ಆಕ್ಸಿಯಾಮ್‌- 4 ಮಿಷನ್‌: ಜೂನ್‌. 19ಕ್ಕೆ ಬಾಹ್ಯಾಕಾಶಕ್ಕೆ ಹಾರಲಿರುವ ಶುಭಾಂಶು ಶುಕ್ಲಾ

ಫಾಲ್ಕನ್​ 9 ರಾಕೆಟ್‌ನಲ್ಲಿ ಹಾಗೂ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ರಷ್ಯಾ ಭಾಗದಲ್ಲಿ ಇಂಧನ ಸೋರಿಕೆಯಿಂದಾಗಿ ಕೊನೆ ಕ್ಷಣದಲ್ಲಿ ಉಡಾವಣೆಯನ್ನು ಮುಂದೂಡಲಾಗಿತ್ತು.;

Update: 2025-06-14 14:12 GMT

ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ

ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಒಳಗೊಂಡ ಸ್ಪೇಸ್​ ಎಕ್ಸ್​​ನ ಫಾಲ್ಕನ್​ 9 ರಾಕೆಟ್ ಗುರುವಾರ (ಜೂ. 19) ದಂದು ಉಡಾವಣೆಯಾಗಲಿದೆ ಎಂದು ಇಸ್ರೋ ತಿಳಿಸಿದೆ. 

ಈ ಮೊದಲು ಜೂ.11 ರಂದು ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಬೇಕಿತ್ತು. ಆದರೆ ಕೊನೆ ಹಂತದಲ್ಲಿ ಫಾಲ್ಕನ್​ 9 ರಾಕೆಟ್‌ ಹಾಗೂ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ರಷ್ಯಾ ಭಾಗದಲ್ಲಿ ಇಂಧನ ಸೋರಿಕೆಯಿಂದಾಗಿ ಕೊನೆ ಕ್ಷಣದಲ್ಲಿ ಉಡಾವಣೆ ಮುಂದೂಡಲಾಗಿತ್ತು.

ಇದೀಗ ಫಾಲ್ಕನ್‌ ರಾಕೆಟ್‌ನಲ್ಲಿನ ಸೋರಿಕೆಯನ್ನು ಆಕ್ಸಿಯಾಮ್‌ ಸ್ಪೇಸ್‌ ಹಾಗೂ ಸ್ಪೇಸ್‌ ಎಕ್ಸ್‌ ಕಂಪನಿಯ ಎರಡೂ ತಂಡಗಳು ಯಶಸ್ವಿಯಾಗಿ ಪರಿಹರಿಸಿವೆ ಎಂದು ಇಸ್ರೋ ಮಾಹಿತಿ ನೀಡಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಜ್ವೆಜ್ಡಾ ಸೇವಾ ಮಾಡ್ಯೂಲ್‌ನಲ್ಲಿನ ಒತ್ತಡ ನಿರ್ಣಯಿಸಲು ನಾಸಾದೊಂದಿಗೆ (NASA) ನಿಕಟವಾಗಿ ಸಂಪರ್ಕದಲ್ಲಿದ್ದೇವೆ ಎಂದು ಆಕ್ಸಿಯಮ್ ಸ್ಪೇಸ್ ತಿಳಿಸಿದೆ.

ನಾಲ್ಕು ಬಾರಿ ಮುಂದೂಡಿಕೆ

ಶುಭಾಂಶು ಶುಕ್ಲಾ ಅವರನ್ನು ಒಳಗೊಂಡ ನಾಲ್ಕು ಗಗನಯಾತ್ರಿಗಳನ್ನು ಹೊತ್ತೊಯ್ಯುವ ರಾಕೆಟ್‌ ಅನ್ನು ಮೇ. 29ರಂದು ಕಳಿಸಲು ನಿರ್ಧರಿಸಲಾಗಿತ್ತು. ನಂತರ ತಾಂತ್ರಿಕ ಕಾರಣಗಳಿಂದಾಗಿ ಜೂ. 8, 10, ಹಾಗೂ 11ಕ್ಕೆ ಮುಂದೂಡಲಾಗಿತ್ತು. ಇದೀಗ ಮತ್ತೊಮ್ಮೆ ಹೊಸ ದಿನಾಂಕ ನಿಗದಿಪಡಿಸಿದ್ದು ಜೂನ್‌ 19ಕ್ಕೆ ಉಡಾವಣೆಗೊಳಿಸಲು ನಿರ್ಧರಿಸಲಾಗಿದೆ. 

ಬಾಹ್ಯಾಕಾಶದಲ್ಲಿ 12 ಪ್ರಯೋಗ 

ಬಾಹ್ಯಾಕಾಶಕ್ಕೆ ತೆರಳುತ್ತಿರುವ ಶುಭಾಂಶು ಶುಕ್ಲಾ ಅವರು ಆಹಾರ ಮತ್ತು ಪೌಷ್ಟಿಕಾಂಶ ಸಂಬಂಧಿತ ಪ್ರಯೋಗಗಳನ್ನು ಮಾಡಲಿದ್ದಾರೆ. ತೀರಾ ಕಡಿಮೆ ಗುರುತ್ವಾಕರ್ಷಣ ಶಕ್ತಿ ಇರುವ ಪರಿಸರದಲ್ಲಿ ಕಾಳುಗಳನ್ನು ಮೊಳಕೆ ಬರಿಸುವುದು ಸೇರಿದಂತೆ ಇತ್ಯಾದಿ ಪ್ರಯೋಗಗಳು ಇವುಗಳಲ್ಲಿ ಒಳಗೊಂಡಿರುತ್ತವೆ. ಇಸ್ರೋ ಸಂಸ್ಥೆಯಿಂದ ಏಳು ಪ್ರಯೋಗಗಳಿದ್ದರೆ, ನಾಸಾ ಜತೆಗೂಡಿ ಐದು ಜಂಟಿ ಪ್ರಯೋಗಗಳು ಇದರಲ್ಲಿ ನಡೆಯಲಿವೆ. 

Tags:    

Similar News