ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ | ಮೋದಿ ಗ್ಯಾರಂಟಿ, ವಿರುದ್ಧ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌

೨೦೦೮ರಲ್ಲಿ ಕ್ಷೇತ್ರ ಪುನರ್‌ ವಿಂಗಡನೆಯಾದಾಗ ರೂಪುಗೊಂಡದ್ದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ. ಆಗಿನಿಂದಲೂ ಇದು ಬಿಜೆಪಿಯ ಭದ್ರಕೋಟೆ. ಮೂರು ಬಾರಿಯೂ ಇಲ್ಲಿ ಗೆದ್ದು ಬೀಗಿರುವ ಬಿಜೆಪಿ ಪಿ.ಸಿ ಮೋಹನ್‌, ಈಗ ನಾಲ್ಕನೇ ಬಾರಿಗೆ ಸ್ಪರ್ಧಿಸಿದ್ದಾರೆ. ಮುಸ್ಲೀಮೇತರ ಅಭ್ಯರ್ಥಿಯನ್ನು ಕಾಂಗ್ರೆಸ್‌ ಇಲ್ಲಿ ಕಣಕ್ಕಿಳಿಸಿದ್ದೇ ಇಲ್ಲ, ಈ ಬಾರಿಯೂ ಕಣದಲ್ಲಿರುವವರು, ಮನ್ಸೂರ್‌ ಅಲಿ ಖಾನ್‌.;

Update: 2024-04-23 02:00 GMT

ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆಗೆ ಇನ್ನು ಕೇವಲ ಎರಡು ದಿನ ಮಾತ್ರ ಉಳಿದಿದೆ. ಮತದಾರ ಅಭ್ಯರ್ಥಿಗಳ ಹಣೆಬರಹ ಬರೆಯಲು ನಲವತ್ತೆಂಟು ಗಂಟೆ ಬಾಕಿ ಇರುವಾಗಲೆ ಬಹಿರಂಗ ಪ್ರಚಾರ ಅಂತ್ಯಗೊಳ್ಳುವ ಹಿನ್ನೆಲೆಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳನ್ನೊಳಗೊಂಡ ಬೆಂಗಳೂರು ನಗರದ ಅಭ್ಯರ್ಥಿಗಳ ಪ್ರಚಾರ, ತಂತ್ರಗಾರಿಕೆ, ಮನವೊಲಿಕೆ ಭರದಿಂದ ನಡೆಯುತ್ತಿದೆ. ಚುನಾವಣೆ ವೆಚ್ಚದ ಲೆಕ್ಕ ಕೊಡಬೇಕಿರುವ ಕಾರಣ, ಕಟೌಟ್‌, ಫ್ಲೆಕ್ಸ್‌ , ಪಕ್ಷಗಳ ಚಿನ್ಹೆಗಳ ಬಂಟಿಂಗ್ಸ್‌ ಕಣ್ಣಗೆ ರಾಚುವಂತೆ ಕಾಣಿಸದಿದ್ದರೂ, ಅಭ್ಯರ್ಥಿಗಳು ಉರಿಯತ್ತಿರುವ ಸೂರ್ಯನನ್ನು ಲೆಕ್ಕಿಸದೆ, ಬೀದಿಬೀದಿ ಸವೆಸುತ್ತಿದ್ದಾರೆ. “ಇನ್ನೆರಡು ದಿನವಷ್ಟೇ ನಂತರ ಅವರನ್ನು ಕಾಣುವುದು ಐದು ವರ್ಷದ ನಂತರವೇ ಎನ್ನುತ್ತಾರೆ”, ರಾಜಾಜಿನಗರದ ಬೇಕರಿ ಮಾಲೀಕ ಚೆನ್ನಕೇಶವ ಐಯ್ಯಂಗಾರ್.‌

ಚುನಾವಣೆಯ ಬಣ್ಣ, ವಾಸನೆ ಕಂಡುಕೊಳ್ಳಲು ಬೀದಿಗಿಳಿದರೆ, ಕಾಣುವ ಚಿತ್ರ ಒಂದು ರೀತಿಯಲ್ಲಿ ಚುನಾವಣೆ ನಡೆಯುತ್ತಿರುವುದನ್ನು ಸೂಚಿಸುತ್ತದೆ. ಕುಡಿಯುವ ನೀರಿನ ಬರ, ಬಿಸಿಲಿಗೆ ಕಾದ ಹೆಂಚಾಗಿರುವ ರಸ್ತೆಗಳ ಕಣ್ಣಿಗೆ ರಾಚುವಂತಿದ್ದರೂ, ಮನೆಯಂಗಳದಿಂದ ಸಮಾಜದ ಅಂಗಳಗಳಾದ, ಹೊಟೆಲ್‌, ದರ್ಶಿನಿ, ಮಾರುಕಟ್ಟೆ, ಮೆಟ್ರೋ, ಬಸ್‌ ನಿಲ್ದಾಣ, ದೇವಸ್ಥಾನ ಎಲ್ಲೆಡೆ ಚುನಾವಣೆಯ ಮಾತು ಕಿವಿಗೆ ಬೀಳುತ್ತದೆ. ಆ ಪಕ್ಷದ ಹಣೆ ಬರಹ ಇಷ್ಟೇ, ಈ ಪಕ್ಷ ಮಾಡಿದ್ದಿಷ್ಟೇ, ಅವರೇನು ಮಾಡಿದ್ದಾರೆ? ಇವರೇನು ಮಾಡಿದ್ದಾರೆ. ಕೊನೆಗೆ ರಾಗಿ ಬೀಸುವುದು ನಮಗೆ ತಪ್ಪಲ್ಲ. ಟ್ಯಾಂಕರ್‌ನಿಂದ ನೀರು ಹೊತ್ತು ತರುವುದು ತಪ್ಪೊಲ್ಲ ಎಂಬ ವೈರಾಗ್ಯದ ಮಾತುಗಳೂ ಕಿವಿಗೆ ಬೀಳುತ್ತವೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಕಾಲಿಟ್ಟರೆ, ಎಂ ಜಿ ರಸ್ತೆ, ಚರ್ಚ್‌ ಸ್ಟ್ರೀಟ್‌, ಶಿವಾಜಿ ನಗರಗಲ್ಲಿ ಐಟಿ ಪಾರ್ಕ್ ನ ಟೆಕ್ಕಿಗಳೂ ಕೂಡ ಈ ವಿಷಯಗಳನ್ನೇ ಮಾತನಾಡುತ್ತಾ, ಇಂಡಿಯನ್ ಕಾಫಿ ಹೌಸ್ ನಲ್ಲಿ ಕಾಫಿ ಹೀರುತ್ತಾ, ಫೆಸ್ಬುಕ್‌, ಇನ್ಸ್ಟಾಗ್ರಾಮ್‌, ಟ್ವಿಟ್ಟರ್‌, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದಾರೆ. “ ಇವರ ಪೋಸ್ಟ್ಗಳಿಂದಲೇ, ಚುನಾವಣೆಯಲ್ಲಿ ಏನಾಗುತ್ತಿದೆ ಎಂಬ ಸ್ಥೂಲ ಚಿತ್ರಣ ನಮಗೆ ಸಿಗುತ್ತದೆ” ಎನ್ನುತ್ತಾರೆ ಬಹುರಾಷ್ಟ್ರೀಯ ಐಟಿ ಕಂಪನಿಯಲ್ಲಿ ಕೆಲಸಮಾಡುವ ಮಂಜುನಾಥ ಕಾರ್ಗಲ್.‌

ಬದಲಾದ ಕ್ಷೇತ್ರದ ಚಹರೆ

ಬೆಂಗಳೂರು ಕೆಂದ್ರ ಲೋಕಸಭಾ ಕ್ಷೇತ್ರ ಒಂದು ಕಾಲದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ. ಈಗ ಕೆಲವು ದಶಕಗಳಿಂದ ಅದರ ಚಹರೆ ಬದಲಾಗಿದೆ. ಒಂದು ಅಧ್ಯಯನದ ಪ್ರಕಾರ ಇಲ್ಲಿ ೫.೫ ಲಕ್ಷದಷ್ಟು ತಮಿಳು ಭಾಷಿಕರು, ೪.೫ ಲಕ್ಷದಷ್ಟು ಅಲ್ಪಸಂಖ್ಯಾತ ಮುಸ್ಲೀಮರು, ೨ ಲಕ್ಷದಷ್ಟು ಕ್ರಿಶ್ಚಿಯನ್ನರು, ಹಾಗೂ ಖಚಿತವಾಗಿ ಸಂಖ್ಯೆ ಹೇಳಲಾಗಷ್ಟು ಮಾರವಾಡಿ ಜನಾಂಗದವರಿದ್ದಾರೆ. ಇಲ್ಲಿನ ವರ್ಗ ಚಿತ್ರಣವೂ ಹಾಗೆಯೇ. ದೊಡ್ಡ ದೊಡ್ಡ ಬಂಗಲೆಗಳ ಪಕ್ಕದಲ್ಲಿಯೇ ಕೊಳಚೆ ಪ್ರದೇಶಗಳೂ ಇವೆ. ನಗರ ಬಡವರು ಹಾಗೂ ಕುಸಿಯುತ್ತಿರುವ ಮೂಲಭೂತ ಸೌಕರ್ಯಗಳು ಇಲ್ಲಿ ಕಣ್ಣಿಗೆ ರಾಚುವ ಚಿತ್ರಗಳು.

ಈ ಕ್ಷೇತ್ರದಡಿ ಬರುವ ವಿಧಾನ ಸಭಾ ಕ್ಷೇತ್ರಗಳೆಂದರೆ; ಸರ್ವಜ್ಞನಗರ, ಸಿ.ವಿ.ರಾಮನ್‌ ನಗರ, ಶಿವಾಜಿ ನಗರ, ಗಾಂಧಿ ನಗರ, ರಾಜಾಜಿ ನಗರ, ಚಾಮರಾಜಪೇಟೆ ಹಾಗೂ ಮಹದೇವಪುರ. ಇಷ್ಟು ಕ್ಷೇತ್ರಗಳ ಪೈಕಿ, ಚಾಮರಾಜಪೇಟೆ ವಿಶಿಷ್ಟವಾದದ್ದು. ಹಳೇ ಬೆಂಗಳೂರಿನಲ್ಲಿ ಮೊದಲು ರೂಪುಗೊಂಡ ಯೋಜಿತ ವಸತಿ ಪ್ರದೇಶವಿದು. ಇದನ್ನು ೧೮೯೨ರಲ್ಲಿ ಯೋಜಿತವಾಗಿ ರೂಪಿಸಿದವರು, ಮೈಸುರು ಅರಸರು. ಈ ಪ್ರದೇಶಕ್ಕೆ ಈಗ ೧೩೨ ವರ್ಷ. ಈ ಎಂಟು ಕ್ಷೇತ್ರಗಳ ಪೈಕಿ ಐದು ಮಂದಿ ಕಾಂಗ್ರೆಸ್‌ ಪಕ್ಷದವರು. ಇಲ್ಲಿನ ಲೋಕಸಭಾ ಸದಸ್ಯ ಹಾಗೂ ಉಳಿದ ಮೂರು ಕ್ಷೇತ್ರಗಳ ಪ್ರತಿನಿಧಿಗಳು ಬಿಜೆಪಿಗೆ ಸೇರಿದವರು.

೨೦೦೮ರಲ್ಲಿ ಕ್ಷೇತ್ರ ಪುನರ್‌ ವಿಂಗಡನೆಯಾದಾಗ ರೂಪುಗೊಂಡದ್ದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ. ಆಗಿನಿಂದಲೂ ಇದು ಬಿಜೆಪಿಯ ಭದ್ರಕೋಟೆ. ಮೂರು ಬಾರಿಯೂ ಇಲ್ಲಿ ಗೆದ್ದು ಬೀಗಿರುವ ಬಿಜೆಪಿ ಪಿ.ಸಿ ಮೋಹನ್‌, ಈಗ ನಾಲ್ಕನೇ ಬಾರಿಗೆ ಸ್ಪರ್ಧಿಸಿದ್ದಾರೆ. ಮುಸ್ಲೀಮೇತರ ಅಭ್ಯರ್ಥಿಯನ್ನು ಕಾಂಗ್ರೆಸ್‌ ಇಲ್ಲಿ ಕಣಕ್ಕಿಳಿಸಿದ್ದೇ ಇಲ್ಲ, ಈ ಬಾರಿಯೂ ಕಣದಲ್ಲಿರುವವರು, ಮನ್ಸೂರ್‌ ಅಲಿ ಖಾನ್‌. ೨೦೧೯ರಲ್ಲಿ ಈ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಹುಭಾಷಾ ನಟ ಪ್ರಕಾಶ್‌ ರಾಜ್‌ ದಯನೀಯವಾಗಿ ಸೋತಿದ್ದರು.

ಕರ್ನಾಟಕದ ಇತರ ಲೋಕಸಭಾ ಕ್ಷೇತ್ರಗಳಂತೆ, ಇಲ್ಲಿಯೂ ಕಾಣಬರುವುದು; ಮೋದಿ ವರ್ಚಸ್ಸು ಹಾಗೂ ಹಿಂದತ್ವ ಮತ್ತು ಕಾಂಗ್ರೆಸ್‌ ಗ್ಯಾರಂಟಿಗಳ ನಡುವಿನ ಹೋರಾಟ. ಜೊತೆಯಲ್ಲಿ, ಕೇಂದ್ರ ರಾಜ್ಯಕ್ಕೆ ತೋರಿಸುತ್ತಿರುವ ನಿರ್ಲಕ್ಷ್ಯ ಈ ಕ್ಷೇತ್ರದಲ್ಲಿ ಚರ್ಚೆಯಾಗುತ್ತಿರುವ ಪ್ರಮುಖ ಸಂಗತಿಗಳು.

ಮೂರು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಕ್ಷೇತ್ರದ ಪ್ರತಿನಿಧಿ ಪಿ.ಸಿ ಮೊಹನ್‌ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅವರನ್ನು ಭೇಟಿ ಮಾಡುವುದೇ ಕಷ್ಟ ಎನ್ನುವುದು ಕ್ಷೇತ್ರದ ಜನರ ಆಕ್ಷೇಪ. ಇದೊಂದು ರೀತಿಯಲ್ಲಿ ಅವರ ವಿರುದ್ಧ ಪ್ರತಿಫಲಿಸುವ ಸಾಧ್ಯತೆಗಳು ದಟ್ಟವಾಗಿವೆ. ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್‌ ಅಲಿ ಖಾನ್‌ ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳ ಮೇಲೆ ಬಿಜೆಪಿಯನ್ನು ಎದುರಿಸಿ ನಿಂತಿದ್ದಾರೆ. ಈ ಕ್ಷೇತ್ರದಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್‌ ಎಂಎಲ್‌ ಎ ಗಳಿರುವುದು, ಮನ್ಸೂರ್‌ ಅಲಿ ಖಾನ್‌ಗೆ ಲಾಭವಾಗುವ ಸಾಧ್ಯತೆಗಳಿದೆ ಎನ್ನಲಾಗುತ್ತಿದೆ. ಹಾಗೆ ನೋಡಿದರೆ, ಮನ್ಸೂರ್‌ ಅಲಿ ಖಾನ್‌ ರಾಜ್ಯದ ಲೋಕಸಭಾ ಚುನಾವಣಾ ಕಣದಲ್ಲಿರುವ ಏಕೈಕ ಮುಸ್ಲೀಂ ಅಭ್ಯರ್ಥಿ. ಕಾಂಗ್ರೆಸ್‌ ಮನ್ಸೂರ್‌ ಅಲಿ ಖಾನ್‌ ಅವರನ್ನು ಕಣಕ್ಕಿಳಿಸುವ ಮುನ್ನ ಬಹುಜನೀಯ ಹಿಂದೂ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಕಾಂಗ್ರೆಸ್ ನಲ್ಲಿ ಒತ್ತಡವಿತ್ತು. ಆದರೆ, ತಾತ್ವಿಕ ಕಾರಣಗಳಿಗಾಗಿ ಕಾಂಗ್ರೆಸ್‌ ಮನ್ಸೂರ್‌ ಅಲಿ ಖಾನ್‌ ಅವರಿಗೆ ಮಣೆ ಹಾಕಿತು. ಇದರಿಂದಾಗಿ ಹಿಂದೂ ಮತಗಳ ಕ್ರೂಢೀಕರಣ ಸಾಧ್ಯ ಎನ್ನುವುದು ಬಿಜೆಪಿಯ ಲೆಕ್ಕಾಚಾರ.

ಆದರೆ ಕಾಂಗ್ರೆಸ್‌ ಲೆಕ್ಕಾಚಾರವೇ ಬೇರೆ. ೨೦೧೯ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋತಿದ್ದು, ಕೇವಲ ೭೦೯೬೮ ಮತಗಳಿಂದ. ಇದನ್ನು ಸರಿಪಡಿಸಿಕೊಳ್ಳುವುದು ಈ ಬಾರಿ ಸುಲಭ ಏಕೆಂದರೆ, ಈ ಬಾರಿ ನಮ್ಮ ಬಳಿ ಐದು ವಿಧಾನ ಸಭಾ ಕ್ಷೇತ್ರಗಳಿವೆ ಎನ್ನುತ್ತಾರೆ ಮನ್ಸೂರ್‌ ಅಲಿ ಖಾನ್.‌ ಮನ್ಸೂರ್‌ ಅಲಿ ಖಾನ್ ಬಳಿ ಹೇಳಿಕೊಳ್ಳೂವಂಥ ವಿಷಯಗಳೇನಿಲ್ಲ. ಆದರೆ, ಬೆಂಗಳೂರು ಕೇಂದ್ರ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿಸುವುದು ನನ್ನ ಗುರಿ ಎಂದು ಅವರು ಹೇಳುತ್ತಾರೆ. ಹದಿನೈದು ವರ್ಷದ ಸಾಧನೆ ಹಾಗೂ ಮೋದಿ ಅಭಿವೃದ್ಧಿ, ಗ್ಯಾರಂಟೀ, ಹಿಂದುತ್ವ ನನಗೆ ಶ್ರೀರಕ್ಷೆ ಎನ್ನುತ್ತಾರೆ ಪಿ.ಸಿ. ಮೋಹನ್.‌

ಈ ಕ್ಷೇತ್ರದಲ್ಲಿ ಒಮ್ಮೆ ಸುತ್ತಿ ಬಂದಾಗ ಚಾಮರಾಜಪೇಟೆಯ ಸಿಗರೇಟ್‌ ಮಾರಾಟ ಮಾಡುವ ಚಂಪಕ್ ಲಾಲ್‌ ಹರಿಚಂದ್‌ ಮಾತುಗಳು ಅರ್ಥಪೂರ್ಣವಾಗಿ ಕೇಳಿಸುತ್ತದೆ. ಹರಿಚಂದ್‌ ಮಾತಗಳಿವು.“೯೦ರ ದಶಕದಲ್ಲಿ ಶಾರೂಖ್‌ ಖಾನ್‌ ಪೆಪ್ಸಿ ಕುಡಿಯುತ್ತಿದ್ದರು. ಸಲ್ಮಾನ್‌ ಖಾನ್‌ ಥಮ್ಸ್‌ ಅಪ್‌ ಗುಟುಕರಿಸುತ್ತಿದ್ದರು. ಅದು ಅವರವರ ಖಾಯಿಷ್.‌ ಇಷ್ಟ. ದುಡ್ಡು ಕೊಟ್ಟ ಪಾನೀಯದ ಮಾಲೀಕನ ಪರವಾಗಿ ಅವರು ಜಾಹೀರಾತಿನಲ್ಲಿ ಪೆಪ್ಸಿ, ಥಮ್ಸ್‌ ಅಪ್‌ ಕುಡಿದಂತೆ ನಟಿಸುತ್ತಿದ್ದರು. ಇಂದು, ಸಲ್ಮಾನ್‌ ಪೆಪ್ಸಿ ಕುಡಿಯುತ್ತಿದ್ದಾರೆ, ಶಾರೂಖ್‌ ಖಾನ್‌ ಥಮ್ಸ್‌ ಅಪ್‌ ಅಷ್ಟೇ ವ್ಯತ್ಯಾಸ. ಯಾರು ಏನು ಬೇಕಾದರೂ ಕುಡಿಯಬಹುದೆನ್ನುವ ಅರಾಜಕ ಸ್ಥಿತಿ ಇದು. ಪಕ್ಷಗಳು ಅದೇ ಪಾನೀಯಗಳನ್ನು ಬಾಟಲಿ ಬದಲಿಸಿಕೊಂಡು ಮಾರುತ್ತಿವೆ”

ಈ ಮಾತುಗಳು ರಾಜಕೀಯ ಪಕ್ಷಗಳ, ಮತದಾರರ ಮನಸ್ಸಿನ ಒಳನೋಟವೊಂದನ್ನು ನೀಡುತ್ತದೆ ಎಂದರೆ ತಪ್ಪಾಗಲಾರದು.

Tags:    

Similar News