ಕಬ್ಬಿನ ಬವಣೆ: Part-1|ನ್ಯಾಯೋಚಿತ ದರ: ಕೇಂದ್ರ-ರಾಜ್ಯದ ಪಾತ್ರವೇನು? ಸಕ್ಕರೆ ಕಾರ್ಖಾನೆಗಳ ಮುಂದೆ ಮಂಡಿಯೂರಿತೇ ಸರ್ಕಾರ?
ಕೇಂದ್ರ ಸರ್ಕಾರ ನಿಗದಿ ಮಾಡಿದ ದರ ರೈತರಿಗೆ ಸಿಗುತ್ತಿದೆಯೇ, ತೂಕ, ಬೆಲೆ ಹಾಗೂ ನಿಗದಿತ ಅವಧಿಯಲ್ಲಿ ಪಾವತಿ ಆಗುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ.
ಕಬ್ಬಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ನೀಡುವಂತೆ ಒತ್ತಾಯಿಸಿ ಬೆಳಗಾವಿ, ಬಾಗಲಕೋಟೆ ಸೇರಿದಂತೆ ಹಲವೆಡೆ ಕಬ್ಬು ಬೆಳೆಗಾರರು ಬೀದಿಗೆ ಇಳಿದಿದ್ದಾರೆ. ಆದರೆ, ಸಕ್ಕರೆ ಕಾರ್ಖಾನೆಗಳು ಹಾಗೂ ಕಬ್ಬು ಬೆಳೆಗಾರರ ಮಧ್ಯೆ ನಾ ಕೊಡೆ- ನೀ ಬಿಡೆ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೇಂದ್ರ ಸರ್ಕಾರ ನಿಗದಿ ಮಾಡಿದ ದರ ರೈತರಿಗೆ ಸಿಗುತ್ತಿದೆಯೇ, ತೂಕ, ಬೆಲೆ ಹಾಗೂ ನಿಗದಿತ ಅವಧಿಯಲ್ಲಿ ಪಾವತಿ ಆಗುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಹೀಗಿರುವಾಗ, ಕಬ್ಬು ಬೆಳೆಗಾರರ ವಿಷಯದಲ್ಲಿ ರಾಜ್ಯ ಸರ್ಕಾರವು ಕೇಂದ್ರದತ್ತ ಬೊಟ್ಟು ಮಾಡಿ, ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿಸಿಕೊಂಡು ರೈತರನ್ನು ಬಲಿಪಶು ಮಾಡುತ್ತಿದೆ.
ಕಬ್ಬು ಬೆಳೆಗಾರರಿಗೆ ನ್ಯಾಯೋಚಿತ ಬೆಲೆ ಒದಗಿಸುವಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಪಾತ್ರವೇನು ಎಂಬುದು ಈಗ ನಾನಾ ಚರ್ಚೆಗಳಿಗೆ ಕಾರಣವಾಗಿದೆ.
ಕಬ್ಬಿನ ವಿಚಾರದಲ್ಲಿ ಕೇಂದ್ರ-ರಾಜ್ಯದ ಪಾತ್ರವೇನು?
ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಬೃಹತ್ ಬಂಡವಾಳ ಹೂಡಿಕೆ ಅಗತ್ಯವಿದೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಐಇಎಂ(Industrial Entrepreneur Memorandum) ಪರವಾನಗಿ ಅಗತ್ಯ. ಜತೆಗೆ ದೇಶಾದ್ಯಂತ ಕಬ್ಬು ಬೆಳೆಗಾರರಿಗೆ ಅನುಕೂಲವಾಗುವಂತೆ ನ್ಯಾಯೋಚಿತ ಹಾಗೂ ಲಾಭದಾಯಕ ಬೆಲೆ (ಎಫ್ ಆರ್ ಪಿ) ನಿಗದಿ ಮಾಡಲಿದೆ. ಇದು ಕೇಂದ್ರ ಸರ್ಕಾರದ ಜವಾಬ್ದಾರಿ. ಆದರೆ, ಕಾರ್ಖಾನೆಯ ಕಮಾಂಡ್ ಏರಿಯಾ, ಮೂಲಸೌಕರ್ಯ, ಕಾರ್ಯಾಚರಣೆ ಸೇರಿ ಹಲವು ರೀತಿಯ ಪರವಾನಗಿ ನೀಡಿ ತೆರಿಗೆ ಆಕರಿಸುವುದು ರಾಜ್ಯ ಸರ್ಕಾರದ ಅಧೀನದಲ್ಲಿದೆ. ಜತೆಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್ ಆರ್ ಪಿ ದರ, ತೂಕ, ಹಣ ಪಾವತಿ ಇತ್ಯಾದಿ ವಿಚಾರಗಳನ್ನು ರಾಜ್ಯ ಸರ್ಕಾರವೇ ನೋಡಿಕೊಳ್ಳಬೇಕು. ಇದು ರಾಜ್ಯ ಸರ್ಕಾರ ಜವಾಬ್ದಾರಿಯಾಗಿದೆ. ಸಕ್ಕರೆ ಕಾರ್ಖಾನೆಗಳಿಂದ ಬರುವ ತೆರಿಗೆ ಕೂಡ ರಾಜ್ಯ ಸರ್ಕಾರಗಳಿಗೆ ಪ್ರಮುಖ ಆದಾಯ ಮೂಲವಾಗಿದೆ. ಸಕ್ಕರೆ ಕಾರ್ಖಾನೆಗಳ ಮೇಲೆ ಸಂಪೂರ್ಣ ನಿಯಂತ್ರಣ ಅಧಿಕಾರ ರಾಜ್ಯ ಸರ್ಕಾರದ್ದಾಗಿರುವಾಗ ಕೇಂದ್ರದ ಕಡೆ ಬೊಟ್ಟು ಮಾಡುವುದರಲ್ಲಿ ಅರ್ಥವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಸಕ್ಕರೆ ಕಾರ್ಖಾನೆ ಕಾರ್ಯಾಚರಣೆ ನಡೆಸುವ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಸಕ್ಕರೆ ಆಯುಕ್ತರು ಕಾರ್ಖಾನೆಗಳಿಗೆ ಕಡಿವಾಣ ಹಾಕುವ ಅಧಿಕಾರ ಹೊಂದಿರುತ್ತಾರೆ, ಅಗತ್ಯಬಿದ್ದರೆ ಕಾರ್ಖಾನೆಯನ್ನು ಮುಚ್ಚುವ ಅಧಿಕಾರವೂ ಅವರಿಗಿದೆ. ಕಬ್ಬು ಬೆಳೆಗಾರರ ಬಾಕಿ ವಸೂಲಾತಿ, ಎಫ್ ಅರ್ ಪಿ ದರ ಕೊಡಿಸುವುದು ಅಧಿಕಾರಿಗಳು ಅರ್ಥಾತ್ ಸರ್ಕಾರದ ಜವಾಬ್ದಾರಿ. ಹೀಗಿರುವಾಗ ರೈತರ ನ್ಯಾಯೋಚಿತ ಬೇಡಿಕೆಗೆ ಸ್ಪಂದಿಸದೇ ಕೇಂದ್ರದತ್ತ ವೃಥಾ ಬೊಟ್ಟು ಮಾಡುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಬೆಲೆ ನಿರ್ಧರಿಸುವ ಹಕ್ಕು ರೈತರದ್ದಲ್ಲ
ಮಾರುಕಟ್ಟೆ ವ್ಯವಸ್ಥೆಯಲ್ಲಿ ರೈತರು ಬೆಳೆದ ಬೆಳೆಗೆ ಮತ್ಯಾರೋ ಬೆಲೆ ನಿಗದಿಪಡಿಸುವ ಪರಿಪಾಠ ಈ ಹಿಂದಿನಿಂದಲೂ ನಡೆದು ಬಂದಿದೆ. ಬೆಳೆ ಬೆಳೆಯುವ ರೈತರು ಬೆಲೆ ನಿಗದಿ ವಿಚಾರದಲ್ಲಿ ನಗಣ್ಯ ಎನಿಸುತ್ತಾರೆ.
ಸಾಮಾನ್ಯವಾಗಿ ಪ್ರತಿಯೊಂದು ವಸ್ತುವಿಗೂ ಕನಿಷ್ಠ ಬೆಂಬಲ ಬೆಲೆಯನ್ನು ಆಯಾ ವಸ್ತು ತಯಾರಿಸುವ ಸಂಸ್ಥೆಯೇ ನಿಗದಿ ಮಾಡುತ್ತದೆ. ಆದರೆ, ರೈತರ ವಿಚಾರದಲ್ಲಿ ಹಾಗಾಗುತ್ತಿಲ್ಲ. ರೈತರು ಬೆಳೆಯುವ ಬೆಳೆಗಳಿಗೆ ದರ ನಿಗದಿ ಮಾಡುವ ಹಕ್ಕು ಬೇರೆಯವರ ಪಾಲಾಗಿದೆ. ಆದ್ದರಿಂದಲೇ ಇಂದಿಗೂ ರೈತರ ಬದುಕು ಮೂರಾಬಟ್ಟೆಯಂತಾಗಿದೆ.
"ಪ್ರತಿ ವರ್ಷ ರಸಗೊಬ್ಬರ, ಕೂಲಿ, ಔಷಧಗಳ ಬೆಲೆ ಏರಿಕೆಯಿಂದ ಉತ್ಪಾದನಾ ವೆಚ್ಚ ಶೇ 10 ರಷ್ಟು ಏರುತ್ತಿರುತ್ತದೆ. ಆದರೆ, ಸರ್ಕಾರಗಳು ಹಾಗೂ ಸಕ್ಕರೆ ಕಾರ್ಖಾನೆಗಳು ಇದನ್ನು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಪೈಸೆ, ರೂಪಾಯಿಗಳ ಲೆಕ್ಕದಲ್ಲಿ ದರ ಏರಿಕೆ ಮಾಡುತ್ತಿರುವುದರಿಂದ ಕಬ್ಬು ಬೆಳೆಗಾರರು ನಷ್ಟದ ಸುಳಿಗೆ ಸಿಲುಕುವಂತಾಗಿದೆ" ಎಂದು ಮಾಜಿ ಶಾಸಕರೂ ಆಗಿರುವ ರೈತ ನಾಯಕ ಶಹಜಹಾನ್ ಡೊಂಗರಗಾಂವ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.
ರೈತರು ಒಂದು ಎಕರೆಯಲ್ಲಿ ಕಬ್ಬು ಬೆಳೆಯಲು ಅಂದಾಜು 1.20 ಲಕ್ಷ ರೂ. ಖರ್ಚು ಮಾಡಬೇಕಾಗಿದೆ. ಆಗ ಉತ್ಪಾದನಾ ವೆಚ್ಚದ ಮೇಲೆ ಒಂದೂವರೆ ಪಟ್ಟು ಲಾಭ ನಿರೀಕ್ಷಿಸುವುದು ಸಹಜ. ಆದರೆ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಕಡಿಮೆ ಬೆಲೆ ಇತ್ಯಾದಿ ಕಾರಣಗಳಿಂದ ಕಬ್ಬು ಬೆಳೆಗಾರರು ಲಾಭ ನೋಡುವುದು ದೂರದ ಮಾತಾಗಿದೆ. ಒಂದು ಎಕರೆಯಲ್ಲಿ ಅಂದಾಜು 40 ಟನ್ ಕಬ್ಬು ಬೆಳೆಯಬಹುದು. ಒಂದು ಟನ್ ಗೆ 3550 ರೂ. ಎಫ್‌ಆರ್ ಪಿ ದರದಂತೆ ಲೆಕ್ಕ ಹಾಕಿದರೆ 1.42 ಲಕ್ಷ ರೂ.ಗಳಿಸಬಹುದು. ಆದರೆ, ಸಕ್ಕರೆ ಕಾರ್ಖಾನೆಗಳು ಎಫ್ ಆರ್ ಪಿ ಗಿಂತ ಕಡಿಮೆ ದರ ನೀಡುತ್ತಿರುವುದರಿಂದ ಬರುವ ಆದಾಯವು ಉತ್ಪಾದನಾ ವೆಚ್ಚಕ್ಕೇ ಸರಿ ಹೊಂದುತ್ತಿದೆ ಎಂಬುದು ಕಬ್ಬು ಬೆಳೆಗಾರರ ಅಳಲು.
"40 ವರ್ಷದ ಹಿಂದೆ ಕಾರ್ಖಾನೆಗಳು ಸಕ್ಕರೆ ಹೊರತುಪಡಿಸಿ ಕಬ್ಬಿನಿಂದ ಯಾವುದೇ ಬೇರೆ ಉಪ ಉತ್ಪನ್ನಗಳನ್ನು ತಯಾರಿಸುತ್ತಿರಲಿಲ್ಲ.ಆದರೆ ಈಗ ಕಬ್ಬಿನ ಸಿಪ್ಪೆಯೂ ವ್ಯರ್ಥವಾಗದು. ಇದರಿಂದ ಕಾರ್ಖಾನೆಗಳು ಲಾಭ ಗಳಿಸುತ್ತಿವೆ. ರೈತರು ಮಾತ್ರ ನ್ಯಾಯೋಚಿತ ಬೆಲೆಗಾಗಿ ಬೀದಿಗೆ ಇಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಡೊಂಗರಗಾಂವ ಅಸಮಾಧಾನ ಹೊರಹಾಕಿದರು.
ಸಕ್ಕರೆ ಕಾರ್ಖಾನೆಗಳು ವಿದ್ಯುತ್, ಮೊಲಾಸಿಸ್, ಎಥೆನಾಲ್, ಬಗ್ಯಾಸ್(ಕಬ್ಬಿನ ನಾರು), ಸಕ್ಕರೆ ಉತ್ಪಾದಿಸುತ್ತವೆ. ಮೊಲಾಸಿಸ್ ಕ್ವಿಂಟಲ್‌ಗೆ 160 ರೂ. ಸಿಗಲಿದೆ. ಪೆಟ್ರೋಲಿಯಂ ಉತ್ಪನ್ನಗಳಿಗೆ ಎಥೆನಾಲ್ ಮಿಶ್ರಣ ಮಾಡುವುದರಿಂದ ಕೇಂದ್ರ ಸರ್ಕಾರ ಖರೀದಿ ಮಾಡಲಿದೆ. ಈ ಹಿಂದೆ ಶೇ 5ರಷ್ಟು ಎಥೆನಾಲ್ ಮಿಶ್ರಣಕ್ಕೆ ಅವಕಾಶ ಇತ್ತು. ಈಗ ಅದು ಶೇ 30 ರವರೆಗೂ ಹೆಚ್ವಿಸಲಾಗಿದೆ. ಹಾಗಾಗಿ ಸಕ್ಕರೆ ಕಾರ್ಖಾನೆಗಳಿಗೆ ಇದೂ ಕೂಡ ಲಾಭವೇ ಆಗಿದೆ ಎಂದು ಹೇಳಿದರು.
ಸಕ್ಕರೆ ಕಾರ್ಖಾನೆ ಬರುವ ಆದಾಯ ಎಷ್ಟು, ಖರ್ಚು ಏನು?
ಸಕ್ಕರೆ ಕಾರ್ಖಾನೆಗಳಿಗೆ ಒಂದು ಟನ್ ಕಬ್ಬು ನುರಿಸುವುದರಿಂದ ಕನಿಷ್ಠ 12-13 ಸಾವಿರ ರೂ. ಆದಾಯ ಬರಲಿದೆ. ಈ ಹಣದಲ್ಲಿ ಉಪ ಉತ್ಪನ್ನಗಳ ತಯಾರಿಕೆಗಾಗಿ (ಟನ್ ಗೆ) 3-4 ಸಾವಿರ ಖರ್ಚಾಗಲಿದೆ. ಉಳಿದ 9-10 ಸಾವಿರದಲ್ಲಿ ಕಾರ್ಖಾನೆ ಸ್ಥಾಪನೆಗಾಗಿ ಮಾಡಿರುವ ಸಾಲಕ್ಕೆ ಬಡ್ಡಿ, ಕಾರ್ಮಿಕರ ವೇತನ, ಯಂತ್ರೋಪಕರಣಗಳ ರಿಪೇರಿ ಹಾಗೂ ಸರ್ಕಾರಕ್ಕೆ ತೆರಿಗೆಗಾಗಿ 3000 ತೆಗೆದಿರಿಸಬೇಕಾಗುತ್ತದೆ. ಉಳಿದ 6-7 ಸಾವಿರ ರೂ.ಗಳಲ್ಲಿ ರೈತರಿಗೆ 3,550 ಎಫ್ ಆರ್ ಪಿ ದರ ನೀಡಿದರೆ 2,500 ರಿಂದ 3,500 ಉಳಿಯಲಿದೆ. ಅಂದರೆ ಕಾರ್ಖಾನೆಗಳು ಒಂದು ಟನ್ ಕಬ್ಬಿಗೆ ಎಲ್ಲಾ ಖರ್ಚು ವೆಚ್ಚ ಕಳೆದು 3,500 ರವರೆಗೆ ಲಾಭ ಮಾಡಲಿವೆ. ಇದರ ಜತೆಗೆ ಉಪ ಉತ್ಪನ್ನಗಳಿಂದ ಬರುವ ಲಾಭವೂ ಹೆಚ್ಚುವರಿಯಾಗಿ ಇರಲಿದೆ. ಇನ್ನು ಪ್ರತಿ ಕಾರ್ಖಾನೆಯು ಕನಿಷ್ಠ 2500 ರಿಂದ 10 ಸಾವಿರ ಟನ್ ವರೆಗೂ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿರುತ್ತವೆ. ಹೀಗಿರುವಾಗ ನಷ್ಟದ ಮಾತೇ ಬರುವುದಿಲ್ಲ ಎಂಬುದು ಸಕ್ಕರೆ ಕಾರ್ಖಾನೆಯ ವಹಿವಾಟುಗಳನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.
ಲಾಭ ಗಳಿಸುವ ಕಾರ್ಖಾನೆಗಳು ತಮ್ಮ ಸಾಮರ್ಥ್ಯ ವಿಸ್ತರಿಸಿಕೊಳ್ಳುವ ಜತೆಗೆ ಹೆಚ್ಚು ಕಾರ್ಖಾನೆಗಳನ್ನು ಸ್ಥಾಪಿಸುತ್ತಿವೆ. ಆದರೆ, ರೈತರಿಗೆ ಮಾತ್ರ ಕನಿಷ್ಠ ಎಫ್‌ಆರ್‌ಪಿ ದರ ನೀಡಲು ಹಿಂದೇಟು ಹಾಕುತ್ತಿವೆ ಎಂದು ದೂರಲಾಗಿದೆ.
" ಬೆಳಗಾವಿಯ ಅಥಣಿಯಲ್ಲಿ ಕಬ್ಬಿನ ರಿಕವರಿ( ಇಳುವರಿ) ಶೇ 12 ರಿಂದ 13 ರವರೆಗೆ ಇದೆ. ಕೆಲವೊಮ್ಮೆ ನೀರಿನ ಅಭಾವದಿಂದ ರಿಕವರಿ(ಇಳುವರಿ) ಪ್ರಮಾಣ ಕಡಿಮೆಯಾಗಬಹುದು. ಆದರೂ ಸರಾಸರಿ ರಿಕವರಿ ಶೇ 12 ರಷ್ಟಿದೆ. ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ನಾಟಿ ಆರಂಭಿಸಿದರೆ ಮುಂದಿನ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಕಟಾವು ಮಾಡಲಾಗುತ್ತದೆ. ಅಂದರೆ 14 ತಿಂಗಳು ಶ್ರಮ ಪಡುವ ರೈತರಿಗೆ ಕೊನೆಗೆ ಲಾಭ ಸಿಗುವುದಿಲ್ಲ" ಕಾಂಗ್ರೆಸ್ ಪಕ್ಷದವರೇ ಆದ ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.
20 ವರ್ಷಗಳ ಹಿಂದೆ ರಾಜಕಾರಣಿಗಳ ಒಡೆತನದ ಸಕ್ಕರೆ ಕಾರ್ಖಾನೆಗಳು ಕಡಿಮೆ ಇದ್ದವು. ಆದರೆ, ಇಂದು ಪ್ರತಿಯೊಬ್ಬ ರಾಜಕಾರಣಿಯದ್ದೂ ಕಾರ್ಖಾನೆಗಳಿವೆ. ಶಾಸಕರು, ಸಚಿವರದ್ದೇ ಕಾರ್ಖಾನೆಗಳಿರುವಾಗ ಸರ್ಕಾರ ಅಷ್ಟು ಸುಲಭವಾಗಿ ಕಾರ್ಖಾನೆ ಮಾಲೀಕರನ್ನು ಎದುರು ಹಾಕಿಕೊಳ್ಳುವುದಿಲ್ಲ.ಸಕ್ಕರೆ ಕಾರ್ಖಾನೆ ಮಾಲೀಕರೇ ಸರ್ಕಾರವಾಗಿರುವುದರಿಂದ ರೈತರ ಸಮಸ್ಯೆ ಬಗೆಹರಿಯುತ್ತಿಲ್ಲ ಎನ್ನುತ್ತಾರೆ.
ಸಕ್ಕರೆ ಕಾರ್ಖಾನೆ ಮಾಲೀಕರು ತಿರುಗಿಬೀಳುವ ಆತಂಕ
ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಂಡರೆ ಸಿಎಂ ಕುರ್ಚಿಗೆ ಕಂಟಕವಾಗಲಿದೆ. ಸಕ್ಕರೆ ಕಾರ್ಖಾನೆ ಮಾಲೀಕರು ತಿರುಗಿಬೀಳಬಹುದು ಎಂಬ ಆತಂಕ ಸಿಎಂ ಸಿದ್ದರಾಮಯ್ಯ ಅವರನ್ನು ಕಾಡುತ್ತಿರಬಹುದು.ಹಾಗಾಗಿ ಕಾರ್ಖಾನೆ ಮಾಲೀಕರನ್ನು ಎದುರು ಹಾಕಿಕೊಳ್ಳಲು ಇಷ್ಟಪಡುತ್ತಿಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಪ್ರತಿ ಚುನಾವಣೆ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರೇ ಪಕ್ಷಗಳಿಗೆ ಭರಪೂರ ದೇಣಿಗೆ ಸಹ ನೀಡುವುದರಿಂದ ರಾಜ್ಯ ಸರ್ಕಾರಗಳು ಕಾರ್ಖಾನೆ ಮಾಲೀಕರೊಂದಿಗೆ ದ್ವೇಷ ಕಟ್ಟಿಕೊಳ್ಳುವುದಿಲ್ಲ ಎನ್ನಲಾಗಿದೆ.
ಅಗತ್ಯಕ್ಕೆ ತಕ್ಕಂತೆ ಎಥೆನಾಲ್ ಹಂಚಿಕೆ
ಕಬ್ಬಿನಿಂದ ಉತ್ಪಾದನೆಯಾಗುವ ಎಥೆನಾಲ್ ಉತ್ಪನ್ನವನ್ನು ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಬಳಸಲಾಗುತ್ತಿದೆ. ಪೆಟ್ರೋಲಿಯಂ ಜವಾಬ್ದಾರಿ ಕೇಂದ್ರ ಸರ್ಕಾರದ ಅಧೀನದಲ್ಲಿರುವುದರಿಂದ ಬೇಡಿಕೆಗೆ ಅನುಗುಣವಾಗಿ ಕಾರ್ಖಾನೆಗಳಿಗೆ ಗುರಿ ನಿಗದಿ ಮಾಡಲಾಗುತ್ತದೆ. ಶೇ 30 ರಷ್ಟು ಎಥೆನಾಲ್ ಬಳಕೆಗೆ ಸರ್ಕಾರ ಅನುಮತಿ ನೀಡಿರುವುದರಿಂದ ಕಾರ್ಖಾನೆಗಳಿಗೆ ಇಂತಿಷ್ಟು ಎಥೆನಾಲ್ ಉತ್ಪಾದನೆಗೆ ಕೇಂದ್ರ ಸರ್ಕಾರ ಗುರಿ ನಿಗದಿ ಮಾಡುತ್ತದೆ. ಏಕೆಂದರೆ, ಉತ್ಪಾದಿಸಿದ ಎಥೆನಾಲ್ ಅನ್ನು ಕೇಂದ್ರವೇ ಖರೀದಿಸುವುದರಿಂದ ತನಗೆ ಎಷ್ಟು ಬೇಕೋ ಅಷ್ಟು ಪಡೆಯಲಿದೆ. ಎಥೆನಾಲ್ ಉತ್ಪಾದನೆಯನ್ನು ಸಕ್ಕರೆ ಕಾರ್ಖಾನೆಗಳು ನಿರ್ಧರಿಸುತ್ತವೆಯೇ ಹೊರತು ರಾಜ್ಯ ಸರ್ಕಾರವಲ್ಲ. 5 ಸಾವಿರ ಅಥವಾ 10 ಸಾವಿರ ಟನ್ ಕಬ್ಬು ನುರಿಸುವ ಕಾರ್ಖಾನೆಗಳಿಗೆ ಎಥೆನಾಲ್ ಉತ್ಪಾದನೆಗೆ ಗುರಿ ನಿಗದಿ ಮಾಡಲಾಗುತ್ತದೆ. ಎಥೆನಾಲ್ ಹಂಚಿಕೆಯಿಂದ ರಾಜ್ಯಕ್ಕೆ ನಷ್ಟ, ಅನ್ಯಾಯದ ಮಾತು ಬರುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಸಕ್ಕರೆ ಕಾರ್ಖಾನೆಯಿಂದ ಏನೆಲ್ಲಾ ತಯಾರಿಕೆ?
ಕಬ್ಬಿನಿಂದ ಮದ್ಯ ತಯಾರಿಕೆಗೆ ಬಳಸುವ ಮೊಲಾಸಿಸ್ ತಯಾರಿಸಲಾಗುತ್ತದೆ. ಬಯೋ ಗ್ಯಾಸ್, ಫ್ಲೈವುಡ್, ಥರ್ಮಾಕೋಲ್ ತಯಾರಿಕೆಗೆ ಬಳಸುವ ಕಚ್ಚಾವಸ್ತು ಸಿಗಲಿದೆ.
ಕಬ್ಬಿನಿಂದ ಎಥೆನಾಲ್, ವಿದ್ಯುತ್ ಉತ್ಪಾದನೆಯೂ ಆಗಲಿದೆ. ಕೊನೆ ಪಕ್ಷ ಕಬ್ಬಿನ ಸಿಪ್ಪೆಯೂ ವ್ಯರ್ಥವಾಗುವುದಿಲ್ಲ.
ಇತ್ತೀಚೆಗೆ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀತಿಗಳ ಬಗ್ಗೆ ರೈತರಿಗೆ ಅರಿವಿಲ್ಲ. ಹೀಗಿರುವಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಬೀದಿಪಾಲು ಮಾಡುವುದು ತರವಲ್ಲ. ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ಬೆಳೆಗಾರರು ಬಡವಾಗಬಾರದು ಎಂದು ಡೊಂಗನವರ ಹೇಳಿದರು.
ಕಬ್ಬು ಇಳುವರಿ (ರಿಕವರಿ) ಲೆಕ್ಕಾಚಾರ ಹೇಗೆ?
2025-26 ರ ಹಂಗಾಮು ಕಬ್ಬಿನ ಎಫ್‌ಆರ್‌ಪಿ (FRP) ದರವು ಕ್ವಿಂಟಾಲ್‌ಗೆ 355 ರೂ. ನಿಗದಿ ಮಾಡಲಾಗಿದೆ. ಅಂದರೆ ಟನ್ ಗೆ 3550 ರೂ.ಆಗಲಿದೆ.
ಕಬ್ಬಿನ ಇಳುವರಿ (recovery) ಶೇ 10.25 ಕ್ಕೆ 3550 ರೂ ಎಫ್ ಆರ್ ಪಿ ದರ ಅನ್ವಯಿಸುತ್ತದೆ. ಶೇ 10.25 ರ ನಂತರ ಶೇ 0.1 ರಷ್ಟು ಇಳುವರಿ ಹೆಚ್ಚಳವಾದರೆ ಕ್ವಿಂಟಲ್‌ಗೆ 3.46. ರೂ. ಹೆಚ್ಚುವರಿ ಬೆಲೆ ನೀಡಲಾಗುತ್ತದೆ.
ಕನಿಷ್ಠ ಬೆಲೆ ಕ್ವಿಂಟಲ್ ಗೆ 329.05 ರೂ. ಇದೆ. ಶೇ 9.5 ಕ್ಕಿಂತ ಕಡಿಮೆ ಇಳುವರಿ ಹೊಂದಿರುವ ಪ್ರದೇಶಗಳಿಗೆ ಈ ಬೆಲೆ ಅನ್ವಯಿಸುತ್ತದೆ.