'ಮುಜಿಬ್' ಚಿತ್ರದಲ್ಲಿ ಶೇಖ್ ಹಸೀನಾ ಪಾತ್ರ ನಿರ್ವಹಿಸಿದ್ದ ಬಾಂಗ್ಲಾದ ನಟಿಯ ಬಂಧನ

ನುಸ್ರತ್ ಫರಿಯಾ ಅವರನ್ನು 2024ರ ಜುಲೈನಲ್ಲಿ ಧಾಕಾದ ವತಾರ ಪ್ರದೇಶದಲ್ಲಿ ನಡೆದ ವಿದ್ಯಾರ್ಥಿ ಚಳವಳಿಯ ಸಂದರ್ಭದಲ್ಲಿ ನಡೆದ ವಿದ್ಯಾರ್ಥಿಯೊಬ್ಬರ ಮೇಲಿನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.;

Update: 2025-05-18 13:04 GMT

ಬಾಂಗ್ಲಾದೇಶದ ಜನಪ್ರಿಯ ನಟಿ ನುಸ್ರತ್ ಫರಿಯಾ ಅವರನ್ನು ಮೇ 18ರಂದು ಢಾಕಾದ ಹಜರತ್ ಶಾಹ್‌ಜಲಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ದೇಶ ತೊರೆಯಲು ಯತ್ನಿಸುತ್ತಿದ್ದ ವೇಳೆ ವಲಸೆ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಅವರನ್ನು ಪ್ರಾಥಮಿಕ ವಿಚಾರಣೆಗಾಗಿ ಢಾಕಾ ಮೆಟ್ರೋಪಾಲಿಟನ್ ಡಿಟೆಕ್ಟಿವ್ ಬ್ರಾಂಚ್ (ಡಿಬಿ) ಕಚೇರಿಗೆ ಕರೆದೊಯ್ಯಲಾಗಿದೆ.

ನುಸ್ರತ್ ಫರಿಯಾ ಅವರನ್ನು 2024ರ ಜುಲೈನಲ್ಲಿ ಧಾಕಾದ ವತಾರ ಪ್ರದೇಶದಲ್ಲಿ ನಡೆದ ವಿದ್ಯಾರ್ಥಿ ಚಳವಳಿಯ ಸಂದರ್ಭದಲ್ಲಿ ನಡೆದ ವಿದ್ಯಾರ್ಥಿಯೊಬ್ಬರ ಮೇಲಿನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ನುಸ್ರತ್ ಸೇರಿದಂತೆ ಒಟ್ಟು 17 ಚಲನಚಿತ್ರ ಕಲಾವಿದರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಘಟನೆಯು ಬಾಂಗ್ಲಾದೇಶದಲ್ಲಿ ರಾಜಕೀಯ ಅಶಾಂತಿ ತಲೆದೋರಿದ್ದ ಸಮಯದಲ್ಲಿ ನಡೆದಿತ್ತು.

ಪ್ರಕರಣದ ದಾಖಲೆಗಳ ಪ್ರಕಾರ, ನುಸ್ರತ್ ಫರಿಯಾ ಅವರು ಅವಾಮಿ ಲೀಗ್‌ಗೆ ಹಣಕಾಸಿನ ಬೆಂಬಲ ನೀಡಿದ್ದರು ಮತ್ತು ವಿದ್ಯಾರ್ಥಿ ಚಳವಳಿಯನ್ನು ವಿರೋಧಿಸಿದ್ದರು ಎಂದು ಆರೋಪಿಸಲಾಗಿದೆ. ಮೇ 18ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಅವರು ಥಾಯ್ಲೆಂಡ್​ಗೆ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ವಲಸೆ ಪೊಲೀಸರು ಅವರನ್ನು ತಡೆದು ಬಂಧಿಸಿದ್ದಾರೆ.

ಮುಜಿಬ್: ದಿ ಮೇಕಿಂಗ್ ಆಫ್ ನೇಷನ್' ಚಿತ್ರದಲ್ಲಿ ಶೇಖ್ ಹಸೀನಾ ಪಾತ್ರ

ನುಸ್ರತ್ ಫರಿಯಾ ಅವರು 2023ರಲ್ಲಿ ಬಿಡುಗಡೆಯಾದ 'ಮುಜಿಬ್: ದಿ ಮೇಕಿಂಗ್ ಆಫ್ ನೇಷನ್' ಎಂಬ ಜೀವನ ಚರಿತ್ರೆ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದು ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಜೀವನ ಆಧರಿತ ಚಿತ್ರವಾಗಿದ್ದು, ನುಸ್ರತ್ ಇದರಲ್ಲಿ ಅವರ ಪುತ್ರಿ ಹಾಗೂ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರವು ಬಾಂಗ್ಲಾದೇಶ ಮತ್ತು ಭಾರತದ ಸಹ-ನಿರ್ಮಾಣದಲ್ಲಿ ಮೂಡಿಬಂದಿತ್ತು. ಈ ಚಿತ್ರದಲ್ಲಿನ ಪಾತ್ರದಿಂದಾಗಿ ನುಸ್ರತ್ ಫರಿಯಾ ಅವಾಮಿ ಲೀಗ್‌ಗೆ ಹತ್ತಿರವಾಗಿದ್ದಾರೆ ಎಂಬ ಆರೋಪಗಳಿಗೆ ಗುರಿಯಾಗಿದ್ದು, ಇದು ಅವರ ಬಂಧನಕ್ಕೆ ಪರೋಕ್ಷ ಕಾರಣವಿರಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ.

ನುಸ್ರತ್ ಫರಿಯಾ ಸಾಧನೆಗಳೇನು?

ಸೆಪ್ಟೆಂಬರ್ 8, 1993 ರಂದು ಜನಿಸಿದ ನುಸ್ರತ್ ಫರಿಯಾ ಮಝರ್ ಬಾಂಗ್ಲಾದೇಶದ ಪ್ರಮುಖ ನಟಿ, ಮಾಡೆಲ್, ಗಾಯಕಿ, ದೂರದರ್ಶನ ನಿರೂಪಕಿ ಮತ್ತು ರೇಡಿಯೋ ಜಾಕಿ. ಅವರು ಮುಖ್ಯವಾಗಿ ಧಾಲಿವುಡ್ ಮತ್ತು ಟಾಲಿವುಡ್ ಚಲನಚಿತ್ರೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ. 2015ರಲ್ಲಿ 'ಆಶಿಕಿ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ಯಶಸ್ಸು ಕಂಡರು. 'ಬಾದ್‌ಶಾ - ದಿ ಡಾನ್', 'ಹೀರೋ 420', 'ಪ್ರೇಮಿ ಓ ಪ್ರೇಮಿ', 'ಬಾಸ್ 2: ಬ್ಯಾಕ್ ಟು ರೂಲ್' ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. 'ಬಾದ್‌ಶಾ - ದಿ ಡಾನ್' ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು 'ಆಶಿಕಿ'ಗಾಗಿ ಅತ್ಯುತ್ತಮ ನ್ಯೂಕಮರ್​ ಪ್ರಶಸ್ತಿಗಳನ್ನು ಪಡೆದಿದ್ದಾರೆ.

Tags:    

Similar News