Mysore Dasara | ದಸರಾದಲ್ಲಿ ಭಾಗಿಯಾಗುವ ಗರ್ಭಿಣಿ ಆನೆಗಳ ಪತ್ತೆಗೆ ಬರೇಲಿಯಲ್ಲಿ ಪರೀಕ್ಷೆ

ಹಿಂದೆ ಮೈಸೂರು ದಸರಾ ಸಂದರ್ಭದಲ್ಲಿ ಸರಳಾ, ಲಕ್ಷ್ಮೀ ಆನೆಗಳು ಮರಿಗಳಿಗೆ ಜನ್ಮ ನೀಡಿದ್ದವು. ಅದು ಮರುಕಳಿಸದಿರಲು ಇಲಾಖೆ ಈಗ ದಸರಾದಲ್ಲಿ ಭಾಗಿಯಾಗುವ ಆನೆಗಳು ಗರ್ಭಧರಿಸಿರುವ ಬಗ್ಗೆ ಪರಿಶೀಲನೆಗೆ ಮುಂದಾಗಿದೆ.;

Update: 2025-07-02 04:37 GMT
ದಸರಾ ಕವಾಯತು ಪೂರ್ವ ಸಿದ್ದತೆ ವೇಳೆ ಮರಿಯಾನೆಗೆ ಜನ್ಮವಿತ್ತ ಲಕ್ಷ್ಮೀ ಆನೆ.

ಸೆ. 22ರಿಂದ ಅಕ್ಟೋಬರ್‌ 2 ರವರೆಗೆ 11 ದಿನಗಳ ಕಾಲ ನಡೆಯಲಿರುವ ನಾಡಹಬ್ಬ ದಸರಾಗೆ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿವೆ. ಈ ಸಂಬಂಧ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದು ಅದ್ಧೂರಿ ದಸರಾ ಆಚರಣೆಗೆ ಸರ್ಕಾರ ಮುಂದಾಗಿದೆ.

ಸರ್ಕಾರದ ನಿರ್ದೇಶನದ ಬಳಿಕ ಅಧಿಕಾರಿಗಳೂ ಕಾರ್ಯಪ್ರವೃತ್ತರಾಗಿದ್ದು, ಮೊದಲ ಹಂತದಲ್ಲಿ ಜಂಬೂ ಸವಾರಿಗೆ ಆಯ್ಕೆ ಮಾಡಲು 25 ಆನೆಗಳ ಆರೋಗ್ಯ ಪರಿಶೀಲನೆ ಮಾಡಿದ್ದಾರೆ. ಇದರ ಭಾಗವಾಗಿ ಈ ಬಾರಿ ಆನೆಗಳ ಮೂತ್ರ ಮತ್ತು ರಕ್ತದ ಮಾದರಿಯನ್ನು ಉತ್ತರ ಪ್ರದೇಶದ ಬರೇಲಿಯಲ್ಲಿರುವ ಇಂಡಿಯನ್‌ ವೆಟರ್ನರಿ ರೀಸರ್ಚ್‌ ಇಸ್ಟಿಟ್ಯೂಟ್‌ (IVRI) ಗೆ ಕಳಿಸಿ ಆನೆಗಳ ಆರೋಗ್ಯ, ಗರ್ಭಧಾರಣೆಯ ಪರೀಕ್ಷೆಗೆ ಅರಣ್ಯ ಇಲಾಖೆ ಮುಂದಾಗಿದೆ.

2022ರ ದಸರಾದಲ್ಲಿ ಜಂಬೂಸವಾರಿಗೆ ಆಯ್ಕೆಯಾಗಿದ್ದ ಲಕ್ಷ್ಮೀ ಆನೆ, ಪೂರ್ವ ತಯಾರಿ ವೇಳೆ, ಅರಮನೆ ಆವರಣದಲ್ಲಿಯೇ ಗಂಡು ಮರಿಗೆ ಜನ್ಮ ನೀಡಿತ್ತು. ಇದು ಕೆಲವರಲ್ಲಿ ಸಂತೋಷ ಉಂಟು ಮಾಡಿದ್ದರೂ, ಹಲವರು, ಪರಿಸರ ಪ್ರೇಮಿಗಳು, ವನ್ಯಜೀವಿ ತಜ್ಞರು ಗರ್ಭಿಣಿ ಆನೆಯನ್ನು ನಡೆಸಿಕೊಂಡ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೀಗೆ ಆಗಿದೆ. ತುಂಬು ಗರ್ಭಿಣಿ ಆನೆಯನ್ನು ದಸರಾದಲ್ಲಿ ಭಾಗಿಯಾಗಿಸಿದ್ದು ಸರಿಯಲ್ಲ ಎನ್ನುವ ವಿರೋಧ ವ್ಯಕ್ತವಾಗಿತ್ತು. ಇದಕ್ಕೂ ಮೊದಲು 1984ರ ದಸರಾ ವೇಳೆ ಸರಳ ಎನ್ನುವ ಆನೆಯೂ ದಸರಾದಲ್ಲಿ ಭಾಗಿಯಾಗಿದ್ದಾಗಲೇ ಮರಿಗೆ ಜನ್ಮ ನೀಡಿತ್ತು.

ಗರ್ಭಿಣಿ ಆನೆಯನ್ನು ಜಂಬೂಸವಾರಿಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಕಾಳಜಿ ಬೇಕು

ಜೂನ್‌ 19ರಿಂದಲೇ ಅಂಬಾರಿ ಹೊರಲಿರುವ ಅಭಿಮನ್ಯು ಸೇರಿ 25 ಆನೆಗಳ ಪ್ರಾಥಮಿಕ ಆರೋಗ್ಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಬಳ್ಳೆ, ದುಬಾರಿ, ಭೀಮನಕಟ್ಟೆ, ಹರವೆ, ಮತ್ತಿಗೋಡು, ಬಂಡೀಪುರದ ಆನೆ ಕ್ಯಾಂಪ್‌ಗಳಿಗೆ ಮೈಸೂರು ಡಿಸಿಎಫ್‌, ಡಾ.ಐ.ಬಿ.ಪ್ರಭುಗೌಡ, ಆರ್‌ ಎಫ್‌ ಓ, ಪಶುವೈದ್ಯಾಧಿಕಾರಿಗಳು, ತಜ್ಞರ ತಂಡ ಭೇಟಿ ನೀಡಿ ಅಂತಿಮ 15 ಆನೆಗಳ ಪಟ್ಟಿ ಸಿದ್ಧ ಮಾಡುತ್ತಿದ್ದಾರೆ. ಇದರ ಭಾಗವಾಗಿಯೇ ಹಲವು ಆಯಾಮಗಳಲ್ಲಿ ಆರೋಗ್ಯ ತಪಾಸಣೆ ಮತ್ತು ನಿಗಾ ಇಡಲಾಗಿದೆ.

ಐವಿಆರ್‌ ಐ ವರದಿ ಆಧರಿಸಿ ಆನೆಗಳ ಆಯ್ಕೆ

ಸಾಮಾನ್ಯವಾಗಿ ಆನೆಗಳ ಆರೋಗ್ಯ, ಅವುಗಳ ಮನಸ್ಥಿತಿಯ ಬಗ್ಗೆ ಮಾವುತರು, ಕಾವಾಡಿಗರಿಗೆ ತಿಳಿದಿರುತ್ತದೆ. ಇದರ ಜೊತೆಗೆ ಸ್ಥಳೀಯ ವೈದ್ಯಾಧಿಕಾರಿಗಳು ಹಲವು ಬಗೆಯಲ್ಲಿ ಪರೀಕ್ಷೆಗಳನ್ನು ಮಾಡಿ ಆನೆಗಳ ಆರೋಗ್ಯದ ಬಗ್ಗೆ ವರದಿ ನೀಡುತ್ತಾರೆ. ಈ ವರದಿ ಮತ್ತು ಆನೆಗಳ ಚಟುವಟಿಕೆ ನೋಡಿಕೊಂಡು ಅವುಗಳನ್ನು ದಸರಾಗೆ ಕರೆತರುವುದು ವಾಡಿಕೆ.

ಆದರೆ 2022ರಲ್ಲಿ ಲಕ್ಷ್ಮೀ ಆನೆ ದಸರಾ ವೇಳೆಯಲ್ಲಿಯೇ ಅರಮನೆ ಆವರಣದಲ್ಲಿ ಮರಿಯೊಂದಕ್ಕೆ ಜನ್ಮ ನೀಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದರಿಂದ 2023, 24ರಲ್ಲಿ ಹೆಚ್ಚಿನ ಗಮನ ನೀಡಿ ಆನೆಗಳ ಆಯ್ಕೆ ಮಾಡಲಾಗಿತ್ತು. ಈ ಬಾರಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ 130 ವರ್ಷಗಳ ಇತಿಹಾಸ ಇರುವ, ಅತಿ ದೊಡ್ಡ ಸಂಶೋಧನಾ ಸಂಸ್ಥೆ ಎನ್ನಿಸಿಕೊಂಡಿರುವ ಇಂಡಿಯನ್‌ ವೆಟರ್ನರಿ ರೀಸರ್ಚ್‌ ಇನ್ಸಿಟ್ಯೂಟ್‌ ಗೆ ಆನೆಗಳ ಮೂತ್ರ, ಲದ್ದಿ ಮತ್ತು ರಕ್ತದ ಮಾದರಿಗಳನ್ನು ಕಳಿಸಿ, ಅಲ್ಲಿಂದ ಬಂದ ವರದಿಯನ್ನು ಆಧರಿಸಿ ಆನೆಗಳ ಆಯ್ಕೆ ಮಾಡುವ ಕೆಲಸ ಆಗುತ್ತಿದೆ. ವಿಶೇಷವಾಗಿ ಹೆಣ್ಣು ಆನೆಗಳ ಗರ್ಭಧಾರಣೆ ಪರೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಿ ಮುಂದುವರಿಯಲಾಗುತ್ತಿದೆ.

ಗರ್ಭಿಣಿ ಆನೆಗಳ ಪತ್ತೆ ಕಷ್ಟವೇ?

ಆನೆಗಳ ಬೃಹತ್‌ ಗಾತ್ರದ ಕಾರಣಕ್ಕೆ ಗರ್ಭಿಣಿ ಆನೆಯನ್ನು ಪತ್ತೆ ಮಾಡುವುದು ಸಾಮಾನ್ಯವಾಗಿ ಕಷ್ಟ. ಮತ್ತು ಆಯಾ ಆನೆಗಳ ದೈಹಿಕ ಚಹರೆಗಳು ಪ್ರತ್ಯೇಕವಾಗಿರುತ್ತವೆ. ಆದರೂ , ಹೆಣ್ಣಾನೆಗಳು ಗರ್ಭಧರಿಸಿ ಮರಿ ಹಾಕಲು ಸುಮಾರು 18 ರಿಂದ 22 ತಿಂಗಳು ಬೇಕಾಗಿರುವುದರಿಂದ ಗರ್ಭಿಣಿ ಆನೆಯ ವಿವಿಧ ಹಂತಗಳನ್ನು ಸುಲಭವಾಗಿ ಗ್ರಹಿಸುವುದು ಸಾಧ್ಯವಿಲ್ಲ.  ವನ್ಯ ಜೀವಿ ರಕ್ಷಣೆ ಕಾಯಿದೆ ಪ್ರಕಾರ ಗರ್ಭಿಣಿ ಆನೆ (ಸಾಕಾನೆ)ಯನ್ನು ಯಾವುದೇ ಕಾರಣಕ್ಕೆ ಇತರ ಕೆಲಸಗಳಿಗೆ ಬಳಸುವಂತಿಲ್ಲ.  ಹಾಗಾಗಿ ಪ್ರಾಯಪ್ರಬುದ್ಧವಾಗಿರುವ ಹೆಣ್ಣಾನೆ ಗರ್ಭಿಣಿಯಾಗಿದೆಯೇ ಎಂಬುದನ್ನು ಪತ್ತೆ ಮಾಡಲೇಬೇಕಾಗಿದೆ.

ಈ ಸಂಬಂಧ ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡಿದ ಡಿಸಿಎಫ್‌ ಡಾ.ಐ.ಬಿ.ಪ್ರಭುಗೌಡ ಅವರು, ಆನೆಗಳ ಆಯ್ಕೆ ಸಂಬಂಧ ಸಾಕಷ್ಟು ಎಚ್ಚರಿಕೆ ವಹಿಸಿದ್ದೇವೆ. ಈಗಾಗಲೇ 25 ಆನೆಗಳನ್ನು ಗುರುತು ಮಾಡಲಾಗಿದೆ. ಇವುಗಳ ಆರೋಗ್ಯ ಪರೀಕ್ಷೆ ಮಾಡಿ ಇನ್ನು ಹತ್ತು ದಿನಗಳ ಒಳಗಾಗಿ ಬೆಂಗಳೂರಿಗೆ ಅಂತಿಮ ಪಟ್ಟಿ ಕಳಿಸುತ್ತೇವೆ. ನಂತರ ಅರಣ್ಯ ಸಚಿವರು ಪಟ್ಟಿ ಬಿಡುಗಡೆ ಮಾಡುತ್ತಾರೆ. ಹೆಣ್ಣು ಆನೆಗಳಿಗೆ ಗರ್ಭಧಾರಣೆ ಪರೀಕ್ಷೆ ಮಾಡಲು ಇನ್ನೂ ಸಮಯ ಇರುವುದರಿಂದ ಶೀಘ್ರದಲ್ಲಿಯೇ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಆ.4ರಂದು ಗಜಪಡೆ ಆಗಮನ, 9ರಿಂದ ತಾಲೀಮು

ಈ ಬಾರಿ ನಡೆಯಲಿರುವ ಹನ್ನೊಂದು ದಿನಗಳ ದಸರಾದಲ್ಲಿ ಅಭಿಮನ್ಯುವೇ ನಾಯಕತ್ವ ವಹಿಸಿಕೊಳ್ಳಲಿದ್ದಾನೆ. ಅಂಬಾರಿ ಹೊತ್ತು ಸಾಗುವ ಈತನ ಜೊತೆಗೆ ಭೀಮ, ಗೋಪಿ, ಕಂಜನ್‌, ಧನಂಜಯ, ಹಿರಣ್ಯ, ಲಕ್ಷ್ಮೀ, ಸುಗ್ರೀವ, ಪ್ರಶಾಂತ, ರೋಹಿಣಿ, ವರಲಕ್ಷ್ಮೀ, ಏಕಲವ್ಯ, ಮಹೇಂದ್ರ ಸೇರಿ 25 ಆನೆಗಳು ಮೊದಲ ಪಟ್ಟಿಯಲ್ಲಿ ಇವೆ. ಮೊದಲ ಹಂತದಲ್ಲಿ 9 ಆನೆಗಳು ಆ. 4 ರ ಮಧ್ಯಾಹ್ನ 12.34ರಿಂದ 12.59ರ ತುಲಾ ಲಗ್ನದಲ್ಲಿ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ಕ್ಯಾಂಪ್‌ ನಿಂದ ಮೈಸೂರಿನತ್ತ ಪ್ರಯಾಣ ಆರಂಭಿಸಲಿವೆ.

ಅಂದು ಸಂಜೆಯೇ ನಗರದ ಅಶೋಕಪುರಂ ನಲ್ಲಿರುವ ಅರಣ್ಯ ಭವನ ತಲುಪಲಿವೆ. ಎರಡು ದಿನಗಳ ಬಳಿಕ ಅಂದರೆ ಆ. 7ರಂದು ಆನೆಗಳು ಅಧಿಕೃತವಾಗಿ ಅರಮನೆ ಪ್ರವೇಶ ಮಾಡಲಿದ್ದು, ಆ.9ರಿಂದ ತಾಲೀಮು ಆರಂಭಿಸಲಿವೆ. ಬಳಿಕ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಎರಡನೇ ಹಂತದಲ್ಲಿ 5 ಆನೆಗಳ ಪ್ರವೇಶ ಆಗಲಿದೆ. 

45 ದಿನಗಳ ತಾಲೀಮಿನಲ್ಲಿ ಏನೇನಿರಲಿದೆ..?

ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಭಾಗಿಯಾಗುವ ಆನೆಗಳು ಎಂದರೆ ಜನತೆಗೆ ಎಲ್ಲಿಲ್ಲದ ಪ್ರೀತಿ. ಇದಕ್ಕೆ ತಕ್ಕಂತೆ ಸರ್ಕಾರ, ಅಧಿಕಾರಿಗಳು ಆನೆಗಳ ಆರೋಗ್ಯ ಮತ್ತು ತಾಲೀಮಿನ ಬಗ್ಗೆ ತುಂಬಾ ಮುತುವರ್ಜಿ ವಹಿಸುತ್ತಾರೆ. ಕಾವಡಿಗಳು, ಮಾವುತರ ಸಹಕಾರದಿಂದ ನಿತ್ಯವೂ ಆನೆಗಳನ್ನು ಅರಮನೆ ಅಂಗಳದಿಂದ ಐದು ಕಿ.ಮೀ. ದೂರು ಇರುವ ಬನ್ನಿಮಂಟಪದ ವರೆಗೂ ನಿತ್ಯ ನಡೆದಾಡಿಸಲಾಗುತ್ತದೆ.

ಅಂಬಾರಿ ಹೊರುವ ಅಭಿಮನ್ಯುವಿಗೆ 750 ಕೆ,ಜಿ, ತೂಕದ ಮರಳಿನ ಮೂಟೆಗಳನ್ನು ಹೊರಿಸಿ ತಾಲೀಮು ಮಾಡಿಸಲಾಗುತ್ತದೆ. ಇದರ ಜೊತೆಗೆ ಅಶ್ವದಳದೊಂದಿಗೆ ಗಜಪಡೆಗಳ ಮುಂದೆ ಮದ್ದು, ಗುಂಡುಗಳನ್ನು ಸಿಡಿಸಿ ಅವುಗಳು ಭಯಪಡದ ರೀತಿ ಮಾಡಲಾಗುತ್ತದೆ. ದಸರಾ ಆರಂಭವಾಗುತ್ತಿದ್ದಂತೆ ಆನೆಗಳಿಗೆ ವಿವಿಧ ಬಣ್ಣಗಳಿಂದ ಸಿಂಗಾರ ಮಾಡಿ, ನೋಡುಗರ ಕಣ್ಣಿಗೆ ಆನೆಗಳು ಸೊಬಗಿನ ಚಿತ್ತಾರದಂತೆ ಕಾಣುವಂತೆ ಮಾಡಲಾಗುತ್ತದೆ. ಇನ್ನು ದಸರಾ ಮುಗಿದ ನಂತರದ ಮೂರ್ನಾಲ್ಕು ದಿನಗಳ ಕಾಲ ಆನೆಗಳು ಅರಮನೆ ಆವರಣದಲ್ಲಿಯೇ ಇರುತ್ತವೆ.

ಕರೆತರುವಾಗ ಮಾತ್ರವಲ್ಲ ವಾಪಸ್‌ ಕಳಿಸುವಾಲಗಲೂ ಎಚ್ಚರ ಇರಲಿ

ದಸರಾದಲ್ಲಿ ಭಾಗಿಯಾಗುವ ಆನೆಗಳಿಗೆ ವಿಶೇಷ ಆತಿಥ್ಯ ನೀಡಿ ಸತ್ಕರಿಸಲಾಗುತ್ತದೆ. ಅವುಗಳು ಅರಮನೆ ನಗರಿಯಲ್ಲಿ ಇದ್ದಷ್ಟೂ ದಿನವೂ ಅವುಗಳಿಗೆ ರಾಜಾಥಿತ್ಯ. ಆದರೆ ಅವು ಮತ್ತೆ ಕಾಡಿಗೆ ತೆರಳಿದಾಗ..? ಹೀಗೊಂದು ಪ್ರಶ್ನೆ ಏಳುತ್ತದೆ. ಈ ಸಂಬಂಧ ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡಿದ ಮೈಸೂರಿನ ಪೀಪಲ್‌ ಫಾರ್‌ ಅನಿಮಲ್‌ ಸಂಸ್ಥೆಯ ಸವಿತಾ ನಾಗಭೂಷಣ್‌ ಅವರು, ವನ್ಯ ಜೀವಿಗಳಾದ ಆನೆಗಳನ್ನು ನಾವು ಪಳಗಿಸಿ ದಸರಾದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ನನ್ನ ಪ್ರಕಾರ ನಿಲ್ಲಬೇಕು. ಆದರೆ ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವುದರಿಂದ ಒಂದೇ ಬಾರಿ ಸ್ಥಗಿತ ಮಾಡಲು ಆಗುವುದಿಲ್ಲ.

ಆದರೆ ಅವುಗಳನ್ನು ದಸರಾಗೆಂದು ಕರೆದುಕೊಂಡು ಬರುವಾಗ ಆರೋಗ್ಯ ಪರೀಕ್ಷೆ ಮಾಡುತ್ತಾರೆ. ಇಲ್ಲಿಗೆ ಬಂದ ನಂತರ ಅವುಗಳಿಗೆ ಉತ್ತಮ ಆಹಾರ ನೀಡಿ ಸತ್ಕಾರ ಮಾಡಲಾಗುತ್ತದೆ. ಆದರೆ ಅವು ಮರಳಿ ಕಾಡಿಗೆ ಹೋದ ಬಳಿಕ ಅವುಗಳ ಮನಸ್ಥಿತಿ ಸಾಕಷ್ಟು ಬದಲಾಗಿರುತ್ತದೆ. ಇಲ್ಲಿನ ಬಗೆ ಬಗೆಯ ಆಹಾರ, ವಿಶ್ರಾಂತ ಜೀವನಕ್ಕೆ ಒಗ್ಗಿಕೊಂಡ ಆನೆಗಳು ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಂಡಿರುತ್ತವೆ. ಮತ್ತೆ ಕಾಡಿಗೆ ಹೋದಾಗ ಅಲ್ಲಿನ ಆಹಾರಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಡುತ್ತದೆ. ಈ ವೇಳೆ ತೂಕ ಇಳಿಕೆಯಾಗುವ ಸಾಧ್ಯತೆಯೂ ಇರುತ್ತದೆ. ಇದರಿಂದ ಆನೆಗಳ ಆರೋಗ್ಯದ ಮೇಲೆಯೂ ಪರಿಣಾಮ ಆಗಬಹುದು. ಹೀಗಾಗಿ ದಸರಾ ಮುನ್ನ ಮತ್ತು ಮುಗಿದ ಬಳಿಕವೂ ಆನೆಗಳ ಆರೋಗ್ಯದ ಬಗ್ಗೆ ಸರ್ಕಾರ ಗಮನ ನೀಡಬೇಕು ಎಂದು ಹೇಳುತ್ತಾರೆ.

ಹೀಗೆ ದಸರಾದ ಪ್ರಮುಖ ಆಕರ್ಷಣೆಯಾಗಿರುವ ಆನೆಗಳ ಆಯ್ಕೆ ಮತ್ತು ಅವುಗಳ ಆರೋಗ್ಯ ಪರೀಕ್ಷೆ ಮಾಡಿಸುವ ನಿಟ್ಟಿನಲ್ಲಿ ವೈಜ್ಞಾನಿಕ ವರದಿಗಳನ್ನು ತರಿಸಿಕೊಳ್ಳಲು ಅರಣ್ಯ ಇಲಾಖೆ ಮುಂದಾಗಿದ್ದು, ಹಿಂದೆ ಸರಳಾ, ಲಕ್ಷ್ಮೀ ಆನೆಗಳು ದಸರಾ ವೇಳೆ ಮರಿಗಳಿಗೆ ಜನ್ಮ ನೀಡಿದಂತಹ ಘಟನೆಗಳು ಮರುಕಳಿಸುವುದಿಲ್ಲ ಎನ್ನಬಹುದು.

Tags:    

Similar News