Save Lalbagh| ಲಾಲ್‌ಬಾಗ್ ಬಂಡೆಯಡಿ ಸುರಂಗ ರಸ್ತೆಗೆ ವಿರೋಧ: ನಟ ಪ್ರಕಾಶ್ ಬೆಳವಾಡಿ ನೀಡುವ ಕಾರಣಗಳೇನು?
ಒಂದು ಕಿಲೋಮೀಟರ್ ಸುರಂಗ ಮಾರ್ಗಕ್ಕೆ 1300 ಕೋಟಿ ಖರ್ಚಾಗಲಿದೆ, ಇಷ್ಟೊಂದು ಖರ್ಚು ಬೇಕಾ?, ಬೆಂಗಳೂರಿನ ಜನತೆಗೆ ಇದರಿಂದ ಆಗುವ ಪ್ರಯೋಜನವೇನು ಎಂಬುದು ಪ್ರಕಾಶ್ ಬೆಳವಾಡಿ ಅವರ ಪ್ರಶ್ನೆಯಾಗಿದೆ.
“ಜನರ ಅಭಿಪ್ರಾಯವಿಲ್ಲದೆ, ತಜ್ಞರ ಸಮಾಲೋಚನೆ ಇಲ್ಲದೆ ಜಾರಿಗೊಳಿಸುವ ಯಾವುದೇ ಯೋಜನೆ ಅತ್ಯಂತ ಅಪಾಯಕಾರಿ. ಲಾಲ್‌ಬಾಗ್‌ನಲ್ಲಿ ಸುರಂಗ ರಸ್ತೆ ಯೋಜನೆಯಿಂದ 3000 ಮಿಲಿಯನ್ ವರ್ಷಗಳ ಹಳೆಯ ಬಂಡೆ ಹಾಗೂ ಪರಿಸರಕ್ಕೆ ಶಾಶ್ವತ ಹಾನಿ ಉಂಕು ಮಾಡಲಿದೆ…”
ಹೆಬ್ಬಾಳ ಹಾಗೂ ಸಿಲ್ಕ್‌ಬೋರ್ಡ್ ಮಧ್ಯೆ ನಿರ್ಮಿಸಲು ಉದ್ದೇಶಿಸಿರುವ ಅವಳಿ ಸುರಂಗ ಮಾರ್ಗವು ಲಾಲ್‌ಬಾಗ್‌ನಲ್ಲಿ ಹಾದು ಹೋಗುವುದಕ್ಕೆ ನಟ, ನಿರ್ದೇಶಕ ಹಾಗೂ ಪರಿಸರ ಕಾಳಜಿ ಹೊಂದಿರುವ ಪ್ರಕಾಶ್ ಬೆಳವಾಡಿ ವ್ಯಕ್ತಪಡಿಸಿದ ಆತಂಕದ ನುಡಿಗಳಿವು..
ಅವಳಿ ಸುರಂಗ ಯೋಜನೆ ವಿರೋಧಿಸಿ ಕಾನೂನು ಸಮರಕ್ಕೂ ಮುಂದಾಗಿರುವ ಪ್ರಕಾಶ್ ಬೆಳವಾಡಿ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಯೋಜನೆಯ ಅಪಾಯಗಳು, ಯೋಜನೆಯ ಅಗತ್ಯತೆ ಕುರಿತು ಮಾತನಾಡಿದ್ದಾರೆ.
“ಸುರಂಗ ರಸ್ತೆ ಯೋಜನೆಯಿಂದ ಕೇವಲ ಲಾಲ್‌ಬಾಗ್‌ಗೆ ಮಾತ್ರವಲ್ಲ, ಇಡೀ ಬೆಂಗಳೂರಿಗೆ ಅಪಾಯ ಎದುರಾಗಲಿದೆ. ಅವೈಜ್ಞಾನಿಕವಾಗಿರುವ ಸುರಂಗ ಮಾರ್ಗ ಯೋಜನೆಯನ್ನು ತಕ್ಷಣ ನಿಲ್ಲಿಸಬೇಕು. ದುಂದುವೆಚ್ಚದ ಯೋಜನೆಯನ್ನು ಇಷ್ಟೊಂದು ತರಾತುರಿಯಲ್ಲಿ ಜಾರಿಗೊಳಿಸುತ್ತಿರುವುದು ಅನುಮಾನ ಮೂಡಿಸಿದೆ ಎನ್ನುತ್ತಾರೆ ಅವರು.
“ಈ ಹಿಂದೆ ಸುರಂಗ ರಸ್ತೆ ಯೋಜನೆ ಕುರಿತಂತೆ ವಿಚಾರ ಸಂಕಿರಣ ಆಯೋಜಿಸುವಂತೆ ಕೋರಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲು ಹೋಗಿದ್ದೆವು. ಬರೋಬ್ಬರಿ 2 ತಾಸು ಕಾದರೂ ಅವರಿಂದ ಸ್ಪಂದನೆ ಸಿಗಲಿಲ್ಲ. ಸಾರ್ವಜನಿಕರ ಅಭಿಪ್ರಾಯವಿಲ್ಲದೇ ಯೋಜನೆ ಜಾರಿಯ ಅಗತ್ಯವೇನು ಎಂಬ ಪ್ರಶ್ನೆಗೆ ಉತ್ತರ ಸಿಗದ ಹಿನ್ನೆಲೆಯಲ್ಲಿ ಕಾನೂನು ಸಮರ ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ.
ಸುರಂಗ ಮಾರ್ಗ ಯೋಜನೆಯನ್ನು ಮನಸೋ ಇಚ್ಚೆ ವಿನ್ಯಾಸ ಮಾಡಲಾಗಿದೆ. ಲಾಲ್ ಬಾಗ್ ಪ್ರದೇಶದಲ್ಲಿ ಹಾದು ಹೋಗುವಂತೆ ಸುರಂಗ ಮಾರ್ಗದ ವಿನ್ಯಾಸ ಮಾಡಿದ್ದು ಯಾರು, ಇದರಿಂದ ಯಾರಿಗೆ ಅನುಕೂಲ ಆಗಲಿದೆ. ಬೆಂಗಳೂರಿಗೆ ಈ ಯೋಜನೆಯ ಅಗತ್ಯತೆ ಇಲ್ಲ, ಅನಗತ್ಯವಾಗಿ ಹಣ ಖರ್ಚು ಮಾಡಲು ಹೊರಟಿರುವ ಇವರಿಗೆ ಏನೂ ಹೇಳಬೇಕು. ಒಂದು ಕಿಲೋಮೀಟರ್ ಸುರಂಗ ಮಾರ್ಗಕ್ಕೆ 1300 ಕೋಟಿ ಖರ್ಚಾಗಲಿದೆ, ಇಷ್ಟೊಂದು ಖರ್ಚು ಬೇಕಾ?, ಬೆಂಗಳೂರಿನ ಜನತೆಗೆ ಇದರಿಂದ ಆಗುವ ಪ್ರಯೋಜನವೇನು ಎಂದು ಬೆಳವಾಡಿ ಪ್ರಶ್ನಿಸಿದ್ದಾರೆ.
ಸುರಂಗ ಮಾರ್ಗ ಯೋಜನೆಯನ್ನು ಐಎಎಸ್ ಅಧಿಕಾರಿಗಳು ವಿನ್ಯಾಸ ಮಾಡುವುದಲ್ಲ, ವಿಷಯ ತಜ್ಞರು, ಇದಕ್ಕೆ ಸಂಬಂಧಿಸಿದ ತಜ್ಞರು ಮಾಡಬೇಕು. ಸುರಂಗ ಮಾರ್ಗ ಯೋಜನೆ ಮಾಡುವ ಮೊದಲು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯೋಜನೆಯ ವರದಿಯನ್ನು ತಜ್ಞರು, ಜನರ ಮುಂದಿಟ್ಟು ಒಪ್ಪಿಗೆ ಪಡೆಯಬೇಕು, ಒಮ್ಮತದ ಅಭಿಪ್ರಾಯ ಕ್ರೂಢೀಕರಿಸಿ ಯೋಜನೆ ಮಾಡಬೇಕು. ಆದರೆ, ಇಲ್ಲಿ ಯಾರನ್ನೂ ಕೇಳದೆ ಯೋಜನೆ ಮಾಡಿದರೆ ಸಂಶಯ ಬರುವುದಿಲ್ಲವೇ, ಹಾಗಾಗಿ ಮೊದಲು ಯೋಜನೆಯನ್ನು ನಿಲ್ಲಿಸಬೇಕು. ತಜ್ಞರ ಸಮಿತಿ ರಚನೆ ಮಾಡಿ ಅಧ್ಯಯನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಯೋಜನೆ ರೂವಾರಿಗಳು ಬೆಂಗಳೂರಿಗರಲ್ಲ
ಸುರಂಗ ಮಾರ್ಗ ಯೋಜನೆ ರೂವಾರಿಗಳು ಮೂಲತಃ ಬೆಂಗಳೂರಿಗರಲ್ಲ. ಯೋಜನೆ ಮಾಡೇ ಮಾಡುತ್ತೇನೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹುಂಬತನ ಸರಿಯಲ್ಲ. ಇದನ್ನು ಖಂಡಿಸಿ ನಾವು ನಮ್ಮ ಶಕ್ತಿಯನುಸಾರ ಕಾನೂನು ಮೊರೆ ಹೋಗಿದ್ದೇವೆ. ತಜ್ಞರನ್ನು ಕರೆಸಿ ಅಭಿಪ್ರಾಯ ಪಡೆದಿದ್ದೇವೆ. ಪ್ರತಿಭಟನೆಯನ್ನೂ ಮಾಡಿದ್ದೇವೆ. ನ್ಯಾಯಾಲಯದಲ್ಲಿ ಯಾವ ತೀರ್ಮಾನ ಆಗುತ್ತದೋ ನೋಡಬೇಕು. ಯೋಜನೆಗೆ ಸಮಗ್ರ ಭೌಗೋಳಿಕ, ಪರಿಸರ ಹಾಗೂ ಸಾಮಾಜಿಕ ಅಧ್ಯಯನಗಳಿಲ್ಲದಿದ್ದರೆ ಹಲವಾರು ರೀತಿಯ ಅಪಾಯಗಳು ಎದುರಾಗಬಹುದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ವಿವಾದದ ಕೇಂದ್ರ ಬಿಂದುವಾದ ಯೋಜನೆ
ಉತ್ತರದಿಂದ ದಕ್ಷಿಣಕ್ಕೆ ಸಂಪರ್ಕ ಕಲ್ಪಿಸುವ 16.7 ಕಿ.ಮೀ, ಉದ್ದದ ಹೆಬ್ಬಾಳ–ಸಿಲ್ಕ್‌ಬೋರ್ಡ್ ಸುರಂಗಮಾರ್ಗ ಯೋಜನೆಗೆ ಲಾಲ್‌ಬಾಗ್ ವಿವಾದದ ಕೇಂದ್ರಬಿಂದುವಾಗಿದೆ. 18,000 ಕೋಟಿ ರೂ. ವೆಚ್ಚದ ಮಹತ್ವದ ಯೋಜನೆಗೆ ಪರಿಸರ ತಜ್ಞರು, ನಾಗರಿಕ ಸಂಘಟನೆಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಪಡೆಯದೇ ಟೆಂಡರ್ ಕರೆಯಲಾಗಿದೆ.
ಸುರಂಗ ರಸ್ತೆಯನ್ನು ಲಾಲ್‌ಬಾಗ್ ಮೂಲಕ ಹಾದು ಹೋಗುವಂತೆ ವಿನ್ಯಾಸ ಮಾಡಲಾಗಿದೆ. ಉದ್ಯಾನದ ಆರೂವರೆ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ತೀರ್ಮಾನಿಸಿದ್ದು, ಪರಿಸರ ಹಾಗೂ ಜೀವ ವೈವಿಧ್ಯತೆಗೆ ಅಪಾಯ ಎದುರಾಗಲಿದೆ ಎಂದು ಪ್ರಕಾಶ್ ಬೆಳವಾಡಿ ಕಳವಳ ವ್ಯಕ್ಪಡಿಸಿದ್ದಾರೆ.
ವೈಯಕ್ತಿಕ ಪ್ರತಿಷ್ಠೆಗಾಗಿ ಯೋಜನೆ
ಬೆಂಗಳೂರು ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನ ದಟ್ಟಣೆಗೆ ಪರಿಹಾರವಾಗಿ ಸುರಂಗಮಾರ್ಗ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಸಾಕಷ್ಟು ವಿರೋಧ ಎದುರಾದರೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಯೋಜನೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.
ಜನರ ವಿಶ್ವಾಸ, ತಜ್ಞರ ಸಲಹೆ ಇಲ್ಲದೆ ತರಾತುರಿಯಲ್ಲಿ ರೂಪಿಸಲಾದ ಯೋಜನೆ ಇದು. ಯೋಜನೆಯನ್ನು ಎಲ್ಲರೂ ವಿರೋಧಿಸುತ್ತಿದ್ದಾರೆ.ಆದರೆ, ಸರ್ಕಾರ ಮಾತ್ರ ಯೋಜನೆ ಪರವಾಗಿದೆ. ಒಂದು ಕಿಲೋಮೀಟರ್ ಸುರಂಗಕ್ಕೆ 1300 ಕೋಟಿ ರೂ. ಖರ್ಚು ಮಾಡುವ ಅಗತ್ಯವೇ ಇಲ್ಲ. ಬೆಂಗಳೂರಿನ ಜನರಿಗೆ ಇದು ಕಂಟಕ. ಲಾಲ್‌ಬಾಗ್‌ನಲ್ಲಿ ಸುರಂಗ ರಸ್ತೆ ಯೋಜನೆಯು BMLTA (ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರಿ) ಕಾಯಿದೆ 2022, ಕರ್ನಾಟಕ ಉದ್ಯಾನಗಳ (ಸಂರಕ್ಷಣೆ) ಕಾಯ್ದೆ 1975 ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪರಿಸರವಾದಿಗಳು ಹೇಳುತ್ತಾರೆ.
- ಲಾಲ್‌ಬಾಗ್ ಬಳಿ ಯೋಜನೆ ವಿರೋಧಿಸಲು ಕಾರಣವೇನು?
- ಸುರಂಗ ನಿರ್ಮಾಣದಿಂದ ಭೂಗರ್ಭದ ಜಲಮಟ್ಟ, ಮಣ್ಣು ಕುಸಿತವಾಗಲಿದೆ. ಜತೆಗೆ ಲಾಲ್‌ಬಾಗ್ ಸಸ್ಯಪ್ರಬೇಧ ನಾಶವಾಗುವ ಆತಂಕವಿದೆ.
- ಸಾರ್ವಜನಿಕರ ಅಭಿಪ್ರಾಯ, ಪರಿಸರ ಪರಿಣಾಮ ಮೌಲ್ಯಮಾಪನ ಇಲ್ಲದೆ ಯೋಜನೆ ರೂಪಿಸಿರುವುದರಿಂದ ಹೆಚ್ಚು ಅಪಾಯಗಳಿಗೆ ಆಹ್ವಾನ ನೀಡುವ ಭೀತಿ ಎದುರಾಗಿದೆ.
- ಒಂದು ಕಿ.ಮೀ. ಸುರಂಗ ರಸ್ತೆ ನಿರ್ಮಾಣಕ್ಕೆ 1300 ಕೋಟಿ ರೂ. ವ್ಯಯಿಸುವ ಹಿನ್ನೆಲೆಯಲ್ಲಿ ಜನಹಿತದ ಯೋಜನೆಯಲ್ಲ, ದುಂದುವೆಚ್ಚದ ಯೋಜನೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
- ಸುರಂಗ ಮಾರ್ಗದಿಂದ ಲಾಲ್‌ಬಾಗ್‌ನ ಪೆನಿನ್ಸುಲರ್ ನೀಸ್ ಬಂಡೆಯಡಿ ಹಾದು ಹೋಗುವುದರಿಂದ ಶಾಶ್ವತ ಹಾನಿ ಸಂಭವಿಸಬಹುದು ಎಂಬ ಆತಂಕ ಕಾಡುತ್ತಿದೆ.
ಸರ್ಕಾರದ ಸಮರ್ಥನೆ ಏನು?
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯೋಜನೆಯಿಂದ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಯಾಗಲಿದೆ ಎನ್ನುತ್ತಾರೆ. ಸುರಂಗ ಮಾರ್ಗ ನಿರ್ಮಿಸಿದರೆ ಸಂಚಾರ ಸಮಸ್ಯೆ ಬಗೆಹರಿಯಲಿದೆ ಎಂಬುದು ವೈಜ್ಞಾನಿಕ ಸಮರ್ಥನೆಯಲ್ಲ ಎಂಬುದು ತಜ್ಞರ ಅಭಿಮತವಾಗಿದೆ.
ಯೋಜನೆಯನ್ನು ದೇವರು ಹೊರತುಪಡಿಸಿ ಯಾರೇ ಅಡ್ಡಿಪಡಿಸಿದರೂ ನಿಲ್ಲಿಸಲ್ಲ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹುಂಬತನದ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಲಾಲ್‌ಬಾಗ್ ಒಳಗೆ ಯಾವುದೇ ಮರಗಳನ್ನು ಕಡಿಯುವುದಿಲ್ಲ,. ಅಲ್ಪಾವಧಿಗೆ ಮಾತ್ರ ಸ್ಥಳ ಉಪಯೋಗಿಸಲಾಗುತ್ತದೆ, ಸುರಂಗ ಮಾರ್ಗ ಪೂರ್ಣಗೊಂಡ ನಂತರ ಲಾಲ್‌ಬಾಗ್ ಪರಿಸರವನ್ನು ಯಥಾಸ್ಥಿತಿಯಂತೆ ಪುನಃಸ್ಥಾಪಿಸಲಾಗುವುದು ಎಂದು ರಾಜ್ಯ ಸರ್ಕಾರ ಭರವಸೆ ನೀಡಿದೆ. ಆದರೆ, ಸುರಂಗ ರಸ್ತೆ ಸಾರ್ವಜನಿಕರ ಬಳಕೆಗೆ ಮುಕ್ತವಾದ ನಂತರ ಇಲ್ಲಿ ನಿರ್ಮಿಸಲು ಉದ್ದೇಶಿಸಿರುವ ವೆಂಟಿಲೇಷನ್ ಶಾಫ್ಟ್ ಸಮುಚ್ಛಯವು ವಾಣಿಜ್ಯ ಚಟುವಟಿಕೆಗೆ ಆಸ್ಪದ ನೀಡುತ್ತದೆ. ಆಗ ಲಾಲ್‌ಬಾಗ್ ಪರಿಸರ, ಪಕ್ಷಿಗಳು ಹಾಗೂ ಜಲಮೂಲಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂಬುದು ಯೋಜನೆ ವಿರೋಧಿಸುತ್ತಿರುವವರ ವಾದವಾಗಿದೆ.
ನ್ಯಾಯಾಂಗದ ಹಸ್ತಕ್ಷೇಪ
ಸುರಂಗ ರಸ್ತೆ ಯೋಜನೆ ಕುರಿತು ಹೈಕೋರ್ಟ್‌ಗೆ ಹಲವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದು, ಯೋಜನೆಯಡಿ ಮರಗಳನ್ನು ಕಡಿಯುವ ಬಗ್ಗೆ ನ್ಯಾಯಾಲಯವು ಸರ್ಕಾರದಿಂದ ವಿವರಣೆ ಕೇಳಿದೆ. ಈ ಮಧ್ಯೆ, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (NGT) ಕೂಡ ರಾಜ್ಯ ಸರ್ಕಾರಕ್ಕೆ ಪ್ರಾಥಮಿಕ ನೋಟಿಸ್ ಜಾರಿ ಮಾಡಿದೆ. ಯೋಜನೆ ಸಾಧಕ-ಬಾಧಕಗಳ ಕುರಿತು ಕೂಲಂಕಶ ಅಧ್ಯಯನ ನಡೆಸಲು ತಜ್ಞ ಸಮಿತಿ ರಚಿಸಬೇಕು. ಯೋಜನೆಯ ತಾಂತ್ರಿಕ ಮತ್ತು ಪರಿಸರ ಅಂಶಗಳನ್ನು ಮರುಪರಿಶೀಲಿಸಬೇಕು ಎಂದು ಸೂಚನೆ ನೀಡಿದೆ.
“ನಾವು ಯೋಜನೆ ವಿರೋಧಿಸಿ ಕಾನೂನು ಮೊರೆ ಹೋಗಿದ್ದೇವೆ. ಸುರಂಗ ರಸ್ತೆ ಯೋಜನೆ ಕೇವಲ ಲಾಲ್‌ಬಾಗ್‌ನಲ್ಲೇ ಸಮಸ್ಯೆ ಇಲ್ಲ, ಇಡೀ ಯೋಜನೆಯೇ ಅವೈಜ್ಞಾನಿಕ. ಆದ್ದರಿಂದ ಮೊದಲು ಯೋಜನೆ ನಿಲ್ಲಿಸಿ ಎಂಬುದು ಪ್ರಕಾಶ್ ಬೆಳವಾಡಿ ಅವರ ಆಗ್ರಹವಾಗಿದೆ.
ಪ್ರಕಾಶ್ ಬೆಳವಾಡಿ ಅವರ ಸಂದರ್ಶನದ ಪೂರ್ಣಪಾಠಕ್ಕಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ..