
ಬಾಲಿವುಡ್ 'ಹೀ-ಮ್ಯಾನ್' ಧರ್ಮೇಂದ್ರ ಆಸ್ಪತ್ರೆಯಿಂದ ಬಿಡುಗಡೆ; ಮನೆಯಲ್ಲೇ ಚಿಕಿತ್ಸೆ
ಧರ್ಮೇಂದ್ರ ಅವರನ್ನು ಬೆಳಿಗ್ಗೆ 7.30 ರ ಸುಮಾರಿಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಮನೆಯಲ್ಲಿಯೇ ಚಿಕಿತ್ಸೆ ಮುಂದುವರಿಸುವ ಕುರಿತು ಕುಟುಂಬ ನಿರ್ಧರಿಸಿದೆ. ಸದ್ಯ ಧರ್ಮೇಂದ್ರ ಅವರು ಚೇತರಿಸಿಕೊಳ್ಳಲಿದ್ದಾರೆ ಎಂದು ಡಾ. ಪ್ರತೀತ್ ಸಮ್ದಾನಿ ಅವರು ಮಾಹಿತಿ ನೀಡಿದ್ದಾರೆ.
ಬಾಲಿವುಡ್ ದಂತಕಥೆ, 89 ವರ್ಷ ವಯಸ್ಸಿನ ಧರ್ಮೇಂದ್ರ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು, ಬುಧವಾರ ಬೆಳಿಗ್ಗೆ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಕಳೆದ ವಾರ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟನಿಗೆ ಈಗ ಮನೆಯಲ್ಲೇ ಚಿಕಿತ್ಸೆ ಮುಂದುವರಿಸಲು ಅವರ ಕುಟುಂಬ ನಿರ್ಧರಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವೈದ್ಯರು ತಿಳಿದ್ದಾರೆ.
ಧರ್ಮೇಂದ್ರ ಅವರನ್ನು ಬೆಳಿಗ್ಗೆ 7.30 ರ ಸುಮಾರಿಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಸದ್ಯ ಆರೋಗ್ಯ ಸುಧಾರಿಸಿದೆ ಎಂದು ಡಾ. ಪ್ರತೀತ್ ಸಮ್ದಾನಿ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಧರ್ಮೇಂದ್ರ ಅವರು ನಿಧನದ ಊಹಾಪೋಹಗಳು ಹರಡಿದ ಬಳಿಕ ರಾಜಕಾರಣಿಗಳು ಮತ್ತು ಬಾಲಿವುಡ್ ಗಣ್ಯರು ಸಂತಾಪ ಸೂಚಿಸಿದ್ದರು. ಅಭಿಮಾನಿಗಳು ಕೂಡ ತೀವ್ರ ಆತಂಕ ವ್ಯಕ್ತಪಡಿಸಿದ್ದರು.
ಇದರಿಂದ ಎಚ್ಚೆತ್ತುಕೊಂಡ ಧರ್ಮೇಂದ್ರ ಕುಟುಂಬ ಕೂಡಲೇ ನಿಧನದ ಸುದ್ದಿಯನ್ನು ತಳ್ಳಿ ಹಾಕಿತ್ತು. ಧರ್ಮೇಂದ್ರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದರು.
70ರ ದಶಕದಲ್ಲಿ ಹಿಂದಿ ಚಲನಚಿತ್ರೋದ್ಯಮವನ್ನು ತಮ್ಮ ಪೌರುಷ ಮತ್ತು ನಟನೆಯಿಂದ ಆಳಿದ ಧರ್ಮೇಂದ್ರ ಅವರನ್ನ 'ಬಾಲಿವುಡ್‌ನ ಹೀ-ಮ್ಯಾನ್' ಎಂದೇ ಕರೆಯಲಾಗುತ್ತಿತ್ತು. 1960 ರ 'ದಿಲ್ ಭಿ ತೇರಾ ಹಮ್ ಭಿ ತೇರೆ' ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ ಧರ್ಮೇಂದ್ರ ಅವರು ಆರು ದಶಕಗಳ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ 'ಯಾದೋನ್ ಕಿ ಬಾರಾಸ್', 'ಮೇರಾ ಗಾಂವ್ ಮೇರಾ ದೇಶ್', 'ಫೂಲ್ ಔರ್ ಪತ್ತರ್', 'ಸೀತಾ ಔರ್ ಗೀತಾ', 'ಶೋಲೆ', 'ರಾಜಾ ಜಾನಿ', 'ಲೋಫರ್', 'ಗುಡ್ಡಿ', 'ಅನುಪಮಾ' ಮುಂತಾದ ಅಸಂಖ್ಯಾತ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

