ಧಾರವಾಡದಲ್ಲಿ ಬ್ರಾಹ್ಮಣ V/s ಲಿಂಗಾಯತ ದಂಗಲ್? ಜೋಶಿಗೆ ದಂಗುಬಡಿಸಿದ ದಿಂಗಾಲೇಶ್ವರ ಸ್ವಾಮೀಜಿ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಲ್ಹಾದ ಜೋಶಿ ಸ್ಪರ್ಧಿಸಬಾರದು ಎಂದು ದಿಂಗಾಲೇಶ್ವರ ಸ್ವಾಮೀಜಿ ಬಂಡಾಯ ಸಾರಿದ್ದಾರೆ. ಪ್ರಲ್ಹಾದ ಜೋಶಿ ಅವರಿಗೆ ಅಧಿಕಾರ ಮತ್ತು ಹಣದ ಮದ ಏರಿದೆ. ಪಾಳೆಗಾರಿಕೆ ಪ್ರವೃತ್ತಿಯನ್ನು ಸಾಧಿಸುತ್ತಿದ್ದಾರೆ. ಅವರನ್ನು ಬದಲಾಯಿಸಿ ಬಿಜೆಪಿ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದಿರುವ ಸ್ವಾಮೀಜಿ, ಅಭ್ಯರ್ಥಿಯನ್ನು ಬದಲಾಯಿಸಲು ಬಿಜೆಪಿ ಹೈಕಮಾಂಡ್‌ಗೆ 31ರವರೆಗೆ ಗಡುವು ನೀಡಿದ್ದಾರೆ.;

Update: 2024-03-30 00:40 GMT

ಧಾರವಾಡ ಲೋಕಸಭಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕ್ಷೇತ್ರದಲ್ಲಿ ಬ್ರಾಹ್ಮಣ V/s ಲಿಂಗಾಯತ ಸಮುದಾಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಕೆಲವು ದಿನಗಳ ಹಿಂದೆ ಲಿಂಗಾಯತ ಸಮುದಾಯದ ನಾಯಕ ಜಗದೀಶ್‌ ಶೆಟ್ಟರ್‌ ಅವರನ್ನು ನೇಪಥ್ಯಕ್ಕೆ ಸರಿಸುವ ಯತ್ನ ನಡೆಸಲಾಗಿತ್ತು. ಇದೀಗ, ಬ್ರಾಹ್ಮಣ ಸಮುದಾಯದ ಪ್ರಲ್ಹಾದ ಜೋಶಿ ಅವರನ್ನು ಸೋಲಿಸಲು ಲಿಂಗಾಯತರು ಒಗ್ಗೂಡುತ್ತಿರುವ ಲಕ್ಷಣ ಗೋಚರಿಸುತ್ತಿದೆ. 

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸತತ ಐದನೇ ಬಾರಿ ಬಿಜೆಪಿಯಿಂದ ಚುನಾವಣಾ ಕಣದಲ್ಲಿದ್ದಾರೆ. ಅವರಿಗೆ ಚುನಾವಣೆಯಲ್ಲಿ ʼಪಾಠʼ ಕಲಿಸಬೇಕೆಂದೇ, ಲಿಂಗಾಯತ ಸಮಾಜದ ಪ್ರಮುಖ ಸ್ವಾಮೀಜಿಯೊಬ್ಬರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಯೋಚನೆಯಲ್ಲಿದ್ದಾರೆ. ಹೌದು, ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಚುನಾವಣಾ ಕಣಕ್ಕಿಳಿದರೆ ಸಹಜವಾಗಿ ಉತ್ತರ ಕರ್ನಾಟಕದಲ್ಲಿ ಬಿಜೆಪಿ ನಂಬಿಕೊಂಡಿರುವ ಲಿಂಗಾಯತ ಮತಗಳು ವಿಭಜನೆಯಾಗುತ್ತವೆ. ಅದು ಜೋಶಿಯವರ ಗೆಲುವಿಗೆ ಮುಳುವಾಗುವುದು ಶತಸಿದ್ಧ ಎನ್ನುವುದು ರಾಜಕೀಯ ವಿಶ್ಲೇಷಕರ ಮಾತಾಗಿದೆ.

ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಏಪ್ರಿಲ್ 2ರ ನಂತರ ಘೋಷಣೆಯಾಗುವ ನಿರೀಕ್ಷೆಯಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿರುವ 5.5 ಲಕ್ಷ ಲಿಂಗಾಯತರಲ್ಲಿ ಸಣ್ಣ ಶೇಕಡಾವಾರು ಜನರು ಸ್ವಾಮೀಜಿಗೆ ಮತ ಹಾಕಿದರೂ, ಲಿಂಗಾಯತರ ಮತ ವಿಭಜನೆಯಾಗಿ ಜೋಶಿ ಗೆಲುವಿನ ಓಟಕ್ಕೆ ತಡೆಯಾಗುವುದು ನಿಶ್ಚಿತ. ದಿಂಗಾಲೇಶ್ವರ ಸ್ವಾಮೀಜಿ‌ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದು, ಸ್ಥಳೀಯ ಲಿಂಗಾಯತ ಮತ್ತು ಇತರ  ಸಮೂದಾಯಗಳಲ್ಲಿ ಪ್ರಭಾವ ಹೊಂದಿದ್ದಾರೆ.

ಪ್ರಲ್ಹಾದ ಜೋಶಿ ಅವರು ಧಾರವಾಡ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿದ್ದು, ಕರ್ನಾಟಕದ ಪ್ರಭಾವಿ ನಾಯಕರಾಗಿದ್ದಾರೆ. ಪ್ರಸ್ತುತ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಒಳ್ಳೆಯ ಒಡನಾಟ ಬೆಳೆಸಿಕೊಂಡಿದ್ದಾರೆ. ಕೇಂದ್ರದ ಬೆಂಬಲದ ಬಲ ಒಂದು ಕಡೆಯಾದರೆ ರಾಜ್ಯದಲ್ಲಿ ಜೋಶಿ ಅವರ ಮೇಲೆ ಹಲವು ಆರೋಪಗಳು ಕೇಳಿಬಂದಿವೆ. ಲಿಂಗಾಯತರ ವಿರೋಧಿಯಾಗಿದ್ದಾರೆ ಅಂತಲೂ ದಿಂಗಾಲೇಶ್ವರ ಸ್ವಾಮೀಜಿಗಳು ಬಹಿರಂಗ ಹೇಳಿಕೆ ನೀಡಿದ್ದಾರೆ.

ಅಭ್ಯರ್ಥಿ ಬದಲಾವಣೆಗೆ ಸ್ವಾಮೀಜಿ ಗಡುವು

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಲ್ಹಾದ ಜೋಶಿ ಸ್ಪರ್ಧಿಸಬಾರದು ಎಂದು ದಿಂಗಾಲೇಶ್ವರ ಸ್ವಾಮೀಜಿ ಬಂಡಾಯ ಸಾರಿದ್ದಾರೆ. ಪ್ರಲ್ಹಾದ್‌ ಜೋಶಿ ಅವರಿಗೆ ಅಧಿಕಾರ ಮತ್ತು ಹಣದ ಮದ ಏರಿದೆ. ಪಾಳೆಗಾರಿಕೆ ಪ್ರವೃತ್ತಿಯನ್ನು ಸಾಧಿಸುತ್ತಿದ್ದಾರೆ. ಅವರನ್ನು ಬದಲಾಯಿಸಿ ಬಿಜೆಪಿ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದಿರುವ ಸ್ವಾಮೀಜಿ, ಅಭ್ಯರ್ಥಿಯನ್ನು ಬದಲಾಯಿಸಲು ಬಿಜೆಪಿ ಹೈಕಮಾಂಡ್‌ಗ ಮಾರ್ಚ್ 31ರವರೆಗೆ ಗಡುವು  ನೀಡಿದ್ದಾರೆ.

ಧಾರವಾಡ ಕ್ಷೇತ್ರಕ್ಕೆ ಪ್ರಲ್ಹಾದ ಜೋಶಿ ಬದಲಿಗೆ ಸೂಕ್ತ ಅಭ್ಯರ್ಥಿಯನ್ನು ಹಾಕಬೇಕು. ಅಭ್ಯರ್ಥಿಯನ್ನು ಬದಲಾವಣೆ ಮಾಡದೇ ಹೋದರೆ ಏಪ್ರಿಲ್ 2ರಂದು ಸ್ವಾಮೀಜಿಗಳ ಸಭೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಚುನಾವಣೆ ಬಂದಾಗ ಮಾತ್ರ ಕೇಂದ್ರ ಸಚಿವರಿಗೆ ವೀರಶೈವ ಲಿಂಗಾಯತ ಸ್ವಾಮೀಜಿಗಳು ನೆನಪು ಆಗುತ್ತಾರೆ ಎಂದು ಜೋಶಿ ಅವರ ವಿರುದ್ಧ ಸ್ವಾಮೀಜಿ ಕಿಡಿಕಾರಿದ್ದಾರೆ.

ಯಡಿಯೂರಪ್ಪಗೆ ಜೋಶಿಯಿಂದ ಅನ್ಯಾಯ: ಸ್ವಾಮೀಜಿ

ʼʼಲಿಂಗಾಯತ ಸಮುದಾಯದ ಪ್ರಮುಖ ನಾಯಕ ಬಿಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ದು ಇದೇ ಪ್ರಲ್ಹಾದ ಜೋಶಿ. ತಾವೇ ಸಿಎಂ ಆಗಬೇಕೆಂದು ಜೋಶಿ ಜಾಕೆಟ್ ಹೊಲಿಸಿದ್ದರು, ನಮ್ಮ ಹೋರಾಟದಿಂದಾಗಿ ಅವರ ಜಾಕೆಟ್ ಪಾಕೆಟ್ ಸೇರಿತು, ನಾವು ಯಾರ ಒತ್ತಡಕ್ಕೂ ಒಳಗಾಗುವ ಸ್ವಾಮೀಜಿಗಳಲ್ಲʼʼ ಎಂದು ಸ್ವಾಮೀಜಿ ಗುಡುಗಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಿಗೆ (ಜಗದೀಶ್ ಶೆಟ್ಟರ್) ಟಿಕೆಟ್ ಬೇರೆ ಕಡೆ ಕೊಟ್ಟಂತೆ, ಕೇಂದ್ರ ಸಚಿವರಿಗೂ ಕ್ಷೇತ್ರ ಬದಲಾವಣೆ ಮಾಡಿ. ಅವರು ಲಿಂಗಾಯತರಿಗೆ, ಮಠಾಧೀಶರಿಗೆ ಅಗೌರವ ತೋರಿದ್ದಾರೆ. ಅವರಿಗೆ ಹಣ, ಅಧಿಕಾರ ಮದ ಏರಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದ್ದಾರೆ.

ಬ್ರಾಹ್ಮಣ V/s ಲಿಂಗಾಯತ

ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಿಸಿದ್ದು ಪ್ರಲ್ಹಾದ ಜೋಶಿ ಎನ್ನುವುದು ಲಿಂಗಾಯತ ಸಮುದಾಯದ ನಾಯಕರ ಆರೋಪವಾಗಿದೆ. ಅಷ್ಟೇ ಅಲ್ಲದೇ ಶೆಟ್ಟರ್ ಗೆಲ್ಲಬಹುದಾದ ಹಾವೇರಿ ಕ್ಷೇತ್ರದ ಟಿಕೆಟ್ ಕೂಡ ತಪ್ಪುವಂತೆ ನೋಡಿಕೊಂಡಿದ್ದು ಇದೇ ಜೋಶಿಯವರು ಎನ್ನುವುದು ಶೆಟ್ಟರ್ ಅಭಿಮಾನಿಗಳ ಮಾತು.

ಈ ಬಗ್ಗೆ ಹಿರಿಯ ಪತ್ರಕರ್ತ ಅಶೋಕ ಚಂದರಗಿ ಅವರು ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ್ದು, ʼʼಹುಬ್ಬಳಿ ಧಾರವಾಡದಲ್ಲಿ ಜೋಶಿ ಅವರು ತಮ್ಮ ಟಿಕೆಟ್‌ ಉಳಿಸಿಕೊಂಡಿದ್ದಾರೆ. ಇನ್ನು ಹಾವೇರಿ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿ ಶೆಟ್ಟರ್‌ ಇದ್ದರು. ಶೆಟ್ಟರ್‌ಗೂ ಬೊಮ್ಮಾಯಿಗೂ ಹಾವು-ಮುಂಗುಸಿ ಸಂಬಂಧ. ಇದು ಬಸವರಾಜ್ ಬೊಮ್ಮಾಯಿ ಅವರ ತಂದೆ ಕಾಲದಿಂದಲೂ ಇದೆ. ಹಾಗಾಗಿ ಬೊಮ್ಮಾಯಿ ಅವರು ಜೋಶಿ ಮೂಲಕವೇ ಹಾವೇರಿ ಲೋಕಸಭಾ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ.  ಎರಡು ಕ್ಷೇತ್ರಗಳಲ್ಲಿ ಶೆಟ್ಟರ್‌ಗೆ ಟಿಕೆಟ್‌ ತಪ್ಪಿತು. ಇದೀಗ ಬೆಳಗಾವಿ ಟಿಕೆಟ್‌ ಸಿಕ್ಕಿದೆ, ಇಲ್ಲಿ ಗೆಲುವು ಸಿಗುವುದು ಅಷ್ಟು ಸುಲಭದ್ದಲ್ಲ. ಮೋದಿ ಗಾಳಿಯಲ್ಲಿ ತೇಲಿ ಬಂದರೆ ಮಾತ್ರ ಶೆಟ್ಟರ್‌ಗೆ ಗೆಲುವು, ಇಲ್ಲದಿದ್ದರೆ, ಸೋಲು ನಿಶ್ಚಿತ. ಅಲ್ಲಿಗೆ ಅವರ ರಾಜಕೀಯ ಜೀವನ ಅಂತ್ಯವಾಗಲೂಬಹುದು ಎಂದು ಅಶೋಕ ಚಂದರಗಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಲ್ಹಾದ ಜೋಶಿ ಅವರು ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಜಗದೀಶ್ ಶೆಟ್ಟರ್ ಅವರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಸಿದ್ದಾರೆ ಎನ್ನುವುದು ಈ ಭಾಗದಲ್ಲಿನ ಸಮುದಾಯದ ನಾಯಕರು ಹಾಗೂ ಸ್ವಾಮೀಜಿಗಳ ಆರೋಪ. ಹಾಗಾಗಿ ಇದೀಗ ಎಲ್ಲ ಸ್ವಾಮೀಜಿಗಳು ಒಟ್ಟಾಗಿ ಸಭೆ ನಡೆಸುತ್ತಿದ್ದಾರೆ.

ಜಗದೀಶ್ ಶೆಟ್ಟರ್ ಅವರು ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರಿಗೆ ಒಳ ಏಟು ಕೊಡಲು ಸಿದ್ದತೆ ನಡೆಸಿದ್ದಾರೆ ಎಂಬ ಮಾತೂ ಕ್ಷೇತ್ರದಲ್ಲಿ ಜೋರಾಗಿ ಕೇಳಿಬರುತ್ತಿದೆ. ಮತ್ತೊಂದೆಡೆ, ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಕೂಡ ಲಿಂಗಾಯತ ಮತಗಳನ್ನು ಕ್ರೂಡೀಕರಿಸಲು ಪ್ರಯತ್ನ ನಡೆಸಿದ್ದಾರೆ. ಇನ್ನೊಂದೆಡೆ ಲಿಂಗಾಯತ ಸ್ವಾಮೀಜಿಗಳು ಜೋಶಿ ಅವರ ವಿರುದ್ಧ ಸಿಡಿದೆದ್ದಿದ್ದಾರೆ. ಇದು ಜೋಶಿಯವರಿಗೆ ಮುಳುವಾಗುವ ಸಾಧ್ಯತೆ ಹೆಚ್ಚಿದೆ.

ʼʼಪ್ರಲ್ಹಾದ್‌ ಜೋಶಿಯವರು ನಮ್ಮ ದಕ್ಷಿಣ ಕರ್ನಾಟಕದ ಸಂಸ್ಕೃತಿಯ ಬ್ರಾಹ್ಮಣರಲ್ಲ. ಬ್ರಾಹ್ಮಣರ ಸಂಸ್ಕಾರದಲ್ಲಿಯೂ ಎರಡು ಮೂರು ಥರ ಇವೆ. ಇವರು ಶೃಂಗೇರಿಯ ಮಠ ಒಡೆದ, ಅಲ್ಲಿನ ವಿಗ್ರಹ ಕೆಡವಿದ ದೇಶಸ್ಥ ಬ್ರಾಹ್ಮಣರ ಗುಂಪಿಗೆ ಸೇರಿದವರು. ಮಹಾತ್ಮ ಗಾಂಧಿಯನ್ನು ಕೊಂದಂತಹ  ಪೇಶ್ವೆ ಜಾತಿಗೆ ಸೇರಿದವರುʼʼ ಎಂದು  ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿಯವರು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು. ಮರಾಠಾ ಪೇಶ್ವೆ ಜಾತಿಯ ಜೋಶಿಯವರನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಲು ಹುನ್ನಾರ ನಡದಿದೆʼ ಎಂಬರ್ಥದಲ್ಲಿ ಕುಮಾರಸ್ವಾಮಿ ಟೀಕಿಸಿದ್ದರು. ಬಳಿಕ ಜಗದೀಶ್‌ ಶೆಟ್ಟರ್‌ ಅವರಿಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಕೈತಪ್ಪಿದಾಗ ಕುಮಾರಸ್ವಾಮಿ ಹೇಳಿಕೆ ಮತ್ತೆ ಮುನ್ನೆಲೆಗೆ ಬಂದಿತ್ತು.

ʼನಾಗಪುರದಿದ ಯಾರನ್ನೇ ಕಳುಹಿಸಿದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲʼ ಎಂದು ಬಳಿಕ ಕಾಂಗ್ರೆಸ್‌ ಸೇರಿದ ಶೆಟ್ಟರ್‌ ಅವರೂ ಆರ್‌ಎಸ್‌ಎಸ್‌ ಅನ್ನು ಪರೋಕ್ಷವಾಗಿ ಟೀಕಿಸಿದ್ದರು. ಜತೆಗೆ ಪ್ರಲ್ಹಾದ್‌ ಜೋಶಿಯವರು ಈ ಘಟನಾವಳಿ ಹಿನ್ನೆಲೆಯಲ್ಲಿದ್ದಾರೆ ಎಂದು ಪರೋಕ್ಷವಾಗಿ ಟೀಕಿಸಿದ್ದರು ಕೂಡಾ. "ಕುಮಾರಸ್ವಾಮಿಯವರ  ಹೇಳಿಕೆ ಇದೀಗ ಸರಿ ಎನಿಸುತ್ತದೆ. ಏಕೆಂದರೆ ಆ ಬ್ರಾಹ್ಮಣರು ಶೃಂಗೇರಿ ಮಠ ಒಡೆದರು, ಈ ಬ್ರಾಹ್ಮಣ ಲಿಂಗಾಯತ ನಾಯಕರ ರಾಜಕೀಯ ಭವಿಷ್ಯ ಮುಗಿಸುತ್ತಿದ್ದಾರೆ,"  ಎನ್ನುವ ಅಭಿಪ್ರಾಯವನ್ನು ಹೆಸರು ಹೇಳಲಿಚ್ಚಿಸದ ಲಿಂಗಾಯತ ಸಮುದಾಯದ ನಾಯಕರೊಬ್ಬರು ʼದ ಫೆಡರಲ್‌ ಕರ್ನಾಟಕʼದೊಂದಿಗೆ ಹಂಚಿಕೊಂಡಿದ್ದಾರೆ.

ಸ್ವಾಮೀಜಿ ಪ್ರತಿಕ್ರಿಯೆ

ಈ ಬಗ್ಗೆ ದಿಂಗಾಲೇಶ್ವರ ಸ್ವಾಮೀಜಿಗಳು ʼದ ಫೆಡರಲ್-ಕರ್ನಾಟಕʼದೊಂದಿಗೆ ಮಾತನಾಡಿದ್ದು, ʼʼನಮ್ಮ ಹೋರಾಟ ಕೇವಲ ಲಿಂಗಾಯತರ ಪರವಾಗಿ ಅಲ್ಲ, ತುಳಿತಕ್ಕೆ ಒಳಗಾಗಿರುವ ಬಹಳಷ್ಟು ಸಮುದಾಯಗಳ ಪರವಾಗಿ ನಾವು ಧ್ವನಿ ಎತ್ತಿದ್ದೇವೆ. ಸಾಮಾಜಿಕ ನ್ಯಾಯಕ್ಕಾಗಿ, ವ್ಯಕ್ತಿಯ ಬದಲಾವಣೆ ಮುಖ್ಯ, ವ್ಯಕ್ತಿಯ ಹಿತಕ್ಕಾಗಿ ಇಡೀ ನಾಡನ್ನು ಬಲಿ ಕೊಡೋದು ಸರಿಯಲ್ಲ. ಈ ವ್ಯಕ್ತಿಯಿಂದ ಬಹುಸಂಖ್ಯಾತರು ಬಲಿಯಾಗುತ್ತಿದ್ದಾರೆ. ಹಾಗಾಗಿ ಅವರನ್ನು ಬದಲಾವಣೆ ಮಾಡ್ಬೇಕು ಅನ್ನೋದು ನಮ್ಮ ಬೇಡಿಕೆ ಆಗಿದೆ. ಆ ಪಕ್ಷಕ್ಕೆ ನಾವು ಈಗಾಗಲೇ ಗಡುವು ಕೊಟ್ಟಿದ್ದೇವೆ. ಬದಲಾವಣೆ ಮಾಡದಿದ್ದರೆ ಮುಂದಿನ ನಿರ್ಧಾರವನ್ನು ಯಾವತ್ತು ತೆಗೆದುಕೊಳ್ಳುತ್ತೇವೆ ಅನ್ನೋದನ್ನು ಈಗಾಗಲೇ ಹೇಳಿದ್ದೇವೆ. ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ" ಎಂದು ಹೇಳಿದರು.

ಜೋಶಿ ಕ್ಷಮೆ ಕೋರಿಕೆ

ಈ ನಡುವೆ, "ದಿಂಗಾಲೇಶ್ವರ ಸ್ವಾಮೀಜಿಯವರಿಗೆ ಬೇಜಾರಾಗುವಂತೆ ನಾನು ನಡೆದುಕೊಂಡಿಲ್ಲ. ಹಾಗೇನಾದರೂ ನನ್ನಿಂದ ಬೇಜಾರಾಗಿದ್ದಲ್ಲಿ ಸ್ವಾಮೀಜಿಯವರ ಕ್ಷಮೆ ಕೋರಲು ಸಿದ್ಧ" ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

"ಸ್ವಾಮೀಜಿಗಳಿಗೆ ತಪ್ಪು ತಿಳಿವಳಿಕೆ ಆಗಿದೆ. ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಕೋರಲ ಹಿಂಜರಿಯುವುದಿಲ್ಲ. ಏನಾದರೂ ತಪ್ಪು ಮಾಡಿದ್ದರೆ ನೇರವಾಗಿ ಹೇಳಲಿ, ಕ್ಷಮೆ ಕೋರುತ್ತೇನೆ" ಎಂದಿದ್ದಾರೆ. ಸ್ವಾಮೀಜಿ ಸ್ಪರ್ಧೆಯ ಮಾತು ಕೇಳಿಬಂದ ಬಳಿಕ ಅಸಾಮಧಾನ ಶಮನ ಮಾಡುವ ಜೋಶಿಯವರ ಪ್ರಯತ್ನ ಇದಾಗಿದೆ ಎನ್ನಲಾಗಿದೆ.

ಧಾರವಾಡ ಕ್ಷೇತ್ರದಿಂದ ಕಾಂಗ್ರೆಸ್‌ ಕುರುಬ ಜನಾಂಗದ ವಿನೋದ ಅಸೂಟಿ ಅವರನ್ನು ಕಣಕ್ಕಿಳಿಸಿದೆ.  ಕ್ಷೇತ್ರದ ಜಾತಿ ಬಲಾಬಲದ ಪ್ರಕಾರ, 5.5 ಲಕ್ಷ ಲಿಂಗಾಯತರು, 3.5 ಲಕ್ಷ ಮುಸ್ಲಿಮರು, 2.7 ಲಕ್ಷ ಎಸ್ಸಿಗಳು ಮತ್ತು 2 ಲಕ್ಷ ಕುರುಬ ಮತದಾರರಿದ್ದಾರೆ. ಈ ಹಿಂದೆ, ಲಿಂಗಾಯತರಾದ ವಿನಯ್ ಕುಲಕರ್ಣಿ ಸ್ಪರ್ಧಿಸಿದಾಗಲೂ ಲಿಂಗಾಯತರು ಬ್ರಾಹ್ಮಣರಾದ ಜೋಶಿ ಅವರನ್ನು ಬೆಂಬಲಿಸಿದ್ದರು.

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡದ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಕೇವಲ ಎರಡು ಮತ್ತು ಕಾಂಗ್ರೆಸ್ ಐದು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು.

Tags:    

Similar News