UI Release | ಉಪೇಂದ್ರ ನಟನೆಯ ‘ಯುಐ’ ಸಿನಿಮಾ ರಿಲೀಸ್
ಶುಕ್ರವಾರ ಬೆಳಿಗ್ಗೆ 6.30ರಿಂದಲೇ ಪ್ರದರ್ಶನ ಆರಂಭವಾಗಿದೆ. ಬೆಂಗಳೂರಿನ ವೀರೇಶ್ ಥಿಯೇಟರ್ ನಲ್ಲಿ 6.30ಕ್ಕೆ ಪ್ರದರ್ಶನ ಆರಂಭ ಆಗಿದೆ.;
ಬರೋಬ್ಬರಿ ಹತ್ತು ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿರುವ ʻಯುಐʼ ಇಂದು ಬಿಡುಗಡೆಗೊಂಡಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಯುಐ ಸಿನಿಮಾ ತೆರೆಕಂಡಿದೆ. ಒಟ್ಟು 2000 ಕ್ಕೂ ಹೆಚ್ಚಿನ ಸ್ಕ್ರೀನ್ ಗಳಲ್ಲಿ ಯುಐ ತರೆ ಕಂಡಿದೆ.
ಶುಕ್ರವಾರ ಬೆಳಿಗ್ಗೆ 6.30ರಿಂದಲೇ ಪ್ರದರ್ಶನ ಆರಂಭವಾಗಿದೆ. ಬೆಂಗಳೂರಿನ ವೀರೇಶ್ ಥಿಯೇಟರ್ ನಲ್ಲಿ 6.30ಕ್ಕೆ ಪ್ರದರ್ಶನ ಆರಂಭ ಆಗಿದೆ. ಬೆಳಗಿನ 6.30ರ ಶೋ ಹಾಗೂ 10 ಗಂಟೆ ಮಾರ್ನಿಂಗ್ ಶೋಗಳೆರಡೂ ಹೌಸ್ ಫುಲ್ ಆಗಿವೆ. ಅಭಿಮಾನಿಗಳಿಗಾಗಿ ಸಂತೋಷ್ ಚಿತ್ರಮಂದಿರದಲ್ಲಿ ಸ್ಪೆಷಲ್ ಶೋ ಕೂಡ ಇತ್ತು.
ಎಷ್ಟು ಟಿಕೆಟ್‌ಗಳು ಸೇಲ್?
ಉಪೇಂದ್ರ, ರೀಷ್ಮಾ ನಾಣಯ್ಯ ನಟನೆಯ ಸಿನಿಮಾ 'ಯುಐ' ಅನ್ನು ಕರ್ನಾಟಕದಾದ್ಯಂತ ಕೆವಿಎನ್ ನಿರ್ಮಾಣ ಸಂಸ್ಥೆ ವಿತರಣೆ ಮಾಡುತ್ತಿದೆ. ಮೊದಲ ದಿನ ಕರ್ನಾಟಕದಾದ್ಯಂತ ಸುಮಾರು 2.22 ಲಕ್ಷ ಟಿಕೆಟ್‌ಗಳು ಈಗಾಗಲೇ ಬುಕಿಂಗ್ ಆಗಿರುವುದಾಗಿ ಕೆವಿಎನ್ ಸಂಸ್ಥೆ ಅಧಿಕೃತವಾಗಿ ಘೋಷಣೆ ಮಾಡಿಕೊಂಡಿದೆ.
ಪ್ರೇಕ್ಷಕರಿಗೆ ಉಪೇಂದ್ರ ಸವಾಲು
ವಿಶಿಷ್ಠ ಕಥಾಹಂದರ ಹೊಂದಿರುವ ಸಿನಿಮಾ 'ಯುಐ' ಸಿನಿಮಾ ವೀಕ್ಷಿಸಿ ಪ್ರೇಕ್ಷಕರು ಯಾವ ರೀತಿ ಸ್ಪಂದಿಸುತ್ತಾರೆ ಅನ್ನೋ ಕುತೂಹಲ ಇದೆ. ಹೀಗಿರುವಾಗಲೇ ಸಿನಿಮಾ ನೋಡುಗನಿಗೆ ಉಪೇಂದ್ರ ಸವಾಲೊಂದನ್ನು ಎಸೆದಿದ್ದಾರೆ. ನಟ-ನಿರ್ದೇಶಕ ಉಪೇಂದ್ರ ತಮ್ಮ ಸಿನಿಮಾ ಬಿಡುಗಡೆ ಬೆನ್ನಲ್ಲೇ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ, ''ಕಾತರದಿಂದ ಕಾಯುತ್ತಿದ್ದೇನೆ.. U I ಚಿತ್ರದ ಎಷ್ಟು ಸೀನ್ಗಳನ್ನು ಡೀಕೋಡ್ ಮಾಡುತ್ತೀರಾ ಮತ್ತು ಕೊನೆಯ ಶಾಟ್ ಡಿಕೋಡ್ ಮಾಡಲು ಎಷ್ಟು ಸಮಯ ತೆಗೆದು ಕೊಳ್ಳುತ್ತೀರಾ ಎಂದು…..'' ಬರೆದುಕೊಂಡಿದ್ದಾರೆ.
ಅಭಿಮಾನಿಗಳಿಂದ ವಿಶೇಷ ಪೂಜೆ
ಉಪೇಂದ್ರ ಅವರ ಯುಐ ಸಿನಿಮಾದ ರಿಲೀಸ್ ಸಮಯದಲ್ಲೇ ಥಿಯೇಟರ್ ಮುಂದೆ ಅಭಿಮಾನಿ ಒಬ್ಬರು ಶಿವರಾಜ್‌ಕುಮಾರ್ ಅವರು ಆರೋಗ್ಯವಾಗಿ ಭಾರತಕ್ಕೆ ಹಿಂದಿರುಗಲಿ ಎಂದು ಪೂಜೆ ಮಾಡಿಸಿದ್ದಾರೆ. ಥಿಯೇಟರ್ ಮುಂದೆ ಶಿವರಾಜ್‌ಕುಮಾರ್ ಹಾಗೂ ಉಪೇಂದ್ರ ಅವರ ಫೋಟೋಗಳನ್ನಿಟ್ಟು ಹೋಮಾ ರೀತಿ ಬೆಂಕಿ ಕುಂಡಕ್ಕೆ ತುಪ್ಪ ಸುರಿದು ಮೂವರು ಪೂಜಾರಿಗಳು ಮಂತ್ರ ಪಠಣೆ ಮಾಡಿದ್ದಾರೆ. ಶಿವರಾಜ್ ಕುಮಾರ್ ಅವರು ಅಮೆರಿಕಕ್ಕೆ ಚಿಕಿತ್ಸೆಗೆಂದು ತೆರಳಿದ್ದಾರೆ. ಹೀಗಾಗಿ ಉಪೇಂದ್ರ ಅವರ ಸಿನಿಮಾ ರಿಲೀಸ್ ವೇಳೆ ಶಿವರಾಜ್‌ಕುಮಾರ್ ಅವರು ಆರೋಗ್ಯವಾಗಿ ಬರಲೆಂದು ಥಿಯೇಟರ್ ಮುಂದೆ ಪೂಜೆ ಮಾಡಿಸಿದ್ದಾರೆ.
ಲಹರಿ ಫಿಲ್ಮ್ಸ್, ವೀನಸ್ ಎಂಟರ್ ಪ್ರೈಸಸ್ ಲಾಂಛನದಡಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಬಿಗ್ ಬಜೆಟ್ನಲ್ಲಿ ಈ ಬಹುನಿರೀಕ್ಷಿತ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನವೀನ್ ಮನೋಹರ್ ಈ ಸಿನಿಮಾವನ್ನು ನಿರ್ಮಿಸಿದ್ದು, ತುಳಸಿರಾಮ ನಾಯ್ಡು (ಲಹರಿ ವೇಲು), ಜಿ.ರಮೇಶ್, ಜಿ.ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಅವರು ಕಾರ್ಯಕಾರಿ ನಿರ್ಮಾಪಕರು. ಉಪ್ಪಿ ಜೋಡಿಯಾಗಿ ರೀಷ್ಮಾ ನಾಣಯ್ಯ ಅಭಿನಯಿಸಿದ್ದಾರೆ. ಖ್ಯಾತ ಸಂಗೀತ ನಿರ್ದೆಶಕ ಅಜನೀಶ್ ಲೋಕನಾಥ್ ಅವರ ಸಂಗೀತ ಸಿನಿಮಾಗಿದೆ.