'ಮಹಾನಟಿ ಸೀಸನ್ 2'| ಮಂಗಳೂರಿನ ವಂಶಿ ರತ್ನಕುಮಾರ್‌ಗೆ ಮಹಾನಟಿ ಕಿರೀಟ
ನವೆಂಬರ್ 9 ರಂದು ನಡೆದ ಅದ್ದೂರಿ ಗ್ರ್ಯಾಂಡ್ ಫಿನಾಲೆಯಲ್ಲಿ ವಂಶಿ ಅವರು 'ಮಹಾನಟಿ' ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಹಾನಟಿ ಕಿರೀಟಕ್ಕೆ ವಂಶಿ ಮುಡಿಪು
ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾನಟಿ ಸೀಸನ್ 2' ರಿಯಾಲಿಟಿ ಶೋನ ವಿಜೇತರಾಗಿ ಮಂಗಳೂರಿನ ವಂಶಿ ರತ್ನಕುಮಾರ್ ಹೊರಹೊಮ್ಮಿದ್ದಾರೆ.
ನವೆಂಬರ್ 9 ರಂದು ನಡೆದ ಅದ್ದೂರಿ ಗ್ರ್ಯಾಂಡ್ ಫಿನಾಲೆಯಲ್ಲಿ ವಂಶಿ ಅವರು 'ಮಹಾನಟಿ' ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಯುವ ನಟಿಯರನ್ನು ಪರಿಚಯಿಸುವ ಗುರಿಯನ್ನು ಹೊಂದಿರುವ ಈ ಕಾರ್ಯಕ್ರಮದ ಎರಡನೇ ಆವೃತ್ತಿಯ ವಿಜಯಶಾಲಿ ವಂಶಿ ಅವರಿಗೆ ವೈಟ್‌ಗೋಲ್ಡ್ ವತಿಯಿಂದ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟ ಮತ್ತು ಟ್ರೋಫಿ ಬಹುಮಾನವಾಗಿ ಸಿಕ್ಕಿದೆ.
ಫೈನಲ್ ಹಂತಕ್ಕೆ ವಂಶಿ ರತ್ನಕುಮಾರ್, ವರ್ಷಾ ಡಿಗ್ರಜೆ, ಮಾನ್ಯ ರಮೇಶ್, ಶ್ರೀಯ ಅಗಮ್ಯ ಹಾಗೂ ಭೂಮಿಕಾ ತಮ್ಮೇಗೌಡ ಅವರು ತಲುಪಿದ್ದರು. ಬೆಳಗಾವಿಯ ವರ್ಷಾ ಡಿಗ್ರಜೆ ಅವರು ಮೊದಲ ರನ್ನರ್ ಅಪ್ ಆಗಿ 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ಪಡೆದುಕೊಂಡರೆ, ಮೈಸೂರಿನ ಶ್ರೀಯ ಅಗಮ್ಯ ಅವರು ಎರಡನೇ ರನ್ನರ್ ಅಪ್ ಸ್ಥಾನ ಗಳಿಸಿದರು.
ಈ ವಿಜಯವನ್ನು ತಮ್ಮ ಹೆತ್ತವರ ಕನಸಿಗೆ ಅರ್ಪಿಸಿದ ವಂಶಿ ಅವರು, ಈ ಗೆಲುವು ಮುಂಬರುವ ಸಾಧನೆಗಳಿಗೆ ಒಂದು ಮೊದಲ ಹೆಜ್ಜೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ವಂಶಿ ಅವರು 'ಡ್ರಾಮಾ ಜೂನಿಯರ್ಸ್ ಸೀಸನ್ 2' ರ ವಿಜೇತರೂ ಆಗಿದ್ದರು.
ಹಿರಿಯ ನಟ ರಮೇಶ್ ಅರವಿಂದ್, ನಟಿ ಪ್ರೇಮಾ, ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ನಿಶ್ವಿಕಾ ನಾಯ್ಡು ಅವರು ಈ ಶೋನ ತೀರ್ಪುಗಾರರಾಗಿದ್ದರು. ಅನುಶ್ರೀ ಅವರು ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದರು.
'ಮಹಾನಟಿ' ಶೋ ಕೇವಲ ರಿಯಾಲಿಟಿ ಸ್ಪರ್ಧೆಗಿಂತ ಹೆಚ್ಚಾಗಿ, ಸಿನಿರಂಗಕ್ಕೆ ಪ್ರವೇಶಿಸಲು ಬಯಸುವ ಯುವ ನಟಿಯರಿಗೆ ತರಬೇತಿ ಮತ್ತು ಅವಕಾಶಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿತ್ತು. ಗ್ರ್ಯಾಂಡ್ ಫಿನಾಲೆಗೂ ಮುನ್ನ, ಐವರು ಫೈನಲಿಸ್ಟ್‌ಗಳು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಹರಿ ಸಂತೋಷ್, ಪನ್ನಗಾಭರಣ, ಕವಿರಾಜ್, ಶ್ರೀನಿಧಿ ಬೆಂಗಳೂರು ಮತ್ತು ಉಮೇಶ್ ಕೆ. ಕೃಪ ನಿರ್ದೇಶನದ ಐದು ಕಿರುಚಿತ್ರಗಳಲ್ಲಿ ನಟಿಸುವ ಅವಕಾಶ ಪಡೆದಿದ್ದು, ಈ ಕಿರುಚಿತ್ರಗಳು ಥಿಯೇಟರ್‌ನಲ್ಲಿ ಪ್ರೀಮಿಯರ್ ಸಹ ಆಗಿದ್ದವು. ಇದು ಬೆಳ್ಳಿಪರದೆಯತ್ತ ಮೊದಲ ಹೆಜ್ಜೆ ಇಡುತ್ತಿರುವ ಪ್ರತಿಭೆಗಳಿಗೆ ದೊಡ್ಡ ಉತ್ತೇಜನ ನೀಡಿದೆ.