Save Lalbagh| ಲಾಲ್‌ಬಾಗ್‌ನಲ್ಲಿ ಬೃಹತ್ ʼವೆಂಟಿಲೇಷನ್ ಶಾಫ್ಟ್ʼ; 6 ಎಕರೆಯಲ್ಲಿ ಜೀವವೈವಿಧ್ಯತೆಗೆ ಕುತ್ತು
ಉತ್ತರಾಖಂಡದಲ್ಲಿ ಸುರಂಗ, ಅಭಿವೃದ್ಧಿ ಚಟುವಟಿಕೆಗಳಿಂದ ಆಗಿರುವ ಅನಾಹುತಗಳು ಕಣ್ಣ ಮುಂದಿವೆ. ಇಂತಹ ಘಟನೆಗಳು ಬೆಂಗಳೂರಿನಲ್ಲಿ ಆಗಬಾರದು. ಸುರಂಗದಿಂದ ಯಾರಿಗೆಲ್ಲಾ ಲಾಭ, ನಷ್ಟ ಎಂಬುದನ್ನು ಅಧ್ಯಯನ ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.
ಬೆಂಗಳೂರಿನ ಶ್ವಾಸತಾಣವಾದ ಲಾಲ್‌ಬಾಗ್‌ನಲ್ಲಿ ಅವಳಿ ಸುರಂಗ ರಸ್ತೆ ಯೋಜನೆ ಆತಂಕದ ಅಲೆ ಎಬ್ಬಿಸಿದೆ. ಟನಲ್ ರಸ್ತೆ ಯೋಜನೆಗಾಗಿ ರಾಜ್ಯ ಸರ್ಕಾರವು ಉದ್ಯಾನದ ಆರು ಎಕರೆ ಜಾಗವನ್ನು ಬಳಸಿಕೊಳ್ಳಲು ಉದ್ದೇಶಿಸಿದೆ. ಈ ಜಾಗದಲ್ಲಿ ಬೃಹತ್ ವೆಂಟಿಲೇಷನ್ ಸುರಂಗ ದ್ವಾರ (Ventilation Shaft), ಇಂಟರ್ ಮಾಡೆಲ್ ಇಂಟರ್ಚೇಂಜ್ ಹಬ್ ನಿರ್ಮಿಸಲು ಸಿದ್ಧತೆ ನಡೆಸಿದೆ.
ಟನಲ್ ರಸ್ತೆಯು ಲಾಲ್‌ಬಾಗ್ ಬಂಡೆಯ ಕೆಳಗೆ ಸುಮಾರು 700 ಮೀಟರ್ ಹಾದು ಹೋಗಲಿದೆ. 50 ರಿಂದ 100 ಅಡಿ ಆಳದಲ್ಲಿ ಅಂದಾಜು 50 ಅಡಿ ವ್ಯಾಸದ ಎರಡು ಸುರಂಗಗಳು, 32.8 ಅಡಿ ವ್ಯಾಸದ ಎರಡು ರ‍್ಯಾಂಪ್‌ಗಳು ಬರಲಿವೆ. ಸುಮಾರು ಎರಡು ಎಕರೆ ಪ್ರದೇಶದಲ್ಲಿ ವೆಂಟಿಲೇಷನ್ ಶಾಫ್ಟ್‌ಗಳು ತಲೆ ಎತ್ತಲಿವೆ. ಇದಕ್ಕಾಗಿ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (B-SMILE) ಅಧಿಕಾರಿಗಳು ಮರಗಳನ್ನು ಕಡಿದು, ಜಾಗ ಗುರುತು ಮಾಡಿರುವುದು ಕಳವಳ ಮೂಡಿಸಿದೆ. ಮರಗಳನ್ನು ಕಡಿಯಲು ಬಿ-ಸ್ಮೈಲ್ ಅಧಿಕಾರಿಗಳು ಯಾವುದೇ ಅನುಮತಿ ಪಡೆಯದಿರುವುದು ಟೀಕೆಗೆ ಗುರಿಯಾಗಿದೆ.
ಟನಲ್ ರಸ್ತೆಯು ಅಶೋಕ ಪಿಲ್ಲರ್ ಮತ್ತು ಮರಿಗೌಡ ಜಂಕ್ಷನ್ ನಡುವೆ ಒಟ್ಟು 1.1 ಕಿ.ಮೀ. ಉದ್ದ ಇರಲಿದೆ. ಅಶೋಕ ಪಿಲ್ಲರ್‌ನಿಂದ 50 ಮೀಟರ್ ದೂರದಲ್ಲಿ 1.4 ಕಿ.ಮೀ. ಪ್ರವೇಶ ದ್ವಾರ ನಿರ್ಮಿಸಿದರೆ, ಮರಿಗೌಡ ಜಂಕ್ಷನ್ ಬಳಿ 1.1 ಕಿ.ಮೀ. ಉದ್ದದ ನಿರ್ಗಮನ ದ್ವಾರ ಬರಲಿದೆ.
ಅಶೋಕ ಪಿಲ್ಲರ್ ಪ್ರವೇಶ ದ್ವಾರದಿಂದ ಶಾಂತಿನಗರ, ವಿಲ್ಸನ್ ಗಾರ್ಡನ್, ಡೈರಿ ಸರ್ಕಲ್ ಮತ್ತು ಜಯನಗರದಿಂದ ಹೆಬ್ಬಾಳದ ಕಡೆಗೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಆದರೆ, ವಿರುದ್ಧ ದಿಕ್ಕಿನಲ್ಲಿ ಬರುವ ವಾಹನಗಳಿಗೆ ಪ್ರವೇಶ ನಿರ್ಬಂಧ ಇರಲಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೇ ವಾಯು ಮತ್ತು ಶಬ್ದಮಾಲಿನ್ಯ ಹೆಚ್ಚಾಗಿ ದೀರ್ಘಕಾಲದಲ್ಲಿ ಲಾಲ್‌ಬಾಗ್ ಪರಿಸರಕ್ಕೆ ಅಪಾಯ ಎದುರಾಗಲಿದೆ ಎಂದು ನಗರ ತಜ್ಞ ಹಾಗೂ ಸಿಟಿಜನ್ ಫಾರ್ ಸಿಟಿಜನ್ ಸಂಸ್ಥಾಪಕ ರಾಜ್‌ಕುಮಾರ್ ದುಗಾರ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಲಾಲ್ ಬಂಡೆಗೆ ಅಪಾಯದ ಭೀತಿ
16 ನೇ ಶತಮಾನದ ಕೆಂಪೇಗೌಡ ಕಾವಲು ಗೋಪುರವು ಬೆಂಗಳೂರಿನ ಆರಂಭಿಕ ಗಡಿ ಸೂಚಿಸಲಿದೆ. ಇಂತಹ ಬಂಡೆಯ ಕೆಳಗೆ 15 ಮೀ. ವ್ಯಾಸದ ಎರಡು ಸುರಂಗ ಕೊರೆಯಲು ಅತ್ಯಧಿಕ ಸಾಮರ್ಥ್ಯದ ಟಿಬಿಎಂ (ಟನಲ್ ಬೋರಿಂಗ್ ಮಿಷನ್) ಬಳಸಲಾಗುತ್ತದೆ. ಜತೆಗೆ 10 ಮೀ. ವ್ಯಾಸದ ಎರಡು ರ‍್ಯಾಂಪ್‌ಗಳಿಂದಲೂ ಬಂಡೆ ಅಸ್ಥಿರಗೊಳ್ಳುವ ಸಾಧ್ಯತೆ ಇದೆ.
ಪರಿಸರ ವೈವಿಧ್ಯಕ್ಕೆ ಹಾನಿ
40 ಎಕರೆ ವಿಸ್ತೀರ್ಣದ ಲಾಲ್‌ಬಾಗ್ ಸಸ್ಯೋದ್ಯಾನವು ಆರಂಭದಲ್ಲಿ ರಾಜಮನೆತನದ ಖಾಸಗಿ ಉದ್ಯಾನವಾಗಿತ್ತು. ಈಗ ಉದ್ಯಾನದ ವಿಸ್ತೀರ್ಣವು 240 ಎಕರೆಗೆ ವ್ಯಾಪಿಸಿಕೊಂಡಿದೆ. ಮೊಘಲ್ ಶೈಲಿಯಲ್ಲಿ ಉದ್ಯಾನ ವಿನ್ಯಾಸ ಮಾಡಲಾಗಿದೆ.
ಲಾಲ್‌ಬಾಗ್ ಪ್ರದೇಶವು ಮಳೆನೀರು ಸಂಗ್ರಹಣಾ ಮತ್ತು ಜೀವವೈವಿಧ್ಯ ತಾಣವಾಗಿದೆ. ಈ ಪರಿಸರದಲ್ಲಿ ತರಹೇವಾರಿ ಸಸ್ಯ ಪ್ರಬೇಧ, ಮೀನು, ಉಭಯಚರಗಳು, ಸರೀಸೃಪಗಳು ಹಾಗೂ ವಲಸೆ ಹಕ್ಕಿಗಳಿವೆ. ಅಶೋಕ ಪಿಲ್ಲರ್‌ನಿಂದ ಆರಂಭವಾಗುವ ಸುರಂಗ ರಸ್ತೆಯ ಪ್ರವೇಶ ರ‍್ಯಾಂಪ್ ಲಾಲ್‌ಬಾಗ್ ಕೆರೆಗೆ 100 ಅಡಿ ಅಂತರದಲ್ಲೇ ಹಾದುಹೋಗಲಿದೆ. ಇದರಿಂದ ಭೂಗತ ನೀರಿನ ಸೆಲೆಗಳು ನಾಶವಾಗಬಹುದು. ಜಲಚರಗಳು ಮತ್ತು ಸೂಕ್ಷ್ಮ ಪರಿಸರಕ್ಕೆ ಅಪಾಯ ಎದುರಾಗಬಹುದು. ಸುರಂಗ ಕೊರೆಯುವ ಸಂದರ್ಭದಲ್ಲಿ ಕೊಳವೆ ಬಾವಿಗಳು ಮತ್ತು ಪರಸ್ಪರ ಸಂಪರ್ಕ ಹೊಂದಿದ ಕೆರೆಗಳಿಗೆ ಧಕ್ಕೆಯಾಗಲಿದೆ. ಸುರಂಗ ಕೊರೆಯುವ ವೇಳೆ ಟನಲ್ ಬೋರಿಂಗ್ ಯಂತ್ರಕ್ಕೆ ಬಳಸುವ ರಾಸಾಯನಿಕವು ಅಂತರ್ಜಲ ಸೇರಿ ಕಲುಷಿತ ಆಗಬಹುದು ಎಂಬ ಭೀತಿ ಎದುರಾಗಿದೆ.
ಸಸ್ಯ ಪ್ರಬೇಧ ನಾಶವಾಗುವ ಭೀತಿ
ಲಾಲ್‌ಬಾಗ್‌ನಲ್ಲಿ ಪರ್ಷಿಯಾ, ಅಫ್ಘಾನಿಸ್ತಾನ, ಕೇಪ್ ಟೌನ್, ಟರ್ಕಿ, ಮಾರಿಷಸ್ ಮತ್ತು ಫ್ರಾನ್ಸ್ ಸೇರಿದಂತೆ ವಿವಿಧ ದೇಶಗಳಿಂದ ತರಿಸಿದ ಮರಗಳು, ಸಸ್ಯಗಳು ಇಲ್ಲಿವೆ. ಇದೇ ಉದ್ಯಾನದಲ್ಲಿ ನೂರು ವರ್ಷಕ್ಕೂ ಹಳೆಯದಾದ ಮರಗಳು ಇವೆ. ಟನಲ್ ರಸ್ತೆಯಿಂದ ಲಾಲ್ ಬಾಗ್ ಪರಿಸರಕ್ಕೆ ತೊಂದರೆಯಾಗಲಿದೆ ಎಂಬುದು ಪರಿಸರವಾದಿಗಳ ಆತಂಕವಾಗಿದೆ.
ಲಾಲ್‌ಬಾಗ್‌ನ ಪಶ್ಚಿಮಘಟ್ಟ ಕಿರು ಅರಣ್ಯಕ್ಕೂ ಕುತ್ತು
ಇಲ್ಲಿ ಮರಗಳನ್ನು ಮಕ್ಕಳಂತೆ ಪೋಷಿಸಲಾಗಿದೆ. ಪಶ್ಚಿಮಘಟ್ಟದಲ್ಲಿಯೂ ಈ ರೀತಿ ಮರಗಳು ಬೆಳೆಯುವುದಿಲ್ಲ. ಇತ್ತೀಚೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಲಾಲ್‌ಬಾಗ್‌ಗೆ ಭೇಟಿ ನೀಡಿದಾಗ ಈ ಮರಗಳನ್ನು ವೀಕ್ಷಿಸಿದ್ದು, ಮರಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆದಾಗ್ಯೂ ಟನಲ್ ರಸ್ತೆ ಅಗತ್ಯವಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಜೀವವೈವಿದ್ಯ ಶಾಸ್ತ್ರಜ್ಞ ಕೇಶವಮೂರ್ತಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಉತ್ತರಾಖಂಡದಲ್ಲಿ ಸುರಂಗ, ಅಭಿವೃದ್ಧಿ ಚಟುವಟಿಕೆಗಳಿಂದ ಆಗಿರುವ ಅನಾಹುತಗಳು ನಮ್ಮ ಕಣ್ಣಮುಂದಿವೆ. ಇಂತಹ ಘಟನೆಗಳು ಬೆಂಗಳೂರಿನಲ್ಲಿ ಆಗಬಾರದು. ಸುರಂಗದಿಂದ ಯಾರಿಗೆಲ್ಲಾ ಪ್ರಯೋಜನ, ಯಾರಿಗೆಲ್ಲಾ ಅನಾನುಕೂಲ ಎಂಬುದನ್ನು ಅಧ್ಯಯನ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಲಾಲ್‌ಬಾಗ್‌ನಲ್ಲಿ ಬೃಹತ್ ಶಾಫ್ಟ್
ರಾಜ್ಯ ಸರ್ಕಾರವೇ ರಚಿಸಿದ್ದ ತಜ್ಞರ ಸಮಿತಿಯು ಸುರಂಗ ರಸ್ತೆಯ ವಿನ್ಯಾಸ ಹಾಗೂ ಲಾಲ್‌ಬಾಗ್ ಪರಿಸರಕ್ಕೆ ಹಾನಿ ಉಂಟಾಗುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಹಾಗಾಗಿ, ಲಾಲ್‌ಬಾಗ್‌ನಲ್ಲಿ ನಿರ್ಮಿಸಲುದ್ದೇಶಿಸಿರುವ ಶಾಫ್ಟ್ ಅನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಸಮಿತಿ ಸಲಹೆ ನೀಡಿದೆ.
ವೆಂಟಿಲೇಷನ್ ಶಾಫ್ಟ್‌ನಲ್ಲಿ ಏನೇನು ಇರಲಿದೆ?
ವೆಂಟಿಲೇಷನ್ ಶಾಫ್ಟ್ ಮೇಲ್ಭಾಗದಲ್ಲಿ ಬಸ್, ಆಟೊ ಹಾಗೂ ಟ್ಯಾಕ್ಸಿ ನಿಲ್ದಾಣ ಒಳಗೊಂಡ ಇಂಟರ್ ಮಾಡೆಲ್ ಇಂಟರ್ಚೇಂಜ್ ಹಬ್ ಬರಲಿದೆ. ಜತೆಗೆ ಸ್ಕೈವಾಕ್, ವಾಣಿಜ್ಯ ಸಂಕೀರ್ಣ, ಕಾರು ನಿಲುಗಡೆ, ಡ್ರಾಪ್ ಪಾಯಿಂಟ್, ಇವಿ ಚಾರ್ಜಿಂಗ್ ಸೆಂಟರ್, ತುರ್ತು ನಿರ್ಗಮನ, ಎಸ್ಕಲೇಟರ್, ಎಲಿವೇಟರ್ ಹಾಗೂ ಸಿಸಿಟಿವಿ ಕ್ಯಾಮೆರಾಗಳು ಇರಲಿವೆ. ಇನ್ನು ಶಾಫ್ಟ್ ಕೆಳಭಾಗದಲ್ಲಿ ವೆಂಟಿಲೇಷನ್ ತಾಣವಿರಲಿದೆ. ಗಾಳಿ ಗುಣಮಟ್ಟ ನಿರ್ವಹಣೆ, ಟನಲ್ ಒಳಗಿನ ವಾಹನಗಳ ಹೊಗೆ ಹೊರಹಾಕುವ ವ್ಯವಸ್ಥೆ, ಅಗ್ನಿ ನಿರೋಧಕ ವ್ಯವಸ್ಥೆ, ಅಧಿಕ ಸಾಮರ್ಥ್ಯದ ಲಿಫ್ಟ್‌ಗಳು, ಪವರ್ ಜನರೇಟರ್, ತಡೆರಹಿತ ವಿದ್ಯುತ್ ಸರಬರಾಜು ಘಟಕ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು ಹಾಗೂ ಬೆಂಕಿ ನಂದಿಸಲು ಅಗತ್ಯವಿರುವ ನೀರನ್ನು ಸಂಗ್ರಹಿಸಲಾಗುತ್ತದೆ. ವೆಂಟಿಲೇಷನ್ ಶಾಫ್ಟ್‌ಗಳನ್ನು ಯುರೋಪಿಯನ್ ಹಾಗೂ ಐಆರ್‌ಸಿ (ಇಂಡಿಯನ್ ರೋಡ್ ಕಾಂಗ್ರೆಸ್) ಮಾನದಂಡಗಳ ಆಧಾರದ ಮೇಲೆ ವಿನ್ಯಾಸಗೊಳಿಸಲಾಗುತ್ತಿದೆ. ಸುಮಾರು 30 ಮೀಟರ್ ಕೆಳಗೆ ವಿಸ್ತರಿಸುವ ಶಾಫ್ಟ್, ನೇರವಾಗಿ ಸುರಂಗಕ್ಕೆ ಸಂಪರ್ಕಿಸಲಿದೆ.