Sudeep vs Darshan| ದರ್ಶನ್‍ಗೆ ನಾನ್ಯಾಕೆ ಟಾಂಟ್ ಕೊಡಲಿ?: ಕಿಚ್ಚ ಸುದೀಪ್ ಪ್ರಶ್ನೆ
ಇತ್ತೀಚೆಗೆ ‘ಮ್ಯಾಕ್ಸ್’ ಬಿಡುಗಡೆಯಾದ ಸಂದರ್ಭದಲ್ಲಿ, ಕೇಕು ಕತ್ತರಿಸಿ ಸಂಭ್ರಮಿಸಿದ ಬಳಿಕ ಸುದೀಪ್ ವಿವಾದಕ್ಕೆ ಸಿಲುಕಿಸಿದ್ದಾರೆ. ಕೇಕ್ ಮೇಲೆ ‘Bossism ಕಾಲ ಮುಗೀತು, Maximum ಕಾಲ ಶುರುವಾಯ್ತು’ ಎಂದು ಬರೆಸಲಾಗಿತ್ತು.;
ಸುದೀಪ್ ಅಭಿನಯದ ‘ಮ್ಯಾಕ್ಸ್’ ಕಳೆದ ಬುಧವಾರ ಬಿಡುಗುಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರವು ಕೇವಲ ಆರು ದಿನಗಳಲ್ಲಿ 30 ಕೋಟಿ ರೂ. ಗಳಿಕೆ ಮಾಡಿ, ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಮಧ್ಯೆ, ಸುದೀಪ್ ಭಾರೀ ವಿವಾದಕ್ಕೆ ಸಿಲುಕಿಸಿದ್ದಾರೆ. ಇತ್ತೀಚೆಗೆ ‘ಮ್ಯಾಕ್ಸ್’ ಬಿಡುಗಡೆಯಾದ ಸಂದರ್ಭದಲ್ಲಿ, ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ಜೊತೆಯಾಗಿ ಒಂದು ಕೇಕು ಕತ್ತರಿಸಿ ಸಂಭ್ರಮಿಸಿದ್ದರು. ಆ ಸಂಭ್ರಮಾಚರಣೆ ವಿವಾದಕ್ಕೆ ಕಾರಣವಾಗಿದೆ. ಆ ಕೇಕ್ ಮೇಲೆ ‘Bossism ಕಾಲ ಮುಗೀತು, Maximum ಕಾಲ ಶುರುವಾಯ್ತು’ ಎಂದು ಬರೆಸಲಾಗಿತ್ತು.
ಎಲ್ಲರಿಗೂ ಗೊತ್ತಿರುವಂತೆ, ಕನ್ನಡ ಚಿತ್ರರಂಗದಲ್ಲಿ ಡಿ ಬಾಸ್ ಎಂದು ಅಭಿಮಾನಿಗಳು ಬಿರುದು ನೀಡಿರುವುದು ದರ್ಶನ್‍ಗೆ. ಸುದೀಪ್ ಮತ್ತು ದರ್ಶನ್ ನಡುವೆ ಕೆಲವು ವರ್ಷಗಳಿಂದ ವೈಮನಸ್ಯ ಇದೆ. ಮೇಲಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಕೆಲವು ತಿಂಗಳುಗಳ ಹಿಂದೆ ಜೈಲು ಸೇರಿದ್ದರು. ಹೀಗಿರುವಾಗ, Bossism ಕಾಲ ಮುಗೀತು ಎಂದು ಬರಹದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಸುದೀಪ್ ಬೇಕಂತಲೇ ದರ್ಶನ್ ಅವರಿಗೆ ಟಾಂಟ್ ಕೊಟ್ಟಿದ್ದಾರೆ ಎಂದು ದರ್ಶನ್ ಅಭಿಮಾನಿಗಳಷ್ಟೇ ಅಲ್ಲ, ಒಟ್ಟಾರೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದರು.
ಯಾವಾಗ ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳು ಹೆಚ್ಚಾದವೋ, ಆಗ ಸುದೀಪ್ ಆಪ್ತ ಪ್ರದೀಪ್, ಸಮಜಾಯಿಷಿ ನೀಡುವುದಕ್ಕೆ ಪ್ರಯತ್ನಿಸಿದ್ದರು. ಸುದೀಪ್ ಅವರಿಗೂ, ಆ ಬರಹಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದರು. ಅದಕ್ಕೂ ಟೀಕೆಗಳು ವ್ಯಕ್ತವಾದವು. ಈಗ ಸುದೀಪ್ ಈ ಕುರಿತು ಮೊದಲ ಬಾರಿಗೆ ಮಾತನಾಡಿದ್ದಾರೆ. ತಮಗೆ ದರ್ಶನ್ ಬಗ್ಗೆ ಅಪಹಾಸ್ಯ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಸೋಮವಾರ ರಾತ್ರಿ ನಡೆದ ‘ಮ್ಯಾಕ್ಸ್’ ಚಿತ್ರದ ಸಂತೋಷಕೂಟದಲ್ಲಿ ಮಾತನಾಡಿರುವ ಸುದೀಪ್, ‘ಕೆಲವು ದಿನಗಳ ಹಿಂದೆ ಚಾನಲ್‍ವೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ದರ್ಶನ್ ಅವರ ಅಭಿಮಾನಿಗಳಿಗೆ ಬಯ್ಯಬೇಡಿ, ಅವರು ನೋವಿನಲ್ಲಿದ್ದಾರೆ ಎಂದು ಹೇಳಿದ್ದೆ. ಈ ಮಾತನ್ನು ನಾನು ಹೇಳಿರುವಾಗ, ನಾನು ಯಾಕೆ ಟಾಂಗ್ ಕೊಡಲಿ?’ ಎಂದು ಪ್ರಶ್ನಿಸಿದರು.
ದರ್ಶನ್ ತಮ್ಮ ಸಹೋದರನ ತರಹ ಇದ್ದವರು ಎಂದ ಸುದೀಪ್, ‘ಒಬ್ಬ ನಟನ ಹೆಸರು ಮಾತ್ರ ತೆಗೆದುಕೊಂಡು ಟಾಂಟ್ ಎನ್ನುತ್ತಿದ್ದಾರೆ. ಯಶ್‍ಗೆ ಅವರ ಅಭಿಮಾನಿಗಳು ಯಶ್ ಬಾಸ್ ಎನ್ನುತ್ತಾರೆ. ಧ್ರುವ ಸರ್ಜಾಗೆ ಅವರ ಅಭಿಮಾನಿಗಳು ಧ್ರುವ ಬಾಸ್ ಎನ್ನುತ್ತಾರೆ. ಅದೇ ರೀತಿ, ಶಿವಣ್ಣ ಬಾಸ್, ಉಪ್ಪಿ ಬಾಸ್ ಎಂದು ಅವರ ಅಭಿಮಾನಿಗಳು ಹೇಳುತ್ತಾರೆ. ಎಲ್ಲಾ ಅಭಿಮಾನಿಗಳಿಗೂ ಅವರ ಮೆಚ್ಚಿನ ನಟರು ಬಾಸ್‍ಗಳೇ. ನನ್ನ ದರ್ಶನ್ ಮಧ್ಯೆ ಏನೂ ಇಲ್ಲ. ಅವರು ಬಹಳ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಕನ್ನಡ ಚಿತ್ರರಂಗ ಬಹಳ ನೋವಿನಲ್ಲಿದೆ. ಚಿತ್ರರಂಗ ಬೆಳೆಯಬೇಕು ಎಂದರೆ ಈ ತರಹದ ವಿಷಯಗಳು ಬರಬಾರದು. ನನ್ನ ಅಭಿಮಾನಿಗಳು ಬೇರೆ ನಟರ ಸಿನಿಮಾ ನೋಡುತ್ತಾರೆ. ಬೇರೆ ನಟರ ಅಭಿಮಾನಿಗಳು ಬಂದು ನನ್ನ ಸಿನಿಮಾಗಳನ್ನು ನೋಡುತ್ತಾರೆ. ಹಾಗಿರುವಾಗ ನಾವ್ಯಾಕೆ ಹೀಗೆ ಪರಸ್ಪರ ಕಾಲೆಳೆದುಕೊಳ್ಳಬೇಕು?’ ಎಂದರು ಸುದೀಪ್.
ಇಷ್ಟಕ್ಕೂ ದರ್ಶನ್‍ಗೆ ಯಾಕೆ ಟಾಂಟ್ ಕೊಡಬೇಕು ಎಂದು ಪ್ರಶ್ನಿಸುವ ಸುದೀಪ್, ‘ನಾನು ಯಾಕೆ ವ್ಯಂಗ್ಯ ಮಾಡಬೇಕು? ಅದರಿಂದ ಏನು ಸಿಗುತ್ತದೆ? ನಾವೇನು ಛತ್ರಪತಿಗಳಾ? ಅಥವಾ ಚಕ್ರವರ್ತಿಗಳಾ? ವಯಸ್ಸಾಗಿ ನಾವು ಸಹ ಒಂದು ದಿನ ಹೋಗುವವರೇ. ಚಿತ್ರರಂಗ ನಮ್ಮ ಕೈ ಹಿಡಿದರಿಬೇಕಾದರೆ, ಬೆಳೆಯುವ ಮತ್ತು ಬೆಳೆಸುವ ಪ್ರಯತ್ನ ಮಾಡಬೇಕು. ಇನ್ನಷ್ಟು ಒಳ್ಳೆಯ ಚಿತ್ರಗಳನ್ನು ಮಾಡಬೇಕು. ನಮ್ಮ ಹಿರಿಯರು ಚಿತ್ರರಂಗವನ್ನು ಬೆಳೆಸಿ, ಇವತ್ತು ನಮ್ಮ ಕೈಗೆ ಕೊಟ್ಟು ಹೋಗಿದ್ದಾರೆ. ಅದನ್ನು ಇನ್ನಷ್ಟು ಬೆಳೆಸಿ, ನಾವು ಮುಂದಿನ ತಲೆಮಾರಿನವರಿಗೆ ಕೊಟ್ಟು ಹೋಗಬೇಕು. ಇದೊಂದು ಕುಟುಂಬ, ಇದೊಂದು ಸಂಪ್ರದಾಯ. ಕನ್ನಡ ಚಿತ್ರರಂಗ ಮುಖ್ಯಾನಾ? ನೀನಾ-ನಾನಾ ಎನ್ನುವುದು ಮುಖ್ಯಾನಾ? ಇದು ಯಾವುದೂ ಮುಖ್ಯವಲ್ಲ’ ಎಂಬುದು ಸುದೀಪ್ ಅಭಿಪ್ರಾಯ.
ಶುರುವಾಗಿದ್ದು ಹೇಗೆ
ಇದೆಲ್ಲಾ ಶುರುವಾಗಿದ್ದು ಹೇಗೆ ಎಂದು ವಿವರಿಸಿದ ಸುದೀಪ್, ‘ನನ್ನ ಹುಡುಗನೊಬ್ಬ ಚಿತ್ರ ನೋಡಿ ಬಂದು, ‘ಇವತ್ತಿನಿಂದ ಕಿಚ್ಚ ಬಾಸ್ ಅಂತ ಕರೆಯೋದು ನಿಲ್ಲಿಸಿ, ಕಿಚ್ಚ ಮಾಸ್ ಅಂತ ಕರೆಯಿರಿ’ ಎಂದು ಹೇಳುತ್ತಾನೆ. ಅದನ್ನೇ ಕೇಕ್ ಮೇಲೆ ಬರೆಸಿ ತರುತ್ತಾರೆ. ಅದನ್ನು ನೋಡಿದ ಒಂದು ವಾಹಿನಿಯವರು, ‘ಯಾರಿಗೋ ಟಾಂಟ್ ಕೊಟ್ರಾ ಕಿಚ್ಚ?’ ಎಂದು ಸುದ್ದಿ ಮಾಡಿದರು. ನಮಗೆ ಟಾಂಟ್ ಕೊಡುವ ಉದ್ದೇಶವೇ ಇಲ್ಲ. ಯಾವ ವಾಹಿನಿ ಈ ಸುದ್ದಿ ಮಾಡಿತೋ, ಅಲ್ಲಿ ಕೆಲಸ ಮಾಡುವವರು ಅವರ ಯಜಮಾನರಿಗೆ ಬಾಸ್ ಎಂದು ಕರೆಯುತ್ತಾರೆ. ಹಾಗಾದರೆ, ನಾನು ಅವರ ಬಾಸ್‍ಗೆ ಅಪಹಾಸ್ಯ ಮಾಡಿದೆನಾ?’ ನಾನು ಬಾಸ್ ಅಂತ ಕರೆಯೋದು ನನ್ನ ತಂದೆಯನ್ನು ಮಾತ್ರ. ಅವರು ಹಾಗೆ ಬರೆಸಿ ತಂದಾಗ, ನನ್ನ ತಂದೆ ಬಗ್ಗೆ ಹೇಳುತ್ತಿದ್ದೀಯ ಎಂದು ಕೇಳಬೇಕಿತ್ತು. ಆದರೆ, ಆ ಹುಡುಗನ ಮನಸ್ಸು ನನಗೆ ಚೆನ್ನಾಗಿ ಗೊತ್ತು. ಅವನದ್ದು ಆ ತರಹ ಮನಸ್ಸಲ್ಲ’ ಎಂದರು ಸುದೀಪ್.