ಈ ಮಾತಿಗೆ ಮನವೇ ಸಾಕ್ಷಿ: ಬಟ್ಟಲು ಕಂಗಳ ಬೆಡಗಿ ಸರೋಜಾದೇವಿ
ಎಸ್ ಎಂ ಕೃಷ್ಣ ಅವರ ಅಚ್ಚುಮೆಚ್ಚಿನ ವ್ಯಕ್ತಿ. ಅವರಿಬ್ಬರ ಮದುವೆ ಬಗ್ಗೆ ಆ ಕಾಲಕ್ಕೆ ವರ್ಣರಂಜಿತ ಕತೆಗಳೇ ಹಬ್ಬಿದ್ದವು. ಎಸ್ ಎಂ ಕೃಷ್ಣರಿಗೂ ಸರೋಜಾದೇವಿ ಅವರನ್ನು ಕಂಡರೆ ಅಷ್ಟೇ ಸಲಿಗೆ.;
ಬಟ್ಟಲು ಕಂಗಳ ಬೆಡಗಿ....
"ನ್ಯಾಯವೇದೇವರು " ಸಿನಿಮಾದ ಆಕಾಶವೇ ಬೀಳಲಿ ಮೇಲೆ ಹಾಡಿನ ಮೋಹಕತೆಗೆ, ಭಾವುಕತೆಗೆ ಸರೋಜಾದೇವಿಯವರ ಕಣ್ಣು ಜೀವತುಂಬದಿದ್ದರೆ..
"ಈ ಮಾತಿಗೆ ಮನವೇ ಸಾಕ್ಷಿ.. ಈ ಭಾಷೆಗೆ ದೇವರೇ ಸಾಕ್ಷಿ... " ಹಾಡಿಗೆ ಅವರು ರಸಿಕರ ರಾಜ ರಾಜಕುಮಾರ್ ಜೊತೆ ನಟಿಸದೇ ಇದ್ದರೆ...
.. ಈ ಹಾಡು ಚಿರಸ್ಥಾಯಿ ಆಗಿ ಉಳಿಯುತ್ತಿತ್ತೆ? ಎನ್ನುವ ಪ್ರಶ್ನೆ ಮೂಡುವಷ್ಟು ಸ್ನಿಗ್ಧ ಸೌಂದರ್ಯ, ಅಭಿನಯ ಸರೋಜಾದೇವಿ ಅವರದ್ದು.
ಇದನ್ನು ಹೇಳಲು ಕಾರಣವಿದೆ.
ರಂಗಭೂಮಿಯ ಹಿನ್ನೆಲೆಯಿಂದ ಬಂದು ಸಿನಿಮಾಗಳಲ್ಲಿ ನಟನೆ, ಹಾಡು ಹಾಡುತ್ತಿದ್ದ ಪರಂಪರೆಯನ್ನು ಮುರಿದು ಬಂದವರು ಬಿ.ಸರೋಜಾದೇವಿ.
ಸಿನಿಮಾದ ಗೀಳು, ತಾರೆಯಾಗುವ ಜನಪ್ರಿಯತೆಯ ಗುಂಗು ಯಾವುದೂ ಇಲ್ಲದೆ ಬಂದವರು ಸರೋಜಾದೇವಿ.
ಆಕಸ್ಮಿಕವಾಗಿ ಪ್ರಖ್ಯಾತ ನಟ, ನಿರ್ದೇಶಕ ಹೊನ್ನಪ್ಪ ಭಾಗವತರ್ ಕಣ್ಣಿಗೆ ಸರೋಜಾದೇವಿ ಬಿದ್ದಾಗ, ಅವರ ಪೋಷಕರ ಮನವೊಲಿಸುತ್ತಾರೆ.
ಒಲ್ಲದ ಮನಸ್ಸಿನ ಸರೋಜಾ ದೇವಿ ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ನಟಿಸುತ್ತಾರೆ. ಸಿನಿಮಾ ಹಿಟ್ ಆಗುತ್ತೆ. ಒಲ್ಲದ ಮನಸ್ಸು, ಸಿನಿಮಾ ರಂಗವನ್ನೇ ಒಪ್ಪುತ್ತದೆ.ಅಪ್ಪುತ್ತದೆ. ಸರೋಜಾದೇವಿ ತಾರೆ ಆಗುತ್ತಾರೆ.
ಹೀಗೆ "ಅಭಿನಯ ಸರಸ್ವತಿ " ಹುಟ್ಟು ಪಡೆದು..ಅಭಿಜಾತ ಕಲಾವಿದೆಯಾಗಿ ಅರಳುತ್ತಾ ಹೋಗುತ್ತಾರೆ. ಹೀಗೆ ಹೆಜ್ಜೆ ಹಾಕಿದ ಸರೋಜಾದೇವಿ ಹಿಂದಿರುಗಿ ನೋಡಿದ್ದೆ ಇಲ್ಲ. ಹೆಜ್ಜೆ ಮೇಲೆ ಹೆಜ್ಜೆ ಇಟ್ಟು, ದಾಖಲೆ ಸೃಷ್ಟಿಸಿ " ಮಹಿಳಾ ಸೂಪರ್ ಸ್ಟಾರ್" ಆಗುತ್ತಾರೆ.
ಎಂಥ ಚಂದ ಮತ್ತು ಬೆರಗಿನ ವಿಚಾರ ಎಂದರೆ ಎಂ.ಜಿ.ಆರ್, ಎನ್. ಟಿ.ಆರ್, ಶಿವಾಜಿ ಗಣೇಶನ್, ರಾಜಕುಮಾರ್ ಇಂಥವರ ನಡುವೆ ಸೂಪರ್ ಸ್ಟಾರ್ ಪಟ್ಟ ಒಬ್ಬ ಮಹಿಳೆಯಾಗಿ ಗಿಟ್ಟಿಸಿಕೊಳ್ಳುವ ತಾಕತ್ತು ಖಂಡಿತ ಆಕಸ್ಮಿಕ ಅಲ್ಲ.
ಈ ನಾಯಕರ ಎದುರು ಪ್ರತಿಭೆಯ ಶಕ್ತಿ ಇಲ್ಲದಿದ್ದರೆ ನಾಯಕಿ ಎನ್ನಿಕೊಳ್ಳಲು ಸಾಧ್ಯವೇ ಇಲ್ಲ.
ಹೀಗಿರಬೇಕಾದರೆ ಸೂಪರ್ ಸ್ಟಾರ್ ಪಟ್ಟ ಪಡೆಯಬೇಕಾದರೆ ಮಾಮೂಲಿ ಮಾತಲ್ಲ.
ದೈತ್ಯ ಪ್ರತಿಭೆ ಸರೋಜಾ ದೇವಿ
ಮುಖ್ಯವಾದ ಸಂಗತಿಯೊಂದನ್ನು ಇಲ್ಲಿ ದಾಖಲಿಸಬೇಕು.
ಸರೋಜಾದೇವಿ ಅವರದ್ದು ದೈತ್ಯ ಪ್ರತಿಭೆ. ಈ ಪ್ರತಿಭೆ ಸಾಮಾಜಿಕ ಪಾತ್ರಕ್ಕೂ ಸೈ. ಚಾರಿತ್ರಿಕ ಪಾತ್ರ ವೂ ಹೌದು
ಪೌರಾಣಿಕ ಪಾತ್ರದಲ್ಲಂತೂ ಅದ್ಭುತ. ಹೀಗಾಗಿಯೇ ಪೌರಾಣಿಕ, ಮತ್ತು ಸಾಮಾಜಿಕ ಪಾತ್ರಗಳ ಮೇರು ನಟರೆಂದೇ ಬಿಂಬಿಸಿಲ್ಪಟ್ಟ ಎನ್ ಟಿ ಆರ್, ಎಂಜಿಆರ್, ರಾಜ ಕುಮಾರ್ ಅವರ ಜೊತೆಗೆ ಇವರ ಆಯ್ಕೆ ಸಹಜ ನ್ಯಾಯ ಪಡೆಯಿತು. ಹೇಳಿ ಮಾಡಿಸಿದಂತಹ ಜೋಡಿ ಎನ್ನುವ ಹೆಸರು ಪಡೆಯಿತು.
ಎಂಜಿಆರ್ ಜೊತೆ ನಡೋಡಿ ಮನ್ನನ, ಪಾಲಂ ಪಲಮಂ, ಶಿವಾಜಿ ಗಣೇಶನ್ ಜೊತೆ ಭಾಗ ಪಿರಿವಿನೈ, ಎನ್ಟಿಆರ್ ಜೊತೆ ಸೀತಾರಾಮ ಕಲ್ಯಾಣ, ಜಗದೇಕ ವೀರುಲು ಸಿನಿಮಾಗಳಲ್ಲಿ ಜನಪ್ರಿಯ ನಾಯಕರ ಜೊತೆ ಸರಿಸಾಟಿಯಾಗಿ ಅವರಷ್ಟೇ ಎತ್ತರದಲ್ಲಿ ನಿಲ್ಲುವಷ್ಟು ಅಮೋಘ ಪಾತ್ರಗಳನ್ನು ಬಿ.ಸರೋಜಾದೇವಿ ಮಾಡಿದ್ದರು. ಒಂದೆರಡು ಪಾತ್ರಗಳಷ್ಟೇ ಅಲ್ಲ. ಕಮ್ಮಿ ಅಂದರೂ 20-25 ಸಿನಿಮಾಗಳಿಗೆ ನಾಯಕಿ.
ಕಿತ್ತೂರು ಚೆನ್ನಮ್ಮ ಸರೋಜಾ ದೇವಿ
ಇನ್ನು ಕನ್ನಡದಲ್ಲಿ ಕಿತ್ತೂರು ಚೆನ್ನಮ್ಮ ಸಿನಿಮಾ ಅಂತು ಕನ್ನಡಿಗರಲ್ಲಿ ರೋಮಾಂಚನದ ಬಗ್ಗೆ ಚಿಮ್ಮುವಂತೆ ಮಾಡಿತು. "ನಿನಗೇಕೆ ಕೊಡಬೇಕು ಕಪ್ಪಾ " ಎನ್ನುತ್ತಾ, ಬ್ರಿಟಿಷ್ ಸಾಮ್ರಾಜ್ಯ ಶಾಹಿ ವಿರುದ್ಧ ದಂಗೆ ಏಳುವ ಚೆನ್ನಮ್ಮ ಸಾಕ್ಷಾತ್ ಮೂಡಿ ಬಂದಿದ್ದಾಳೆ ಎನ್ನುವಷ್ಟು ಅದ್ಭುತ. ಈ ಸಿನಿಮಾ ಒಂದು ತಲೆಮಾರಲ್ಲಿ ಸಂಚಲನ ಮೂಡಿಸಿತು.
ಅಮರಶಿಲ್ಪಿ ಜಕಣಾಚಾರಿ ಚಿತ್ರದಲ್ಲಿನ ಸೌಮ್ಯತೆ, ಭಬ್ರುವಾಹನ ಚಿತ್ರದಲ್ಲಿನ ಆಕರ್ಷಣೆ, ಶ್ರೀಕೃಷ್ಟ ರುಕ್ಮಿಣಿ ಸತ್ಯಭಾಮ ಚಿತ್ರದಲ್ಲಿನ ಸಾಂಪ್ರದಾಯಿಕ ಮನೋಜ್ಞತೆ..ಒಂದಾ ಎರಡಾ..ರಾಶಿ ರಾಶಿ ಸಿನಿಮಾಗಳಲ್ಲಿ ಸರೋಜಾದೇವಿ ಅವರ ಪ್ರತಿಭೆ ಮಿನುಗಿ ಕೋರೈಸಿದೆ.
ಮಲ್ಲಮ್ಮನ ಪವಾಡ, ಭಾಗ್ಯವಂತರು, ಶ್ರೀನಿವಾಸ ಕಲ್ಯಾಣ..ಹೀಗೆ ಸಾಗುತ್ತದೆ ಅವರ ಯಶಸ್ಸಿನ ಬಂಡಿ.
ಇನ್ನು ಆ ಕಾಲಕ್ಕೆ ತಮ್ಮ ಚಿತ್ರಕ್ಕೆ ಸರೋಜಾದೇವಿ ಅವರು ಬೇಕು ಎಂದು ಖುದ್ದು ದಿಲೀಪ್ ಕುಮಾರ್ ಬಯಸಿ, ಅವರ ಜೊತೆ ಪೈಗಾಮ್ ಎನ್ನುವ ಚಿತ್ರ ದಲ್ಲಿ ನಟಿಸಿದ್ದರು. ರಾಜೇಂದ್ರ ಕುಮಾರ್, ಶಮ್ಮಿ ಕಪೂರ್ ಹೀಗೆ ಹಿಂದಿ ಚಿತ್ರರಂಗದ ದಾಖಲೆಯೂ ಇದೆ.
ಸರೋಜಾ ದೇವಿಗೆ ಹಿಂದಿ ನಟ ದಿಲೀಪ್ ಕುಮಾರ್ ಮನವಿ
ನಟಿ ಸಾಯಿರಾ ಅವರಿಗೆ ಚಿತ್ರರಂಗ ತ್ಯಜಿಸದಂತೆ ದಿಲೀಪ್ ಕುಮಾರ್ ಮನವಿ ಮಾಡಿದ್ದ ಸುದ್ದಿಯೊಂದನ್ನು, ಸರೋಜಾದೇವಿ ಅವರ ಪತಿ ಶ್ರೀ ಹರ್ಷ ಅವರಿಗೆ ರಾಜೇಶ್ ಖನ್ನಾ ಆ ಕಾಲಕ್ಕೆ ಕಳಿಸಿದ್ದರಂತೆ. ಅಂದರೆ ಸರೋಜಾದೇವಿ ಅವರು ಚಿತ್ರರಂಗದಲ್ಲೇ ಮುಂದುವರೆಯಲಿ ಎನ್ನುವ ಅಭಿಲಾಷೆ ರಾಜೇಶ್ ಖನ್ನಾ ಅವರದ್ದಾಗಿತ್ತು.
ಅಂದಿನ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಅಂಥವರು ಸರೋಜಾದೇವಿ ಅವರನ್ನು ಇಷ್ಟಪಡುವಂಥ ವ್ಯಕ್ತಿತ್ವ ಅವರದಾಗಿತ್ತು.
ಪದ್ಮವಿಭೂಷಣ, ಶ್ರೇಷ್ಠ ನಟಿ ರಾಷ್ಟ್ರೀಯ ಪ್ರಶಸ್ತಿ ಎಲ್ಲವೂ ಅವರ ಮುಡಿಗೇರಿದ್ದವು.
ಇಷ್ಟೆಲ್ಲಾ ಗೌರವ, ಜನಪ್ರಿಯತೆಯ ನಡುವೆ ಅವರ ಅಂತಿಮ ಆಯ್ಕೆ ಯಾವಾಗಲೂ ಕನ್ನಡವೇ ಆಗುತ್ತಿತ್ತು. ಡಾ.ರಾಜ್ಕುಮಾರ್ ಕಂಡರೆ ಅವರಿಗೆ ಪ್ರೀತಿ. ಅಭಿಮಾನ. ಅವರು ಸರಳತೆಯ ಸಾಕಾರ ಮೂರ್ತಿ ಎನ್ನುತ್ತಿದ್ದರು.
ಎಸ್.ಎಂ. ಕೃಷ್ಣ ಅವರ ಅಚ್ಚುಮೆಚ್ಚಿನ ಸರೋಜಾ ದೇವಿ
ಎಸ್ ಎಂ ಕೃಷ್ಣ ಅವರ ಅಚ್ಚುಮೆಚ್ಚಿನ ವ್ಯಕ್ತಿ. ಅವರಿಬ್ಬರ ಮದುವೆ ಬಗ್ಗೆ ಆ ಕಾಲಕ್ಕೆ ವರ್ಣರಂಜಿತ ಕತೆಗಳೇ ಹಬ್ಬಿದ್ದವು. ಎಸ್ ಎಂ ಕೃಷ್ಣರಿಗೂ ಸರೋಜಾದೇವಿ ಅವರನ್ನು ಕಂಡರೆ ಅಷ್ಟೇ ಸಲಿಗೆ.
ಹರ್ಷ ಅವರನ್ನು ಅಗಾಧವಾಗಿ ಪ್ರೀತಿಸುತ್ತಿದ್ದ ಸರೋಜಾದೇವಿ ಪತಿ ನಿಧನಾನಂತರ ಅಂತರ್ಮುಖಿ ಆದರು.ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆ ಆಗಿತ್ತು.
ತುಂಬು ಬದುಕು ನಟಿಸಿ, ಅಸ್ತಂಗತರಾದ ಸರೋಜಾದೇವಿ ಭಾರತದ ಹೆಮ್ಮೆ. ಈ ದೇಶದ ಹಿರಿಮೆ.