The Federal Reality Check |ಒಳ ಮೀಸಲಾತಿ ಸಮೀಕ್ಷೆಯಿಂದ ಕಳಚಿತು ಸಮ ಸಮಾಜದ ಮುಖವಾಡ

ಎಲ್ಲ ಸಮುದಾಯ, ಸಂಸ್ಕೃತಿ, ರೀತಿ-ರಿವಾಜು ಒಳಗೊಂಡಿರುವ ರಾಜಧಾನಿಯಲ್ಲಿ ಪರಿಶಿಷ್ಟ ಜಾತಿಗಳ ಆಂತರಿಕ ಸಮೀಕ್ಷೆ ಯಶ ಸಾಧಿಸಿಲ್ಲ. ಅವಮಾನ, ಕೀಳರಿಮೆಯಿಂದ ಹಲವರು ಸಮೀಕ್ಷೆಯಲ್ಲಿ ಭಾಗವಹಿಸಿಲ್ಲ!;

Update: 2025-07-05 03:53 GMT

ಘಟನೆ-1: ಬೆಂಗಳೂರಿನ ಅಪಾರ್ಟ್ ಮೆಂಟ್ ಒಂದರಲ್ಲಿ ಕೆಲ ತಿಂಗಳ ಹಿಂದೆ ಮೇಲ್ಜಾತಿಯ ಮಹಿಳೆಯೊಬ್ಬರು ದಲಿತ ಮಹಿಳೆಯೊಂದಿಗೆ ಗಲಾಟೆ ಮಾಡಿದ್ದರು. ಗಲಾಟೆಗೆ ಕಾರಣ ನೆರೆಮನೆಯ ಮಹಿಳೆ ದಲಿತ ಸಮುದಾಯಕ್ಕೆ ಸೇರಿದವರು ಎಂಬುದು. ಮಹಿಳೆ ದಲಿತೆ ಎಂಬುದು ತಿಳಿದ ಬಳಿಕ ಈ ಗಲಾಟೆ ನಡೆದಿದ್ದರಿಂದ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಘಟನೆ-2: ಬೆಂಗಳೂರಿನ ನಾಗದೇನಹಳ್ಳಿಯಲ್ಲಿ ಮನೆ ಬಾಡಿಗೆಗೆ ಪಡೆದು ವಾಸವಾಗಿದ್ದ ದಲಿತ ಕುಟುಂಬ ಆರಂಭದಲ್ಲಿ ಎಲ್ಲರೊಂದಿಗೆ ಅನ್ಯೋನ್ಯವಾಗಿತ್ತು. ಕುಟುಂಬದ ಮಹಿಳೆ ನೆರೆಹೊರೆಯ‌ ಮಹಿಳೆಯರೊಂದಿಗೆ ಮಾತನಾಡುವಾಗ ಜಾತಿಯ ಪ್ರಸ್ತಾಪವಾಗಿತ್ತು. ಬಾಡಿಗೆ ಮನೆಯ ಕುಟುಂಬ ದಲಿತರು ಎಂಬುದು ಗೊತ್ತಾಗುತ್ತಿದ್ದಂತೆ ನೆರೆಯವರ ಅನ್ಯೋನ್ಯತೆ ದಿಢೀರ್ ಕಡಿಮೆಯಾಯಿತು. ದಲಿತ ಮಹಿಳೆಯ ಜೊತೆ ಮಾತು ನಿಲ್ಲಿಸಿದರು.

ಘಟನೆ -3: ಬೆಂಗಳೂರಿನ ಜಯನಗರ ವ್ಯಾಪ್ತಿಯ ಬ್ಯಾಂಕ್‌ ನೌಕರರ ಬಡಾವಣೆಯಲ್ಲಿ ಇತ್ತೀಚೆಗೆ ಒಳ ಮೀಸಲಾತಿ ಸಮೀಕ್ಷೆಗೆ ಗಣತಿದಾರರು ಮುಂದಾದಾಗ ಮನೆ ಮಾಲೀಕರೇ ಹೊರಬಂದು, 'ಇಲ್ಲಿ ಯಾರೂ ದಲಿತರಿಲ್ಲ' ಎಂದು ಹೇಳಿದ್ದರು. ಇದೇ ಬಡಾವಣೆಯ ಕೆಲ ಅಪಾರ್ಟ್‌ಮೆಂಟ್‌ಗಳ ಆವರಣ ಪ್ರವೇಶಿಸಲು ಗಣತಿದಾರರಿಗೆ ಭದ್ರತಾ ಸಿಬ್ಬಂದಿ ಅವಕಾಶ ನೀಡಿರಲಿಲ್ಲ. ಪರಿಶಿಷ್ಟರಲ್ಲದವರ ಮಾಹಿತಿ ಬೇಕೆಂದರೂ ಗಣತಿದಾರರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಆಗ ಗಣತಿದಾರರು, ಬಡಾವಣೆಯಿಂದ ಹೊರಬಂದು ಸಮೀಕ್ಷೆ ನಡೆಸುತ್ತಿದ್ದಾಗ ಸ್ಕೂಟರ್‌ನಲ್ಲಿ ಬಂದ ದಲಿತ ಮಹಿಳೆ ಗಣತಿದಾರರಿಗೆ ಮಾಹಿತಿ ನೀಡಿದ್ದರು.

 ಮೂರು ಘಟನೆಗಳು ನಡೆದಿರುವುದು "ಎಲ್ಲ ಸಮುದಾಯ, ಸಂಸ್ಕೃತಿ, ಆಚರಣೆ, ರೀತಿ-ರಿವಾಜು, ಸ್ವೇಚ್ಛತೆ ಒಳಗೊಂಡಿರುವ ರಾಜಧಾನಿ ಬೆಂಗಳೂರಿನಲ್ಲಿ. ಸಿಲಿಕಾನ್‌ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಇಂದಿಗೂ ಜಾತಿಯ ಪೆಡಂಭೂತ ತನ್ನ ಕಬಂಧಬಾಹುಗಳನ್ನು ಚಾಚಿಕೊಂಡಿದೆ. ಆ ಮೂಲಕ ಸಂವಿಧಾನ ಬಯಸಿದ ಸಮ ಸಮಾಜದ ಶ್ರೇಷ್ಠ ಆಶಯ‌ಗಳಿಗೆ ಜಾತಿಯ ಜಾಡ್ಯ ತಣ್ಣೀರು ಎರಚಿದೆ.

ಒಟ್ಟಾರೆಯಾಗಿ, ಮೇಲ್ವರ್ಗದ ನೆರೆಹೊರೆಯವರ ಅವಗಣನೆಗೆ ಈಡಾಬೇಕಾದೀತು ಎಂಬ ಭಾವನೆ, ಆರ್ಥಿಕವಾಗಿ ʼಸಮಬಲʼರಾಗಿದ್ದರೂ, ಜಾತಿಯ ಕಾರಣಕ್ಕೆ ʼಇರುವ ಗೌರವʼ ಕಡಿಮೆಯಾದೀತು ಎಂಬ ಹಿಂಜರಿಕೆ; ವಸತಿ ಸಮುಚ್ಚಯಗಳಲ್ಲಿ, ಲೇಔಟ್‌ಗಳಲ್ಲಿ, ಜನವಸತಿ ಪ್ರದೇಶಗಳಲ್ಲಿ ಎಲ್ಲರ ಮಕ್ಕಳ ಜತೆ ʼಎಲ್ಲರಳೊಂದಾಗಿʼ ತಮ್ಮ ಮಕ್ಕಳೂ ಶಾಲೆ, ಕಾಲೇಜುಗಳಿಗೆ ಹೋಗುತ್ತಿದ್ದು,  ಆ ಮಕ್ಕಳಿಗೂ ʼಜಾತಿಯʼ ಕಾರಣಕ್ಕೆ ʼಜಾತಿಯ ಭೂತʼ ತೊಂದರೆ ಮಾಡೀತು ಎನ್ನುವ ಅಂಜಿಕೆ; ಹಲವು ಬಾರಿ ಅಲ್ಲಲ್ಲಿ ಆಂತರಿಕ ಸಮೀಕ್ಷೆ ವೇಳೆ ಇವರು ಯಾವ ಜಾತಿ ಎಂದು ಗೊತ್ತಾಗದ ಬಳಿಕ ನಡೆದ ಅವಮಾನಕಾರಿ ಘಟನೆಗಳಿಂದಾಗಿ ಮತ್ತಷ್ಟು ಮುದುಡಿದ ಮನಸ್ಸು; ಇನ್ನೂ ಕೆಲವು ಬಾರಿ ತಾವೇ ಅವಮಾನಕ್ಕೆ ಒಳಗಾಗಿ ಎದುರಿಸಲೂ ಆಗದೆ, ಸುಮ್ಮನಿರಲೂ ಆಗದೆ ಇರುವ ತ್ರಿಶಂಕು ಸ್ಥಿತಿ... ಹೀಗೆ, ಒಂದೇ.. ಎರಡೇ... ಹಲವು ಘಟನೆಗಳು....

ಜತೆಗೆ ಶತಮಾನಗಳಿಂದ ಅಸ್ಪೃಶ್ಯತೆಯ ಸಾಮಾಜಿಕ ಪಿಡುಗು, ಅದರಿಂದಾದ ಅನ್ಯಾಯ, ಅವಮಾನಗಳ ದಾಳಿ.. ʼಸಮ ಸಮಾಜʼ ಎನ್ನುವ  ಸಂವಿಧಾನಬದ್ಧವಾದ ಹಕ್ಕುಗಳ ನಡುವೆ ಬದುಕುತ್ತಿದ್ದರೂ, ಜಾತಿಕಾರಣ ಇನ್ನೂ ತನ್ನ ಪ್ರಭಾವಳಿಯನ್ನು ಮುಂದುವರಿಸಿಕೊಂಡು ಬಂದಿರುವುದೇ "ಆಂತರಿಕ ಸಮೀಕ್ಷೆʼ ಸಮಯದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಹಿಂಜರಿಯುತ್ತಿರುವುದಕ್ಕೆ ಕಾರಣ ಇರಬಹುದು ಎಂದು ವಿಶ್ಲೇಷಿಸಬಹುದು.

ಉನ್ನತ ಶಿಕ್ಷಣ ಪಡೆದ, ಸಾಮಾಜಿಕ ಶ್ರೇಣಿಕೃತ ವ್ಯವಸ್ಥೆ ನೈಜತೆಯ ಅರಿವಿರುವ ದಲಿತರೇತರರೂ ಕೂಡ ಜಾತಿ ಅಮಲಿನಲ್ಲಿ ಮುಳುಗಿರುವುದು ಹೊಸತೇನಲ್ಲ. ಇದೇ ಕಾರಣದಿಂದ ದಲಿತರು ಆರ್ಥಿಕವಾಗಿ ಎಷ್ಟೇ ಸಶಕ್ತರಾದರೂ ಸಾಮಾಜಿಕವಾಗಿ ಜಾತಿ ಸಂಕೋಲೆಯಲ್ಲಿ ಸಿಲುಕಿದ್ದಾರೆ ಎಂದು ಜಾತಿ ಸಮೀಕ್ಷೆ ಬಳಿಕ ತಮ್ಮ ಜಾತಿ ಗೊತ್ತಾಗಿ ನೆರೆಹೊರೆಯಿಂದ ಅವಮಾನಕ್ಕೆ ಒಳಗಾದ  ಚಂದ್ರಶೇಖರ್‌ (ಹೆಸರು ಬದಲಿಸಲಾಗಿದೆ) ದ ಫೆಡೆರಲ್‌ ಕರ್ನಾಟಕಕ್ಕೆ ನೇರವಾಗಿ ಹೇಳಿದ್ದಾರೆ.

ನಗರೀಕರಣದಿಂದ ಕೇವಲ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳು ಬದಲಾದರೂ ಜಾತಿ ತಾರತಮ್ಯ ಮಾತ್ರ ನಿಂತ ನೀರಿನಂತಿದೆ. ಇದರಿಂದ ನಗರ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡ ದಲಿತ ಸಮುದಾಯವು ಜಾತಿ ಹೇಳಿಕೊಳ್ಳಲು ಹಿಂಜರಿಯುವ ಪರಿಸ್ಥಿತಿ ಇದೆ. ಇದಕ್ಕೆ ಸಾಮಾಜಿಕ ವ್ಯವಸ್ಥೆ, ಜಾತಿ ನೆಲೆಗಟ್ಟಿನ ಜನರ ಮನಸ್ಥಿತಿಯೇ ಪ್ರಮುಖ ಕಾರಣ.

ಸಮೀಕ್ಷೆಯಿಂದ ತಾರತಮ್ಯ ಬಹಿರಂಗ

ಒಳ ಮೀಸಲಾತಿ ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾ.ನಾಗಮೋಹನ್‌ ದಾಸ್‌ ನೇತೃತ್ವದಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಪೂರ್ಣಗೊಂಡಿದೆ. ಆದರೆ, ಬೆಂಗಳೂರಿನಲ್ಲಿ ಸಮೀಕ್ಷೆಯು ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಇದರ ಹಿಂದಿನ ಕಾರಣಗಳು ಶ್ರೇಣೀಕೃತ ಸಮಾಜವನ್ನು ಪ್ರತಿಬಿಂಬಿಸುತ್ತಿರುವುದು ಆತಂಕ ಮೂಡಿಸಿದೆ. 

ಆರು ಬಾರಿ ಸಮೀಕ್ಷೆ ವಿಸ್ತರಣೆಯಾದರೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ ಶೇಕಡಾ 52ರಷ್ಟು ಕುಟುಂಬಗಳು ಮಾತ್ರ ಸಮೀಕ್ಷೆ ಒಳಪಟ್ಟಿವೆ. ಈ ಕುರಿತು ʼದ ಫೆಡರಲ್‌ ಕರ್ನಾಟಕʼ ನಡೆಸಿದ ʼರಿಯಾಲಿಟಿ ಚೆಕ್‌ʼನಲ್ಲಿ ಜಾತಿ ತಾರತಮ್ಯದ ಛಾಯೆ ಆವರಿಸಿರುವುದು ಬೆಳಕಿಗೆ ಬಂದಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 13.62 ಲಕ್ಷ ಪರಿಶಿಷ್ಟ ಜಾತಿಯ ಜನಸಂಖ್ಯೆ ಇದೆ. ಆದರೆ, ಇದುವರೆಗೆ ಸುಮಾರು 7 ಲಕ್ಷ ಜನರ ಮಾಹಿತಿ ಮಾತ್ರ ಸಂಗ್ರಹವಾಗಿದೆ. ಸಮೀಕ್ಷೆಯು ಶೇ 52 ರಷ್ಟು ಕೂಡ ದಾಟದಿರುವುದಕ್ಕೆ ಜಾತಿ ತಾರತಮ್ಯ, ಜಾತಿಯ ಗುಟ್ಟು ರಟ್ಟಾಗುವ ಭೀತಿ, ಹಿಂಜರಿಕೆ ಹಾಗೂ ಕೀಳರಿಮೆಯೇ ಪ್ರಮುಖ ಕಾರಣವಾಗಿದೆ.

"ಬೆಂಗಳೂರಿನ ಥಣಿಸಂದ್ರದಲ್ಲಿ ನಿವೇಶನ ಖರೀದಿಸಿ ಹೊಸದಾಗಿ ಮನೆ ಕಟ್ಟಿದ್ದೇವೆ. ಮನೆ ಕಟ್ಟುವಾಗ, ಗೃಹ ಪ್ರವೇಶ ನೆರವೇರಿಸಿದಾಗ ಎಲ್ಲವೂ, ಎಲ್ಲರೂ ಚೆನ್ನಾಗಿದ್ದರು. ಕಳೆದ ಹದಿನೈದು ದಿನಗಳ ಹಿಂದೆ ಒಳ ಮೀಸಲಾತಿ ಸಮೀಕ್ಷೆಗೆ ಗಣತಿದಾರರು ಬಂದಾಗ ವಿವರ ನೀಡಿದೆವು. ಆದರೆ, ಮರುದಿನದಿಂದ ಬಡಾವಣೆಯ ನೆರೆ ಹೊರೆಯವರು ನಮ್ಮನ್ನು ಮುಖ ಕೊಟ್ಟು ಮಾತನಾಡಿಸಲು ಹಿಂಜರಿದರು. ಆಗಲೇ ನಗರದಲ್ಲೂ ಜಾತಿ ತಾರತಮ್ಯ ಇನ್ನೂ ಜೀವಂತವಾಗಿದೆ ಎಂಬುದು ತಿಳಿಯಿತು. ಬೇರೆ ಬೇರೆ ರಾಜ್ಯಗಳಿಂದಲೂ ಹಿಂದಿ ಭಾಷಿಕ ಪರಿಶಿಷ್ಟರು ಬಂದಿರುತ್ತಾರೆ, ಅವರಿಗೆ ಇರುವ ಗೌರವ ನೆಲಮೂಲದವರಾದ ನಮಗೇ ಸಿಗುತ್ತಿಲ್ಲ" ಎಂದು ಕೋಲಾರ ಮೂಲದ ನಾರಾಯಣಸ್ವಾಮಿ (ಹೆಸರು ಬದಲಿಸಲಾಗಿದೆ) ʼದ ಫೆಡರಲ್‌ ಕರ್ನಾಟಕʼದ ಬಳಿ ಅಸಮಾಧಾನ ತೋಡಿಕೊಂಡರು.

ಘನತೆ ಕುಸಿಯುವ ಆತಂಕ

ಬೆಂಗಳೂರಿನ ಆಧುನಿಕ ಸಂಸ್ಕೃತಿಗೆ ಒಗ್ಗಿಕೊಂಡಿರುವ ಪರಿಶಿಷ್ಟರು ತಮ್ಮ ಜಾತಿಯ ಹೆಸರು ಹೇಳಿಕೊಳ್ಳಲು ಮುಜುಗರಪಡುತ್ತಿದ್ದಾರೆ. ಪರಿಶಿಷ್ಟ ಜಾತಿಯವರು ಎಂಬುದು ನೆರೆಹೊರೆಯವರಿಗೆ ಗೊತ್ತಾದರೆ ಘನತೆಯಿಂದ ಬದುಕುವುದು ಅಸಾಧ್ಯವಾಗಲಿದೆ ಎಂಬ ಆತಂಕ ಹಲವರನ್ನು ಕಾಡುತ್ತಿದೆ. ಪರಿಶಿಷ್ಟ ಜಾತಿಗೆ ಸೇರಿದವರಲ್ಲಿ ಸಾಕಷ್ಟು ಜನರು ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದರೂ ಜಾತಿಯ ವಿಷಯ ಬಂದಾಗ ಹೆದರುವಂತಹ ಪರಿಸ್ಥಿತಿ ಇದೆ.

ಜಾತಿ ತಾರತಮ್ಯಕ್ಕೆ ಅಂಜಿದ ಐಟಿ ಉದ್ಯೋಗಿಗಳು!

ನಾಗಭೂಷಣ್‌ (ಹೆಸರು ಬದಲಿಸಲಾಗಿದೆ), ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಐಟಿ ಸಂಸ್ಥೆಯೊಂದರ ಉದ್ಯೋಗಿ.  ಆ ಸಂಸ್ಥೆಯಲ್ಲಿ ʼಟೀಮ್‌ ಲೀಡರ್‌ʼ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರ. ಸುಮಾರು ಐನೂರು ಮನೆಗಳಿರುವ ವಸತಿ ಸಮುಚ್ಚಯದಲ್ಲಿ ವಾಸವಾಗಿರುವ ಅವರು, ದ ಫೆಡರಲ್‌ ಕರ್ನಾಟಕದ ಜತೆ ಮಾತನಾಡಿ, "ಆಂತರಿಕ ಸಮೀಕ್ಷಾ ತಂಡ ಬಂದಾಗ ನಾನು ಜಾತಿಯನ್ನು ಹೇಳದೆ ತಪ್ಪಿಸಿಕೊಂಡೆ. ನನ್ನ ಮಕ್ಕಳು ನಗರದ ಖ್ಯಾತ ವಿದ್ಯಾ ಸಂಸ್ಥೆಯಲ್ಲಿ ಕಲಿಯುತ್ತಿದ್ದಾರೆ. ನನ್ನ ಪತ್ನಿಯೂ  ಖಾಸಗಿ ಉದ್ಯೋಗಿ. ಅಕ್ಕಪಕ್ಕದವರು ಏನೂ ಹೇಳುತ್ತಿರಲಿಲ್ಲ. ಆದರೂ, ಏನೋ ಹಿಂಜರಿಕೆ..  ನನಗೆ, ಮಕ್ಕಳಿಗೆ  ಅವಮಾನ ಆಗಬಹುದು ಎಂದುಕೊಂಡು ಸಮೀಕ್ಷೆಯಿಂದ ತಪ್ಪಿಸಿಕೊಂಡೆ. ಆದರೆ, ಬಳಿಕ ಆನ್‌ಲೈನ್‌ ಮೂಲಕ ನಾನು ನನ್ನ ಪರಿಶಿಷ್ಟ ಜಾತಿಯನ್ನು ದಾಖಲಿಸಿಕೊಂಡೆ," ಎನ್ನುತ್ತಾರೆ ಅವರು. 


ಅಲ್ಲದೇ ಜಾತಿ ಬಹಿರಂಗವಾದರೆ ಉದ್ಯೋಗ, ವ್ಯವಹಾರಕ್ಕೂ ತೊಂದರೆಯಾಗಲಿದೆ ಎನ್ನುವ ಭೀತಿ ಪರಿಶಿಷ್ಟ ಜಾತಿಯ ಜನರಲ್ಲಿದೆ. ಹಾಗಾಗಿ ಒಳ ಮೀಸಲಾತಿ ಸಮೀಕ್ಷೆಗೆ ಒಳಪಡಲು ಹಿಂದೇಟು ಹಾಕಿದ್ದಾರೆ. ಮೀಸಲಾತಿ ಪಡೆದು ಉನ್ನತ ಸ್ಥಾನಕ್ಕೇರಿದವರು ಕೂಡ ಈ ವಿಷಯದಲ್ಲಿ ಹಿಂದಡಿ ಇಡುತ್ತಿದ್ದಾರೆ. ಸಮೀಕ್ಷೆಯ ಕುರಿತು ಅರಿವು ಮೂಡಿಸಲು ಪ್ರಯತ್ನಿಸಿದರೂ ಕೆಲವರು ಮಾಹಿತಿ ಹಂಚಿಕೊಳ್ಳುತ್ತಿಲ್ಲ ಎಂದು ಸಮೀಕ್ಷೆಗೆ ನಿಯೋಜನೆಗೊಂಡಿದ್ದ ಅಧಿಕಾರಿಯೊಬ್ಬರು 'ದ ಫೆಡರಲ್‌ ಕರ್ನಾಟಕ'ಕ್ಕೆ ತಿಳಿಸಿದರು. 

ಜಾತಿ ನಿಂದನೆಯ ಭೀತಿ

ಬೆಂಗಳೂರಿನಲ್ಲಿ ಇತರೆ ಸಮುದಾಯಗಳೊಂದಿಗೆ ದಲಿತ ಸಮುದಾಯದವರು ಕೂಡ ಸ್ಪರ್ಧಾತ್ಮಕ ಮನೋಭಾವನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ತಮ್ಮ ನೆರೆಹೊರೆಯಲ್ಲಿ ನೆಲೆಸುತ್ತಿರುವವರಿಗೆ ತಮ್ಮ ಜಾತಿಯ ಬಗ್ಗೆ ಮಾಹಿತಿ ಇರುವುದಿಲ್ಲ. ಒಂದು ವೇಳೆ ಸಮೀಕ್ಷೆಯಿಂದಾಗಿ ತಮ್ಮ ಜಾತಿ ಬಹಿರಂಗವಾದರೆ ಈ ಮೊದಲಿನಂತೆ ಸಿಗುವ ಗೌರವ ದಕ್ಕುವುದಿಲ್ಲ. ಅಲ್ಲದೇ ಜಾತಿ ಹೆಸರಿನಲ್ಲಿ ನಿಂದನೆಯೂ ಹೆಚ್ಚಲಿದೆ ಎಂಬ ಆತಂಕದ ಹಿನ್ನೆಲೆ ಸಮೀಕ್ಷೆಯಲ್ಲಿ ಭಾಗವಹಿಸಲು ಹಿಂದೇಟು ಹಾಕಲಾಗುತ್ತಿದೆ ಎಂದು ಹೇಳಲಾಗಿದೆ.  

ಹೆಚ್ಚಲಿದೆ ಮಾನಸಿಕ ಕಿರುಕುಳ

ಬೆಂಗಳೂರು ನಗರದಲ್ಲಿ ಬಹುತೇಕ ಪರಿಶಿಷ್ಟ ಸಮುದಾಯದವರು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಸಮೀಕ್ಷೆ ನಡೆಸುವ ವೇಳೆ ಗಣತಿದಾರರು ಮನೆಗೆ ಬಂದರೆ ನೆರೆಹೊರೆಯವರಿಗೆ ಜಾತಿಯ ಮಾಹಿತಿ ತಿಳಿಯಲಿದೆ. ಇದರಿಂದ ಸಮಾಜ ನೋಡುವ ದೃಷ್ಟಿಯೇ ಬದಲಾಗಲಿದೆ ಎಂಬುದು ಸಮೀಕ್ಷೆಯ ಹಿನ್ನಡೆಗೆ ಕಾರಣವಾಗಿದೆ.

ಬೆಂಗಳೂರಿನ ಹಲವು ಅಪಾರ್ಟ್‌ಮೆಂಟ್‌ಗಳಲ್ಲಿ ನಮಗೆ ಸಮೀಕ್ಷೆಗೆ ಅವಕಾಶ ನೀಡಿಲ್ಲ. ಪರಿಶಿಷ್ಟ ಜಾತಿಗಳ ಸಮೀಕ್ಷೆ ಎನ್ನುತ್ತಲೇ ಹೊರ ಕಳುಹಿಸಿದ್ದರಿಂದ ಮಾಹಿತಿ ಸಂಗ್ರಹ ಕಷ್ಟವಾಯಿತು. ಆದರೆ, ಈಚೆಗೆ ಹೆಣ್ಣೂರು ಮುಖ್ಯರಸ್ತೆಯಲ್ಲಿರುವ ಅಪಾರ್ಟ್‌ಮೆಂಟಿಗೆ ಹೋದಾಗ ಅಲ್ಲಿನ ವ್ಯವಸ್ಥಾಪಕರು ಹಿಂದೂಗಳು ವಾಸಿಸುತ್ತಿರುವ ಫ್ಲಾಟ್‌ಗಳಿಗೆ ಕರೆದೋಯ್ದರು. ಆದರೆ, ಅಲ್ಲಿ ಪರಿಶಿಷ್ಟರು ಯಾರೂ ಇಲ್ಲದ ಕಾರಣ ವಾಪಸ್‌ ಬಂದೆವು. ಉತ್ತರ ಭಾರತದವರು ನೆಲೆಸಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಈ ರೀತಿಯ ಮುಜುಗರ ಎದುರಿಸಲಿಲ್ಲ ಎಂದು ಗಣತಿ ಕಾರ್ಯ ಕೈಗೊಂಡಿದ್ದ ಶಿಕ್ಷಕಿ ವಿಜಯಲಕ್ಷ್ಮಿ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.   

ಸಮರ್ಪಕವಾಗಿ ನಡೆಯದ ಸಮೀಕ್ಷೆ 

ಗಣತಿ ಸಿಬ್ಬಂದಿಯು ಸಮೀಕ್ಷೆಯನ್ನು ಕೇವಲ ಪರಿಶಿಷ್ಟರ ಕಾಲೊನಿಗಳಲ್ಲಿ ಮಾತ್ರ ನಡೆಸುತ್ತಿದ್ದಾರೆ ಎಂಬ ಅಪವಾದ ಇದೆ. ಎಸ್‌ಸಿ ಕಾಲೊನಿಯಲ್ಲಿ ಗಣತಿ ಮಾಡುವುದು ಸುಲಭ. ಬೇರೆ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ದಲಿತ ಕುಟುಂಬಗಳು ಇದರಿಂದ ವಂಚಿತವಾಗಿವೆ ಎಂಬ ದೂರುಗಳೂ ಕೇಳಿ ಬಂದಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.52ರಷ್ಟು ಮಾತ್ರ ಸಮೀಕ್ಷೆಯಾಗಿದೆ. ಮನೆ ಮನೆಗೆ ಸಮೀಕ್ಷೆಯಲ್ಲಿ ಶೇ.20ರಷ್ಟು ಕುಟುಂಬಗಳ ಮಾಹಿತಿಯಷ್ಟೇ ಸಂಗ್ರಹವಾಗಿದೆ.  ಶಿಕ್ಷಕರ ಅಲಭ್ಯತೆಯಿಂದಾಗಿ ನಾಗರಿಕ ಸೇವಾ ಕೇಂದ್ರಗಳಾದ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳು, ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ ಕಚೇರಿಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭಿಸಿದ್ದರಿಂದ ಮಾತ್ರ ಶೇ 52 ರಷ್ಟು ಪ್ರಗತಿ ಸಾಧಿಸಲು ಸಾಧ್ಯವಾಯಿತು. ಇಲ್ಲವಾಗಿದ್ದರೆ ಬೆಂಗಳೂರು ನಗರದಲ್ಲಿ ಗಣತಿ ಕಷ್ಟವಾಗುತ್ತಿತ್ತು ಎಂದು ಆಯೋಗವೇ ಹೇಳಿತ್ತು. 


ವೈಜ್ಞಾನಿಕವಾಗಿ ನಡೆಯದ ಸಮೀಕ್ಷೆ?

ರಾಜ್ಯ ಸರ್ಕಾರವು ನ್ಯಾ. ನಾಗಮೋಹನದಾಸ್‌ ನೇತೃತ್ವದಲ್ಲಿ ನಡೆಸಿದ ಒಳಮೀಸಲಾತಿ ಸಮೀಕ್ಷೆ ವೈಜ್ಞಾನಿಕವಾಗಿ ನಡೆದಿಲ್ಲ. ಮೂಗಿಗೆ ತುಪ್ಪ ಸವರುವಂತೆ ಬೇಕಾಬಿಟ್ಟಿ ಸಮೀಕ್ಷೆ ನಡೆಸಲಾಗಿದೆ. ಹಾಗಾಗಿಯೇ ಬೆಂಗಳೂರಿನಲ್ಲಿ ಕಡಿಮೆ ಸಮೀಕ್ಷೆ ದಾಖಲಾಗಿದೆ ಎಂದು ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಕೆ. ಶಿವಶಂಕರಪ್ಪ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಒಳಮೀಸಲಾತಿಯು ಸಮುದಾಯವನ್ನು ಒಗ್ಗೂಡಿಸಬೇಕಾಗಿತ್ತು. ಆದರೆ, ಒಡೆದಾಳುವ ನೀತಿ ಅನುಸರಿಸುತ್ತಿದೆ. ಇದು ರಾಜಕೀಯವಾಗಿಯೂ ದುರ್ಬಳಕೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಒಳಮೀಸಲಾತಿ ಸಮೀಕ್ಷೆ ಪ್ರತಿಶತ ವೈಜ್ಞಾನಿಕವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.  

ಸಾಮಾಜಿಕ ವ್ಯವಸ್ಥೆಯಿಂದ ಹಿನ್ನಡೆ 

ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿಯವರು ಮಾಹಿತಿ ನೀಡಲು ಹಿಂದೇಟು ಹಾಕಿದ ಪರಿಣಾಮ ಸಮೀಕ್ಷೆ ಶೇಕಡಾ ನೂರರಷ್ಟು ಯಶಸ್ವಿಯಾಗಿಲ್ಲ. ಜಾತಿ ಗೊತ್ತಾದರೆ ಬಾಡಿಗೆ ಮನೆ ಸಿಗದಿರುವುದು, ದಲಿತರನ್ನು ನೋಡುವ ದೃಷ್ಟಿಕೋನ ಸೇರಿದಂತೆ ನಾನಾ ಕಾರಣಗಳಿಂದಾಗಿ ಸಮೀಕ್ಷೆ ಪ್ರಮಾಣ ಕಡಿಮೆಯಾಗಿದೆ.  ಅಲ್ಲದೇ, ದಲಿತರ ಕಾಲೊನಿಯಲ್ಲಿಯೂ ಸಮುದಾಯದ ಜನಸಂಖ್ಯೆ ಕಡಿಮೆಯಾಗುತ್ತಿದೆ. ಸಮುದಾಯದಲ್ಲಿ ಉನ್ನತ ಶಿಕ್ಷಣ ಪಡೆದು ಬೇರೆಡೆಗೆ ತೆರಳಿದವರು ಹಳ್ಳಿಗಳಲ್ಲಿ ಸಮೀಕ್ಷೆಗೆ ಒಳಪಟ್ಟಿಲ್ಲ. ನಗರದಲ್ಲಿ ತಮ್ಮ ಜಾತಿಯ ಬಗ್ಗೆ ಮುಕ್ತ ಮನಸ್ಸಿನಿಂದ ಹೇಳಿಕೊಳ್ಳಲಾಗದೇ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ ಎಂದು ದಲಿತ ಮುಖಂಡ ಮಾವಳ್ಳಿ ಶಂಕರ್‌ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು. 

ಅಸಮಾನತೆ ಭೀತಿಯೂ ಕಾರಣ 

ಒಳಮೀಸಲಾತಿ ಸಮೀಕ್ಷೆಗೆ ಮಾಹಿತಿ ನೀಡಲು ನಗರ ಪ್ರದೇಶದಲ್ಲಿ ಪರಿಶಿಷ್ಟರು ಹಿಂದೇಟು ಹಾಕಿರುವುದು ಪ್ರಮುಖ ಕಾರಣ ಸಮಾಜದಲ್ಲಿ ಬೇರೂರಿರುವ ಅಸಮಾನತೆಯೇ ಕಾರಣ. ಸಮಾಜ ಮುಂದುವರಿದಿದೆ ಎಂಬುದಾಗಿ ನಾವೆಲ್ಲರೂ ಭಾವಿಸಿದ್ದೇವೆ. ಆದರೆ, ವಾಸ್ತವವಾಗಿ ಅದು ಸಾಧ್ಯವಾಗಿಲ್ಲ ಎಂದು ಮನಃಶಾಸ್ತ್ರಜ್ಞ ಕೆ. ಶ್ರೀಧರ್‌ ಮೂರ್ತಿ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಸಂವಿಧಾನಾತ್ಮಕವಾಗಿ ಸೌಲಭ್ಯ ಪಡೆದುಕೊಂಡಿರುವುದರಿಂದ ಪರಿಶಿಷ್ಟ ಜಾತಿಯವರು ಸಮಾನ ಸ್ಪರ್ಧಿಗಳು ಎಂದು ಅನ್ಯ ಸಮುದಾಯದವರು ಭಾವಿಸುತ್ತಾರೆ. ಆದರೆ, ಅಂತರಂಗದಲ್ಲಿ ಜಾತಿ ತಾರತಮ್ಯ, ಅಸಮಾನತೆ ಇದ್ದೇ ಇರುತ್ತದೆ. ಜಾತಿ ಗೊತ್ತಾದರೆ ಸಮಾನತೆ ಸಿಗುವುದಿಲ್ಲ ಎಂಬ ಭಾವನೆಯೂ ಕೆಲವರು ಸಮೀಕ್ಷೆಯಿಂದ ಹೊರಗುಳಿಯಲು ಕಾರಣವಾಗಿದೆ ಎಂದು ಹೇಳಿದರು.

ಆಯೋಗದ ಅವಧಿ ಮತ್ತಷ್ಟು ಮುಂದೂಡಿಕೆ?

ಒಳ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ನ್ಯಾ.ನಾಗಮೋಹನ್‌ದಾಸ್‌ ಅವರು ಕೈಗೊಂಡಿರುವ ಸಮೀಕ್ಷೆ ಮುಗಿದರೂ ಆಯೋಗದ ಅವಧಿ ಜು.30 ರವರೆಗೆ ವಿಸ್ತರಣೆಯಾಗಿದೆ. ಆಯೋಗದ ಅವಧಿಯನ್ನು ಮತ್ತೆ ಮುಂದೂಡಲು ಇಚ್ಛಿಸುವುದಿಲ್ಲ ಎಂದು ಹೇಳಿದರೂ ಸಮೀಕ್ಷೆಯ ಮಾಹಿತಿ ವಿಶ್ಲೇಷಣೆಗೆ ಇನ್ನಷ್ಟು ಸಮಯ ಅಗತ್ಯವಿದ್ದು, ಆಯೋಗದ ಅವಧಿ ಇನ್ನಷ್ಟು ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ 101 ಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು ವೈಜ್ಞಾನಿಕ ದತ್ತಾಂಶ ಸಂಗ್ರಹಿಸಲು ಮೇ 5ರಿಂದ ಮನೆ ಮನೆ ಭೇಟಿ, ವಿಶೇಷ ಶಿಬಿರ ಹಾಗೂ ಆನ್‌ಲೈನ್‌ ಮಾಹಿತಿ ಸಂಗ್ರಹದ ಮೂಲಕ ಸಮೀಕ್ಷಾ ಕಾರ್ಯ ಜೂ.30 ಕ್ಕೆ ಪೂರ್ಣಗೊಳಿಸಲಾಗಿದೆ. ಆದರೆ, ಅಂಕಿ ಅಂಶಗಳ ಮಾಹಿತಿ ವಿಶ್ಲೇಷಣೆಗಾಗಿ ಆಯೋಗದ ಅವಧಿ ಇನ್ನೂ ಒಂದು ತಿಂಗಳ ಕಾಲ ವಿಸ್ತರಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.

(ಈ ಸರಣಿ ಮುಂದುವರಿಯಲಿದೆ. ನಾಳೆ ಒಳಮೀಸಲಾತಿ ಸಮೀಕ್ಷೆ| ಸಮೀಕ್ಷೆ ಸ್ಟಿಕ್ಕರ್‌ ಸೃಷ್ಟಿಸಿದ ಗೊಂದಲ, ಬಿಬಿಎಂಪಿ ಅವೈಜ್ಞಾನಿಕ ಕ್ರಮಕ್ಕೆ ಕಟು ಟೀಕೆ ಪ್ರಕಟವಾಗಲಿದೆ)

Tags:    

Similar News