ದ.ಕ. ಬದಲಿಗೆ ‘ಮಂಗಳೂರು ಜಿಲ್ಲೆ’ ಮರುನಾಮಕರಣ ಪ್ರಸ್ತಾಪ: ಉನ್ನತೀಕರಣಕ್ಕೆ ಏನಿದೆ ಅಡ್ಡಿ?
ದಕ್ಷಿಣ ಕನ್ನಡ ಜಿಲ್ಲೆಯ ಕೋಮು ಸಮಸ್ಯೆಗೆ ‘ಪೂರ್ಣವಿರಾಮ’ ಹಾಕಲು ರಾಜ್ಯ ಸರ್ಕಾರ ಕಾರ್ಯಪಡೆಯನ್ನು ರಚಿಸಿದೆ. ಇದು ಸಮರ್ಥವಾಗಿ ಕಾರ್ಯನಿರ್ವಹಿಸಿದರೆ ‘ಮಹತ್ವಾಕಾಂಕ್ಷಿ ಯೋಜನೆ’ ಫಲಪ್ರದವಾಗುತ್ತದೆ. ಆದರೆ ಈ ಕಾರ್ಯಪಡೆ ರಚನೆಯನ್ನು ಬಿಜೆಪಿ ಅಲ್ಪಸಂಖ್ಯಾತರನ್ನು ತುಷ್ಟೀಕರಿಸುವ ಉದ್ದೇಶ ಎಂದು ಆರೋಪಿಸಿದೆ;
ದಕ್ಷಿಣ ಕನ್ನಡಕ್ಕೆ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಪ್ರಸ್ತಾಪವಿದೆಯೇ? ಹೌದು. ಈ ಜಿಲ್ಲೆಯ ಕೇಂದ್ರ ಸ್ಥಾನವಾದ ಮಂಗಳೂರನ್ನೇ ಜಿಲ್ಲೆಯ ಹೆಸರಾಗಿ ಪರಿವರ್ತಿಸುವ ಉದ್ದೇಶವಿದೆ. ಕರಾವಳಿ ನಗರಕ್ಕೆ ಈಗಾಗಲೇ ಅದರದ್ದೇ ಆದ ಮಾನ್ಯತೆಯಿದೆ. ಈ ನಾಮ ಪರಿವರ್ತನೆಯಿಂದ ಅದು ವ್ಯಾಪಾರ, ಹೂಡಿಕೆ, ಪ್ರತಿಭೆ ಮತ್ತು ಪ್ರವಾಸಿಗರನ್ನು ಸೆಳೆಯಲು ಸಾಧ್ಯವಿದೆ ಎಂಬ ನಂಬಿಕೆ.
ಕಳೆದ ಹದಿನೈದು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 18 ರಾಜಕೀಯ ಹತ್ಯೆಗಳು ಸಂಭವಿಸಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್ ಸರ್ಕಾರ ಕೋಮು ಘರ್ಷಣೆಗಳನ್ನು ನಿಯಂತ್ರಿಸಲು ವಿಶೇಷ ಕಾರ್ಯಪಡೆ (ಎಸ್ಎಎಫ್)ಯನ್ನು ರಚಿಸಿತ್ತು. ಜಿಲ್ಲೆಯಲ್ಲಿ ಸಾರ್ವಜನಿಕ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದ ವಿಶ್ವಾಸವನ್ನು ವೃದ್ಧಿಸುವುದು ಈ ಕ್ರಮದ ಹಿಂದಿನ ಉದ್ದೇಶ.
ಆದರೆ ವಿರೋಧ ಪಕ್ಷವಾದ ಬಿಜೆಪಿಗೆ ಈ ಕ್ರಮ ಪಥ್ಯವಾಗಿಲ್ಲ. ಜಿಲ್ಲೆಯ ಅಲ್ಪಸಂಖ್ಯಾತರನ್ನು ಓಲೈಸುವುದೇ ಎಸ್ಎಎಫ್ ರಚನೆಯ ಹಿಂದಿನ ಉದ್ದೇಶ ಎಂದು ಅದು ಕ್ಯಾತೆ ತೆಗೆದಿದೆ.
ದಿಶಾ ಸಭೆಯಲ್ಲಿ ನಿರ್ಧಾರ
ಜುಲೈ ತಿಂಗಳ ಎರಡನೇ ವಾರದಲ್ಲಿ ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ನಡೆದ ಜಿಲ್ಲಾ ಅವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯಲ್ಲಿ ಜಿಲ್ಲೆಯ ಹೆಸರನ್ನು ಬದಲಿಸುವ ಪ್ರಸ್ತಾಪವನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸುವ ಬಗ್ಗೆ ತೀರ್ಮಾನಕ್ಕೆ ಬರಲಾಗಿದೆ. ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ದಿಶಾ ಕಾರ್ಯನಿರ್ವಹಿಸುತ್ತದೆ.
ಮೇ ತಿಂಗಳಲ್ಲಿ ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದ್ದು ಈ ಕ್ರಮಕ್ಕೆ ಪ್ರಚೋದನೆ ನೀಡಿದೆ ಎನ್ನಲಾಗಿದೆ.
2022-23ರ ಅವಧಿಯಲ್ಲಿ 1.25 ಲಕ್ಷ ಕೋಟಿ ಆರ್ಥಿಕ ಉತ್ಪಾದನೆ ಮೌಲ್ಯದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯು ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಅದೇ ಅವಧಿಯಲ್ಲಿ 8.59 ಲಕ್ಷ ಕೋಟಿ ರೂ. ಒಟ್ಟು ಜಿಲ್ಲಾ ಅಭಿವೃದ್ಧಿ ಉತ್ಪನ್ನ (ಜಿಡಿಡಿಪಿ)ದೊಂದಿಗೆ ಬೆಂಗಳೂರು ದಕ್ಷಿಣ ಜಿಲ್ಲೆ ಮೊದಲ ಸ್ಥಾನದಲ್ಲಿದೆ.
ಅಧಿಕ ಆದಾಯದ ಅಪೇಕ್ಷೆ
ಉತ್ತಮ ಶೈಕ್ಷಣಿಕ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಕ್ಷಿಣ ಕನ್ನಡ ಜಿಲ್ಲೆ, ಅತ್ಯುತ್ತಮ ಖಾಸಗಿ ಆರೋಗ್ಯ ವ್ಯವಸ್ಥೆ, ಹೋಟೆಲ್ ಗಳು, ರೆಸ್ಟೋರಂಟ್ ಗಳು, ವಿಶೇಷ ಪಾಕಪದ್ಧತಿ, ಕಡಲ ತೀರಗಳು ಮತ್ತು ಜಲಕ್ರೀಡೆ ಮತ್ತು ಮನರಂಜನಾ ವ್ಯವಸ್ಥೆಗಳನ್ನು ಹೊಂದಿದೆ. ಇಲ್ಲಿರುವ ಖಾಸಗಿ ಬಸ್ ಸೇವೆ ಕೂಡ ಪರಿಣಾಮಕಾರಿಯಾಗಿದೆ.
ಜಿಲ್ಲೆಯಲ್ಲಿ ಕಾರ್ಮಿಕರ ಕೊರತೆ ಇರುವುದು ನಿಜ. ಹಾಗಾಗಿ ಅದು ವಲಸೆ ನಿರ್ಮಾಣ ಕಾರ್ಮಿಕರನ್ನು ಯಾವತ್ತೂ ಆಕರ್ಷಿಸುತ್ತದೆ. ಆದರೆ ಜಿಲ್ಲೆಯು ಅಧಿಕ ಆದಾಯ ಗಳಿಕೆ ಕೇಂದ್ರವಾಗಬೇಕು ಎಂಬುದು ಅಪೇಕ್ಷೆ.
ಬೆಂಗಳೂರಿನ ಟ್ರಾಫಿಕ್ ಗೊಂದಲದಿಂದ ಹೈರಾಣಾಗಿರುವ ಐಟಿ ಉದ್ಯಮಿಗಳನ್ನು ನಗರವು ಆಕರ್ಷಿಸಬಹುದೇ? ಕೆಲವು ಬೃಹತ್ ನಿರ್ಮಾಣಕಾರರು ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿಯನ್ನು ‘ಭಾರತದ ಸಿಲಿಕಾನ್ ಬೀಚ್’ ಆಗಿ ಬಿಂಬಿಸುವ ಕಡೆಗೆ ದೃಷ್ಟಿ ನೆಟ್ಟಿದ್ದಾರೆ.
ಇವೆಲ್ಲವನ್ನೂ ಸಾಧಿಸಲು ಮುಖ್ಯವಾಗಿ ಬೇಕಾಗಿರುವುದು ಕೋಮು ಸೌಹಾರ್ದತೆ. ಇತ್ತೀಚಿನ ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಮಾತನಾಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಮಂಗಳೂರಿನಲ್ಲಿ ಉತ್ಸಾಹಿ ವಿದ್ಯಾರ್ಥಿ ಸಮುದಾಯವಿದ್ದರೂ ಸೂರ್ಯಾಸ್ತವಾದ ಕೆಲವೇ ಹೊತ್ತಿನಲ್ಲಿ ಮಂಗಳೂರು ನಿಷ್ಕ್ರಿಯವಾಗುತ್ತದೆ, ಅಲ್ಲಿ ಯಾವುದೇ ನೈಟ್-ಲೈಫ್ ಇಲ್ಲ ಎಂದು ಹೇಳಿದ್ದರು.
ನಗರದಲ್ಲಿ ರಾತ್ರಿ ಚಟುವಟಿಕೆಯನ್ನು ಇನ್ನಷ್ಟು ವಿಸ್ತರಿಸುವ ಅಧಿಕೃತ ಪ್ರಯತ್ನ ನಡೆಯಿತಾದರೂ ಮೇಲಿಂದ ಮೇಲೆ ಮೂರು ಕೋಮು ಹತ್ಯೆಗಳು ಸಂಭವಿಸಿದ್ದರಿಂದ ಅದನ್ನು ಹಿಂತೆಗೆದುಕೊಳ್ಳಲಾಗಿದೆ.
ಕಳೆದ ಹದಿನೈದು ವರ್ಷಗಳ ಅವಧಿಯಲ್ಲಿ ಹದಿನೆಂಟು ರಾಜಕೀಯ ಹತ್ಯೆಗಳು ಜಿಲ್ಲೆಯಲ್ಲಿ ಸಂಭವಿಸಿವೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ದ ಫೆಡರಲ್ ಗೆ ತಿಳಿಸಿದ್ದಾರೆ. ಅವರು ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದು ಈ ವರ್ಷದ ಮೇ ತಿಂಗಳಲ್ಲಿ. ಜೂನ್ ತಿಂಗಳ ಮಧ್ಯಭಾಗದಲ್ಲಿ ರಾಜ್ಯದ ಗೃಹ ಸಚಿವ ಜಿ.ಪರಮೇಶ್ವರ ಅವರು ಉದ್ಘಾಟಿಸಿರುವ ಎಸ್ಎಎಫ್-ಗೆ ರೆಡ್ಡಿ ಮುಖ್ಯಸ್ಥರೂ ಹೌದು.
ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಹಾಕುವ ಪೋಸ್ಟ್ ಗಳ ಮೇಲೆ ಕಣ್ಣಿಡುವುದು ಹಾಗೂ ಆಫ್-ಲೈನ್ ಘಟನೆಗಳ ಮೇಲ್ವಿಚಾರಣೆ ನಡೆಸುವುದು ಕಾರ್ಯಪಡೆಯ ಜವಾಬ್ದಾರಿಯಾಗಿದೆ. ಈ ಪಡೆಯಲ್ಲಿ 78 ಜನರಿದ್ದಾರೆ. ಅವರು ಮೂರು ವಿಭಾಗಗಳಲ್ಲಿ ಕೆಲಸ ಮಾಡುತ್ತಾರೆ. ದಕ್ಷಿಣ ಕನ್ನಡ, ಉಡು ಮತ್ತು ಶಿವಮೊಗ್ಗ ಜಿಲ್ಲೆಗಳೇ ಈ ವಿಭಾಗಗಳಾಗಿವೆ.
ಕಾರ್ಯಪಡೆಯ ಸಿಬ್ಬಂದಿಗೆ ಈಗ ಮೂರು ತಿಂಗಳ ತರಬೇತಿ ನಡೆಯುತ್ತಿದೆ. ‘ಪ್ರದೇಶ ಪ್ರಾಬಲ್ಯ’ವನ್ನು ಸಾಧಿಸಲು ಈ ಪಡೆಗೆ ಕಾರ್ಯಕ್ಷೇತ್ರದ ಪರಿಚಯ ಮಾಡಿಸಲಾಗುತ್ತಿದೆ. ಇದೊಂದು ‘ಮಾರಕ ಶಕ್ತಿ’ಯಾಗಿ ರೂಪುಗೊಳ್ಳುತ್ತಿರುವುದು ಮಾತ್ರ ನಿಶ್ಚಿತ ಎಂದು ರೆಡ್ಡಿ ಅವರು ಹೇಳುತ್ತಾರೆ.
ಈ ಎಲ್ಲ ಉಪಕ್ರಮಗಳು ಚಾಲ್ತಿಯಲ್ಲಿರುವಾಗಲೇ ರಾಜ್ಯ ಬಿಜೆಪಿ ಇದನ್ನು ಟೀಕಿಸಿದೆ. ಮುಸ್ಲಿ ಸಮುದಾಯದವರನ್ನು ಓಲೈಸುವುದಷ್ಟೇ ಇದರ ಹಿಂದಿನ ಉದ್ದೇಶ ಎಂಬುದು ಅದರ ಆರೋಪ. ತಮ್ಮ ಸಮುದಾಯಕ್ಕೆ ಸೂಕ್ತ ಭದ್ರತೆ ನೀಡದೇ ಹೋದರೆ ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್ ನಲ್ಲಿರುವ ಅಲ್ಪಸಂಖ್ಯಾತ ವಿಭಾಗದ ಮುಸ್ಲಿಂ ಸದಸ್ಯರು ಬೆದರಿಕೆ ಹಾಕಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅದು ಟೀಕಿಸಿದೆ.
ಸರಕು ಸಾಗಣೆ ವಾಹನದ ಚಾಲಕ ಹಾಗೂ ಮಸೀದಿಯ ಕಾರ್ಯದರ್ಶಿಯೊಬ್ಬರನ್ನು ಹತ್ಯೆ ಮಾಡಿದ ಬಳಿಕ ಈ ಒತ್ತಡ ಹೆಚ್ಚಾಗಿದೆ. ಈ ಎರಡು ಹತ್ಯೆಗಳು ಬಜರಂಗ ದಳಕ್ಕೆ ಸೇರಿದವರ ಕೃತ್ಯ ಎಂದು ಆರೋಪಿಸಲಾಗಿದೆ.
ಮೇ ಒಂದರಂದು ಐದು ಪ್ರಮುಖ ಪ್ರಕರಣಗಳನ್ನು ಹೊಂದಿದ್ದ ‘ರೌಡಿ ಶೀಟರ್’ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಸಂತ್ರಸ್ತರನ್ನು ಮನಬಂದಂತೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ರೌಡಿ ಶೀಟರ್ ಮೂರು ವರ್ಷಗಳ ಹಿಂದೆ ಮುಸ್ಲಿಂ ಯುವಕನ ಹತ್ಯೆ ಆರೋಪದಲ್ಲಿ ಜೈಲುಪಾಲಾಗಿ ಜಾಮೀನಿನ ಪಡೆದು ಹೊರಗೆ ಬಂದಿದ್ದ. ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ಒಪ್ಪಿಸುವ ಅಧಿಸೂಚನೆ ಹೊರಡಿಸಲಾಗಿದ್ದು, ಅದರ ಹಿಂದೆ ಮುಸ್ಲಿಂ ಮೂಲಭೂತವಾದಿಗಳ ಸಂಘಟನೆ ನಿಷೇಧಿತ ಪೀಪಲ್ಸ್ ಫ್ರಂಟ್ ಆಫ್ ಇಂಡಿಯಾ ಕೈವಾಡವಿದೆ ಎಂದು ಆರೋಪಿಸಲಾಗಿದೆ.
ಬ್ರಾಂಡ್ ಉಡುಪಿಗೆ ಅವಮಾನ
2005ರಲ್ಲಿ ಇಬ್ಬರು ದನ ವ್ಯಾಪಾರಿಗಳನ್ನು ಬೆತ್ತಲೆಗೊಳಿಸಿ, ಹಲ್ಲೆ ಮಾಡಿ ಮೆರವಣಿಗೆ ನಡೆಸಿದ ಆರೋಪ ಎದುರಿಸುತ್ತಿರುವ ಹಾಗೂ 2021ರಲ್ಲಿ ಹಿಜಾಬ್ ವಿರೋಧಿ ಆಂದೋಲನದಲ್ಲಿ ಭಾಗಿಯಾಗಿರುವ ಉಡುಪಿಯ ಬಿಜೆಪಿ ಶಾಸಕ ಯಶಪಾಲ್ ಸುವರ್ಣ ಅವರು ತಮ್ಮ ಫೇಸ್ಬುಕ್ ಪೋಸ್ಟ್ ನಲ್ಲಿ ಕಾರ್ಯಪಡೆ ರಚನೆ ‘ಬ್ರಾಂಡ್ ಉಡುಪಿ’ಗೆ ಮಾಡಿದ ಅವಮಾನ ಎಂದು ಹೇಳಿದ್ದರು. ಇದು ಜಿಲ್ಲೆಯ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಎಂದು ಅವರು ಆರೋಪಿಸಿದ್ದರು.
ಕಳೆದ ಅನೇಕ ದಶಕಗಳಿಂದ ಉಡುಪಿಯಲ್ಲಿ ಯಾವುದೇ ಕೋಮು ಹಿಂಸೆ ಸಂಭವಿಸಿಲ್ಲ ಎಂದು ಅವರು ಬೊಟ್ಟುಮಾಡಿದ್ದಾರೆ.
ದಕ್ಷಿಣ ಕನ್ನಡಕ್ಕೆ ‘ಕೋಮು ಸೂಕ್ಷ್ಮ’ ಎಂದು ಹಣೆಪಟ್ಟಿ ಕಟ್ಟುವುದು ಸರಿಯಲ್ಲ ಎಂದು ಸಚಿವ ಪರಮೇಶ್ವರ ಅವರು ಹೇಳಿದ್ದಾರೆ. ಹಿಂದೂ ಮತದಾರರು ವಿಮುಖರಾಗುತ್ತಾರೆ ಎಂಬ ಆತಂಕದಿಂದಲೇ ಅವರು ಈ ಮಾತನ್ನು ಹೇಳಿರಲಿಕ್ಕೂ ಸಾಕು. ಆ ಮಾತನ್ನವರು ಶಾಂತಿ ಸಭೆಯ ಅಧ್ಯಕ್ಷತೆವಹಿಸಿರುವಾಗಲೇ ಹೇಳಿರುವುದು ವಿಪರ್ಯಾಸದ ಸಂಗತಿ.
ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ನಿರಂತರ ಕೋಮು ಗಲಭೆಯ ಅಪಸ್ವರಗಳು ಕೇಳಿ ಬಂದ ಬಳಿಕ, 2023ರಿಂದೀಚಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇತ್ತೀಚಿನ ವರೆಗೂ ಶಾಂತಿ ನೆಲೆಸಿತ್ತು.
ಮೂರು ವರ್ಷಗಳ ಕಾಲ ನಿರಂತರವಾಗಿ ನಡೆದಿದ್ದ ರಾಜಕೀಯ ದ್ವೇಷದ ಕೊಲೆಗಳ ವಿರಾಮಕ್ಕೆ ತಿಲಾಂಜಲಿ ನೀಡಿದ್ದು ಈ ವರ್ಷದ ಆರಂಭದಲ್ಲಿ.
ಆದಾಗ್ಯೂ, ಪೊಲೀಸ್ ಪಡೆಯ ಕೋಮು ಬಣ್ಣದ ಬಗೆಗೇ ಪ್ರಶ್ನೆಗಳು ಉದ್ಭವಿಸುತ್ತಿವೆ. 2021ರ ದಸರಾ ಉತ್ಸವದ ಸಂದರ್ಭದಲ್ಲಿ ಕಾಪು ಪೊಲೀಸ್ ಠಾಣೆಯ ಕೆಲವು ಪೊಲೀಸ್ ಅಧಿಕಾರಿಗಳು ಬಿಳಿ ಲುಂಗಿಯ ಮೇಲೆ ಕೇಸರಿ ಶರ್ಟ್ ಹಾಗೂ ಕೇಸರಿ ಅಂಚಿನ ಶಾಲುಗಳನ್ನು ಧರಿಸಿದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದನ್ನು ಇಲ್ಲಿ ಪೂರಕವಾಗಿ ನೆನಪಿಸಿಕೊಳ್ಳಬಹುದು.
ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ಧರಾಮಯ್ಯ ಅವರು, ರಾಜ್ಯದಲ್ಲಿ ‘ಜಂಗಲ್ ರಾಜ್’ ಅಸ್ತಿತ್ವದಲ್ಲಿದೆ ಎಂಬುದನ್ನು ಸಾಬೀತುಪಡಿಸಲು ಸರ್ಕಾರ ಪೊಲೀಸರಿಗೆ ತ್ರಿಶೂಲವನ್ನೂ ಒದಗಿಸಿದ್ದರೆ ಚೆನ್ನಾಗಿತ್ತು ಎಂದು ಟ್ವೀಟ್ ಮಾಡಿದ್ದರು.
ಪೊಲೀಸರು ಯಾವತ್ತಿದ್ದರೂ ತಟಸ್ಥ ಶಕ್ತಿ, ಅವರೆಂದಿಗೂ ಕೋಮುಪೂರಿತವಾಗಲು ಸಾಧ್ಯವಿಲ್ಲ, ಯಾಕೆಂದರೆ ಆ ವ್ಯವಸ್ಥೆಯನ್ನು ಕೋರ್ಟ್ ಗಳು ಮೇಲ್ವಿಚಾರಣೆ ನಡೆಸುತ್ತವೆ ಎಂದು ಪೊಲೀಸ್ ಆಯುಕ್ತ ರೆಡ್ಡಿ ಅವರು ಪ್ರತಿಪಾದಿಸುತ್ತಾರೆ. ತನಿಖೆಗಳಲ್ಲಿ ವಿಳಂಬವಾದಾಗ ಪೊಲೀಸರ ವಿರುದ್ಧ ಪಕ್ಷಪಾತದ ಆರೋಪ ಬರುತ್ತದೆ. ಆವಾಗ ಪೊಲೀಸರು ರಕ್ಷಣಾತ್ಮಕವಾಗಿ ನಡೆದುಕೊಳ್ಳಬೇಕಾಗುತ್ತದೆ. ಆದರೆ ತನಿಖೆಗಳಿಗೆ ಯಾವತ್ತೂ ಸಮಯ ಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ.
ಪ್ರಮಾಣವೆಷ್ಟು
ತಮ್ಮ ವ್ಯಾಪ್ತಿಯಲ್ಲಿರುವ ಜಿಲ್ಲೆಯಲ್ಲಿ ಕೋಮು ಗಲಭೆಯ ಪ್ರಮಾಣದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಸುಧೀರ್ ಕುಮಾರ್ ರೆಡ್ಡಿ ಅವರು ನಿರಾಕರಿಸಿದರು. ಯಾಕೆಂದರೆ ಒಬ್ಬ ಪೊಲೀಸ್ ಅಧಿಕಾರಿಯಾಗಿ ಅಂತಹ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಅನುಚಿತವಾಗುತ್ತದೆ ಎಂದು ಅವರು ಹೇಳುತ್ತಾರೆ. ಆದರೆ ಎರಡೂ ಸಮುದಾಯಗಳಲ್ಲಿ ರೌಡಿ ಶೀಟರ್ ಗಳಿದ್ದಾರೆ ಮತ್ತು ಅವರಿಗೆ ಬೆಂಬಲವೂ ಸಿಗುತ್ತದೆ ಎನ್ನುತ್ತಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಕೋಮುಸೂಕ್ಷ್ಮ ಜಿಲ್ಲೆಗಳು ಎಂದು ಹಣೆಪಟ್ಟಿ ಕಟ್ಟಿದರೂ ಕೂಡ ರಾಷ್ಟ್ರದಲ್ಲಿರುವ ಕೆಲವು ಕೋಮು ಸೂಕ್ಷ್ಮ ಕೇಂದ್ರಗಳಿಗೆ ಹೋಲಿಸಿದರೆ ಎರಡು ಧರ್ಮಗಳ ಸಮುದಾಯಗಳ ನಡುವೆ ಯಾವುದೇ ಗಲಭೆ ಇಲ್ಲ. ಆದರೆ ಬಸ್ ಕಂಡಕ್ಟರ್ ಗಳು, ಅಂಗಡಿದಾರರು ಮತ್ತು ಆಟೋ ರಿಕ್ಷಾ ಚಾಲಕರಂತಹ ‘ಮಾಹಿತಿದಾರರು’ ಈ ಕೋಮು ಸಂಘಟನೆಗಳಿಗೆ ಕಣ್ಣು-ಕಿವಿಗಳಾಗಿ ವರ್ತಿಸುವ ಮೂಲಕ ಸಮಸ್ಯೆಗಳಿಗೆ ಕಾರಣರಾಗಿದ್ದಾರೆ.
“ಒಬ್ಬ ಕ್ರಿಮಿನಲ್ ಕೊಲೆಯಾದಾಗ ಶಾಂತಿಯುತವಾಗಿ ಸಂತಾಪ ವ್ಯಕ್ತಪಡಿಸಲು ಆತನ ಕುಟುಂಬಕ್ಕೆ ಅವಕಾಶ ನೀಡಬೇಕು, ಅದು ಬಿಟ್ಟು ಆತನ ಮೃತದೇಹವನ್ನು ಸಾರ್ವಜನಿಕ ವೀಕ್ಷಣೆಗೆ ಯಾಕೆ ಇಡಬೇಕು? ಆತನ ಮೃತದೇಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲು ಮತ್ತು ಮಾರ್ಗಮಧ್ಯೆ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿಮಾಡಲು ಯಾಕೆ ಅವಕಾಶಕೊಡಬೇಕು? ಜನರು ನ್ಯಾಯಕ್ಕಾಗಿ ಒತ್ತಾಯಮಾಡುತ್ತಾರೆ. ಅಂತಿಮವಾಗಿ ಏನಾಗುತ್ತದೆ ಹೇಳಿ? ಅದೊಂದು ‘ಕಾನೂನು ಬಾಹಿರ ಸಭೆ’ಯಾಗಿ ಪರಿವರ್ತನೆಯಾಗುತ್ತದೆ ಎಂದು ರೆಡ್ಡಿ ಹೇಳುತ್ತಾರೆ.
ಮೇ ತಿಂಗಳಲ್ಲಿ ಹತನಾದ, ಹಿಂದೂ ಕಾರ್ಯಕರ್ತ ಎಂದು ಗುರುತಿಸಿಕೊಂಡಿದ್ದ ಸುಹಾಸ್ ಶೆಟ್ಟಿ ಪಾರ್ಥಿವ ಶರೀರವನ್ನು ಮಂಗಳೂರಿನ ಆಸ್ಪತ್ರೆಯಿಂದ 18 ಕಿ.ಮೀ. ದೂರದಲ್ಲಿರುವ ಆತನ ಮನೆಗೆ ಮೆರವಣಿಗೆಯ ಮೂಲಕ ಕರೆದೊಯ್ಯಲಾಗಿತ್ತು. ಅಂದು ನಡೆದ ಆತನ ಅಂತ್ಯಕ್ರಿಯೆಯಲ್ಲಿ ಬಿಜೆಪಿ ನಾಯಕರು ಕೂಡ ಭಾಗವಹಿಸಿದ್ದರು. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ನಗರದಲ್ಲಿ ಬಂದ್ ಕರೆಕೊಟ್ಟಿದ್ದವು. ಬಿಜೆಪಿ ಸುಹಾಸ್ ಶೆಟ್ಟಿ ಪಾಲಕರಿಗೆ 25 ಲಕ್ಷ ರೂ. ಪರಿಹಾರ ಘೋಷಿಸಿತ್ತು. ರಾಜ್ಯ ಬಿಜೆಪಿ ಅಧ್ಯಕ್ಷರ ನೇತೃತ್ವದಲ್ಲಿ ರಾಜ್ಯಪಾಲರ ಭೇಟಿಯೂ ನಡೆದಿತ್ತು.
ನಿರ್ಬಂಧಕ್ಕೆ ಸರ್ವ ಕ್ರಮ
ಕೋಮು ಸೌಹಾರ್ದತೆಗೆ ಭಂಗ ತರುವವರನ್ನು ನಿರ್ಬಂಧಿಸಲು ಕಾನೂನಿನಲ್ಲಿರುವ ಪ್ರತಿಯೊಂದು ಅವಕಾಶವನ್ನೂ ಬಳಸಿಕೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ರೆಡ್ಡಿ ತಿಳಿಸಿದರು.
“ಕಾನೂನನ್ನು ನೀವೇ ಆಹ್ವಾನಿಸಿದರೆ ಅದು ನಿಮ್ಮ ಮನೆ ಬಾಗಿಲಿಗೇ ಬರುತ್ತದೆ” ಎಂದು ಸ್ಪಷ್ಟವಾಗಿ ತಿಳಿಸಿದ ಅವರು, ಈ ವರ್ಷದಲ್ಲಿ ಇಲ್ಲಿಯ ವರೆಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಮಾಡಿದ 13 ಮಂದಿಯನ್ನು ಬಂಧಿಸಲಾಗಿದೆ. ಕಳೆದ ವರ್ಷ ಐವರನ್ನು ಬಂಧಿಸಲಾಗಿತ್ತು. 25 ಮಂದಿಯನ್ನು ಗಡಿಪಾರು ಮಾಡಲಾಗಿದೆ. ಇದು ಕಳೆದ ವರ್ಷಕ್ಕಿಂತ ಐದು ಮಂದಿ ಹೆಚ್ಚು ಎಂದು ವಿವರಿಸಿದರು.
ಇವೆಲ್ಲವೂ ಕಾರ್ಯಪಡೆ ತನ್ನ ಕಾರ್ಯಾಚರಣೆಯನ್ನು ಆರಂಭಿಸುವುದಕ್ಕೂ ಮೊದಲು.
ಈಗ ನಡೆಯುತ್ತಿರುವ ಪ್ರಾಮಾಣಿಕ ಪ್ರಯತ್ನಗಳಿಗೆ ರಾಜ್ಯ ಸರ್ಕಾರದಿಂದ ಅಚಲ ಬೆಂಬಲ ದೊರೆತರೆ ದಕ್ಷಿಣ ಕನ್ನಡ ಜಿಲ್ಲೆ ‘ಕೋಮು ಸೂಕ್ಷ್ಮ’ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಬಹುದು ಮತ್ತು ‘ಮಂಗಳೂರು ಬ್ರಾಂಡ್’ನ್ನು ಅತ್ಯಂತ ಆತ್ಮವಿಶ್ವಾಸದಿಂದ ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ವ್ಯಾಪಕ ನಂಬಿಕೆ ವ್ಯಕ್ತವಾಗಿದೆ.
(ಮೂಲ ಲೇಖನ The Federalನಲ್ಲಿ ಪ್ರಕಟವಾಗಿದೆ.)