ಲಂಡನ್ ಫ್ಯಾಷನ್ ಸಪ್ತಾಹದಲ್ಲಿ ಸದ್ದು ಮಾಡಿದ ತಮಿಳು ನಾಡಿನ ಭವಾನಿ ಜಮಖಾನದ ಗತ್ತು-ಗೈರತ್ತು
ಲಂಡನ್‌ನಲ್ಲಿ ನಡೆದ ಫ್ಯಾಷನ್ ವೀಕ್ ನಲ್ಲಿ ತಮಿಳುನಾಡಿನ ಹಿರಿಯ ನೇಕಾರ ಪಿ ಶಕ್ತಿವೇಲನ್ ಹಣೆದ ಭವಾನಿ ಜಮಖಾನ ಸದ್ದುಮಾಡಿದೆ. ವಿನೊ ಸುಪ್ರಜಾ ಭವಾನಿ ಜಮಖಾನಕ್ಕೆ ಗತಕಾಲದ ವೈಭವವನ್ನು ತರಲು ಪ್ರಯತ್ನ ನಡೆಸಿದ್ದಾರೆ
ಸೆಪ್ಟೆಂಬರ್ 21ರಂದು ಲಂಡನ್ ಫ್ಯಾಶನ್ ಸಪ್ತಾಹದಲ್ಲಿ ಅಚ್ಚರಿಯೊಂದು ನಡೆಯಿತು. ಅಂದು ದುಬೈ ಮೂಲದ ವಿನ್ಯಾಸಗಾತಿ ವಿನೋ ಸುಪ್ರಜಾ ಅವರು ಅಲ್ಲಿನ RAMP ಮೇಲೆ ಹೆಜ್ಜೆಹಾಕಿದಾಗ ಅವರ ಪಕ್ಕದಲ್ಲಿಯೇ ನಡೆದು ಬಂದವರನ್ನು ಕಂಡು ಪ್ರೇಕ್ಷಕರು ವಿಸ್ಮಯಕ್ಕೆ ಒಳಗಾದರು. ಯಾಕೆಂದರೆ ಹಾಗೆ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತ ನಡೆದು ಬಂದವರು ತಮಿಳು ನಾಡಿನ ಭವಾನಿ ಎಂಬ ಪಟ್ಟಣದ ಪಿ.ಶಕ್ತಿವೇಲ್. ಅವರು ಧರಿಸಿದ್ದು ಸ್ಪಟಿಕದಷ್ಟು ಸ್ವಚ್ಛವಾದ ಧೋತಿಯನ್ನು. ಆ ವಿನೀತ ಭಾವದ ನೇಕಾರರು ತಮ್ಮ ಕೈಯಲ್ಲಿ ರಾಟ್ಟೈ (ನೂಲುವ ಚರಕ)ಯನ್ನು ಹಿಡಿದಿದ್ದು ವಿಶೇಷವಾಗಿತ್ತು. ಅದು ಭಾರತದ ಕೈಮಗ್ಗ ಪರಂಪರೆಯ ಸಂಕೇತವಾಗಿತ್ತು. ಅದೇ ಸಂದರ್ಭದಲ್ಲಿ ಸುಪ್ರಜಾ ಅವರು ನೆಯ್ದ ಕಾರ್ಪೆಟ್ ಗಳಿಂದ ತಯಾರಿಸಿದ ಐಷಾರಾಮಿ ಬ್ಯಾಗ್ ಗಳನ್ನು ಅನಾವರಣಗೊಳಿಸಿದರು. ಅದನ್ನು ಕಂಡ ಅಷ್ಟೂ ಮಂದಿ ಮೂಗಿನ ಮೇಲೆ ಬೆರಳಿಟ್ಟರು.
ಭವಾನಿ ಜಮಖಾನ ಎಂದರೆ ತಮಿಳು ನಾಡಿನಲ್ಲಿ ಭಾರೀ ಜನಪ್ರಿಯ. ಕೈಮಗ್ಗದಿಂದ ನೆಯ್ದ ಹತ್ತಿ ಕಾರ್ಪೆಟ್ ಮತ್ತು ಕಂಬಳಿಯಾದ ಭವಾನಿ ಜಮಖಾನವು ತನ್ನ ಸಾಂಪ್ರದಾಯಿಕ ಕರಕುಶಲತೆ, ದಪ್ಪ, ಬಾಳಿಕೆ ಬರುವ ನೆಯ್ಗೆ ಹಾಗೂ ಬಹುವರ್ಣದ ಪಟ್ಟಿಗಳನ್ನು ಒಳಗೊಂಡ ವಿನ್ಯಾಸಕ್ಕೆ ಹೆಸರುವಾಸಿ. ಈ ಕರಕುಶಲ ಕಲೆಗೆ ಎರಡು ದಶಕಗಳ ಹಿಂದೆಯೇ ಜಿಐ ಟ್ಯಾಗ್ ದೊರೆತಿದ್ದರೂ ಕಾಲಕ್ರಮೇಣ ನಾವೀನ್ಯತೆ ಮತ್ತು ಮಾರುಕಟ್ಟೆ ಬೆಂಬಲ ಸಿಗದಾಯಿತು. ಹಾಗಾಗಿ ಅನೇಕ ಮಂದಿ ನೇಕಾರರು ತಮ್ಮ ಮಗ್ಗಗಳನ್ನು ತೊರೆಯಲು ದಾರಿಮಾಡಿತು.
ಒಂದು ಕಾಲದಲ್ಲಿ ಭವಾನಿಯಲ್ಲಿ 5000 ಕೈಮಗ್ಗಗಳಿದ್ದವು. ಆದರೆ ಅವುಗಳಲ್ಲಿ ಈಗ ಕೇವಲ ಐದನೇ ಒಂದು ಭಾಗ ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂಬ ಸಂಗತಿಯನ್ನು ಸುಪ್ರಜಾ ಅವರು ಇತ್ತೀಚೆಗೆ ನಡೆಸಿದ ಸಂಶೋಧನೆಯಿಂದ ಕಂಡುಕೊಂಡರು.
ಸರಿದುಹೋದ ಜಮಖಾನ ಜಮಾನ
“ಹಿಂದೆಲ್ಲ ತಮಿಳು ನಾಡಿನ ಪ್ರತಿ ಮನೆಗಳಲ್ಲಿ ಅತಿಥಿಗಳನ್ನು ಸ್ವಾಗತಿಸಲು, ಸಭಾಂಗಣದಲ್ಲಿ ಹರಡಲು ಅಥವಾ ಹಬ್ಬ ಮತ್ತು ಇತರ ಶುಭ ಸಮಾರಂಭಗಳ ಮೇಲೆ ಕುಳಿತುಕೊಳ್ಳಲು ಆ ಜಮಖಾನಗಳು ಇದ್ದೇ ಇರುತ್ತಿದ್ದವು. ಯಾವತ್ತೂ ಅವುಗಳ ಜಾಗವನ್ನು ಪೀಠೋಪಕರಣಗಳು ಆಕ್ರಮಿಸಿಕೊಂಡವೊ ನೆಲದ ಮೇಲೆ ಕುಳಿತುಕೊಳ್ಳುವ ಪದ್ಧತಿ ಮಾಯಾವಾಯಿತು. ಅದರೊಂದಿಗೆ ಜಮಖಾನ ಬೇಡಿಕೆಯೂ ಕುಸಿಯಿತು,” ಎಂದು ಸುಪ್ರಜಾ ವಿವರಿಸುತ್ತಾರೆ.
“ಒಂದು ವರ್ಷದ ಹಿಂದೆ ನಾನು ನನ್ನ ಜೆ-ಪೌಚ್ ಉತ್ಪನ್ನವನ್ನು ಪರಿಚಯಿಸಿದ್ದೆ. ಅಂತಹ ಸಂದರ್ಭದಲ್ಲಿ ಲಂಡನ್ ಫ್ಯಾಷನ್ ವೀಕ್ ಸಂಘಟಕರಿಂದ ಒಂದು ಸ್ಲಾಟ್-ಗಾಗಿ ಕರೆಬಂದಿತು. ಅದೊಂದು ಉತ್ತಮ ಅವಕಾಶ ಎಂದು ಭಾವಿಸಿ ತಕ್ಷಣ ನಾನು ಪ್ರದರ್ಶನ ಮತ್ತು ಪ್ರಸ್ತುತಿಯ ಮೇಲೆ ಗಮನ ಹರಿಸಿದೆ. ಶೋ ಹೇಗೆ ಮಾಡಬೇಕು ಎಂದು ಯೋಚಿಸುತ್ತಿದ್ದಾಗ ಒಂದು ರಾಟ್ಟೈ (ಚರಕ) ಹಿಡಿದ ಶಕ್ತಿವೇಲ್ ಅಯ್ಯ ಅವರನ್ನು ಜೊತೆಗೆ ಕರೆದೊಯ್ಯುವ ಐಡಿಯಾ ಹೊಳೆಯಿತು. ಅದನ್ನು ನೀವು ಬೇಕಿದ್ದರೆ ಅಭಿವ್ಯಕ್ತಿಯ ರೂಪವೆಂದಾದರೂ ಕರೆಯಬಹುದು,” ಎಂದು ಅವರು ‘ದ ಫೆಡರಲ್’ ಜೊತೆ ಮಾತನಾಡುತ್ತ ಈ ಜಮಖಾನ ಲಂಡನ್ ಪಯಣದ ವಿವರವನ್ನು ನೀಡಿದರು.
ಲಂಡನ್ ಫ್ಯಾಷನ್ ವೀಕ್ ನಲ್ಲಿ ತಮಿಳು ನಾಡಿನ ಹಿರಿಯ ನೇಕಾರ ಪಿ.ಶಕ್ತಿವೇಲ್ ಅವರ ಜೊತೆ RAMP ಮೇಲೆ ಹೆಜ್ಜೆಹಾಕಿದ ಫ್ಯಾಷನ್ ವಿನ್ಯಾಸಗಾತಿ ವಿನೋ ಸುಪ್ರಜಾ.
ಭವಾನಿ ಜಮಖಾನಕ್ಕೆ ಐಷರಾಮಿಯ ಎಲ್ಲ ಗುಣಲಕ್ಷಣಗಳಿವೆ ಎಂದು ಹೇಳುವ ಅವರು, “ಜಮಖಾನ ಮೇಲೆ ಹೆಸರು ಮುದ್ರಿಸದೇ ಹೋದರೂ ಕೂಡ ಅದು ಭವಾನಿ ಜಮಖಾನವೇ ಎನ್ನುವಷ್ಟು ಜನರ ಮನಸ್ಸಿನಲ್ಲಿ ಅಚ್ಛೊತ್ತಿದೆ. ಯಾಕೆಂದರೆ ಅದರ ಕಣ್ಸೆಳೆಯುವ ಬಣ್ಣಗಳು, ಅದರ ದೃಢತೆ ಹಾಗೂ ಗುಣಮಟ್ಟದ ಮೇಲ್ಮೈ ಹೆಸರುವಾಸಿ. ಇಂತಹುದೊಂದು ಕರಕುಶಲ ವಸ್ತುಗಳು ಈಗಂತೂ ಅಪರೂಪದಲ್ಲಿ ಅಪರೂಪವಾಗುತ್ತಿದೆ. ಇದರ ವಿನ್ಯಾಸ ಮತ್ತು ಮಾದರಿಗಳು ಕಾಲಾತೀತ. ಒಂದು ಉತ್ಪನ್ನವಾಗಿ ಈ ಕಾರ್ಪೆಟ್-ಗೆ ತೀವ್ರ ಕಸಬುದಾರಿಕೆಯ ಅಗತ್ಯವಿದೆ. ಈ ಎಲ್ಲ ಗುಣಲಕ್ಷಣಗಳನ್ನು ಒಳಗೊಂಡ ಕಾರ್ಪೆಟ್ ಬಳಕೆ ಈಗ ತೀರ ಸೀಮಿತವಾದ ಕಾರಣ ನಾನು ಅದನ್ನು ಐಷರಾಮಿ ಬ್ಯಾಗುಗಳಾಗಿ ಪರಿವರ್ತಿಸಿದೆ” ಎಂದು ‘ಫೆಡರಲ್’ಗೆ ತಿಳಿಸಿದರು.
ಜಾಗತಿಕ ವೇದಿಕೆಯಲ್ಲಿ ಮೆರೆದ ಖುಷಿ
ಲಂಡನ್ ಫ್ಯಾಷನ್ ವೀಕ್ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಎದ್ದು ನಿಂತು ಕರತಾಡನ ಮಾಡಿದ ರೀತಿ, ಆ ಬಳಿಕ ಲಂಡನ್ ನಲ್ಲಿಯೇ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿದ್ದರಿಂದ ಥ್ರಿಲ್ ಆಗಿರುವ 70 ವರ್ಷ ವಯಸ್ಸಿನ, ಮೂರು ತಲೆಮಾರುಗಳ ಕುಶಲಕರ್ಮಿಗಳ ಕುಟುಂಬದಿಂದ ಬಂದಿರುವ ಸಾಂಪ್ರದಾಯಿಕ ನೇಕಾರ ಶಕ್ತಿವೇಲ್ ಅವರ ಉತ್ಸಾಹಕ್ಕೆ ಈಗ ಪಾರವೇ ಇಲ್ಲ.
“ಪ್ರದರ್ಶನದಲ್ಲಿ ಜನರು ನನ್ನ ಉತ್ಪನ್ನದ ಬಗ್ಗೆ ಆಡುತ್ತಿದ್ದ ಮಾತುಗಳು, ನನ್ನ ಕುಶಲಕಲೆಯನ್ನು ಶ್ಲಾಘಿಸುತ್ತಿದ್ದ ರೀತಿ ಕೇಳಿ ನಿಜಕ್ಕೂ ಖುಷಿಯಾಯಿತು,” ಎಂದು ಶಕ್ತಿವೇಲ್ ಹೇಳುತ್ತಾರೆ.
“ಮುಂದಿನ ಕೆಲವು ದಿನಗಳಲ್ಲಿ ನಮ್ಮ ಭವಾನಿ ಪೋಸ್ಟ್ ಆಫೀಸ್ ಬ್ಯುಸಿಯಾಗಲಿದೆ. ನಮ್ಮ ಉತ್ಪನ್ನಗಳು ಅಲ್ಲಿಂದಲೇ ಬೇರೆ ರಾಜ್ಯಗಳಿಗೆ ಪಾರ್ಸೆಲ್ ರೂಪದಲ್ಲಿ ಹೊರಡುತ್ತವೆ. ಅದು ಇನ್ನಷ್ಟು ದಿನಗಳ ಕಾಲ ಮುಂದುವರಿಯಲಿದೆ ಎಂಬುದು ನಮ್ಮ ಆಸೆ” ಎಂದು ಅವರು ಹೇಳಿದರು.
ಶಕ್ತಿವೇಲ್ ಹಿಂದೆಂದೂ ವಿದೇಶ ಪ್ರವಾಸ ಮಾಡಿರಲಿಲ್ಲ. ಈ ಕರಕುಶಲ ಕಲೆ ಮತ್ತು ನೇಕಾರರ ಸಮುದಾಯದ ಮಹತ್ವವನ್ನು ಹೀಗೆ ಅವರೆಂದೂ ಹೊರಜಗತ್ತಿಗೆ ಈ ಪರಿಯಲ್ಲಿ ಪ್ರಸ್ತುತಪಡಿಸಿರಲಿಲ್ಲ. ಈ ಪ್ರವಾಸಕ್ಕೆ ಬೇಕಾದ ಪಾಸ್-ಪೋರ್ಟ್-ವೀಸಾ ಎಲ್ಲ ಪ್ರಕ್ರಿಯೆಯನ್ನೂ ಸುಪ್ರಜಾ ಅವರೇ ಜವಾಬ್ದಾರಿ ಹೊತ್ತು ವ್ಯವಸ್ಥೆ ಮಾಡಿದರು.
“ಇದು ನನ್ನ ಮೊಟ್ಟ ಮೊದಲ ವಿದೇಶ ಪ್ರವಾಸ. ನಮ್ಮ ಕಾರ್ಪೆಟ್ ಗಳು ಈಗ ಮ್ಯಾಜಿಕ್ ಮಾಡಿಬಿಟ್ಟಿವೆ,” ಎನ್ನುವ ಶಕ್ತಿವೇಲ್ ಅವರ ಮುಖದಲ್ಲಿ ಖುಷಿ ಢಾಳಾಗಿ ಕಾಣುತ್ತಿದೆ.
ಲಂಡನ್ ಫ್ಯಾಷನ್ ವೀಕ್ ನಲ್ಲಿ ಭವಾನಿಗೆ ಸಿಕ್ಕ ಅಭೂತಪೂರ್ವ ಪ್ರಚಾರ ಸಿಕ್ಕ ಬಳಿಕ ಸಾಂಪ್ರದಾಯಿಕ ಕಾರ್ಪೆಟ್ ಗಳಿಗೆ ವಿದೇಶಗಳಿಂದ ಇನ್ನಷ್ಟು ಬೇಡಿಕೆಗಳು ಬರಲಿವೆ ಎಂಬ ಆಶಾವಾದ ಶಕ್ತಿವೇಲ್ ಅವರಂತಹ ಇನ್ನೂ ಅನೇಕ ನೇಕಾರರದ್ದು. ನೇಕಾರರ ಕುಶಲ ಕಾರ್ಯಕ್ಕೆ ಸಿಕ್ಕ ಮಾನ್ಯತೆಯ ಹಿನ್ನೆಲೆಯಲ್ಲಿ ಸರ್ಕಾರ ಕರಕುಶಲ ಉತ್ಪನ್ನಕ್ಕಾಗಿ ಭವಾನಿ ಕಾರ್ಪೆಟ್ ನ್ನು ಮೀಸಲಿಟ್ಟಿದೆ ಎಂದು ತಮಿಳು ನಾಡು ಕೈಮಗ್ಗ ನೇಕಾರರ ಸಹಕಾರ ಸಂಘದ ಅಧಿಕಾರಿಗಳು ತಿಳಿಸುತ್ತಾರೆ.
ಭರವಸೆಯ ಆರಂಭ-ಬೇಕಿದೆ ಸರ್ಕಾರದ ಸಹಾಯಹಸ್ತ
ಭೌಗೋಳಿಕ ಆಸ್ತಿ ನೋಂದಣಿ ಮಾಡುವಲ್ಲಿ ವಿಶೇಷ ತಜ್ಞರಾಗಿರುವ, ಬೌದ್ಧಿಕ ಆಸ್ತಿ ವಕೀಲರಾದ ಪಿ.ಸಂಜಯ್ ಗಾಂಧಿ ಅವರು ಮಾತನಾಡಿ, ಎರಡು ದಶಕಗಳಷ್ಟು ಹಿಂದೆ ನಾನು ಜಿಐ ಟ್ಯಾಗ್ ಪಡೆಯಲು ನೆರವಾದ ಉತ್ಪನ್ನು ಇಂದು ಜಗತ್ತಿನ ಗಮನ ಸೆಳೆಯುತ್ತಿರುವುದು ಕಂಡು ನಿಜಕ್ಕೂ ಹೆಮ್ಮೆಯೆನಿಸುತ್ತಿದೆ ಎಂದು ಹೇಳಿದರು.
“ಭವಾನಿಯ ಸಾಂಪ್ರದಾಯಿಕಕ ಕುಶಲಕರ್ಮಿಗಳು ಪ್ರತಿಯೊಂದು ವಿನ್ಯಾಸಕ್ಕೂ ತಮ್ಮ ರಕ್ತ ಮತ್ತು ಬೆವರು ಹರಿಸುತ್ತಿದ್ದಾರೆ. ಈ ಕರಕುಶಲ ಕೆಲಸಕ್ಕೆ ಜಗತ್ತಿನ ಮನ್ನಣೆ ದೊರಕಿರುವುದು, ಒಂದು ಭರವಸೆದಾಯಕ ಆರಂಭ. ಈ ಉತ್ಪನ್ನವನ್ನು ಪ್ರೀಮಿಯಂ ಉಡುಗೊರೆಯಾಗಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಪ್ರೋತ್ಸಾಹ ನೀಡಿದರೆ ನಿಜಕ್ಕೂ ಅದೊಂದು ದೊಡ್ಡ ಕ್ರಮವಾಗಲಿದೆ. ಇದು ನೂರಾರು ನೇಕಾರರ ಜೀವನೋಪಾಯವನ್ನು ಸುಸ್ಥಿರಗೊಳಿಸಲು ಸಹಾಯ ಮಾಡುತ್ತದೆ,” ಎಂದು ಸಂಜಯ್ ಗಾಂಧಿ ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಭವಾನಿಯ ವಿಶೇಷತೆಯೊಂದಿಗೆ ವಿನೊ ಸುಪ್ರಜಾ ಅವರು ವಿನ್ಯಾಸಗೊಳಿಸಿದ ಬಣ್ಣ ಬಣ್ಣದ ಬ್ಯಾಗ್ ಗಳು
ಭವಾನಿ ಜಮಖಾನಕ್ಕೆ 19ನೇ ಶತಮಾನದಷ್ಟು ಹಿಂದಿನ ಇತಿಹಾಸವಿದೆ. ಈಗಿನ ಈರೋಡ್ ಜಿಲ್ಲೆಯಲ್ಲಿ ಕಾವೇರಿ ನದಿಯ ದಡದಲ್ಲಿ ನೆಲೆಸಿದ್ದ ಜಂಗಮರು ಎಂಬ ನೇಕಾರರ ಸಮುದಾಯವು ದಪ್ಪನೆಯ, ಒರಟು ನೂಲಿನ ಕಂಬಳಿಗಳು ಮತ್ತು ಹಾಸುಗಳನ್ನು ತಯಾರಿಸಲು ಪ್ರಾರಂಭಿಸಿತು. ಇವುಗಳೇ ಇಂದು ಜಮಖಾನಗಳಾಗಿ ಜನಪ್ರಿಯವಾಗಿವೆ. ಆರಂಭದಲ್ಲಿ ಈ ಜಮಖಾನಗಳನ್ನು ಹೊಂಡದ ಮಗ್ಗಗಳ್ಲಲಿ ಬಾಳಿಕೆ ಬರುವ ಹತ್ತಿ ನೂಲುಗಳನ್ನು ಬಳಸಿ ನೆಯ್ಗೆ ಮಾಡಲಾಗುತ್ತಿತ್ತು. ಅವುಗಳ ಮೇಲಿನ ವಿಶಿಷ್ಟವಾದ ಬಣ್ಣ ಬಣ್ಣದ ಪಟ್ಟೆಗಳು ಹಾಗೂ ದಪ್ಪ ದಪ್ಪನೆಯ ಅಡ್ಡ-ಗಡಿ ಬಣ್ಣದ ಪಟ್ಟಿಗಳು ಅವುಗಳನ್ನು ತಕ್ಷಣವೇ ಗುರುತಿಸುವಂತೆ ಮಾಡುತ್ತಿದ್ದವು.
ಕಾಲಕ್ರಮೇಣ ಉತ್ಪನ್ನದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಲಾಯಿತು. ನುಣುಪಾದ ಅಥವಾ ಮಿಶ್ರಿತ ನೂಲುಗಳನ್ನು (ಕೃತಕ ರೇಷ್ಮೆಗಳನ್ನು ಒಳಗೊಂಡ) ಬಳಸಿ ಮೃದುವಾದ ವಿಧಗಳನ್ನು ಪರಿಚಯಿಸಲಾಯಿತು. ಇದರಿಂದ ಹೆಚ್ಚು ಅಲಂಕಾರಿಕ ಅಂಚುಗಳು, ಸೂಕ್ಷ್ಮವಾದ ವಿನ್ಯಾಸಗಳು ಮತ್ತು ಕಂಬಳಿಗಳು ಹಾಗೂ ನೆಲಹಾಸುಗಳು ಮಾತ್ರವಲ್ಲದೆ ಹೊಸ ಉತ್ಪನ್ನ ರೂಪಗಳಿಗೆ ಅವಕಾಶ ನೀಡಿತು. ಇಂತಹ ನಾವೀನ್ಯತೆಯ ಹೊರತಾಗಿಯೂ ಈ ಕರಕುಶಲ ಕಲೆಯು ಗಂಭೀರ ಸವಾಲುಗಳನ್ನು ಕೂಡ ಎದುರಿಸಿದೆ ಎನ್ನುವುದು ನಿಜ. ವಿದ್ಯುತ್ ಮಗ್ಗದ ಕಾರಣದಿಂದ ಪೈಪೋಟಿ ಹೆಚ್ಚಾಗಿದೆ, ನೇಕಾರರಿಗೆ ಕೂಲಿ ಕಡಿಮೆಯಾಗುತ್ತಿದೆ, ಯುವಜನರು ಈ ಕರಕುಶಲವನ್ನು ತೊರೆಯುತ್ತಿದ್ದಾರೆ ಮತ್ತು ಕೈಮಗ್ಗಕ್ಕೆ ಮಾತ್ರ ಕಾನೂನು ಜಾರಿಗೆ ತಂದಿರುವುದು ಅದರ ಅಳಿವು ಉಳಿವಿನ ಪ್ರಶ್ನೆಯಾಗಿ ಪರಿಣಮಿಸಿದೆ.
ಭಿನ್ನ ವಿಭಿನ್ನ ವಿನ್ಯಾಸಗಳ ರಚನೆ
ಇಂದು ಮೂಲ ಕೈಮಗ್ಗಗಳ ಒಂದು ಸಣ್ಣ ಭಾಗ ಮಾತ್ರ ಸಕ್ರಿಯವಾಗಿದ್ದರೂ ಕೂಡ ಭವಾನಿ ಜಮಖಾನವನ್ನು ಪುನರುಜ್ಜೀವನಗೊಳಿಸಲು ಶತಯಾಗತಾಯ ಪ್ರಯತ್ನ ನಡೆಸಲಾಗುತ್ತಿದೆ. ಸರ್ಕಾರಿ ಸಂಸ್ಥೆಗಳು, ಸಹಕಾರಿ ಸಂಘಗಳು ಮತ್ತು ವಿನ್ಯಾಸಕಾರರು ಹೊಸ ಹೊಸ ಬಣ್ಣಗಳು, ಮಿಶ್ರಿತ ನೂಲುಗಳು ಮತ್ತು ಉತ್ಪನ್ನದ ಹೊಸ ವಿನ್ಯಾಸಗಳೊಂದಿಗೆ ಚೀಲಗಳು, ಗೋಡೆಗೆ ನೇತುಹಾಕುವ ಬಗೆಬಗೆಯ ವಸ್ತುಗಳು, ಅಲಂಕಾರಿಕ ವಸ್ತುಗಳ ಪ್ರಯೋಗ ಕೈಗೊಂಡಿದ್ದಾರೆ. ಜೊತೆಗೆ ಜಿಐ ಸ್ಥಾನಮಾನ ಮತ್ತು ಕೈಮಗ್ಗದ ವಿಶೇಷ ಹಕ್ಕುಗಳನ್ನು ಕಟ್ಟುನಿಟ್ಟಾಗಿ ರಕ್ಷಿಸಬೇಕು ಎಂಬ ಹಕ್ಕೊತ್ತಾಯವನ್ನೂ ಮಾಡುತ್ತಿದ್ದಾರೆ.
ಈ ಕರಕುಶಲ ಕಲೆಯು ಅನೇಕ ತಲೆಮಾರುಗಳ ಕಥೆಗಳನ್ನು ಹೆಣೆಯುತ್ತಿವೆ ಎನ್ನುವುದು ಸತ್ಯ. ಕೈಮಗ್ಗಗಳ ಮುಂದೆ ದಶಕಗಳ ಕಾಲ ನಡಮುರಿದು ಕೆಲಸ ಮಾಡಿರುವ ಕುಟುಂಬಗಳು, ನೈಸರ್ಗಿಕ ಅಥವಾ ಸ್ಥಳೀಯವಾಗಿ ಬಣ್ಣ ಅದ್ದಿದ ನೂಲುಗಳಿಂದ ಸಿದ್ಧವಾದ ಬಣ್ಣಗಳ ಕಥೆ, ಕಾರ್ಯಕ್ರಮದ ಸಂಭ್ರಮ ಕಥೆಗಳು, ಅತಿಥಿಗಳನ್ನು ಸ್ವಾಗತಿಸಲು ಕಾದಿರುವ ನೆಲಹಾಸುಗಳ ಕಥೆ...
ಅಂತಹ ಕಥೆಗಳು ಈಗ ವಿರಳಾತಿವಿರಳವಾಗಿದ್ದರೂ ಇನ್ನೂ ಪೂರ್ಣವಾಗಿ ಕಳೆದುಹೋಗಿಲ್ಲ. ಲಂಡನ್ ಫ್ಯಾಷನ್ ವೀಕ್ ನಲ್ಲಿ ಭವಾನಿ ಜಮಖಾನದ ಅಸ್ತಿತ್ವಕ್ಕೆ ಮತ್ತೆ ಜೀವ ತುಂಬುವ ಮೂಲಕ ಸುಪ್ರಜಾ ಅವರು ಈ ಐತಿಹಾಸಿಕ ಕಂಬಳಿಗೆ ಅದರ ಹಿಂದಿನ ವೈಭವವನ್ನು ಮರಳಿ ಪಡೆಯಲು ಮತ್ತು ಸಮಕಾಲೀನ ವಿನ್ಯಾಸಗಳ ಲೋಕದಲ್ಲಿ ತನ್ನ ಮುಂದಿನ ದಾರಿಯನ್ನು ಕಂಡುಕೊಳ್ಳಲು ಹಳೆಯ ಧೂಳನ್ನು ಕೊಡವಿಕೊಂಡು ನಿಂತಿದೆ.