ಪ್ರೇಮದ ಸಂಕೇತ ತಾಜ್ ಮಹಲ್: ಬಿಜೆಪಿ ತಲೆಯೊಳಗೆ ಬಿಟ್ಟ ತಾಜಾ ಗುಂಗಿ ಹುಳ!
ಪರೇಶ್ ರಾವಲ್ ಮುಖ್ಯ ಭೂಮಿಕೆಯಲ್ಲಿರುವ ‘ದಿ ತಾಜ್ ಸ್ಟೋರಿ’ ಚಲನಚಿತ್ರ ಅ.31ರಂದು ಬಿಡುಗಡೆಯಾಗಿದೆ. ಇದು ಇತಿಹಾಸಕಾರ ಪಿ.ಎನ್.ಓಕ್ ಅವರ ತಿರಸ್ಕೃತವಾದ ‘ತೇಜೋ ಮಹಾಲಯ’ ಸಿದ್ದಾಂತಕ್ಕೆ ಮರುಜೀವ ನೀಡುವ ಪ್ರಯತ್ನ. ಪದೇ ಪದೇ ಇತಿಹಾಸವನ್ನು ಮರುಸೃಷ್ಟಿಸುವ ಗುಂಗಿಗೆ ಬಿದ್ದಿರುವ ಬಿಜೆಪಿ ತಲೆಯೊಳಗೆ ತಾಜಾ ತಾಜಾ ಗುಂಗಿ ಹುಳ ಈ ಸಿನೆಮಾ..
ಆಗ್ರಾದಲ್ಲಿರುವ ತಾಜ್ ಮಹಲ್ ಎಂಬ ಶ್ವೇತ ಸುಂದರಿ, ಅಮೃತಶಿಲೆಯ ಸಮಾಧಿಯನ್ನು ನೋಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರು “ಅನಂತತೆಯ ಕೆನ್ನೆಯ ಮೇಲಿನ ಕಣ್ಣೀರ ಹನಿ” ಎಂದು ಬಣ್ಣಿಸಿದ್ದಾರೆ. ಇದು ಸಾರ್ವಕಾಲಿಕ ಪ್ರೀತಿಯ ಅಂತಿಮ ಸಂಕೇತವಾಗಿ ಜಗತ್ತಿನ ಕಲ್ಪನೆಯಲ್ಲಿ ತನ್ನ ಸ್ಥಾನವನ್ನು ಬಹುಕಾಲದಿಂದ ಸ್ಥಾಯಿಗೊಳಿಸಿದೆ.
ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ನೆಚ್ಚಿನ ಪತ್ನಿ ಮುಮ್ತಾಜ್ ಮಹಲ್ ನೆನಪಿಗಾಗಿ ಇದನ್ನು ನಿರ್ಮಿಸಿದ. ಸಾಂಸ್ಕೃತಿಕ ಪರಿಷ್ಕರಣೆಯ ಕೆಂಗಣ್ಣಿಗೆ ಗುರಿಯಾಗಿರುವ ಈ ಸ್ಮಾರಕವು, ಆಡಳಿತ ಪಕ್ಷವನ್ನು ಆಗಾಗ್ಗೆ ಕೆರಳಿಸುತ್ತಿರುವ ಸ್ಮಾರಕಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ (UNESCO) ವಿಶ್ವ ಪರಂಪರೆಯ ತಾಣವಾದ ತಾಜ್ ಮಹಲ್, ಈಗಲೂ ಲಕ್ಷಾಂತರ ಪ್ರವಾಸಿಗರನ್ನು (2024-25ರ ಹಣಕಾಸು ವರ್ಷದಲ್ಲಿ ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಬ್ಬರಿಗೂ ಇದು ಭಾರತದ ಅತ್ಯಂತ ಹೆಚ್ಚು ಭೇಟಿ ನೀಡಿದ ಸ್ಮಾರಕವಾಗಿತ್ತು) ತನ್ನತ್ತ ಸೆಳೆಯುತ್ತಲೇ ಇದೆ, ಸ್ಥಳೀಯ ಆರ್ಥಿಕತೆಗಳಿಗೆ ಶಕ್ತಿಯನ್ನು ತುಂಬುತ್ತದೆ ಮತ್ತು ದೇಶದ ಅನಧಿಕೃತ ರಾಷ್ಟ್ರೀಯ ಸ್ಮಾರಕವಾಗಿ ಉಳಿದಿದೆ.
ಆದಾಗ್ಯೂ, ಭಾರತೀಯ ಜನತಾ ಪಕ್ಷಕ್ಕೆ ತಾಜ್ ಮಹಲ್ ಒಂದು ವಿರೋಧಾಭಾಸವನ್ನು ಪ್ರತಿನಿಧಿಸುವ ಸ್ಮಾರಕ, ಅದನ್ನು ಪಕ್ಷವು ನಿರ್ಲಕ್ಷಿಸಲೂ ಸಾಧ್ಯವಿಲ್ಲ ಅಥವಾ ಸಂಪೂರ್ಣವಾಗಿ ತನ್ನದೆಂದು ಹೇಳಿಕೊಳ್ಳಲೂ ಸಾಧ್ಯವಿಲ್ಲ. ಈ ಸ್ಮಾರಕವು ಮೊಘಲ್ ಸಾಮ್ರಾಜ್ಯದ ಸುದೀರ್ಘ, ಸಂಕೀರ್ಣ ಪರಂಪರೆಯನ್ನು ರಾಜಕೀಯವಾಗಿ ಸಂಪಾದಿಸಿ ತೆಗೆದುಹಾಕಲು ಒಂದು ದಶಕಕ್ಕೂ ಹೆಚ್ಚು ಕಾಲ ಪ್ರಯತ್ನಿಸುತ್ತಿರುವ ಒಂದು ವಂಶಾವಳಿಗೆ ಸಂಬಂಧಿಸಿದೆ. ತನ್ನ ಪರ್ಷಿಯನ್ ಶಾಸನಗಳು ಮತ್ತು ಇಸ್ಲಾಮಿಕ್ ವಿನ್ಯಾಸಗಳನ್ನು ಹೊಂದಿರುವ ಈ ಸ್ಮಾರಕವು ಭಾರತದ ಬಹುತ್ವದ ಭೂತಕಾಲದ ಒಂದು ಅಸಮಂಜಸವಾದ ನೆನಪಿನ ಕೇಂದ್ರವಾಗಿ ನಿಂತಿದೆ, ಅದು ಬಿಜೆಪಿ ಮುನ್ನೆಲೆಗೆ ತರಲು ಬಯಸುವ ಏಕೈಕ ನಾಗರಿಕತೆಯ ನಿರೂಪಣೆಯನ್ನು ವಿರೋಧಿಸುತ್ತದೆ. ಈ ನಾಟಕೀಯ ಪರಿಸ್ಥಿತಿಗೆ ತೀಕ್ಷ್ಣ ಸ್ವರೂಪವನ್ನು ನೀಡಲು, 'ದಿ ತಾಜ್ ಸ್ಟೋರಿ' ಎಂಬ ಚಲನಚಿತ್ರವು ಅಕ್ಟೋಬರ್ 31 ರಂದು ಬಿಡುಗಡೆ ಕಂಡಿದೆ. ಇದರಲ್ಲಿ ಖ್ಯಾತ ಚಿತ್ರನಟ ಪರೇಶ್ ರಾವಲ್ ಅವರು ಸ್ಮಾರಕದ ಮುಖ್ಯವಾಹಿನಿಯ ಇತಿಹಾಸವನ್ನು ಪ್ರಶ್ನಿಸುವ ಪಾತ್ರದಲ್ಲಿ ನಟಿಸಿದ್ದಾರೆ.
ಶೂ ಒಳಗೆ ಸಿಕ್ಕ ಕಲ್ಲಿನ ತುಣುಕು
ಈ ಸ್ಮಾರಕದ ಅನನ್ಯತೆಯು ಯಮುನಾ ನದಿಯ ದಡದಲ್ಲಿರುವ ಈ ಸಮಾಧಿಯನ್ನು ಹಿಂದೂ ರಾಷ್ಟ್ರೀಯವಾದಿ ರಾಜಕಾರಣದ ಪಾಲಿಗೆ ‘ಶೂ ಒಳಗೆ ಸಿಕ್ಕ ಕಲ್ಲಿನ ತುಣುಕಿನಂತೆ ಆಗಿದೆ; ಅಳಿಸಿಹಾಕಲು ಸಾಧ್ಯವಿಲ್ಲದಷ್ಟು ಗೋಚರ, ಮತ್ತು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲದಷ್ಟು ಸಾಂಕೇತಿಕ. ಇದು ಹಿಂದೊಮ್ಮೆ “ತೇಜೋ ಮಹಾಲಯ” ಎಂಬ ಹಿಂದೂ ದೇವಾಲಯವಾಗಿತ್ತು ಎಂಬ ಸಿದ್ಧಾಂತಗಳನ್ನು ಬಲಪಂಥೀಯ ಗುಂಪುಗಳು ಪ್ರಚಾರ ನಡೆಸುತ್ತಿವೆ. ಹಾಗಾಗಿ 2014ರಿಂದೀಚೆಗೆ ಈ ಪಕ್ಷಕ್ಕಾಗುತ್ತಿರುವ ಕಿರಿಕಿರಿ ಪದೇ ಪದೇ ಮೇಲ್ಮೈಗೆ ಬಂದಿದೆ.
2017ರಲ್ಲಿ, ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್ ಸೋಮ್, ತಾಜ್ ಮಹಲ್ "ದೇಶದ್ರೋಹಿಗಳಿಂದ ನಿರ್ಮಿಸಲ್ಪಟ್ಟ ಭಾರತೀಯ ಸಂಸ್ಕೃತಿಯ ಪಾಲಿನ ಕಳಂಕ" ಎಂದು ಬಣ್ಣಿಸಿದ್ದರು. ರಾಜ್ಯ ಪ್ರವಾಸೋದ್ಯಮ ಕೈಪಿಡಿಯಲ್ಲಿ ಅದು ಏಕೆ ಇರಬೇಕು ಎಂದೂ ಪ್ರಶ್ನಿಸಿದ್ದರು. ಆ ಸಂದರ್ಭದಲ್ಲಿ ವಿಶ್ವದ ಏಳು ಅದ್ಭುತಗಳಲ್ಲಿ ಒಂದನ್ನು ಪ್ರಚಾರದ ಕೈಪಿಡಿಯಿಂದ ಪ್ರವಾಸೋದ್ಯಮ ಇಲಾಖೆ ಕೈಬಿಟ್ಟಿದ್ದರಿಂದ ಉಂಟಾದ ಆಕ್ರೋಶಕ್ಕೆ ಸೋಮ್ ಹೀಗೆ ಪ್ರತಿಕ್ರಿಯಿಸಿದ್ದರು.
ಅದೇ ವರ್ಷ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಾಜ್ ಮಹಲ್ "ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬ ಅಲ್ಲ" ಎಂದು ಹೇಳಿದ ನಂತರ ಅದರ ಆವರಣವನ್ನು ಗುಡಿಸುತ್ತಿರುವ ಚಿತ್ರೀಕರಣಕ್ಕೆ ಅವರು ಒಳಗಾಗಿದ್ದರು. ಅದು ರಾಜಕೀಯ ಅಸಹಜತೆಯನ್ನು ಹುಟ್ಟುಹಾಕಿತ್ತು ಎಂಬುದು ನಿಶ್ಚಿತ. ಅಂದಿನಿಂದ, ನೇರ ಮುಖಾಮುಖಿಯನ್ನು ತಪ್ಪಿಸುವುದು, ಆದರೆ ಅದು ನಿಜವಾಗಿಯೂ "ನಮ್ಮದಲ್ಲ" ಎಂಬ ಗೊಣಗುಟ್ಟುವುದು ಮುಂದುವರಿದೇ ಇತ್ತು. ಮೊಘಲ್ ಇತಿಹಾಸವನ್ನು ರಾಜ್ಯ ಪಠ್ಯಕ್ರಮಗಳಿಂದ ಅಳಿಸಿಹಾಕಿದ್ದರೆ, ಜನಪ್ರಿಯ ಚರ್ಚೆಗಳಲ್ಲಿ ತಾಜ್ನ ಮೂಲದ ಬಗ್ಗೆ ಪಿತೂರಿ ಸಿದ್ಧಾಂತಗಳು ಹರಡುತ್ತಲೇ ಇವೆ.
ರಾಜಕೀಯ ಮತ್ತು ಇತಿಹಾಸದ ಚರ್ಚೆ
ತಾಜ್ ಮಹಲ್, ಸ್ಪಷ್ಟವಾಗಿ, ಒಂದು ಕಡೆ ಪಕ್ಷದ ಪ್ರಸ್ತುತ ಸೈದ್ಧಾಂತಿಕ ಲಿಪಿಯಲ್ಲಿ ಕಡೆಗಣಿಸಲಾಗದಷ್ಟು ಪ್ರಮುಖವಾಗಿ ಸ್ಥಾಯಿರೂಪ ಪಡೆದಿದೆ. ಇನ್ನೊಂದು ಕಡೆ ವೈಭವೀಕರಿಸಲಾಗದಷ್ಟು ಮುಸ್ಲಿಂ ಸಂಬಂಧಿ ಆಗಿದೆ. ಅಂಚೆ ಪತ್ರಗಳಲ್ಲಿ, ಪ್ರವಾಸೋದ್ಯಮ ಪ್ರಚಾರಗಳಲ್ಲಿ, ಸಿನಿಮಾದಲ್ಲಿ ಅದು ನಿರಂತರವಾಗಿ ಕೇಂದ್ರ ಸ್ಥಾನವನ್ನು ಪಡೆದುಕೊಳ್ಳುತ್ತ ಸಾಗಿದೆ. ಇದರಿಂದಾಗಿ ಭಾರತದ ಪರಿಕಲ್ಪನೆಯನ್ನು ಇಷ್ಟಬಂದಂತೆ ಮರುರೂಪಿಸಲು ಸಾಧ್ಯವಿಲ್ಲ ಎಂದು ಬಿಜೆಪಿಗೆ ನೆನಪಿಸುವಂತೆ ಮಾಡಿದೆ.
ರಾವಲ್ ಅವರ ಮುಖ್ಯ ಭೂಮಿಕೆಯ ‘ದಿ ತಾಜ್ ಸ್ಟೋರಿ’ ಕಲಾವಿದರ ಸ್ವಾತಂತ್ರ್ಯವನ್ನು ಹೊಂದಿದೆ ಎಂದು ಹೇಳಿಕೊಂಡರೂ, ರಾಜಕೀಯವಾಗಿ, ಅದು ಅಂತಿಮವಾಗಿ ನಿಲ್ಲುವುದು ವಿವಾದಾತ್ಮಕ ನೆಲದ ಮೇಲೆ. ಏಕೆಂದರೆ ತಾಜ್ ಅನ್ನು ಪ್ರಶ್ನಿಸುವುದೆಂದರೆ, ಒಂದು ದೇಶವನ್ನು ಸಮಷ್ಟಿ ರೂಪದಲ್ಲಿ ಹಿಡಿದಿಡುವ ಅಂಶವನ್ನು ಅಳಿಸಿ ಹಾಕದೆ, ಒಂದು ರಾಜ್ಯವು ಇತಿಹಾಸವನ್ನು ಎಷ್ಟರವರೆಗೆ ಮರು ವ್ಯಾಖ್ಯಾನ ಮಾಡಬಹುದು ಎಂಬುದನ್ನು ಪರೀಕ್ಷಿಸಿದಂತೆ.
ಸಿನಿಮಾದ ಟ್ರೇಲರ್ನಲ್ಲಿ, ರಾವಲ್ ಅವರ ಪಾತ್ರ (ಪ್ರವಾಸಿ ಮಾರ್ಗದರ್ಶಕನಾಗಿದ್ದವನು ದಾವೆದಾರನಾಗಿದ್ದಾನೆ) ತಾಜ್ ಮಹಲ್ಗೆ ಡಿಎನ್ಎ ಪರೀಕ್ಷೆಯನ್ನು ಕೋರುತ್ತಾನೆ. ಯಾಕೆಂದರೆ ಅದು ಹಿಂದೆ ಕಲಿಸಿದಂತೆ ಇಲ್ಲದಿರಬಹುದು ಎಂದು ಪ್ರತಿಪಾದಿಸುತ್ತಾನೆ. “ಡಿಎನ್ಎ ಟೆಸ್ಟ್ ಕರ್ವಾಲೋ” ಎಂದು ಆತನ ಪಾತ್ರ ಹೇಳುತ್ತದೆ. ತಾಜ್ ನಿಜವಾಗಿಯೂ ಗೋರಿಯೇ ಅಥವಾ ದೇವಾಲಯವೇ ಎಂದು ಆತ ಪ್ರಶ್ನಿಸುತ್ತಾನೆ, ಸ್ಮಾರಕದ ಅಡಿಯಲ್ಲಿರುವ 22 "ಮೊಹರು ಮಾಡಿದ ಕೊಠಡಿಗಳನ್ನು" (sealed rooms) ಉಲ್ಲೇಖಿಸಿ, ಅದರ ವಾಸ್ತುಶಿಲ್ಪದಲ್ಲಿ ಅಡಗಿರುವುದು ಹಿಂದೂ ಚಿಹ್ನೆಗಳು ಎಂದು ಹೇಳುತ್ತಾನೆ. ಚಲನಚಿತ್ರದ ಪೋಸ್ಟರ್-ನಲ್ಲಿ ನಟ ತಾಜ್ ಮಹಲ್ನ ಗುಮ್ಮಟವನ್ನು ಎತ್ತಿ ಅದರ ಒಳಗೆ ಶ್ರೀ ಶಿವನ ವಿಗ್ರಹವನ್ನು ಬಹಿರಂಗಪಡಿಸುವುದನ್ನು ತೋರಿಸಲಾಗಿದೆ.
'ತೇಜೋ ಮಹಾಲಯ' ಸಿದ್ಧಾಂತದ ಮೂಲವು ಸ್ವಯಂ-ಶೈಲಿಯ ಇತಿಹಾಸಕಾರರಾದ ಪುರುಷೋತ್ತಮ ನಾಗೇಶ್ ಓಕ್ ಅವರು ಬರೆದ ಎರಡು ಪುಸ್ತಕಗಳಿಂದ ಬಂದಿದೆ. ಇವರು ಭಾರತೀಯ ಇತಿಹಾಸವನ್ನು ಮರು ನಿರ್ಮಿಸುವ ಸಂಸ್ಥೆಯನ್ನು (Institute for Rewriting Indian History) ಸ್ಥಾಪಿಸಿದರು. ಆ ಪುಸ್ತಕಗಳು: 'ತಾಜ್ ಮಹಲ್ ವಾಸ್ ಎ ರಜಪೂತ್ ಪ್ಯಾಲೇಸ್' (1965) ಮತ್ತು 'ದಿ ತಾಜ್ ಮಹಲ್ ಈಸ್ ಎ ಟೆಂಪಲ್ ಪ್ಯಾಲೇಸ್' (1968). 'ತಾಜ್ ಮಹಲ್' ಎಂಬ ಹೆಸರು 'ತೇಜೋ ಮಹಾಲಯ'ದ ಭ್ರಷ್ಟ ರೂಪವಾಗಿದ್ದು, ಅದರ ಅರ್ಥ ಶಿವ ದೇವರ ಅರಮನೆ ಎಂದು ಓಕ್ ಅವರು ಪ್ರತಿಪಾದಿಸಿದ್ದರು. ತಾಜ್ ಮೂಲತಃ ರಜಪೂತ ರಾಜನಿಂದ ನಿರ್ಮಿಸಲ್ಪಟ್ಟ ಪ್ರಾಚೀನ ಶಿವ ದೇವಾಲಯ ಮತ್ತು ಅರಮನೆಯಾಗಿತ್ತು ಎಂಬುದು ಅವರ ವಾದವಾಗಿತ್ತು. ಒಂದು ಯುದ್ಧದ ನಂತರ ಶಹಜಹಾನ್ ಆ ಕಟ್ಟಡವನ್ನು ವಶಪಡಿಸಿಕೊಂಡು ಅದನ್ನು ತಾಜ್ ಮಹಲ್ ಎಂದು ಮರುನಾಮಕರಣ ಮಾಡಿದ್ದಾನೆ ಎಂದು ಅವರು ನಂಬಿದ್ದರು.
ತಲೆಗೆ ಹುಳ ಬಿಟ್ಟುಕೊಂಡ ವ್ಯಕ್ತಿ
ಈ ಸಿದ್ಧಾಂತದ ಪ್ರಕಾರ, ತಾಜ್ ಮಹಲ್ ಆವರಣದಲ್ಲಿರುವ 20ಕ್ಕೂ ಹೆಚ್ಚು ಮೊಹರು ಮಾಡಿದ ಕೋಣೆಗಳಲ್ಲಿ ಹಿಂದೂ ದೇವರುಗಳ ವಿಗ್ರಹಗಳು ಮತ್ತು ಧಾರ್ಮಿಕ ಗ್ರಂಥಗಳನ್ನು ಅಡಗಿಸಿ ಇಡಲಾಗಿದೆ. 2000 ಇಸವಿಯಲ್ಲಿ, ತಮ್ಮ ಮರಣಕ್ಕೆ ಏಳು ವರ್ಷಗಳ ಮೊದಲು, ಇತಿಹಾಸಕಾರ ಓಕ್ ಅವರು ತಮ್ಮ ಸಿದ್ಧಾಂತವನ್ನು ದೇಶದ ಉನ್ನತ ನ್ಯಾಯಾಲಯಕ್ಕೆ ಕೊಂಡೊಯ್ಯಲು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು, ಆದರೆ ಸುಪ್ರೀಂ ಕೋರ್ಟ್ ಅವರ ಅರ್ಜಿಯನ್ನು “ತಲೆಗೆ ಹುಳ ಬಿಟ್ಟುಕೊಂಡ ವ್ಯಕ್ತಿ” (a bee in his bonnet) ಎಂದು ಕರೆದು ವಜಾ ಮಾಡಿತ್ತು.
ಎರಡು ವರ್ಷಗಳ ನಂತರ, ಒಬ್ಬ ಅರ್ಜಿದಾರರು ‘ಮೊಹರು ಮಾಡಿದ ಕೋಣೆಗಳ’ ತನಿಖೆಗಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ASI)ಗೆ ಆದೇಶ ನೀಡಬೇಕೆಂದು ಅಲಹಾಬಾದ್ ಹೈಕೋರ್ಟ್ಗೆ ಮನವಿ ಮಾಡಿಕೊಂಡರು. ನ್ಯಾಯಾಲಯವು ಈ ಅರ್ಜಿಯನ್ನು ಕೂಡ ತಿರಸ್ಕರಿಸಿತು, ಮತ್ತು ನಂತರ ಎಎಸ್ಐ ಬಿಡುಗಡೆ ಮಾಡಿದ ಫೋಟೋಗಳು ಆ ಕೋಣೆಗಳು ಅಡಗಿದ ದೇವಾಲಯಗಳಲ್ಲ, ಬದಲಿಗೆ ಕೇವಲ ನಿರ್ವಹಣೆಗಾಗಿ ಇವೆ ಎಂದು ತೋರಿಸಿದವು.
ಆದಾಗ್ಯೂ, ಓಕ್ ಅವರ ಹೇಳಿಕೆಯು ಅತ್ಯಂತ ಮೂಲಭೂತ ಐತಿಹಾಸಿಕ ಪರೀಕ್ಷೆಯಲ್ಲಿಯೂ ಉಳಿಯುವುದಿಲ್ಲ. ಇದನ್ನು ಸಮರ್ಥಿಸಲು ಯಾವುದೇ ದಾಖಲೆ, ಶಾಸನ ಅಥವಾ ವಾಸ್ತುಶಿಲ್ಪದ ಕುರುಹು ಇಲ್ಲ. ಪ್ರತಿಯೊಂದು ಮೊಘಲ್ ಇತಿಹಾಸ, ಪ್ರತಿಯೊಂದು ಪುರಾತತ್ವ ಅಧ್ಯಯನ ಮತ್ತು ಪ್ರತಿಯೊಬ್ಬ ಕಲಾ ಇತಿಹಾಸಕಾರರು ಒಂದೇ ವಿಷಯವನ್ನು ಹೇಳುತ್ತಾರೆ: ಶಹಜಹಾನ್ 17ನೇ ಶತಮಾನದಲ್ಲಿ ತಾಜ್ ನಿರ್ಮಿಸಿದ, ಮತ್ತು ಅದು ಹೇಗಿದೆಯೋ ಹಾಗೆ ಕಾಣುತ್ತದೆ ಮತ್ತು ಅದು ಒಂದು ಮೊಘಲ್ ಸಮಾಧಿ. ಆದರೆ ಓಕ್ ಮಾತ್ರ ತಮ್ಮ ಸಿದ್ಧಾಂತಕ್ಕೆ ಸರಿಹೊಂದುವ ರೀತಿಯಲ್ಲಿ ಸತ್ಯಾಂಶ ತಿರುಚುವ ಅಭ್ಯಾಸ ಹೊಂದಿದ್ದರು. ಶಹಜಹಾನ್ ಒಬ್ಬ ರಜಪೂತ ಶ್ರೀಮಂತರಿಂದ ಜಮೀನು ಖರೀದಿಸಿದ ಬಗ್ಗೆ 'ಪಾದ್ಶಹನಾಮ'ದಲ್ಲಿನ ಒಂದು ಸಾಲನ್ನು ಪಡೆದು, ಅದನ್ನು ಈ ಸ್ಮಾರಕವು ಈಗಾಗಲೇ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ “ಸಾಕ್ಷಿ”ಯನ್ನಾಗಿ ಪರಿವರ್ತಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು, ಅಕ್ಟೋಬರ್ 2017 ರಲ್ಲಿ, “ಯಾವುದೇ ದೇಶವು ತನ್ನ ಪರಂಪರೆಯ ಬಗ್ಗೆ ಹೆಮ್ಮೆ ಪಡದೇ ಮುಂದುವರಿಯಲು ಸಾಧ್ಯವಿಲ್ಲ” ಎಂದು ಹೇಳುವ ಮೂಲಕ ಸೋಮ್ ಅವರ ಹೇಳಿಕೆಗೆ ಸೂಕ್ಷ್ಮ ರೀತಿಯಲ್ಲಿ ಛೇಡಿಸಿ, ಅವರ ವಾಗ್ದಾಳಿಗೆ ಅಂಕುಶ ಹಾಕುವ ಪ್ರಯತ್ನ ನಡೆಸಿದರು. ಆದರೆ ಅದು ಅವರ ಪಕ್ಷದ ನಾಯಕರ ತಾಜ್ ಕುರಿತಾದ ವಿರೂಪಗೊಂಡ ಗ್ರಹಿಕೆಯನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಇತ್ತೀಚೆಗೆ, ಏಪ್ರಿಲ್ 2023ರಲ್ಲಿ, ಅಸ್ಸಾಂ ಬಿಜೆಪಿ ಶಾಸಕ ರೂಪ್ ಜ್ಯೋತಿ ಕುರ್ಮಿ ಅವರು ಚಕ್ರವರ್ತಿ ಶಹಜಹಾನ್ ಮುಮ್ತಾಜ್ ಮಹಲ್ ಅವರ ಮರಣದ ನಂತರ ಇತರ ಮಹಿಳೆಯರನ್ನು ವಿವಾಹವಾದ ಕಾರಣ, ತಾಜ್ “ಪ್ರೀತಿಯ ಸಂಕೇತವಾಗಲು ಸಾಧ್ಯವಿಲ್ಲ" ಎಂದು ಪ್ರತಿಪಾದಿಸಿದರು.
ಹೊಸ ರೂಪ ಕೊಡುವ ನಿರಂತರ ಪ್ರಯತ್ನ
ಚಿತ್ರದ ಟ್ರೇಲರ್ ತೇಜೋ ಮಹಾಲಯ ಸಿದ್ಧಾಂತಕ್ಕೆ ಮರುಜೀವ ನೀಡುತ್ತದೆ. ಜೊತೆಗೆ ರಹಸ್ಯ ಕೊಠಡಿಗಳು ಮತ್ತು ಹಿಂದೂ ವಿಗ್ರಹಗಳ ಹಕ್ಕುಗಳು ಅದರೊಂದಿಗೆ ತಳಕು ಹಾಕಿಕೊಂಡಿದೆ. ಇತಿಹಾಸಕಾರರು ಮತ್ತು ಎಎಸ್ಐ ಇಂತಹ ಹಕ್ಕುಗಳನ್ನು ನಿರಂತರವಾಗಿ ಆಧಾರರಹಿತವೆಂದೇ ಕರೆದಿದ್ದಾರೆ – ಉದಾಹರಣೆಗೆ, 2018ರಲ್ಲಿ, ಎಎಸ್ಐ ತಾಜ್ ಮಹಲ್ ಶಿವನ ದೇವಾಲಯವಲ್ಲ, ಸಮಾಧಿ ಎಂದು ಪುನರುಚ್ಚರಿಸಿತ್ತು ಮತ್ತು ಇದಕ್ಕೆ ವಿರುದ್ಧವಾದ ಯಾವುದೇ ಪುರಾವೆ ಕೇವಲ ಕಾಲ್ಪನಿಕ ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿತು. ಸ್ಮಾರಕಕ್ಕೆ ಹಿಂದೂ ಮೂಲವನ್ನು ಪ್ರತಿಪಾದಿಸುವ ಮನವಿಗಳಿಗೆ ಪ್ರತಿಕ್ರಿಯೆಯಾಗಿ ಎಎಸ್ಐ ಮಾಡಿದ ಕಾನೂನು ರಕ್ಷಣೆಯ ಭಾಗ ಇದಾಗಿತ್ತು.
ಆದರೆ ಈ ಚಲನಚಿತ್ರವು ನಿಖರವಾಗಿ ಇಂತಹ ಪರಿಷ್ಕೃತ ಇತಿಹಾಸದ ಧ್ವನಿಯನ್ನು ಬಳಸಿಕೊಂಡಿರುವುದು ವಿಶೇಷ. ಅದನ್ನು ಕೇವಲ ವದಂತಿಯಾಗಿ ಮಾತ್ರವಲ್ಲದೆ, ದೀರ್ಘಕಾಲದಿಂದಲೂ ಇರುವ ಐತಿಹಾಸಿಕ ನಿರೂಪಣೆಗಳಿಗೆ ಸವಾಲು ಹಾಕುವ ಒಂದು ‘ಕೋರ್ಟ್ರೂಂ ಡ್ರಾಮ’ದಂತೆ ಪ್ರಸ್ತುತಪಡಿಸುತ್ತದೆ. ತಾಜ್ ಮಹಲ್-ನ್ನು ಒಂದು ಚೌಕಟ್ಟಿನಲ್ಲಿ ನಿಲ್ಲಿಸುತ್ತಿರುವುದು, ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಪರಿಸರ ವ್ಯವಸ್ಥೆಯು ಇತಿಹಾಸವನ್ನು ಮರು-ರೂಪಿಸುವ ಪ್ರಯತ್ನಗಳಿಗೆ ಸಂಬಂಧಿಸಿದೆ ಎಂಬುದರಲ್ಲಿ ಸಂದೇಹವಿಲ್ಲ. ಮೊಘಲ್ ಸಾಮ್ರಾಜ್ಯದಿಂದ ನಿರ್ಮಿಸಲ್ಪಟ್ಟ ಸ್ಮಾರಕಗಳನ್ನು (ಬಿಜೆಪಿ ಇದನ್ನು ಸಾಮಾನ್ಯವಾಗಿ ಮುಸ್ಲಿಂ ಆಡಳಿತ ಮತ್ತು ವಿದೇಶಿ ಪ್ರಾಬಲ್ಯದ ನಿರೂಪಣೆ ಜೊತೆ ತಳಕು ಹಾಕುತ್ತದೆ) ಹೊಸ ಬೆಳಕಿನಲ್ಲಿ ಮರು-ರೂಪಿಸಲಾಗುತ್ತಿದೆ.
ಅವುಗಳನ್ನು ಅವುಗಳ ಮೂಲವನ್ನು ಒಪ್ಪಿಕೊಳ್ಳದೆ ರಾಷ್ಟ್ರೀಯ ಪರಂಪರೆಯ ಜೊತೆಗೆ ಸೇರಿಸಿಕೊಳ್ಳಲಾಗುತ್ತದೆ, ಅಥವಾ ಶತಾಯಗತಾತ ಅವುಗಳನ್ನು ಪ್ರಶ್ನಿಸಲಾಗುತ್ತದೆ, ಮೂಲೆಗುಂಪು ಮಾಡಲಾಗುತ್ತದೆ, ಅಥವಾ ಪರ್ಯಾಯ ನಿರೂಪಣೆಗಳನ್ನು ಮಂಡಿಸಿ ಬದಲಾಯಿಸಲಾಗುತ್ತದೆ.
ಇಂತಹ ಮಾನದಂಡಗಳ ನೆಲೆಗಟ್ಟಿನಲ್ಲಿ ತಾಜ್ ಮಹಲ್ ಕೆಲವು ಕಾರಣಗಳಿಗಾಗಿ ಸಮಸ್ಯೆಗಳನ್ನು ಹೊಂದಿದೆ: ಮೊದಲನೆಯದಾಗಿ ಮತ್ತು ಅತಿ ಮುಖ್ಯವಾಗಿ, ತಾಜ್ ಒಂದು ಮೂಲಭೂತ ಮೊಘಲ್ ಸ್ಮಾರಕ. ಅದರ ಬಿಳಿ ಬಣ್ಣದ ಅಮೃತಶಿಲೆ ಮತ್ತು ಪರ್ಷಿಯನ್ ವಾಸ್ತುಶಿಲ್ಪವು ಅದರ ಇಸ್ಲಾಮಿಕ್ ಪರಂಪರೆಗೆ ಸ್ಪಷ್ಟ ಸಾಕ್ಷಿ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ರಚನೆಯಾದ ಬಳಿಕ, ಸ್ಮಾರಕದ ಅವನತಿ ಮತ್ತು ನಿರ್ಲಕ್ಷ್ಯದ ನಿರ್ವಹಣೆಯು ಅದರ ಪರಂಪರೆಯ ಗುರುತಿನಿಂದಲೇ ಇರಬಹುದು ಎಂದು ವಿಮರ್ಶಕರು ಅನುಮಾನ ವ್ಯಕ್ತಪಡಿಸುತ್ತಾರೆ.
ಎರಡನೆಯದಾಗಿ, ತಾಜ್ನ ಮೂಲವನ್ನು ಮರು-ನಿಯೋಜನೆ ಮಾಡುವುದರಿಂದ, ನಿರೂಪಣೆಯು “ನಮ್ಮ” ಭೂತಕಾಲವನ್ನು ಮತ್ತೊಮ್ಮೆ ದಕ್ಕಿಸಿಕೊಳ್ಳುವ ಬೇಡಿಕೆಯನ್ನು ಸೃಷ್ಟಿಸುತ್ತದೆ. ಬಿಜೆಪಿಯ ರಾಜಕೀಯ ತರ್ಕದಲ್ಲಿ, ಇತಿಹಾಸವು ಕೇವಲ ಹಿಂದಿನ ಇತಿಹಾಸಕ್ಕೆ ಸಂಬಂಧಿಸಿದ್ದಲ್ಲ; ಅದು ನಾವೀಗ ಯಾರಾಗಿದ್ದೇವೆ ಎಂಬುದಕ್ಕೆ ಸಂಬಂಧಿಸಿದ್ದು. ಅಂತಹ ಪ್ರಸಿದ್ಧ ಸ್ಮಾರಕವೂ ಪ್ರಶ್ನಾರ್ಹವಾದರೆ, ಬೇರೆ ಯಾವುದನ್ನು ಮರು-ಪರಿಶೀಲಿಸಬೇಕು? ಪ್ರಶ್ನಿಸದೆ ಒಪ್ಪಿಕೊಂಡದ್ದೆಲ್ಲವೂ ಒಂದು ಮುಖವಾಡವಿರಬಹುದು ಎಂದು ನಂಬಲು ಬೇಕಾದ ಪ್ರೇಕ್ಷಕರನ್ನು ಪ್ರೋತ್ಸಾಹಿಸಲಾಗುತ್ತದೆ. ಚಲನಚಿತ್ರದ ಪೋಸ್ಟರ್ ಘೋಷಿಸುವಂತೆ: “ನಿಮಗೆ ಕಲಿಸಿದ್ದೆಲ್ಲವೂ ಸುಳ್ಳಾಗಿದ್ದರೆ ಏನು ಮಾಡುತ್ತೀರಿ?” ಎಂದು ಕೇಳುತ್ತದೆ.
ಬಿಡುಗಡೆ ದಿನದ ಹಿಂದಿನ ಉದ್ದೇಶ
ಮೂರನೆಯದಾಗಿ, ನಿಜವಾಗಿಯೂ ಮುಖ್ಯವಾದುದು ಇದರ ಸಮಯ. ಬಿಡುಗಡೆಯ ದಿನಾಂಕ (ಅಕ್ಟೋಬರ್ 31), ಬಿಜೆಪಿಗೆ ಪ್ರೀತಿಪಾತ್ರರಾದ ರಾಷ್ಟ್ರೀಯ ಏಕೀಕರಣದ ಪ್ರತಿಮಾಪುರುಷ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆ ಜೊತೆಗೆ ಹೊಂದಿಕೆಯಾಗುತ್ತಿರುವುದು ಕೇವಲ ಕಾಕತಾಳೀಯವಲ್ಲ, ಇದು ಒಂದು ಲೆಕ್ಕಾಚಾರ. ಬಿಹಾರ ಚುನಾವಣೆಗೆ ಕೆಲವೇ ದಿನಗಳ ಮೊದಲು "ಸ್ಥಾಪಿತ" ಇತಿಹಾಸಕ್ಕೆ ಸವಾಲು ಹಾಕುವ ಮೂಲಕ, ಈ ಸಿನೆಮಾ ಮತ್ತು ಅದರ ವಿಷಯಗಳು ಎಡಪಂಥೀಯ ಇತಿಹಾಸಕಾರರು ಹಿಂದೂ ಪರಂಪರೆಯನ್ನು ನಿರ್ಲಕ್ಷಿಸಿದ್ದಾರೆ, ಅಥವಾ ಅದಕ್ಕೆ ಎರಡನೇ ಸ್ಥಾನಮಾನ ನೀಡಿದ್ದಾರೆ ಎಂದು ಭಾವಿಸುವ ಮತದಾರರ ವರ್ಗಕ್ಕೆ ಕುಮ್ಮುಕ್ಕು ನೀಡುವ ಗುರಿ ಹೊಂದಿವೆ. ಇತಿಹಾಸವು ಒಂದು ಪ್ರಾಕ್ಸಿ ಅಥವಾ ಪಾರ್ಶ್ವ ಹಾನಿಯಾದ ಈ ಸಾಂಸ್ಕೃತಿಕ ಯುದ್ಧದಲ್ಲಿ, ತಾಜ್ ಮಹಲ್ ಕೇವಲ ಇತ್ತೀಚಿಗೆ ಮುಂಚೂಣಿಗೆ ಬಂದ ಸಂಗತಿ. ನೀವು ಮತ್ತು ನಾನು ಇದನ್ನು ಒಪ್ಪಿಕೊಂಡರೂ ಇಲ್ಲದಿದ್ದರೂ, ಬಿಜೆಪಿ ಖಂಡಿತವಾಗಿಯೂ ಇದನ್ನು ನಿಯಂತ್ರಿಸಲು ಬಯಸುವ ನಿರೂಪಣೆಯ ಭಾಗವಾಗಿ ಮಾಡಲು ಸಿದ್ಧವಾಗಿದೆ.
ಬಿಜೆಪಿಯ ಪಠ್ಯಪುಸ್ತಕಗಳನ್ನು ಮರುರಚನೆ, ನಗರಗಳಿಗೆ ಮರುನಾಮಕರಣ, ಸ್ಥಳೀಯ ಜ್ಞಾನಕ್ಕೆ ಪ್ರಾಮುಖ್ಯತೆ ನೀಡುವ, ಪಟೇಲ್ ಮತ್ತು ಬಿ.ಆರ್. ಅಂಬೇಡ್ಕರ್ ಅವರಂತಹ ನಾಯಕರನ್ನು ಹೊಸದಾಗಿ ದಕ್ಕಿಸಿಕೊಳ್ಳುವ, ಮತ್ತು ವಸಾಹತುಶಾಹಿ ಹಾಗೂ ಮೊಘಲ್ ಪರಂಪರೆಗಳಿಗೆ ಪ್ರಶ್ನೆ ಮಾಡುವ ಯೋಜನೆಯ ಸಂದರ್ಭದಲ್ಲಿ ನೀವು ಈ ಸಿನೆಮಾ ನೋಡಿದರೆ, ಉದ್ದೇಶ ಮತ್ತು ಚಿತ್ರಣವು ಸಾಕಷ್ಟು ಸ್ಪಷ್ಟವಾಗುತ್ತದೆ. 'ದಿ ತಾಜ್ ಸ್ಟೋರಿ' ನಿಖರವಾಗಿ ಆ ಸುಳಿಯ ಭಾಗವೆಂಬುದು ನಿಮಗೆ ನಿಚ್ಚಳವಾಗುತ್ತ ಹೋಗುತ್ತದೆ. ತಾಜ್ ಅನ್ನು ತನ್ನ ಕೇಂದ್ರಬಿಂದುವನ್ನಾಗಿ ಮಾಡಿಕೊಳ್ಳುವ ಮೂಲಕ, ಈ ಚಲನಚಿತ್ರವು, ಇತ್ತೀಚಿನ ವರ್ಷಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ ಸೋತ ಪ್ರಚಾರ ಚಲನಚಿತ್ರಗಳ ಸರಣಿಯಂತೆ, ದೊಡ್ಡ ಯೋಜನೆಯಲ್ಲಿ ಬಲಪಂಥೀಯ ಕಾರ್ಯಸೂಚಿಯನ್ನು ಮುನ್ನಲೆಗೆ ತಳ್ಳುವ ಪ್ರಯತ್ನ. ಇಲ್ಲಿ 'ದಿ ತಾಜ್ ಸ್ಟೋರಿ' ಸಂಪೂರ್ಣವಾಗಿ ಅಮುಖ್ಯವಾಗಿದ್ದರೂ, ಅದು ವೀಕ್ಷಕರ ಮನಸ್ಸಿನಲ್ಲಿ ವಿಭಜನೆಯ ಬೀಜವನ್ನು ಬಿತ್ತುವ ಉದ್ದೇಶ ಹೊಂದಿರುವುದು ಸ್ಪಷ್ಟ. ಆದರೆ ಬಿಜೆಪಿ ತನ್ನ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಜಿದ್ದಿಗೆ ಬೀಳುತ್ತದೆ ಎಂಬುದು ನೆನಪಿರಲಿ.