ಮಂಜುನಾಥ ಏಳುತ್ತಾನಾ ಎಂಬುದೇ ಈಗ ಎಲ್ಲರಿಗೂ ಇರುವ ಪ್ರಶ್ನೆ
ಅಂದಹಾಗೆ, ಈ ಚಿತ್ರದ ಹೆಸರು ‘ಎದ್ದೇಳು ಮಂಜುನಾಥ 2’. ಈ ಚಿತ್ರಕ್ಕೆ ಗುರುಪ್ರಸಾದ್ ನಿರ್ದೇಶಕರಷ್ಟೇ ಅಲ್ಲ, ನಾಯಕ ಸಹ ಹೌದು. ನಾಯಕಿಯಾಗಿ ಕನ್ನಡ ಮೂಲದ ರಚಿತಾ ಮಹಾಲಕ್ಷ್ಮೀ ಕಾಣಿಸಿಕೊಂಡಿದ್ದಾರೆ.;
ಗುರುಪ್ರಸಾದ್ ನಿರ್ದೇಶನದ ‘ರಂಗನಾಯಕ’ ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾಗಿ, ಸಾಕಷ್ಟು ಟೀಕೆಗೊಳಗಾಯಿತು. ಆ ಚಿತ್ರದ ನಂತರ ಗುರುಪ್ರಸಾದ್ ಮತ್ತೊಂದು ಚಿತ್ರದೊಂದಿಗೆ ಮರಳಿ ಬರಬಹುದು, ‘ಮಠ’ದಂತಹ ಮತ್ತೊಂದು ಚಿತ್ರವನ್ನು ಕೊಡಬಹುದು ಎಂಬ ನಿರೀಕ್ಷೆ ಅವರ ಅಭಿಮಾನಿಗಳ ವಲಯದಲ್ಲಿತ್ತು. ಆದರೆ, ಅವರ ನಿಧನದಿಂದ ಅದು ಸುಳ್ಳಾಗಿದೆ.
‘ರಂಗನಾಯಕ’ ಚಿತ್ರದ ನಂತರ ಗುರುಪ್ರಸಾದ್ ಯಾವೊಂದು ಚಿತ್ರವನ್ನು ನಿರ್ದೇಶಿಸದಿರಬಹುದು. ಆದರೆ, ಅದಕ್ಕೂ ಮೊದಲೇ ಪ್ರಾರಂಭಿಸಿದ್ದ ಚಿತ್ರವೊಂದು ಇನ್ನೂ ಬಿಡುಗಡೆಯಾಗಿಲ್ಲ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರವನ್ನು ಯಾರಾದರೂ ಬಿಡುಗಡೆ ಮಾಡುವುದಕ್ಕೆ ಮುಂದಾಗುತ್ತಾರಾ? ಎಂಬ ಪ್ರಶ್ನೆಯೊಂದು ಎಲ್ಲರನ್ನೂ ಕಾಡುತ್ತಿದೆ.
ಅಂದಹಾಗೆ, ಈ ಚಿತ್ರದ ಹೆಸರು ‘ಎದ್ದೇಳು ಮಂಜುನಾಥ 2’. ಈ ಚಿತ್ರಕ್ಕೆ ಗುರುಪ್ರಸಾದ್ ನಿರ್ದೇಶಕರಷ್ಟೇ ಅಲ್ಲ, ನಾಯಕ ಸಹ ಹೌದು. ಇದಕ್ಕೂ ಮುನ್ನ ಗುರುಪ್ರಸಾದ್ ‘ಮೈಲಾರಿ’, ‘ಬಾಡಿ ಗಾಡ್’, ‘ಕುಷ್ಕ’, ‘ಕಳ್ ಮಂಜ’ ಸೇರಿದಂತೆ ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ್ದರು. ಆದರೆ, ಯಾವೊಂದು ಚಿತ್ರದಲ್ಲೂ ನಾಯಕನಾಗಿ ಕಾಣಿಸಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ‘ಎದ್ದೇಳು ಮಂಜುನಾಥ 2’ ಚಿತ್ರದಲ್ಲಿಅವರು ನಾಯಕನಾಗಿ ಅಭಿನಯಿಸಿದ್ದರು. ಅವರಿಗೆ ನಾಯಕಿಯಾಗಿ ಕನ್ನಡ ಮೂಲದ ಮತ್ತು ಸದ್ಯ ತಮಿಳು ಧಾರಾವಾಹಿಗಳಲ್ಲಿ ತೊಡಗಿಸಿಕೊಂಡಿರುವ ರಚಿತಾ ಮಹಾಲಕ್ಷ್ಮೀ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ‘ಎದ್ದೇಳು ಮಂಜುನಾಥ 2’ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸುತ್ತಿದ್ದು, ಅಶೋಕ್ ಸಾಮ್ರಾಟ್ ಛಾಯಾಗ್ರಹಣ ಮಾಡಿದ್ದಾರೆ.
‘ಎದ್ದೇಳು ಮಂಜುನಾಥ’ ಚಿತ್ರ ಪ್ರಾರಂಭವಾಗಿ ಮೂರು ವರ್ಷಗಳೇ ಆಗಿವೆ. 2021ರಲ್ಲೇ ಈ ಚಿತ್ರದ ಚಿತ್ರೀಕರಣ ಮುಗಿದಿತ್ತು. ಆ ನಂತರ ಗುರುಪ್ರಸಾದ್, ‘ರಂಗನಾಯಕ’ ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ಕಳೆದ ಮೂರು ವರ್ಷಗಳಲ್ಲಿ ‘ರಂಗನಾಯಕ’ ಚಿತ್ರದ ಕೆಲಸಗಳಲ್ಲೇ ತೊಡಗಿಸಿಕೊಂಡಿದ್ದ ಗುರುಪ್ರಸಾದ್, ಇತ್ತೀಚೆಗೆ ‘ಎದ್ದೇಳು ಮಂಜುನಾಥ 2’ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ಮನಸ್ಸು ಮಾಡಿದ್ದರು. ಅದಕ್ಕೆ ಪೂರಕವಾಗಿ ಡಬ್ಬಿಂಗ್ ಕೆಲಸವನ್ನು ಸಹ ಪ್ರಾರಂಭಿಸಿದ್ದರು.
‘ಎದ್ದೇಳು ಮಂಜುನಾಥ 2’ ಮತ್ತು ‘ಎದ್ದೇಳು ಮಂಜುನಾಥ’ ಚಿತ್ರಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿರುವ ರಚಿತಾ, ‘ಹೆಸರು ಮುಂದುವರೆದಿದೆ ಎಂಬುದು ಬಿಟ್ಟರೆ, ಮಿಕ್ಕಂತೆ ಎರಡೂ ಚಿತ್ರಗಳಿಗೆ ಸಂಬಂಧವಿಲ್ಲ. ಇಲ್ಲಿ ಗುರುಪ್ರಸಾದ್ ಅವರೇ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಾನು ಅವರ ಜೋಡಿಯಾಗಿ ನಟಿಸಿದ್ದೇನೆ. ಇದೊಂದು ಲೋ ಬಜೆಟ್ ಚಿತ್ರ. ನಮಗೆ ಹೆಚ್ಚು ಸಂಭಾವನೆ ಕೊಡಲು ಸಾಧ್ಯವಿಲ್ಲ, ಎಷ್ಟು ಸಾಧ್ಯವೋ ಅಷ್ಟು ಕೊಡುತ್ತೀನಿ ಎಂದು ಹೇಳಿದ್ದರು. ಚಿತ್ರದ ಚಿತ್ರೀಕರಣ ಮೊದಲೇ ಮುಗಿದಿತ್ತು. ಆ ನಂತರ ‘ರಂಗನಾಯಕ’ ಚಿತ್ರದಲ್ಲಿ ಅವರು ತೊಡಗಿಸಿಕೊಂಡಿದ್ದರು. ಅದು ಬಿಡುಗಡೆಯಾದ ನಂತರ ‘ಎದ್ದೇಳು ಮಂಜುನಾಥ 2’ ಬಿಡುಗಡೆಯಾಗುತ್ತದೆ ಎಂದು ಅವರು ಹೇಳಿದ್ದರು’ ಎಂದಿದ್ದಾರೆ.
ಇತ್ತೀಚೆಗೆ ಚಿತ್ರದ ಡಬ್ಬಿಂಗ್ ಸಹ ಮುಗಿಸಿಕೊಟ್ಟಿರುವುದಾಗಿ ಹೇಳಿರುವ ರಚಿತಾ ಮಹಾಲಕ್ಷ್ಮೀ, ‘ಅಕ್ಟೋಬರ್ 17ರಂದು ಚಿತ್ರಕ್ಕೆ ಡಬ್ಬಿಂಗ್ ಮುಗಿಸಿದ್ದೆ. ಆ ನಂತರ ಒಂದು ತಾಸು ಚಿತ್ರದ ಕುರಿತು ಅವರ ಜೊತೆಗೆ ಮಾತನಾಡಿದ್ದೆ. ನಾನು, ಶರತ್ ಲೋಹಿತಾಶ್ವ, ಗುರುಪ್ರಸಾದ್ ಎಲ್ಲರೂ ಡಬ್ಬಿಂಗ್ ಮಾಡಿದ್ದೆವು. ನಮ್ಮ ಕೆಲಸ ಮುಗಿದಿತ್ತು. ಗುರುಪ್ರಸಾದ್ ಅವರದ್ದು ಸ್ವಲ್ಪ ಬಾಕಿ ಇತ್ತು. ಆ ನಂತರ ಚಿತ್ರದ ಕುರಿತು ಒಂದು ತಾಸು ಮಾತನಾಡಿದ್ದೆವು. ಆದರೆ, ಈಗ ಅವರೇ ಇಲ್ಲ ಎಂಬ ಸುದ್ದಿ ಕೇಳಿ ಶಾಕ್ ಆಗಿದೆ’ ಎಂದು ಹೇಳಿದ್ದಾರೆ.