ಟೆನಿಸ್ ದಂತಕಥೆ ರಾಫಾ ರಟ್ಟೆಯ ರಹಸ್ಯಗಳು: 'ದ ವಾರಿಯರ್' ರಾಫೆಲ್ ನಡಾಲ್ ಜೀವನಗಾಥೆಯ ವಿಮರ್ಶೆ

ಕ್ರಿಸ್ಟೋಫರ್ ಕ್ಲಾರೆ ಅವರು ಬರೆದಿರುವ ಟೆನಿಸ್ ತಾರೆ ರಾಫೆಲ್ ನಡಾಲ್ ಅವರ ಜೀವನಗಾಥೆ ‘ದ ವಾರಿಯರ್’ ಕ್ಲೇ ಕೋರ್ಟ್ ರಾಜ ಹೇಗೆ ಪ್ರವರ್ಧಮಾನಕ್ಕೆ ಬಂದ ಎಂಬುದನ್ನು ವಿವರಿಸುತ್ತದೆ. ರಾಫೆಲ್ ಅವರ ತಂತ್ರಗಳು ಮತ್ತು ರಹಸ್ಯಗಳನ್ನು ಅನಾವರಣ ಮಾಡಲು ಪ್ರಯತ್ನಿಸುತ್ತದೆ.;

Update: 2025-06-01 03:00 GMT

‘ಕಿಂಗ್ ಆಫ್ ಕ್ಲೇ” ಇಡೀ ಜಗತ್ತು ಅವರನ್ನು ಹಾಗೇ ಕರೆಯುತ್ತಿತ್ತು. ಅರ್ಥಾತ್ ರಾಫೆಲ್ ನಡಾಲ್ ಅವರು ಜೇಡಿಮಣ್ಣಿನ ಕೋರ್ಟಿನ ರಾಜನಂತೆ ಮೆರೆದವರು. ಅವರನ್ನು ಕುರಿತ ಜೀವನಗಾಥೆ; ‘ದಿ ವಾರಿಯರ್ ನಡಾಲ್ ಆ್ಯಂಡ್ ಹಿಸ್ ಕಿಂಗಡಮ್ ಆಫ್ ಕ್ಲೇ” ಈಗ ಬಿಡುಗಡೆಯಾಗಿದ್ದು ಎಲ್ಲರ ಕುತೂಹಲ ಕೆರಳಿಸಿದೆ. ಇದನ್ನು ಕ್ರಿಸ್ಟೋಫರ್ ಕ್ಲಾರೆ ಅವರು ಬರೆದಿದ್ದು ಹ್ಯಾಚೆ ಇಂಡಿಯಾ ವಿತರಣೆ ಮಾಡುತ್ತಿದೆ.

ನಡಾಲ್ ಅವರು ಅಕ್ರಲಿಕ್ ಮತ್ತು ಹುಲ್ಲಿನ ಕೋರ್ಟ್ ಸೇರಿದಂತೆ ಎಲ್ಲ ಕೋರ್ಟ್ ಗಳಲ್ಲಿಯೂ ತಮ್ಮ ಫೋರ್-ಹ್ಯಾಂಡ್ ಹೊಡೆತಗಳ ಮೂಲಕ ಎಲ್ಲ ಎದುರಾಳಿಗಳ ಆತ್ಮವಿಶ್ವಾಸವನ್ನೇ ಛಿದ್ರಗೊಳಿಸಿದವರು. ನಡಾಲ್ ಅವರು ಅವೆಲ್ಲವನ್ನೂ ತಮ್ಮ ಜೀವನಗಾಥೆಯಲ್ಲಿ ಇಂಚಿಂಚಾಗಿ ವಿವರಿಸಿದ್ದಾರೆ.

ರಾಫೆಲ್ ನಡಾಲ್ ಅವರು ಧರಿಸಿದ್ದು 22 ಗ್ರಾಂಡ್ ಸ್ಲಾಮ್ ಕಿರೀಟಗಳನ್ನು. ಅವುಗಳಲ್ಲಿ 14 ಕ್ಲೇ-ಕೋರ್ಟ್ ಪ್ರಶಸ್ತಿಗಳು ಎಂದರೆ ಅವರ ಸಾಮರ್ಥ್ಯ ಎಂತಹುದು ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. ಅವರು ಎಂಟು ಗ್ರಾಂಡ್ ಸ್ಲಾಮ್ ಗಳಲ್ಲಿ ಫೈನಲನಲ್ಲಿ ಸೋತಿದ್ದರು. ಅದರಲ್ಲಿಯೂ ಅವರು ವಿಜಯಿಯಾಗಿದ್ದರೆ ಇಂದು ಅವರನ್ನು ಮೀರಿಸುವವರು ಯಾರೂ ಇರುತ್ತಿರಲಿಲ್ಲ.

20 ಗ್ರಾಂಡ್ ಸ್ಲಾಮ್ ಗೆದ್ದಿರುವ ರೋಜರ್ ಫೆಡರರ್ ಮತ್ತು 24 ಗ್ರಾಂಡ್ ಸ್ಲಾಮ್ ಗೆದ್ದು ಈಗಲೂ ತಮ್ಮ ಜಯದ ಓಟವನ್ನು ಮುಂದುವರಿಸಿರುವ ನೊವಾಕ್ ಡೊಜೊವಿಕ್ ಮತ್ತು ರಾಫೆಲ್ ನಡಾಲ್ ಇವರು ಟೆನಿಸ್ ಲೋಕದ ಕಣ್ಮಣಿಗಳು. ಅವರು ಟೆನಿಸ್ ನ್ನು ಜಗತ್ತಿನ ನಿಜವಾದ ಆಟ ಎನ್ನುವ ಮಟ್ಟಕ್ಕೆ ಕೊಂಡೊಯ್ದವರು. ವಿಶ್ವದಲ್ಲಿ ಪ್ರತಿ ವರ್ಷ ಪ್ರವಾಸ ಕೈಗೊಳ್ಳುವ ಸಾವಿರಾರು ಉನ್ನತ ವೃತ್ತಿಪರರು ಈ ಮೂವರಿಂದ ಸ್ಪೂರ್ತಿಗೆ ಒಳಗಾಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಕ್ಲಾರೆ ಅವರು ನ್ಯೂಯಾರ್ಕ್ ಟೈಮ್ಸ್ ನ ಟೆನಿಸ್ ವರದಿಗಾರ. ಇವರು ಈ ಮೂವರು ದಿಗ್ಗಜರ ಟೆನಿಸ್ ಆಟವನ್ನು ನೋಡಿ ವರದಿ ಮಾಡಲು ಜಗತ್ತಿನಾದ್ಯಂತ ಪ್ರವಾಸ ಕೈಗೊಂಡವರು. ಈಗಾಗಲೇ ರೋಜರ್ ಫೆಡರರ್ ಅವರ ಜೀವನಕಥನವನ್ನೂ (The Master: The Brilliant Career of Roger Federer -2022) ಬರೆದವರು. ನಡಾಲ್ ಅವರ ಆಟದ ಸೊಗಸು, ವೃತ್ತಿ ಜೀವನದ, ದಿಗ್ವಿಜಯದ ಹಾಗೂ ಎದುರಾಳಿಗಳ ರಿಂಗ್-ಸೈಡ್ ನೋಟ ವಿಶ್ಲೇಷಿಸುವ ಸಾಮರ್ಥ್ಯ ಹೊಂದಿದವರು ಕ್ಲಾರೆ. ಕ್ರೀಡಾ ಜೀವನಗಾಥೆ ಬರೆಯುವವರ ಸಾಲಿನಲ್ಲಿ ವಾಲ್ಟರ್ ಐಸಾಕ್-ಸನ್ ಎಂದೇ ಕರೆಸಿಕೊಂಡಿರುವ ಕ್ರಿಸ್ಟೋಫರ್ ಕ್ಲಾರೆ ಅವರು ಮುಂದೆ ಡೊಜೊವಿಕ್ ಬಗ್ಗೆಯೂ ಏನು ಬರೆಯಬಲ್ಲರು ಎಂದು ಕಾಯಬೇಕಾಗಿದೆ.

ಕಳೆದ ಕೆಲವು ದಶಕಗಳ ಅವಧಿಯಲ್ಲಿ ಕ್ರೀಡಾ ಜಗತ್ತಿನ ಜೀವನಗಾಥೆಗಳು ಉತ್ತುಂಗ ತಲುಪಿವೆ. ಇವುಗಳಲ್ಲಿ ಹೆಚ್ಚಿನವು ಬಂದಿರುವುದು ಅಮೆರಿಕದಿಂದ. ಸಹಜವಾಗಿ ದಿಗ್ಗಜ ಬಾಕ್ಸರ್ ಗಳು, ಅವರ ಜೀವನದ ಏರಿಳಿತಗಳನ್ನು ಬಿಂಬಿಸುವ ಜೀವನಗಾಥೆಗಳು ಮುಂಚೂಣಿಯಲ್ಲಿವೆ. ಇವುಗಳಲ್ಲಿ ಎದ್ದು ಕಾಣುವ ಎರಡು ಜೀವನಕಥನಗಳೆಂದರೆ ಡೇವಿಡ್ ರೆಮನಿಕ್ ಹಾಗೂ ಜೊನಾಥನ್ ಇಗ್ ಅವರು ಬರೆದ ಮಹಮ್ಮದ್ ಅಲಿ ಅವರ ಜೀವನಕಥನ ಮತ್ತು ಜಗತ್ತಿನಾದ್ಯಂತ ಅತಿಹೆಚ್ಚು ಮಾರಾಟವಾಗಿರುವ ಆಂಡ್ರೆ ಅಗಾಸಿ ಅವರ ಜೀವನಕಥನ ಓಪನ್ (2009).

ಆ ಬಳಿಕ ಬರುವ ಇನ್ನೊಂದು ಕೃತಿ ಎಂದರೆ ಮೈಕ್ ಟೈಸನ್ ಅವರ ಜೀವನ ಕಥನ- ಅನ್-ಡಿಸ್ಪುಟೆಡ್ ಟ್ರುಥ್ (2013). ರೋಮಾಂಚಕ ಅಧ್ಯಾಯಗಳನ್ನು ಒಳಗೊಂಡ ಹಸಿಹಸಿ ಕಥನಗಳು ಅದರಲ್ಲಿವೆ.

ಆಂಡ್ರೆ ಅಗಾಸಿ ಮತ್ತು ಟೈಸನ್ ಅವರ ಆತ್ಮಕಥನಗಳನ್ನು ಯಾರು ಬರೆದಿದ್ದಾರೆ ಎಂಬುದು ತಿಳಿದಿಲ್ಲವಾದರೂ ಅವು ಈ ಮಹಾನ್ ಕ್ರೀಡಾಪಟುಗಳ ಹೋರಾಟ, ಹತಾಶೆಗಳು ಮತ್ತು ದಿಟ್ಟತನಗಳು ನಮ್ಮ ಹೃದಯಕ್ಕೆ ತಟ್ಟುವಂತೆ ಬಿಂಬಿಸುವಲ್ಲಿ ಯಶಸ್ವಿಯಾಗಿವೆ. ಒಬ್ಬ ವ್ಯಕ್ತಿ ಜಗತ್ತನ್ನು ಗೆಲ್ಲಲು ಯಾವೆಲ್ಲ ಹೋರಾಟ ಮಾಡಬೇಕಾಗುತ್ತದೆ ಮತ್ತು ಹಾಗೆ ಮಾಡುವುದರಿಂದ ಮಾತ್ರ ಶ್ರೇಷ್ಠತೆಯನ್ನು ದಕ್ಕಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ವೇದ್ಯವಾಗುತ್ತದೆ.

ಗುಣಗಾನಕ್ಕೆ ಕಟ್ಟುಬಿದ್ದರು

ಇವೆಲ್ಲಕ್ಕೆ ವ್ಯತಿರಿಕ್ತವಾಗಿ ಕ್ರಿಸ್ಟೋಫರ್ ಕ್ಲಾರೆ ಅವರು ತಮ್ಮ ಜೀವನಗಾಥೆಗಳ ವಿಚಾರದಲ್ಲಿ ಅತಿಯಾದ ವಿವರಗಳಿಗೆ ಕಟ್ಟುಬಿದ್ದಂತೆ ಕಾಣುತ್ತದೆ. ಫೆಡರರ್ ಮತ್ತು ನಡಾಲ್ ಅವರನ್ನು ಕುರಿತ ಎರಡೂ ಕೃತಿಗಳಲ್ಲಿ ಅವರು ಬಹುತೇಕ ಅತಿಶಯೋಕ್ತಿ ಮತ್ತು ಗುಣಗಾನ ಮಾಡುವುದರಲ್ಲಿಯೇ ಮೇಲುಗೈ ಸಾಧಿಸಿದ್ದಾರೆ. ಅಷ್ಟಕ್ಕೂ ವಿಶ್ವ ವಿಜೇತರಲ್ಲಿ ನಾವು-ನೀವು ಯಾವ ದೋಷಗಳನ್ನು ಕಂಡುಹಿಡಿಯಲು ಸಾಧ್ಯ ಅಲ್ಲವೇ? ಮನುಷ್ಯರನ್ನು ಮನುಷ್ಯರನ್ನಾಗಿ ಮಾಡುವುದು ದುರಂತಮಯ ದೋಷಗಳು. ಅವುಗಳನ್ನು ಇಲ್ಲಿ ಕೈಬಿಟ್ಟಂತೆ ಕಾಣುತ್ತದೆ. ಆದರೆ ಮೈಕ್ ಟೈಸನ್ ಜೀವನಗಾಥೆಯಲ್ಲಿ ಆತನ ಎಲ್ಲ ದೌರ್ಬಲ್ಯಗಳೂ ದಂತಕಥೆಯ ಭಾಗವಾಗಿವೆ.

ಕ್ಲಾರೆ ಬರೆದಿರುವ ನಡಾಲ್ ಮತ್ತು ಫೆಡರರ್ ಜೀವನಕಥನಗಳನ್ನು ಓದುತ್ತ ಹೋದಂತೆ ಜೀವನದ ಭಯಾನಕವಾದ ಯುದ್ಧಗಳಲ್ಲಿ ನಾವೆಲ್ಲರೂ ಹೇಗೆ ಕೆಟ್ಟದಾಗಿ ಸೋಲುತ್ತೇವೆ ಎಂಬುದು ನಮಗೆ ನೆನಪಾಗುತ್ತ ಹೋಗುತ್ತದೆ. ಆದರೆ ಈ ಇಬ್ಬರು ಪುರುಷರು ಹೇಗೆ ಆಗಸದೆತ್ತರಕ್ಕೆ ಬೆಳೆದು ನಿಂತರು, ಗಮನ ಸೆಳೆದರು, ತರಬೇತಿ ಪಡೆದರು, ಗೆದ್ದರು, ಸೋತರು, ಮತ್ತೆ ಮತ್ತೆ ಗೆದ್ದರು. ಎಂದಿಗೂ ಛಲ ಬಿಡಲಿಲ್ಲ, ಒಂದು ಕಿರೀಟ ಧರಿಸಿದ್ದು ಸಾಲದೆನ್ನುವಂತೆ ಮತ್ತೊಂದು ಪ್ರಶಸ್ತಿ ಗಳಿಸಲು ಜಿದ್ದಿಗೆ ಬಿದ್ದರು ಎಂಬುದು ಇದರ ಆಕರ್ಷಣೆ.

ಐದು ಸೆಟ್ ಗಳೆಂದರೆ ಟೆನಿಸ್ ಜಗತ್ತಿನಲ್ಲಿ ಸರಿಸುಮಾರು ಯುದ್ಧವೆಂಬಂತೆ ಪರಿಗಣಿಸಲಾಗುತ್ತದೆ. ಅದನ್ನು ಕೊನೆಯ ತನಕವೂ ಎದುರಿಸುತ್ತ ಹೋಗುವುದು ಕ್ರೀಡಾ ಸಾಧನೆಯ ಪರಮೋಚ್ಛ ಬಿಂದು. ಕಳೆದ 70ಕ್ಕೂ ಹೆಚ್ಚು ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳಲ್ಲಿ ಕೇವಲ ಮೂರು ಅಥವಾ ನಾಲ್ಕು ಬಾರಿ ಮಾತ್ರ ಹೊರಗಿನರಿಗೆ ಲಭಿಸಿದೆ. ಉಳಿದೆಲ್ಲವೂ ನಡಾಲ್, ಫೆಡರರ್ ಮತ್ತು ಜೊಕೊವಿಕ್ ನಡುವೆ ಹಂಚಿಹೋಗಿವೆ. ಅವರ ಕಪಾಟುಗಳನ್ನು ಅಲಂಕರಿಸಿವೆ.

ಇಂತಹ ಕಥೆಗಳಲ್ಲಿ ಜಯಿಸಲಾಗದೇ ಇರುವ ಯಾವುದೇ ಅಸ್ಥಿರತೆ, ದೌರ್ಬಲ್ಯಗಳು, ಗಾಯಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಎಲ್ಲವನ್ನೂ ಪರಿಪೂರ್ಣತೆಯ ದಾರದಲ್ಲಿ ಹೊಲಿಯಲಾಗಿದೆ. ಈ ಪುರುಷರೇನೂ ಮನುಷ್ಯರಂತೆ ಕಾಣುವುದಿಲ್ಲ; ಅವರು ರೋಲ್ಯಾಂಡ್ ಗ್ಯಾರೋಸ್ ನ ಪ್ರವೇಶದ್ವಾರದಲ್ಲಿ ನೆಟ್ಟಿರುವ ನಡಾಲ್ ನ ಅದ್ಭುತ ಪ್ರತಿಮೆಯಂತೆ ಕಾಣುತ್ತಾರೆ: ಎಲ್ಲವೂ ಉಕ್ಕಿನವು!

ಹಾಗಾಗಿ ಅಂತಹ ಜಾಗತಿಕ ಯಶಸ್ಸಿನ ರಹಸ್ಯವನ್ನು ನಾವು ಹುಡುಕುವುದು ಸಹಜವೇ ಆಗಿದೆ. ಇದರ ಉತ್ತರವನ್ನು ಅರಸುವ ಕ್ಲಾರೆ ನಡಾಲ್ ಅವರಿಂದ ಸೋಲು ಅನುಭವಿಸಿದ ಆಟಗಾರರನ್ನು ಕೇಳುತ್ತ ಹೋಗುತ್ತಾರೆ. ಸ್ಪೇನ್ ಆಟಗಾರನ ಶ್ರೇಷ್ಠತೆಯ ಕಾರಣಗಳನ್ನು ತಿಳಿದುಕೊಳ್ಳುವ ಪ್ರಯತ್ನವದು.

ನೋವನ್ನು ಆನಂದಿಸಲು ಕಲಿತೆ

“ನಾನು ನೋವನ್ನು ಆನಂದಿಸಲು ಕಲಿತಿದ್ದೇನೆ” ಹಾಗೆಂದು ನಡಾಲ್ ಹೇಳಿದ್ದು 2009ರ ಪತ್ರಿಕಾಗೋಷ್ಠಿಯಲ್ಲಿ. ಅಂದು ಅವರು ಆಸ್ಟ್ರೇಲಿಯನ್ ಓಪನ್ ನಲ್ಲಿ ವರ್ಡಾಸ್ಕೋ ಮತ್ತು ಆ ಬಳಿಕ ಫೆಡರರ್ ವಿರುದ್ಧ ಎರಡು ಕಠಿಣ ಐದು-ಸೆಟ್ ಗಳ ಪಂದ್ಯಗಳನ್ನು ಗೆದ್ದಿದ್ದರು. ಇತರರೂ ನೋವನ್ನು ಅನುಭವಿಸಿದ್ದಾರೆ. ಇಲ್ಲವೆಂದಲ್ಲ. ಆದರೆ ಕೆಲವರು ಬದುಕಿನ ಐದು ಸೆಟ್ ಗಳ ಪಂದ್ಯಗಳಲ್ಲಿ ಜಯಶಾಲಿಯಾಗಿ ಹೊರಬಂದಿದ್ದಾರೆ.

ಪ್ರಸ್ತುತ ಟೆನಿಸ್ ಆಡಳಿತ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ಫೆಲಿಸಿಯಾನೋ ಲೋಪೆಜ್ ಹೇಳುತ್ತಾರೆ; “ಕ್ಲೇ ಕೋರ್ಟ್ ನಲ್ಲಿ ರಾಫಾ ವಿರುದ್ಧ ಆಡುವುದು ಯಾವುದೇ ಒಬ್ಬ ಟೆನಿಸ್ ಆಟಗಾರನಿಗೆ ಅತ್ಯಂತ ಕೆಟ್ಟ ಅನುಭವ. ಮೊದಲನೆಯದಾಗಿ ನೀವು ಸೋಲುವ ಸಾಧ್ಯತೆ ಶೇ.99.9ರಷ್ಟು ಖಚಿತ. ಎರಡನೆಯದಾಗಿ ಆತ ನಿಮ್ಮನ್ನು ತೀರಾ ದುರ್ಬಲ ಎನ್ನುವಂತೆ ಮಾಡಿಬಿಡುತ್ತಾನೆ. ನೀವು ಯಾವುದೇ ತಪ್ಪು ಮಾಡದೇ 6-1, 6-1ರ ಅಂತರದಿಂದ ಸೋಲಬಹುದು”

ಕ್ರಿಸ್ಟೋಪರ್ ಕ್ಲಾರೆ ಅವರಿಗೆ ರಾಫಾ ಎಂದರೆ ಕ್ಲೇ ಕೋರ್ಟ್ ಮಾತ್ರ ಎಂಬ ಭಾವನೆ ಅತಿಯಾಗಿ ಅಂಟಿಕೊಂಡಂತೆ ಕಾಣುತ್ತದೆ. ನಡಾಲ್ ಯಾವುದೇ ಕೋರ್ಟ್ ನಲ್ಲಿ ಅದ್ಭುತವಾಗಿ ಆಡಬಲ್ಲರು ಎಂಬುದನ್ನು ಅವರ ತಂಡದ ಸದಸ್ಯರೇ ಹೇಳುತ್ತಾರೆ. ಅದಕ್ಕೆ ಸ್ಪಷ್ಟ ಪುರಾವೆಗಳು ಕೂಡ ಇವೆ. ಹಾಗಿದ್ದೂ ಕ್ಲಾರೆ ಮನಸ್ಸಿನಲ್ಲಿ ನಿಂತಿದ್ದು ಕ್ಲೇ ಕೋರ್ಟ್ ರಾಜ ಎಂಬುದು ಮಾತ್ರ. ಅವರು ತಮ್ಮ ಅಭಿಪ್ರಾಯಕ್ಕೆ ಅಂಟಿಕೊಳ್ಳಲು ರೋಲ್ಯಾಂಡ್ ಗ್ಯಾರೋಸ್ ನಲ್ಲಿರುವ ಕ್ಲೇ ಕೋರ್ಟ್ ಮೂಲಗಳು, ಕ್ಲೇಕೋರ್ಟ್ ಇತಿಹಾಸ ಮತ್ತು ಕೆಲವು ಹಳೆಯ ಸಿದ್ಧಾಂತಗಳನ್ನು ಕೂಡ ನಿರಾಕರಿಸುತ್ತಾರೆ. ಆದರೆ ಒಬ್ಬ ಸೋತ ಆಟಗಾರನಿಗೆ ಅದು ಕೆಂಪು ಜೇಡಿಮಣ್ಣೇ ಅಥವಾ ಹಳದಿ ಜೇಡಿಮಣ್ಣೇ ಎಂಬುದು ನಿಜವಾಗಿಯೂ ಮುಖ್ಯವಾಗುತ್ತದೆಯೇ? ಸೋಲು ಅಂದರೆ ಸೋಲು ಅಷ್ಟೇ.

ನಡಾಲ್ ಮತ್ತು ಕ್ಲೇ-ಕೋರ್ಟ್ ಸಂಬಂಧವನ್ನು ಇನ್ನೂ ಗಾಢವಾಗಿ ಮುಂದವರಿಸುವ ಕ್ಲಾರೆ, “ಕ್ಲೇ-ಕೋರ್ಟ್ ಟೆನ್ನಿಸ್ ರಾಫಾ ಮೌಲ್ಯಗಳಿಗೆ ಹೆಚ್ಚು ಹೊಂದಿಕೊಳ್ಳುತ್ತದೆ. ಅಂತಹ ಮೌಲ್ಯಗಳಲ್ಲಿ ಕೆಲವಾದ ಕಾರ್ಯನಿರ್ವಹಣೆಯ ನೀತಿ, ಶಾರ್ಟ್-ಕಟ್ ಗಳನ್ನು ತಪ್ಪಿಸುವ ಪರಿ, ಅಭ್ಯಾಸ ಮುಗಿದ ಬಳಿಕ ಡ್ರ್ಯಾಗ್ ಮ್ಯಾಟ್ ನ್ನು ಎಳೆದು ಮುಂದಿನ ಆಟಗಾರರಿಗಾಗಿ ಮೇಲ್ಮೈಯನ್ನು ಹಾಗೂ ಏರಿಳಿತವನ್ನು ಸರಿಪಡಿಸುವುದು...” ಎನ್ನುತ್ತಾರೆ. ಆದರೆ ಈ ಮಾತುಗಳನ್ನು ಕೂಡ ಒಪ್ಪಿಕೊಳ್ಳುವುದು ಕಷ್ಟ. ಯಾಕೆಂದರೆ ಎಲ್ಲಾ ಚಾಂಪಿಯನ್ ಗಳೂ ಯಾವುದೇ ಕೋರ್ಟ್ ನಲ್ಲಿ ಈ ಮೌಲ್ಯಗಳನ್ನು ಅನುಸರಿಸುತ್ತಾರೆ ಮತ್ತು ಅವರೆಲ್ಲರೂ ಅವುಗಳನ್ನು ಕ್ಲೇ ಕೋರ್ಟ್ ನಿಂದ ಮಾತ್ರ ಕಲಿತಿಲ್ಲ, ಕೆಲವರು ಪುಸ್ತಕಗಳಿಂದ, ಇನ್ನು ಕೆಲವರು ತಮ್ಮ ಮಾರ್ಗದರ್ಶಕರಿಂದ ಮತ್ತು ತಮ್ಮದೇ ಆದ ಕಷ್ಟಗಳಿಂದ ಕಲಿತುಕೊಂಡಿದ್ದಾರೆ.

ಯಾವುದು ನಿಜವಾದ ರಹಸ್ಯ?

ಅಗ್ರ ಸ್ಥಾನಕ್ಕೇರಲು ಚಾಂಪಿಯನ್ ಗಳು ಯಾವೆಲ್ಲ ರಹಸ್ಯಗಳನ್ನು ಹೊಂದಿರುತ್ತಾರೆ ಎಂಬುದನ್ನು ಪತ್ತೆ ಮಾಡುವುದು ಕ್ರೀಡಾ ಬರಹಗಾರರಾದವರ ಶಾಶ್ವತ ಕೆಲಸವಾಗಿದೆ. ಆದರೆ ಆ ರಹಸ್ಯ ಎಲ್ಲಿ ಅಡಗಿದೆ? ಅದು ನಾವು ಕೇಳಬೇಕಾದ ಪ್ರಶ್ನೆ. ಇದೇ ಕಾರಣಕ್ಕೆ ಭಾರತೀಯ ಕ್ರಿಕೆಟ್ ನಲ್ಲಿ ಇರುವಂತೆ ಮಹಾನ್ ಆಟಗಾರರು ತರಬೇತುದಾರರಾಗಿ ನೇಮಕಗೊಳ್ಳುತ್ತಾರೆ. ಆದರೆ ಸತ್ಯವೇನೆಂದರೆ, ಯಾವುದೇ ರಹಸ್ಯ ಸಾಧನ ಇಲ್ಲ ಎಂಬುದು. ಅದು ಬಚ್ಚಿಟ್ಟಿದ್ದಾಗಿರಬಹುದು ಅಥವಾ ಬಹಿರಂಗವಾಗಿದ್ದಾಗಿರಬಹುದು. ಹಾಗಾಗಿ ಯಾರನ್ನೂ ಉನ್ನತ ಸ್ಥಾನಕ್ಕೆ ಏರಿಸುವಂತಹ ರಹಸ್ಯ ಸ್ನಾಯು, ಸ್ನಾಯುರಜ್ಜು ಅಥವಾ ಮೂಳೆ ಇಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಕ್ರೀಡಾ ಪ್ರತಿಭೆಯು ತಂದೆಯಿಂದ ಮಗನಿಗೆ ಸ್ವಯಂಚಾಲಿತವಾಗಿ ಹರಿದುಬರುವುದಿಲ್ಲ. ಹಾಗೆ ಆಗುವುದೇ ಆಗಿದ್ದರೆ ಅರ್ಜುನ್ ತೆಂಡುಲ್ಕರ್ ಮುಂಬೈ ಇಂಡಿಯನ್ಸ್ ಗಾಗಿ ಒಂದೇ ಒಂದು ಪಂದ್ಯವನ್ನು ಆಡದೆ ಐದು ವರ್ಷ ಬೆಂಚ್ ಕಾಯುತ್ತಾ ಕುಳಿತಿರಬೇಕಾದ ಅಗತ್ಯ ಇರುತ್ತಿರಲಿಲ್ಲ.

ಇವೆಲ್ಲದರ ಒಟ್ಟರ್ಥವೇನೆಂದರೆ ಒಬ್ಬ ಆಟಗಾರ ಸತತ ಅಭ್ಯಾಸ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಉನ್ನತ ಸ್ಥಾನವನ್ನು ತಲುಪುತ್ತಾನೆ. ಕ್ಲಾರೆ ಅವರು ಯಾವುದೇ ರಹಸ್ಯಗಳಿದ್ದರೆ ಅವುಗಳನ್ನು ಹೊರತೆಗೆಯಲು ಶ್ರಮಿಸುತ್ತಿದ್ದರು. ಈ ಪಯಣದಲ್ಲಿ ಅವರು ಹತ್ತಾರು ತರಬೇತುದಾರರನ್ನೂ ಸಂಪರ್ಕಿಸಿರುತ್ತಾರೆ. ರಾಫೆಲ್ ನಡಾಲ್ ಅವರ ಸಾಮರ್ಥ್ಯ ಇರುವುದು ಫೋರ್-ಹ್ಯಾಂಡ್ ಹೊಡೆತದಲ್ಲಿ. ಅದು ಎಷ್ಟೊಂದು ಪ್ರಬಲವಾಗಿರುತ್ತದೆ ಎಂದರೆ ತರಬೇತುದಾರ ಡ್ಯಾರೆನ್ ಕಾಹಿಲ್ ಹೀಗೆ ಹೇಳುತ್ತಾರೆ; “ಇದು ನಿಜವಾದ ಅವರ ರಟ್ಟೆಯ ತಾಕತ್ತು, ಅದರಲ್ಲಿ ಪಡೆಯುವ ಆರ್.ಎಂ.ಪಿ., ಕೈಯ ವೇಗ ಮತ್ತು ವಾಸ್ತವವಾಗಿ ನಡಾಲ್ ಬಲಗೈ ಆಟಗಾರ, ಆದರೆ ಎಡಗೈನಲ್ಲಿ ಅಷ್ಟೊಂದು ಮಜಭೂತಾದ ವೇಗವನ್ನು ಜನರೇಟ್ ಮಾಡುವುದಿದೆಯಲ್ಲ, ಅದು ನಿಜಕ್ಕೂ ಅಸಾಧಾರಣವಾದುದು. ಆಟದ ನಿಜವಾದ ಬ್ಯುಟಿ ಅದು”

ತಾನು ಫೋರ್-ಹ್ಯಾಂಡ್ ಹೊಡೆತಗಳನ್ನು ಹೆಚ್ಚು ಆನಂದಿಸುತ್ತೇನೆ, ಅದು ಅತ್ಯಂತ ಮಾರಣಾಂತಿಕ ಎಂಬುದನ್ನು ನಡಾಲ್ ಕೂಡ ಒಪ್ಪಿಕೊಳ್ಳುತ್ತಾರೆ. “ಫೋರ್-ಹ್ಯಾಂಡ್ ಆಟ, ಹೌದು, ಯಾವುದೇ ಅನುಮಾನವಿಲ್ಲದೆ. ನಾನು ಅತ್ಯುತ್ತಮ ಲಯದಲ್ಲಿದ್ದಾಗ ಇದು ನಿಜಕ್ಕೂ ಉಲ್ಲಾಸದಾಯಕ. ಆಗ ಆಟವನ್ನು ಹೇಗಾದರೂ ನಿಯಂತ್ರಿಸಬಲ್ಲೆ ಎಂಬ ವಿಶ್ವಾಸವಿರುತ್ತದೆ ನನಗೆ. ಅದರಿಂದ ನನಗೇನು ಬೇಕೋ ಅದನ್ನು ಪಡೆದುಕೊಳ್ಳುತ್ತೇನೆ” ಎಂದು ನಡಾಲ್ ಕ್ಲಾರೆಗೆ ಹೇಳಿದ್ದಾರೆ.

ಎಡಗೈ ಅಥವಾ ಬಲಗೈ?

ಕುತೂಹಲದ ಸಂಗತಿ ಎಂದರೆ ನಡಾಲ್ ಎರಡೂ ಕೈಗಳಲ್ಲಿ ಆಡಬಲ್ಲರು. ಅವರು ಗಾಲ್ಫ್ ಆಡುವಾಗ ಬಲಗೈ ಬಳಸುತ್ತಾರೆ. ಅವರಿಗೆ ತಮ್ಮ ಆರಂಭದ ದಿನಗಳಲ್ಲಿ ಬಲಗೈಯಲ್ಲಿ ಆಡಬೇಕಾ ಅಥವಾ ಎಡಗೈಯಲ್ಲಿ ಎಂಬ ಬಗ್ಗೆ ಖಚಿತತೆ ಇದ್ದಿರಲಿಲ್ಲ. ಆಗ ಅವರ ಅಂಕಲ್ ಟೋನಿ ಎಂಬವರು ಮಾರ್ಗದರ್ಶಕರಾಗಿ, ಚಿಂತಕರಾಗಿ ಸಹಾಯಮಾಡಿದರು. ನಿಜಕ್ಕೂ ಅದೊಂದು ಅದ್ಭುತ ನಿರ್ಧಾರವೇ ಆಗಿತ್ತು.

ಇವಾನ್ ಲೆಂಡ್ಲ್ ಗೆ ಕೋಚ್ ಆಗಿದ್ದ ಪೋಲ್ಯಾಂಡ್ ನ ಅಗ್ರಶ್ರೇಯಾಂಕದ ಹತ್ತು ಆಟಗಾರರಲ್ಲಿ ಒಬ್ಬರಾದ ವೊಜ್-ಟೆಕ್ ಫಿಬಾಕ್ ಅವರು ನಡಾಲ್ ಅವರಿಗೆ ಔಪಚಾರಿಕ ಸಲಹೆಗಾರರಾಗಿದ್ದವರು. 2004ರಲ್ಲಿ ಅವರು ಪೋಲ್ಯಾಂಡ್ ನ ಸೊಪೋಟ್ ನಲ್ಲಿದ್ದರು. ಅಲ್ಲಿ ನಡಾಲ್ ತಮ್ಮ ಮೊದಲ ಎಟಿಪಿ ಪ್ರಶಸ್ತಿ ಪಡೆದಿದ್ದರು. “ಈತ ಶ್ರೇಷ್ಠ ಆಟಗಾರ ಎಂದು ನಾನು ಪ್ರತಿಯೊಬ್ಬರಲ್ಲಿಯೂ ಹೇಳಿದ್ದೇನೆ. ಈತ ರೋಲ್ಯಾಂಡ್ ಗ್ಯಾರೋಸ್ ಗೆಲ್ಲಬಲ್ಲ. ಅಷ್ಟು ತಾಕತ್ತು ಈತನಲ್ಲಿದೆ. ಹಾಗಂತ ಅದೇನು ದೊಡ್ಡ ಭವಿಷ್ಯವಲ್ಲ. ಈತನಿಗೆ ಅಪಾರವಾದ ಏಕಾಗ್ರತೆಯಿದೆ. ಅದು ಈತನಿಗೆ ಒಲಿದಿರುವ ಗಿಫ್ಟ್. ಈತ ಹದಿನಾಲ್ಕು ರೋಲ್ಯಾಂಡ್ ಗ್ಯಾರೋಸ್ ಪ್ರಶಸ್ತಿ ಕಿರೀಟವನ್ನು ಧರಿಸಿರುವುದು ತನ್ನ ರಟ್ಟೆಯ ಶಕ್ತಿಯಿಂದಲ್ಲ. ಈತ ಅವೆಲ್ಲವನ್ನೂ ತನ್ನ ಯೋಚನೆಯಿಂದ ಗೆದ್ದಿದ್ದಾನೆ!” ಎಂದು ಅವರು ಹೇಳಿದ್ದಾರೆ.

ಅದು ಆತನ ಯೋಚನೆಯೋ ಅಥವಾ ಆತನ ಎಡಮುಂಗೈ ಹೊಡೆತವೋ ನಡಾಲ್ ಅಗ್ರಸ್ಥಾನವನ್ನು ತಲುಪಿದ್ದಾನೆ ಮತ್ತು ಸುದೀರ್ಘ ಕಾಲ ಅಲ್ಲಿದ್ದವನು. ಆತನ ಐದು ಸೆಟ್ ಗಳ ಪಂದ್ಯ ನಿಜಕ್ಕೂ ಅವರ್ಣನೀಯ. ಅವು ಉದಯೋನ್ಮುಖ ಆಟಗಾರರಿಗೆ ಪಾಠಗಳಾಗಿವೆ.

Tags:    

Similar News