ಚೊಚ್ಚಲ ಚಿತ್ರದಲ್ಲೇ ಸ್ಟಾರ್‌ ನಿರ್ದೇಶಕ ಪಟ್ಟ ಅಲಂಕರಿಸಿದ್ದ ಗುರುಪ್ರಸಾದ್‌
x

ಚೊಚ್ಚಲ ಚಿತ್ರದಲ್ಲೇ ಸ್ಟಾರ್‌ ನಿರ್ದೇಶಕ ಪಟ್ಟ ಅಲಂಕರಿಸಿದ್ದ ಗುರುಪ್ರಸಾದ್‌

ಮಠ ಸಿನಿಮಾಕ್ಕೆ ರಾಜ್ಯ ಚಲನ ಚಿತ್ರ ಪ್ರಶಸ್ತಿ ಸಹ ದೊರೆತಿತ್ತು. ʼರಂಗನಾಯಕ’ ಸಿನಿಮಾದ ಸೋಲಿನಿಂದ ವಿಚಲಿತರಾಗಿದ್ದ ಗುರುಪ್ರಸಾದ್ ಸಾಕಷ್ಟು ಸಾಲಗಳಿಗೆ ಸಿಲುಕಿಕೊಂಡಿದ್ದರು. ಈ ಮಧ್ಯೆ, ಕೌಟುಂಬಿಕ ಕಲಹದಿಂದಾಗಿ ಮೊದಲ ಮದುವೆ ಮುರಿದು ಬಿದ್ದಿತ್ತು.


ಚೊಚ್ಚಲ ಚಿತ್ರದಲ್ಲೇ ಸ್ಟಾರ್‌ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ʼಮಠʼ ಖ್ಯಾತಿಯ ಕನಕಪುರ ಮೂಲದ ಗುರುಪ್ರಸಾದ್‌ ರಾಮಚಂದ್ರ ಶರ್ಮಾ (ಗುರುಪ್ರಸಾದ್‌) ನಿಗೂಢ ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಶಾಕ್‌ ನೀಡಿದೆ.

2006 ರಲ್ಲಿ ಮಠ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ ಗುರುಪ್ರಸಾದ್‌ ಅವರು, ಎದ್ದೇಳು ಮಂಜುನಾಥ, ಡೈರೆಕ್ಟರ್‌ ಸ್ಪೆಷಲ್‌, ಎರಡನೇ ಸಲ, ರಂಗನಾಯಕ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ] ಮಠ ನಂತರ ಎದ್ದೇಳು ಮಂಜುನಾಥ ಚಿತ್ರ ಸೂಪರ್‌ ಹಿಟ್‌ ಆಗಿ ಹೆಸರು ತಂದುಕೊಟ್ಟಿತು. ಎರಡೂ ಚಿತ್ರಗಳು ಸಕಾರಾತ್ಮಕ ವಿಮರ್ಶೆಗಳೊಂದಿಗೆ ಸೂಪರ್‌ ಹಿಟ್‌ ಆಗಿದ್ದವು. ವಿಡಂಬನೆಯನ್ನು ನೈಜವಾಗಿ ತೆರೆಯ ಮೇಲೆ ಚಿತ್ರಿಸುವುದರಲ್ಲಿ ಗುರುಪ್ರಸಾದ್‌ ಹೆಸರಾಗಿದ್ದರು.

ಇವರ ಅಡೆಮಾ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ನಿರ್ದೇಶಕರಾಗಿ ಮಾತ್ರವಲ್ಲದೇ ನಿರ್ಮಾಪಕರಾಗಿ, ಬರಹಗಾರರಾಗಿ ಹಾಗೂ ಕಥೆಗಾರರಾಗಿಯೂ ಗುರುಪ್ರಸಾದ್‌ ಹೆಸರು ಮಾಡಿದ್ದರು. ಮಠ, ಎದ್ದೇಳು ಮಂಜುನಾಥ, ಮೈಲಾರಿ, ಕಳ್‌ ಮಂಜ, ಹುಡುಗರು, ಡೈರೆಕ್ಟರ್‌ ಸ್ಪೆಷಲ್‌, ಶಿಳ್ಳೆ ಹೊಡೆಯಿರಿ, ಕರೋಡ್‌ಪತಿ, ಜಿಗರ್ತಾಂಡ, ಅನಂತು ವೆಡ್ಸ್‌ ನುಸ್ರತ್‌, ಬಡವ ರಾಸ್ಕಲ್‌ ಸೇರಿದಂತೆ ಹಲವು ಚಿತ್ರಗಳಲ್ಲಿ ನಟನಾ ಕೌಶಲ್ಯವನ್ನೂ ತೋರಿಸಿದ್ದಾರೆ.

ಮಠ ಸಿನಿಮಾಕ್ಕೆ ರಾಜ್ಯ ಚಲನ ಚಿತ್ರ ಪ್ರಶಸ್ತಿ ಸಹ ದೊರೆತಿತ್ತು. ʼರಂಗನಾಯಕ’ ಸಿನಿಮಾದ ಸೋಲಿನಿಂದ ವಿಚಲಿತರಾಗಿದ್ದ ಗುರುಪ್ರಸಾದ್ ಸಾಕಷ್ಟು ಸಾಲಗಳಿಗೆ ಸಿಲುಕಿಕೊಂಡಿದ್ದರು. ಈ ಮಧ್ಯೆ, ಕೌಟುಂಬಿಕ ಕಲಹದಿಂದಾಗಿ ಮೊದಲ ಮದುವೆ ಮುರಿದು ಬಿದ್ದಿತ್ತು. ಕೆಲ ತಿಂಗಳ ಹಿಂದಷ್ಟೆ ಅವರು ಎರಡನೇ ಮದುವೆ ಆಗಿದ್ದರು ಎಂದು ಮೂಲಗಳು ತಿಳಿಸಿವೆ.

ನಿರ್ದೇಶಕ ಗುರುಪ್ರಸಾದ್‌ ಅವರು ಚಿತ್ರರಂಗವಲ್ಲದೇ ಬೆಳ್ಳಿ ತೆರೆಯ ರಿಯಾಲಿಟಿ ಶೋಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಶೋನಲ್ಲಿ ತೀರ್ಪುಗಾರರಾಗಿಯೂ ಕಾಣಿಸಿಕೊಂಡಿದ್ದರು.

ಇನ್ನು ಗುರುಪ್ರಸಾದ್‌ ಅವರು ವಿವಾದಗಳಿಂದಲೂ ದೂರವಾಗಿರಲಿಲ್ಲ. 2023 ರಲ್ಲಿ ಸಾಲ ವಾಪಸ್‌ ನೀಡದ ಕಾರಣಕ್ಕೆ ಗುರುಪ್ರಸಾದ್‌ ಅವರನ್ನು ಬೆಂಗಳೂರಿನ ಗಿರಿನಗರ ಪೊಲೀಸರು ಬಂಧಿಸಿದ್ದರು. ನಂತರ ಬಿಡುಗಡೆ ಮಾಡಿದ್ದರು. ಜಯನಗರದಲ್ಲಿರುವ ಟೋಟಲ್ ಕನ್ನಡ ಪುಸ್ತಕ ಮಳಿಗೆಯಲ್ಲಿ ರಿಯಾಯಿತಿ ದರದಲ್ಲಿ ಪುಸ್ತಕ ಖರೀದಿಸಿದ ಗುರುಪ್ರಸಾದ್​, ಹಣ ನೀಡದೇ ಸತಾಯಿಸುತ್ತಿದ್ದಾರೆ ಎಂದು ಆರೋಪದಡಿ ದೂರು ಸಹ ದಾಖಲಾಗಿತ್ತು.

Read More
Next Story