ಕುಸಿದು ಬಿದ್ದ ಬಾಲಿವುಡ್ ನಟ ಗೋವಿಂದ ; ಆಸ್ಪತ್ರೆಗೆ ದಾಖಲು

ಗೋವಿಂದ ಅಸ್ವಸ್ಥಗೊಂಡಿರುವ ವಿಷಯವನ್ನು ಅವರ ಸ್ನೇಹಿತ ಮತ್ತು ಕಾನೂನು ಸಲಹೆಗಾರ ಲಲಿತ್ ಬಿಂದಾಲ್ ಖಚಿತಪಡಿಸಿದ್ದು, ವೈದ್ಯರ ಸಲಹೆ ಮೇರೆಗೆ ಔಷಧ ನೀಡಿ ರಾತ್ರಿ 1 ಗಂಟೆಗೆ ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Update: 2025-11-12 04:34 GMT

ನಟ ಗೋವಿಂದ 

Click the Play button to listen to article

ಬಾಲಿವುಡ್‌ ಹಿರಿಯ ನಟ ಗೋವಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಮುಂಬೈನ ಜುಹು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ರಾತ್ರಿ ಮುಂಬೈ ನಿವಾಸದಲ್ಲಿ ನಟ ಗೋವಿಂದ ಅವರು ಕುಸಿದು ಬಿದ್ದ ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು.

ಅವರ ಸ್ನೇಹಿತ ಮತ್ತು ಕಾನೂನು ಸಲಹೆಗಾರ ಲಲಿತ್ ಬಿಂದಾಲ್ ಅವರು ಈ ವಿಷಯವನ್ನು ಖಚಿತಪಡಿಸಿದ್ದು, ವೈದ್ಯರ ಸಲಹೆಯ ಮೇರೆಗೆ ಔಷಧಗಳನ್ನು ನೀಡಿ ರಾತ್ರಿ 1 ಗಂಟೆಗೆ ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಪರೀಕ್ಷಾ ವರದಿಗಾಗಿ ನಿರೀಕ್ಷೆ

ಗೋವಿಂದ ಅವರ ಆರೋಗ್ಯ ಸ್ಥಿತಿ ಕುರಿತು ಇನ್ನಷ್ಟು ಮಾಹಿತಿ ನೀಡಲು ನಿರಾಕರಿಸಿದ ಬಿಂದಾಲ್ ಅವರು, ನಟನಿಗೆ ಹಲವಾರು ಪರೀಕ್ಷೆಗಳನ್ನು ನಡೆಸಲಾಗಿದ್ದು, ವರದಿಗಳು ಬಂದ ನಂತರವೇ ಅವರ ಆರೋಗ್ಯದ ಕುರಿತು ಸ್ಪಷ್ಟವಾದ ಮಾಹಿತಿ ನೀಡಲು ಸಾಧ್ಯ ಎಂದು ಹೇಳಿದ್ದಾರೆ.

ಸದ್ಯಕ್ಕೆ ಅವರು ವೈದ್ಯರ ನಿಗಾದಲ್ಲಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.

ಧರ್ಮೇಂದ್ರರನ್ನು ಭೇಟಿಯಾಗಿ ಬಂದ ಬೆನ್ನಲ್ಲೇ ಘಟನೆ

ಈ ಘಟನೆ ನಡೆಯುವ ಒಂದು ದಿನ ಮೊದಲು, ಸೋಮವಾರ ಗೋವಿಂದ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹಿರಿಯ ನಟ ಧರ್ಮೇಂದ್ರ ಅವರನ್ನು ಭೇಟಿ ಮಾಡಿ, ಅವರ ಆರೋಗ್ಯ ವಿಚಾರಿಸಿ ಬಂದಿದ್ದರು.

ಧರ್ಮೇಂದ್ರ ಅವರ ಅನಾರೋಗ್ಯದ ಕುರಿತು ಚಿಂತಾಜನಕ ಪರಿಸ್ಥಿತಿ ಇರುವಾಗ ಗೋವಿಂದ ಅವರು ಸಹ ಆಸ್ಪತ್ರೆ ಸೇರಿರುವುದು ಬಾಲಿವುಡ್ ವಲಯದಲ್ಲಿ ಆತಂಕ ಮೂಡಿಸಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗೋವಿಂದ ಅವರು ತಮ್ಮ ಪರವಾನಗಿ ಪಡೆದ ಪಿಸ್ತೂಲಿನಿಂದ ಆಕಸ್ಮಿಕವಾಗಿ ಕಾಲಿಗೆ ಗುಂಡು ತಗುಲಿಸಿಕೊಂಡು ಇದೇ ಆಸ್ಪತ್ರೆಗೆ ದಾಖಲಾಗಿದ್ದರು. ಕೋಲ್ಕತ್ತಾದ ಕಾರ್ಯಕ್ರಮಕ್ಕೆ ಹೋಗಲು ಸಿದ್ಧವಾಗುತ್ತಿದ್ದಾಗ, ಬೆಳಗಿನ ಜಾವ 5 ಗಂಟೆ ಸುಮಾರಿಗೆ ಗನ್ ಕೆಳಗೆ ಬಿದ್ದು ಗುಂಡು ಹಾರಿತು. ತಕ್ಷಣವೇ ರಕ್ತಸ್ರಾವವಾಗಿ, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಗುಂಡನ್ನು ಹೊರತೆಗೆಯಲಾಗಿತ್ತು. ಈ ಘಟನೆಯ ನಂತರ ಇದೀಗ ಗೋವಿಂದ ಎರಡನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

Tags:    

Similar News