Breast Cancer | ಸ್ತನ ಕ್ಯಾನ್ಸರ್ ಅಪಾಯ; ಜೀವನಶೈಲಿಯೇ ಬಿರುಗಾಳಿ, ತಪಾಸಣೆಯೇ ರಕ್ಷಾಕವಚ

ʻದ ಫೆಡರಲ್ ಕರ್ನಾಟʼಕ ಕಳಕಳಿ‌| ದೇಶದಾದ್ಯಂತ ಪ್ರತಿ ನಾಲ್ಕು ನಿಮಿಷಕ್ಕೆ ಒಂದು ಸ್ತನ ಕ್ಯಾನ್ಸರ್ ಪ್ರಕರಣ ಪತ್ತೆಯಾಗುತ್ತಿದೆ. ಪ್ರತಿ ಎಂಟು ನಿಮಿಷಕ್ಕೆ ಒಂದು ಸಾವು ಸಂಭವಿಸುತ್ತಿದೆ. ಭಾರತದಲ್ಲಿ 2023 ರಲ್ಲಿ 2,21,579 ಪ್ರಕರಣಗಳು, 2024ರಲ್ಲಿ 3,10,720 ಪ್ರಕರಣಗಳು ಹಾಗೂ 2025ರಲ್ಲಿ ಈವರೆಗೆ 2,32,832 ಹೊಸ ಸ್ತನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ.

Update: 2025-10-17 03:30 GMT

ಇದು ʻದ ಫೆಡರಲ್ ಕರ್ನಾಟಕ‌ʼ ಕಳಕಳಿ.... 

ಪ್ರತಿ ನಾಲ್ಕು ನಿಮಿಷಕ್ಕೆ ದೇಶದ ಯಾವುದೋ ಮೂಲೆಯಲ್ಲಿ ಒಬ್ಬ ಮಹಿಳೆಯ ಬದುಕಿನ ಕಥೆ ಬದಲಾಗುತ್ತದೆ. ಪ್ರತಿ ಎಂಟು ನಿಮಿಷಕ್ಕೆ ಒಂದು ಕುಟುಂಬದ ಆಸರೆಯೊಂದು ಕಳಚಿ ಬೀಳುತ್ತದೆ. ಇದು ಕೇವಲ ಅಂಕಿ-ಅಂಶಗಳ ಆಟವಲ್ಲ; ಇದು ಭಾರತದಲ್ಲಿ ಸ್ತನ ಕ್ಯಾನ್ಸರ್‌ನ ಕರಾಳ ಹೆಜ್ಜೆಗುರುತು. ಬದಲಾದ ಜೀವನಶೈಲಿ, ಪೈಪೋಟಿಯ ಒತ್ತಡ ಮತ್ತು ಆಹಾರ ಪದ್ಧತಿಯ ಅಸಮತೋಲನದಿಂದಾಗಿ ಸ್ತನ ಕ್ಯಾನ್ಸರ್‌ ಎಂಬ ಮೌನ ಸುನಾಮಿ ಇದೀಗ ಕೇವಲ 50-60ರ ವಯಸ್ಸಿನವರನ್ನಷ್ಟೇ ಅಲ್ಲ, 30ರ ಹರೆಯದ ಯುವತಿಯರು ಮತ್ತು ಅಪರೂಪವಾಗಿ ಪುರುಷರನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ.

ದೇಶದಾದ್ಯಂತ ಸ್ತನ ಕ್ಯಾನ್ಸರ್‌ನ ನೆರಳು ದಟ್ಟವಾಗುತ್ತಿದೆ. 2023ರಲ್ಲಿ 2,21,579 ಹೊಸ ಪ್ರಕರಣಗಳು ಪತ್ತೆಯಾದರೆ, 2024ರಲ್ಲಿ ಆ ಸಂಖ್ಯೆ 3,10,720ಕ್ಕೆ ಏರಿಕೆಯಾಗಿದೆ. 2025ರ ಈವರೆಗಿನ ವರದಿಗಳು 2,32,832 ಹೊಸ ಪ್ರಕರಣಗಳನ್ನು ದೃಢಪಡಿಸಿವೆ. ಈ ಏರುತ್ತಿರುವ ಸಂಖ್ಯೆಗಳು, ಒಂದೆಡೆ ಆರೋಗ್ಯ ವ್ಯವಸ್ಥೆಯ ಸುಧಾರಣೆ ಮತ್ತು ಜನರ ಹೆಚ್ಚುತ್ತಿರುವ ಅರಿವಿನ ಸಂಕೇತವಾದರೆ, ಮತ್ತೊಂದೆಡೆ ನಮ್ಮ ಜೀವನಶೈಲಿಯು ನಮ್ಮ ಆರೋಗ್ಯದ ಮೇಲೆ ನಡೆಸುತ್ತಿರುವ ಮಾರಣಾಂತಿಕ ದಾಳಿಯ ದ್ಯೋತಕವೂ ಆಗಿದೆ.

ಕರ್ನಾಟಕದ ಚಿತ್ರಣ ಇದಕ್ಕಿಂತ ಭಿನ್ನವಾಗಿಲ್ಲ. 2023–24ನೇ ಸಾಲಿನಲ್ಲಿ ರಾಜ್ಯದಲ್ಲಿ 14,484 ಹೊಸ ಪ್ರಕರಣಗಳು ದಾಖಲಾಗಿದ್ದು, 5,388 ಮಹಿಳೆಯರು ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಆತಂಕಕಾರಿ ಸಂಗತಿಯೆಂದರೆ, 2024–25ರಲ್ಲಿ ಪತ್ತೆಯಾದ ಒಟ್ಟು 87,855 ಕ್ಯಾನ್ಸರ್ ಪ್ರಕರಣಗಳಲ್ಲಿ ಶೇಕಡ 31.5ರಷ್ಟು ಪಾಲು ಸ್ತನ ಕ್ಯಾನ್ಸರ್‌ನದ್ದೇ ಆಗಿದೆ. ಅದರಲ್ಲೂ 30-45 ವರ್ಷ ವಯಸ್ಸಿನ ಮಹಿಳೆಯರಲ್ಲಿ ಈ ಪ್ರಕರಣಗಳು ದುಪ್ಪಟ್ಟಾಗುತ್ತಿರುವುದು, ಈ ರೋಗದ ಸ್ವರೂಪವೇ ಬದಲಾಗುತ್ತಿರುವುದರ ಸ್ಪಷ್ಟ ಸೂಚನೆಯಾಗಿದೆ.

ನಗರದ ಬೆಳಕು, ಹಳ್ಳಿಯ ನೆರಳು

ಕರ್ನಾಟಕದ ಕ್ಯಾನ್ಸರ್ ನಕ್ಷೆಯಲ್ಲಿ ಬೆಂಗಳೂರು ರಾಜಧಾನಿಯಾಗಿ ಹೊರಹೊಮ್ಮುತ್ತಿದೆ. ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಶೇ. 19.5ರಷ್ಟು ಪ್ರಕರಣಗಳು ಸಿಲಿಕಾನ್ ಸಿಟಿಯಲ್ಲೇ ದಾಖಲಾಗುತ್ತಿವೆ. ಇದರ ಹಿಂದೆ ನಗರ ಜೀವನದ ಒತ್ತಡ, ತಡರಾತ್ರಿ ಕೆಲಸ, ಅನಿಯಮಿತ ಆಹಾರ ಮತ್ತು ಜಂಕ್ ಫುಡ್ ಸಂಸ್ಕೃತಿಯ ಪಾಲು ದೊಡ್ಡದಿದೆ. ಬೆಂಗಳೂರಿನ ನಂತರ ಬೆಳಗಾವಿ (ಶೇ 7.5), ಮೈಸೂರು (ಶೇ 4.7), ಬಳ್ಳಾರಿ (ಶೇ 4.4) ಹಾಗೂ ಕಲಬುರಗಿ (ಶೇ 4.2) ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿವೆ.

ಈ ಅಂಕಿ-ಅಂಶಗಳ ಆಚೆಗೆ ಅಸಮಾನತೆಯ ಕಟು ಸತ್ಯವಿದೆ. ನಗರ ಪ್ರದೇಶಗಳಲ್ಲಿ ಮೆಮೋಗ್ರಾಂ, ಸ್ಕ್ರೀನಿಂಗ್ ಸೌಲಭ್ಯಗಳು ಮತ್ತು ತಜ್ಞ ವೈದ್ಯರ ಲಭ್ಯತೆಯಿಂದಾಗಿ ರೋಗ ಬೇಗ ಪತ್ತೆಯಾಗುತ್ತಿದೆ. ಆದರೆ, ಗ್ರಾಮೀಣ ಭಾಗಗಳಲ್ಲಿನ ಮಹಿಳೆಯರು ‘ಲಜ್ಜೆ, ನಿರ್ಲಕ್ಷ್ಯ ಮತ್ತು ದೂರ’ ಎಂಬ ತ್ರಿವಳಿ ತಡೆಗೋಡೆಗಳನ್ನು ಎದುರಿಸುತ್ತಿದ್ದಾರೆ. ಸ್ತನ ಪರೀಕ್ಷೆಯ ಬಗ್ಗೆ ಮಾತನಾಡಲು ನಾಚಿಕೆ, ದೇಹದ ಬದಲಾವಣೆಗಳನ್ನು ನಿರ್ಲಕ್ಷಿಸುವ ಮನೋಭಾವ ಮತ್ತು ಹತ್ತಿರದಲ್ಲಿ ಸುಲಭವಾಗಿ ಲಭ್ಯವಿಲ್ಲದ ಆರೋಗ್ಯ ಕೇಂದ್ರಗಳು—ಈ ಮೂರೂ ಕಾರಣಗಳಿಂದಾಗಿ ಶೇ. 50ಕ್ಕೂ ಹೆಚ್ಚು ಪ್ರಕರಣಗಳು ಮೂರನೇ ಅಥವಾ ನಾಲ್ಕನೇ ಹಂತದಲ್ಲಿ ಪತ್ತೆಯಾಗುತ್ತಿವೆ. ಇದು ಗುಣಮುಖವಾಗುವ ಸಾಧ್ಯತೆಯನ್ನು ಬಹುತೇಕ ಇಲ್ಲವಾಗಿಸುತ್ತದೆ.

ತಜ್ಞರ ಮಾತು: ತಡವಾದರೆ ಜೀವಕ್ಕೆ ಅಪಾಯ

ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ನಿರ್ದೇಶಕ ಡಾ. ಟಿ. ನವೀನ್‌ ಕುಮಾರ್‌ ಅವರ ಮಾತುಗಳು ಈ ವಾಸ್ತವಕ್ಕೆ ಕನ್ನಡಿ ಹಿಡಿಯುತ್ತವೆ. "ಬಹುತೇಕ ಮಹಿಳೆಯರು ಕ್ಯಾನ್ಸರ್‌ ಉಲ್ಬಣಗೊಂಡು, ನೋವು ಹೆಚ್ಚಾದ ನಂತರವೇ ಆಸ್ಪತ್ರೆಗೆ ಬರುತ್ತಾರೆ. ಆಗ ಚಿಕಿತ್ಸೆ ನೀಡುವುದು ಸವಾಲಾಗುತ್ತದೆ. ಮೂರು ಮತ್ತು ನಾಲ್ಕನೇ ಹಂತದಲ್ಲಿ ಚೇತರಿಕೆ ಪ್ರಮಾಣ ತೀರಾ ಕಡಿಮೆ. ಆದರೆ, ಆರಂಭಿಕ ಹಂತದಲ್ಲಿಯೇ ರೋಗ ಪತ್ತೆಯಾದರೆ ಶೇ. 90ರಷ್ಟು ಸಂಪೂರ್ಣವಾಗಿ ಗುಣಪಡಿಸಬಹುದು," ಎಂದು ಅವರು ‘ದ ಫೆಡರಲ್ ಕರ್ನಾಟಕ’ಕ್ಕೆ ತಿಳಿಸಿದರು. ಅವರ ಮಾತುಗಳು ಕೇವಲ ವೈದ್ಯಕೀಯ ಅಭಿಪ್ರಾಯವಲ್ಲ, ಬದಲಿಗೆ ಸಮಾಜಕ್ಕೆ ನೀಡುತ್ತಿರುವ ಎಚ್ಚರಿಕೆಯ ಕರೆಯಾಗಿದೆ.

ಕಾರಣಗಳು ಸಂಕೀರ್ಣ

ಸ್ತನ ಕ್ಯಾನ್ಸರ್ ಹೆಚ್ಚಳಕ್ಕೆ ಒಂದೇ ಕಾರಣವಿಲ್ಲ. ಹಲವಾರು ಇವೆ. ಅದೊಂದು ಕಾರಣಗಳ ಸಂಕೀರ್ಣ ಜಾಲ. ನಗರೀಕರಣ, ದೈಹಿಕ ಶ್ರಮದ ಕೊರತೆ, ಬೊಜ್ಜು, ಅತಿಯಾದ ಜಂಕ್ ಫುಡ್ ಸೇವನೆ, ಮದ್ಯಪಾನ ಮತ್ತು ಧೂಮಪಾನ ಮೂಲಕ ಕಾರಣವಾದರೆ, ತಡವಾಗಿ ಮದುವೆ, ತಡವಾಗಿ ಮಕ್ಕಳನ್ನು ಪಡೆಯುವುದು, ಮಕ್ಕಳಿಗೆ ಸ್ತನ್ಯಪಾನ ಮಾಡಿಸದಿರುವುದು, ಹಾರ್ಮೋನ್ ಚಿಕಿತ್ಸೆಗಳು ಇನ್ನು ಕೆಲವು ಕಾರಣಗಳು. ಕುಟುಂಬದಲ್ಲಿ ಯಾರಿಗಾದರೂ (ಅಮ್ಮ, ಸಹೋದರಿ, ಅಜ್ಜಿ) ಸ್ತನ ಅಥವಾ ಅಂಡಾಶಯದ ಕ್ಯಾನ್ಸರ್ ಇದ್ದರೆ ಅಪಾಯ ಹೆಚ್ಚು.

ಈ ಎಲ್ಲದರ ಜೊತೆಗೆ, ಮಹಿಳೆಯರು ತಮ್ಮ ದೇಹದ ಬದಲಾವಣೆಗಳನ್ನು ನಿರ್ಲಕ್ಷಿಸುವುದು ಮತ್ತು "ನನಗೇನೂ ಆಗಲ್ಲ" ಎಂಬ ಉದಾಸೀನ ಮನೋಭಾವವೇ ಪ್ರಕರಣಗಳು ತಡವಾಗಿ ಪತ್ತೆಯಾಗಲು ಮುಖ್ಯ ಕಾರಣವೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಮುಂದಿನ ದಾರಿ: ಚಿಕಿತ್ಸೆಗಿಂತ ತಪಾಸಣೆ ಲೇಸು

ಸ್ತನ ಕ್ಯಾನ್ಸರ್ ವಿರುದ್ಧದ ಯುದ್ಧವನ್ನು ಗೆಲ್ಲಲು ಚಿಕಿತ್ಸೆಗಿಂತಲೂ ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆಯೇ ಪ್ರಬಲ ಅಸ್ತ್ರಗಳು. ಇದಕ್ಕಾಗಿ ವೈಯಕ್ತಿಕ, ಸಾಮಾಜಿಕ ಮತ್ತು ಸರ್ಕಾರಿ ಮಟ್ಟದಲ್ಲಿ ಸಂಘಟಿತ ಪ್ರಯತ್ನ ಅತ್ಯಗತ್ಯ.

1. ವೈಯಕ್ತಿಕ ಜಾಗೃತಿ: 30 ವರ್ಷ ದಾಟಿದ ಪ್ರತಿಯೊಬ್ಬ ಮಹಿಳೆಯೂ ತಿಂಗಳಿಗೊಮ್ಮೆ ‘ಸ್ವಯಂ ಸ್ತನ ಪರೀಕ್ಷೆ’ (Self-examination) ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಸ್ತನಗಳಲ್ಲಿ ಗಡ್ಡೆ, ಆಕಾರದಲ್ಲಿ ಬದಲಾವಣೆ, ತೊಟ್ಟಿನಿಂದ ಸ್ರಾವ, ಅಥವಾ ಚರ್ಮದಲ್ಲಿ ವ್ಯತ್ಯಾಸ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

2. ವೈದ್ಯಕೀಯ ತಪಾಸಣೆ: 40 ವರ್ಷ ದಾಟಿದ ಮಹಿಳೆಯರು ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆ ವೈದ್ಯರಿಂದ ಕ್ಲಿನಿಕಲ್ ಪರೀಕ್ಷೆ ಮತ್ತು ಮೆಮೋಗ್ರಾಂ ಮಾಡಿಸಿಕೊಳ್ಳುವುದು ಅತ್ಯಗತ್ಯ.

3. ಸರ್ಕಾರದ ಪಾತ್ರ: ಸರ್ಕಾರಿ ಆಸ್ಪತ್ರೆಗಳಲ್ಲಿ ಮೆಮೋಗ್ರಾಂ ಸೌಲಭ್ಯವನ್ನು ತಾಲೂಕು ಮಟ್ಟಕ್ಕೆ ವಿಸ್ತರಿಸಬೇಕು. ಮೊಬೈಲ್ ಸ್ಕ್ರೀನಿಂಗ್ ಘಟಕಗಳ ಮೂಲಕ ಹಳ್ಳಿ-ಹಳ್ಳಿಗಳಲ್ಲಿ ತಪಾಸಣಾ ಶಿಬಿರಗಳನ್ನು ಆಯೋಜಿಸಬೇಕು.

4. ಸಾಮಾಜಿಕ ಆಂದೋಲನ: ಶಾಲಾ-ಕಾಲೇಜು ಮಟ್ಟದಲ್ಲಿ ಯುವತಿಯರಿಗೆ ಈ ಬಗ್ಗೆ ಅರಿವು ಮೂಡಿಸುವುದು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಗ್ರಾಮೀಣ ಮಹಿಳೆಯರಿಗೆ ಮಾಹಿತಿ ತಲುಪಿಸುವುದು ಮತ್ತು ಈ ವಿಷಯದ ಬಗ್ಗೆ ಇರುವ ಮುಜುಗರವನ್ನು ಹೋಗಲಾಡಿಸುವುದು ಒಂದು ಸಾಮಾಜಿಕ ಚಳವಳಿಯಾಗಬೇಕು.

ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕದಂತಹ ಯೋಜನೆಗಳು ಕ್ಯಾನ್ಸರ್ ಚಿಕಿತ್ಸೆಯನ್ನು ಬಡವರಿಗೂ ಲಭ್ಯವಾಗಿಸುತ್ತಿವೆ. ಆದರೆ, ರೋಗವು ಚಿಕಿತ್ಸೆಯ ಹಂತಕ್ಕೆ ತಲುಪದಂತೆ ತಡೆಯುವುದೇ ನಮ್ಮೆಲ್ಲರ ಗುರಿಯಾಗಬೇಕು. ಸ್ತನ ಕ್ಯಾನ್ಸರ್ ಒಂದು ಕಾಯಿಲೆಯಷ್ಟೇ ಅಲ್ಲ, ಅದೊಂದು ಸಾಮಾಜಿಕ ಮತ್ತು ಮಾನಸಿಕ ಬಿಕ್ಕಟ್ಟು. ಇದಕ್ಕೆ ಪರಿಹಾರ ಕೇವಲ ಆಸ್ಪತ್ರೆಯಲ್ಲಷ್ಟೇ ಇಲ್ಲ; ಅದು ನಮ್ಮ ಮನೆಯಲ್ಲೇ ಇವೆ. 

ದ ಫೆಡರಲ್ ಕರ್ನಾಟಕ‌ ಕಳಕಳಿ

Tags:    

Similar News