ಮಾಧ್ಯಮಗಳ ಅತಿರೇಕದ ವರ್ತನೆ ವಿರುದ್ಧ ಬಾಲಿವುಡ್‌ ನಟ ಸನ್ನಿ ಡಿಯೋಲ್ ಆಕ್ರೋಶ

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ಸನ್ನಿ ಡಿಯೋಲ್ ತಮ್ಮ ಜುಹು ಮನೆಯಿಂದ ಹೊರಬಂದು ಮಾಧ್ಯಮಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Update: 2025-11-13 08:04 GMT

ಸನ್ನಿ ಡಿಯೋಲ್

Click the Play button to listen to article

ಹಿರಿಯ ನಟ ಧರ್ಮೇಂದ್ರ ಅವರ ಅನಾರೋಗ್ಯದ ಕುರಿತು ಮಾಧ್ಯಮಗಳು ಬೇಕಾಬಿಟ್ಟಿ ವರದಿ ಮಾಡುವ ಮೂಲಕ ವೈಯಕ್ತಿಕ ಗೌಪ್ಯತೆ ಉಲ್ಲಂಘಿಸುತ್ತಿರುವುದಕ್ಕೆ ನಟ ಸನ್ನಿ ಡಿಯೋಲ್ ತೀವ್ರ  ‌ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರ ಮುಂಬೈನ ಜುಹುನಲ್ಲಿರುವ ಮನೆಯ ಹೊರಗೆ ನಿಂತಿದ್ದ ಮಾಧ್ಯಮ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 

ಮಾಧ್ಯಮಗಳ ವಿರುದ್ಧ ಆಕ್ರೋಶ

ಧರ್ಮೇಂದ್ರ ಆರೋಗ್ಯದ ಬಗ್ಗೆ ಪದೇ ಪದೇ ವಿನಂತಿಸಿದರೂ ಮಾಧ್ಯಮಗಳು ಅತಿರೇಕದಿಂದ ವರ್ತಿಸುತ್ತಿವೆ. ಅನಾರೋಗ್ಯ ಪೀಡಿತ ಧರ್ಮೇಂದ್ರ ಪಕ್ಕದಲ್ಲಿ ಸನ್ನಿ ಡಿಯೋಲ್‌ ದುಃಖಿಸುತ್ತಿರುವ ಖಾಸಗಿ ವಿಡಿಯೊ ಸೋರಿಕೆಯಾದ ನಂತರ ಮಾಧ್ಯಮಗಳಉ ಬೇರೆ ಬೇರೆ ರೀತಿಯಲ್ಲಿ ವರದಿ ಮಾಡಿದ್ದು, ಇದು ಕುಟುಂಬದ ಸಹನೆಯನ್ನು ಕಟ್ಟೆಯೊಡೆಯುವಂತೆ ಮಾಡಿತ್ತು. 

ಬುಧವಾರ ಧರ್ಮೇಂದ್ರ ಅವರನ್ನು ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕರೆತರಲಾಯಿತು. ಆಸ್ಪತ್ರೆಯಿಂದ ಬಿಡುಗಡೆಯಾಗುವ ಒಂದು ದಿನ ಮೊದಲು, ಕೆಲ ಮಾಧ್ಯಮಗಳು ಹಿರಿಯ ನಟ ನಿಧನರಾಗಿದ್ದಾರೆ ಎಂದು ಸುದ್ದಿ ಹರಡಿಸಿದ್ದವು. ಈ ಸುಳ್ಳು ಸುದ್ದಿ ಕುಟುಂಬಕ್ಕೆ ಮತ್ತಷ್ಟು ನೋವುಂಟು ಮಾಡಿತ್ತು.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಸನ್ನಿ ಡಿಯೋಲ್ ತಮ್ಮ ಜುಹು ಮನೆಯಿಂದ ಹೊರಬಂದು ಮಾಧ್ಯಮಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

"ಆಪ್ ಲೋಗೋ ಕೋ ಶರಮ್ ಆನಿ ಚಾಹಿಯೇ. ಆಪ್ಕೆ ಘರ್ ಮೇ ಮಾ-ಬಾಪ್ ಹೈ, ಆಪ್ಕೆ ಬಚ್ಚೆ ಹೈ. ಔರ್ ವೋ ದೇಖ್ ಸಿ***** ಕಿ ತರಹ್ ವಿಡಿಯೋ ಕರ್ ಜಾ ರಹೇ ಹೋ. ಶರಮ್ ನಹೀ ಆತಿ (ನಿಮಗೆಲ್ಲ ನಾಚಿಕೆಯಾಗಬೇಕು. ನಿಮ್ಮ ಮನೆಯಲ್ಲಿ ತಂದೆ-ತಾಯಿ ಮತ್ತು ಮಕ್ಕಳಿದ್ದಾರೆ. ಮತ್ತು ಇಲ್ಲಿ ನೀವು ಪಾಪರಾಜಿಗಳಂತೆ ಹೀಗೆ ಚಿತ್ರ ಮಾಡುತ್ತಿದ್ದೀರಿ. ನಿಮಗೆ ನಾಚಿಕೆಯಾಗುವುದಿಲ್ಲವೇ?) ಎಂದು ಕಿಡಿಕಾರಿದ್ದಾರೆ.

ಕುಟುಂಬದಿಂದ ಗೌಪ್ಯತೆ ಕಾಪಾಡಲು ಮನವಿ

89 ವರ್ಷದ ಧರ್ಮೇಂದ್ರ ಅವರು ಪರೀಕ್ಷೆಗಳಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಬೆಳಗಿನ ಜಾವ ಆಸ್ಪತ್ರೆಯಿಂದ ಡಿಸ್ಪಾರ್ಜ್‌ ಆಗಿದ್ದಾರೆ. ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಪ್ರತೀತ್ ಸಮದಾನಿ ಅವರು, ಧರ್ಮೇಂದ್ರ ಅವರು ಮನೆಯಲ್ಲಿಯೇ ಚೇತರಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ ಡಿಯೋಲ್ ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿ, ಮಾಧ್ಯಮಗಳು ಮತ್ತು ಸಾರ್ವಜನಿಕರು ವೃಥಾ ಊಹಾಪೋಹ ಸುದ್ದಿಗಳನ್ನು ಹರಡಬಾರದು. ನಟನ ಗೌಪ್ಯತೆಯನ್ನು ಗೌರವಿಸಬೇಕು ಎಂದು ಧರ್ಮೇಂದ್ರ ಕುಟುಂಬ ಮನವಿ ಮಾಡಿದೆ ಎಂದಿದ್ದಾರೆ.

ಎಲ್ಲರ ಪ್ರೀತಿ, ಪ್ರಾರ್ಥನೆ ಮತ್ತು ಶುಭ ಹಾರೈಕೆಗಳನ್ನು ನಾವು ಪ್ರಶಂಸಿಸುತ್ತೇವೆ. ದಯವಿಟ್ಟು ಅವರನ್ನು ಗೌರವಿಸಿ ಏಕೆಂದರೆ ಅವರು ನಿಮ್ಮನ್ನು ಪ್ರೀತಿಸುತ್ತಾರೆ" ಎಂದು ಕುಟುಂಬ ಮನವಿ ಮಾಡಿದೆ.

ಮಂಗಳವಾರ, ಧರ್ಮೇಂದ್ರ ನಿಧನರಾಗಿದ್ದಾರೆ ಎಂಬ ವದಂತಿಗಳು ಹರಡಿದಾಗ, ಮಗಳು ಇಶಾ ಡಿಯೋಲ್ ಮತ್ತು ಪತ್ನಿ ಹೇಮಾ ಮಾಲಿನಿ ಕೂಡ ಮಾಧ್ಯಮಗಳ ಬೇಜವಾಬ್ದಾರಿಯುತ ನಡವಳಿಕೆ ಖಂಡಿಸಿದ್ದರು. ಕಳೆದ ಎರಡು ದಿನಗಳಿಂದ ಆಸ್ಪತ್ರೆ ಮತ್ತು ಡಿಯೋಲ್ ನಿವಾಸದ ಹೊರಗೆ ಮಾಧ್ಯಮ ಸಿಬ್ಬಂದಿ ಬೀಡುಬಿಟ್ಟಿದ್ದರು.

Tags:    

Similar News