂದೂ ಅವರು ಹೇಳಿದ್ದಾರೆ.

"ಲಡಾಖ್‌ನಲ್ಲಿ ಭಾರತೀಯ ಭೂಪ್ರದೇಶವನ್ನು ಸೇರಿಸಿಕೊಂಡು ಹೋಟಾನ್ ಪ್ರಾಂತ್ಯದಲ್ಲಿ ಚೀನಾ ಎರಡು ಹೊಸ ಕೌಂಟಿಗಳನ್ನು ಸ್ಥಾಪಿಸಿರುವ ವಿಚಾರ ಸರ್ಕಾರಕ್ಕೆ ತಿಳಿದಿದೆಯೇ" ಎಂದು ಸಚಿವಾಲಯವನ್ನು ಪ್ರಶ್ನಿಸಲಾಗಿತ್ತು. ಅದಕ್ಕೆ ಉತ್ತರಿಸಿದ ಸಚಿವರು, "ಚೀನಾದ ಹೋಟಾನ್ ಪ್ರಾಂತ್ಯದಲ್ಲಿ ಎರಡು ಹೊಸ ಕೌಂಟಿಗಳನ್ನು ಚೀನಾವು ಸ್ಥಾಪಿಸಿರುವ ವಿಚಾರ ಭಾರತ ಸರ್ಕಾರಕ್ಕೆ ತಿಳಿದಿದೆ. ಈ ಕೌಂಟಿಗಳ ಭಾಗಗಳು ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲೂ ಬರುತ್ತವೆ. ಈ ಬಗ್ಗೆ ನಾವು ಪ್ರತಿಭಟನೆ ದಾಖಲಿಸಿದ್ದೇವೆ. ಅಲ್ಲದೇ ಗಡಿ ಪ್ರದೇಶಗಳ ಅಭಿವೃದ್ಧಿಗೆ ಅನುಕೂಲವಾಗುವಂತೆ ಮತ್ತು ಭಾರತದ ಕಾರ್ಯತಂತ್ರ ಮತ್ತು ಭದ್ರತಾ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಇಲ್ಲಿನ ಮೂಲಸೌಕರ್ಯಗಳ ಸುಧಾರಣೆಗೆ ಸರ್ಕಾರ ವಿಶೇಷ ಗಮನ ಹರಿಸುತ್ತಿದೆ" ಎಂದಿದ್ದಾರೆ.

ಭಾರತದ ಭದ್ರತೆಯ ಮೇಲೆ ಪರಿಣಾಮ ಬೀರುವ ಎಲ್ಲಾ ಬೆಳವಣಿಗೆಗಳ ಮೇಲೆ ಸರ್ಕಾರ ನಿರಂತರ ನಿಗಾ ಇಡುತ್ತಿದೆ. ದೇಶದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದೂ ಸಚಿವರು ಒತ್ತಿ ಹೇಳಿದರು.

Tags:    

Similar News