Uniform ticket rates | ಮಲ್ಟಿಪ್ಲೆಕ್ಸ್‌ ಮುತ್ತಿಗೆಯತ್ತ ಕನ್ನಡ ಚಿತ್ರರಂಗದ ಚಿತ್ತ

ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಏಕರೂಪದ ಟಿಕೆಟ್‌ ದರ ನಿಗದಿಯಾಗಬೇಕು. ಈ ಹಿಂದೆ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದ್ದರೂ, ಅಧಿಕಾರಿಗಳ ತಪ್ಪಿನಿಂದ ಕನ್ನಡ ಚಿತ್ರರಂಗ ಇಂದು ನಲಗುತ್ತಿದೆ. ಈ ಬಾರಿ ಸರ್ಕಾರ ಕೊಟ್ಟಮಾತಿಗೆ ತಪ್ಪಿದಲ್ಲಿ ಮಲ್ಟಿಪ್ಲೆಕ್ಸ್‌ ಗಳಿಗೆ ಮುತ್ತಿಗೆ ಹಾಕಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ. ಕನ್ನಡ ಚಿತ್ರದ್ಯೋಮ ಮತ್ತು ಮಲ್ಟಿಪ್ಲೆಕ್ಸ್‌ ಮಾಲೀಕರ ನಡುವಿನ ಸಂಘರ್ಷ ಈಗ ತಾರಕಕ್ಕೇರಿದೆ. ಹಾಗೇನಾದರೂ, ಸರ್ಕಾರ ಸರಿಯಾದ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಸದ್ಯ ಬಿಡುಗಡೆಗಾಗಿ ಕಾಯುತ್ತಿರುವ ತೆಲುಗಿನ ಅಲ್ಲೂ ಅರ್ಜುನ್‌ ಅವರ ʻಪುಷ್ಪಾ-2ʼ ಚಿತ್ರವೇ, ಕನ್ನಡ ಚಿತ್ರರಂಗದ ಆಕೋಷಕ್ಕೆ ಬಲಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Update: 2024-10-30 05:51 GMT

ಪ್ರೇಕ್ಷಕರು ಚಿತ್ರಮಂದಿರಗಳತ್ತ ಕಣ್ಣೆತ್ತಿ ನೋಡದಂಥ ಸ್ಥಿತಿ ನಿರ್ಮಾಣವಾಗಿರುವ ಇಂದಿನ ಸಂದರ್ಭದಲ್ಲಿ, ಕನ್ನಡ ಚಿತ್ರರಂಗ ಮತ್ತು ಏಕಪರದೆ ಚಿತ್ರಮಂದಿರಗಳ ಭವಿಷ್ಯದ ದೃಷ್ಟಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈಗ ಕರ್ನಾಟಕದ ಎಲ್ಲ ಚಿತ್ರಮಂದಿರಗಳಲ್ಲಿ ಏಕರೀತಿಯ ಸಿನಿಮಾ ಟಿಕೆಟ್‌ ದರವನ್ನು ನಿಗದಿಪಡಿಸಬೇಕೆಂಬ ತನ್ನ ಏಳು ವರ್ಷಗಳ ಹಿಂದಿನ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದೆ.

ಸರ್ಕಾರಕ್ಕೆ ಏಕಪರದೆ ಚಿತ್ರಮಂದಿರಗಳ ಪ್ರತಿನಿಧಿಗಳು, ಕನ್ನಡ ಚಿತ್ರೋದ್ಯಮದ ಗಣ್ಯರು ಒತ್ತಡ ತಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಂ.ಎನ್‌, ಸುರೇಶ್‌ ಅವರ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು.

ಕನ್ನಡ ಚಲನಚಿತ್ರ ಸಂರಕ್ಷಣಾ ವೇದಿಕೆ ಧರಣಿ

ಸರ್ಕಾರ ಏಕರೂಪ ಟಿಕೆಟ್‌ ದರವನ್ನು ನಿಗದಿ ಮಾಡಬೇಕೆಂದು ಆಗ್ರಹಿಸಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮುಂದೆ ನಿರ್ದೇಶಕ ಟೆ.ಶಿ. ವೆಂಕಟೇಶ್‌ ನೆತೃತ್ವದಲ್ಲಿ ʼಕನ್ನಡ ಚಲನಚಿತ್ರ ಸಂರಕ್ಷಣಾ ವೇದಿಕೆ ಸದಸ್ಯರು ಕಳೆದೊಂದು ವಾರದಿಂದ ಧರಣಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ಮನವಿಯನ್ನು ಸಲ್ಲಿಸಿತ್ತು.

ಸರ್ಕಾರದ ತಪ್ಪು ಆದೇಶ

ಈ ನಿಯೋಗದಲ್ಲಿ ಕಾಂಗ್ರೆಸ್‌ ಪಕ್ಷದ ಮಾಜಿ ವಿಧಾನ ಪರಿಷತ್‌ ಸದಸ್ಯ ಮತ್ತು ಚಲನಚಿತ್ರ ನಿರ್ಮಾಪಕ ಕೊಂಡಜ್ಜಿ ಮೋಹನ್‌ ಅವರು ಕೂಡ ಹಾಜರಿದ್ದು, ಸಿದ್ದರಾಮಯ್ಯನವರಿಗೆ ಕನ್ನಡ ಚಿತ್ರರಂಗದ ಸ್ಥಿತಿಗತಿ ಕುರಿತು ಮನವಿ ಮಾಡಿದ್ದೇ ಅಲ್ಲದೆ, ಕನ್ನಡ ಚಿತ್ರರಂಗವನ್ನು, ಕನಿಷ್ಠ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿಯಾದರೂ, ಪಾರು ಮಾಡಬೇಕೆಂದು ಪ್ರಾರ್ಥಿಸಿದರು. ಅಲ್ಲದೆ, ಈ ಹಿಂದೆ ಇದೇ ಕಾಂಗ್ರೆಸ್‌ ಸರ್ಕಾರ ಮಾಡಿದ ತಪ್ಪಿನಿಂದಾಗಿ, ಮೇ 2017ರಲ್ಲಿ ಸರ್ಕಾರ ಈ ಏಕರೂಪ ಟಿಕೆಟ್‌ ದರದ ನಿರ್ಧಾರವನ್ನು ತೆಗೆದುಕೊಂಡರೂ, ಅದನ್ನು ಜಾರಿಗೊಳಿಸಲಾಗದ ಕಾನೂನಿನ ಅಡೆತಡೆಯನ್ನು ಗಮನಕ್ಕೆ ತಂದು, ಈ ಬಾರಿ ಅಂಥ ತಪ್ಪು ಮಾಡಬಾರದೆಂದು ಮನವಿ ಮಾಡಿದರು.

ತಮ್ಮ ಸರ್ಕಾರದ ಅಂದಿನ ತಪ್ಪಿನ ಅರಿವಾಗಿರುವ ಸಿದ್ದರಾಮಯ್ಯ, ಈ ಬಗ್ಗೆ ಸೂಕ್ತ ತೀರ್ಮಾನವನ್ನು ಶೀಘ್ರವಾಗಿ ಪ್ರಕಟಿಸುವ ಮತ್ತು ಜಾರಿಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಕೊಂಡಜ್ಜಿ ಮೋಹನ್‌ ಅವರು ʼದ-ಫೆಡರಲ್-ಕರ್ನಾಟಕʼಕ್ಕೆ ತಿಳಿಸಿದ್ದಾರೆ.

ಮಲ್ಟಿಪ್ಲೆಕ್ಸ್ ಗೆ ಮುತ್ತಿಗೆ ಬೆದರಿಕೆ

“ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ವಿಶೇಷವಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪ ಟಿಕೆಟ್‌ ದರ ನಿಗದಿ ಮಾಡಬೇಕು ಎಂದು ನಾವು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ. ಅವರು ನಮ್ಮ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಎಲ್ಲವೂ ಸುಖಾಂತವಾಗುವ ಸಾಧ್ಯತೆ ಇದೆ” ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಂ.ಎನ್.‌ ಸುರೇಶ್‌ ಅವರು ಹೇಳುತ್ತಾರೆ.

“ಈ ಬಾರಿ ಸರ್ಕಾರ ಕೊಟ್ಟಮಾತಿಗೆ ತಪ್ಪಿದಲ್ಲಿ ಮಲ್ಟಿಪ್ಲೆಕ್ಸ್‌ ಗಳಿಗೆ ಮುತ್ತಿಗೆ ಹಾಕುತ್ತೇವೆ” ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ, ಪ್ರಮುಖ ನಿರ್ಮಾಪಕ ಸಾ. ರಾ. ಗೋವಿಂದು ಎಚ್ಚರಿಸಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮನವಿಯಲ್ಲಿರುವುದೇನು?

“ಇತ್ತೀಚೆಗೆ ಮಲ್ಟಿಪ್ಲೆಕ್ಸ್ ಸೇರಿದಂತೆ ಚಿತ್ರಮಂದಿರಗಳಲ್ಲಿ ಪ್ರವೇಶ ದರ ದುಬಾರಿಯಾಗಿದೆ. ಕೆಲವು ಚಿತ್ರಮಂದಿರಗಳು ಸಾವಿರದಿಂದ ಒಂದೂವರೆ ಸಾವಿರ ರೂಪಾಯಿವರೆಗೂ ಟಿಕೆಟ್‌ ದರವನ್ನು ನಿಗದಿ ಪಡಿಸಿದ್ದು, ಇದು ಕನ್ನಡ ಪ್ರೇಕ್ಷಕರಿಗೆ ಹೊರೆಯಾಗಿದೆ. ಆದ್ದರಿಂದ ರೂ.200ಕ್ಕೆ ಮೀರದಂತೆ ಪ್ರವೇಶದರ ವಿಧಿಸುವಂತೆ 2017ರಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಂದಿನ ಕಾಂಗ್ರೆಸ್‌ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆಗ ಸರ್ಕಾರ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಗರಿಷ್ಢ ರೂ. 200 ಟಿಕೆಟ್‌ ದರವನ್ನುಯ ನಿಗದಿಗೊಳಿಸಿ ಆದೇಶ ಹೊರಡಿಸಿತ್ತು. ಆದರೆ ಈ ಆದೇಶ ಹೊರಡಿಸಬೇಕಾದ ಮತ್ತು ಜಾರಿಗೊಳಿಸುವ ಅಧಿಕಾರ ಇರುವುದು ರಾಜ್ಯ ಗೃಹ ಇಲಾಖೆಗೆ. ಆದರೆ, ಈ ಆದೇಶವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರಡಿಸಿದ ಕಾರಣ, ಮಲ್ಟಿಪ್ಲೆಕ್ಸ್‌ ಮಾಲೀಕರು, ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಿದರು. ಮತ್ತು ಈ ಆದೇಶಕ್ಕೆ ತಡೆಯಾಜ್ಞೆ ತಂದರು. ಈಗ ತಡೆಯಾಜ್ಞೆ ರಿಟ್‌ ಅರ್ಜಿ ವಜಾಗೊಂಡಿದೆ. (ರಿಟ್‌ ಅರ್ಜಿ ಸಂ;21399/2017 (GM RES) ದಿನಾಂಕ ಫೆಬ್ರುವರಿ 1, 2023, ಅಂದರೆ ಒಂದೂವರೆ ವರ್ಷದ ಹಿಂದೆ ವಜಾಗೊಂಡಿರುತ್ತದೆ. ಈ ಕಾರಣದಿಂದಾಗಿ ಮತ್ತು ಸರ್ಕಾರ ಕರ್ನಾಟಕದ ಎಲ್ಲ ಚಿತ್ರಮಂದಿರಗಳಲ್ಲೂ ಟಿಕೆಟ್‌ ದರವನ್ನು ರೂ.200ಕ್ಕೆ ನಿಗದಿ ಪಡಿಸಿ, ಗೃಹ ಇಲಾಖೆಯ ಮೂಲಕ ಆದೇಶ ಹೊರಡಿಸಬೇಕು ಹಾಗೂ, ಆ ಆದೇಶ ಜಾರಿಗೆ ತರಲು ಕ್ರಮಕೈಗೊಳ್ಳಬೇಕು. ಇದಕ್ಕೆ ಕಾಯ್ದೆಯೊಂದನ್ನು ರೂಪಿಸಿ, ನಿಯಮವನ್ನು ಜಾರಿಗೊಳಸಬೇಕು. ಈಗಾಗಲೇ, ಈ ರೀತಿಯ ದರ ನಿಗದಿ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳದಲ್ಲಿ ಜಾರಿಯಲ್ಲಿದೆ. ಆ ರಾಜ್ಯಗಳು ಚಿತ್ರರಂಗವನ್ನು ಕಾಪಾಡಿದಂತೆ ಕರ್ನಾಟಕ ಸರ್ಕಾರ ಕೂಡ ಕನ್ನಡ ಚಿತ್ರರಂಗವನ್ನು ಉಳಿಸಬೇಕು” –ಇದು ಮನವಿಯ ಸಾರಾಂಶ.

ಮಲ್ಟಿಪ್ಲೆಕ್ಸ್‌ ಟಿಕೆಟ್‌ ದರ ರೂ.2000

ಮಲ್ಟಿಪ್ಲೆಕ್ಸ್ ಗಳಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿರುವ ಸಾ. ರಾ. ಗೋವಿಂದು ಅವರನ್ನು ʼದ ಫೆಡರಲ್-ಕರ್ನಾಟಕʼ ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು; “ ನಮ್ಮ ಮನರಂಜನಾ ಹಣ ಈಗ ನೆರೆಯ ಆಂಧ್ರ, ತಮಿಳುನಾಡು, ತೆಲಂಗಾಣ, ಕೇರಳದ ಪಾಲಾಗುತ್ತಿದೆ. ಹಾಗೆಂದು ನಾವು ಪರಭಾಷಾ ಚಿತ್ರಗಳನ್ನು ಬಿಡುಗಡೆ ಮಾಡಬೇಡಿ ಎಂದು ಹೇಳುತ್ತಿಲ್ಲ. ಇತ್ತೀಚಿಗೆ ಬಿಡುಗಡೆಯಾದ ರಜನಿಕಾಂತ್‌ ಅವರ ʻವೇಟ್ಟಾಯನ್‌ʼ ಚಿತ್ರಕ್ಕೆ ಟಿಕೆಟ್‌ ದರ ರೂ. 1500 ರಿಂದ ರೂ. 2000ದ ವರೆಗೆ ಇತ್ತು. ಆದರೆ ಪಕ್ಕದ ತಮಿಳು ನಾಡಿನಲ್ಲಿ ಪ್ರೇಕ್ಷಕರು ಈ ಚಿತ್ರ ನೋಡಲು ಪಾವ್ತಿ ಮಾಡಿದ ಹಣ ಕೇವಲ ರೂ. 150. ಹಾಗಾಗಿ ನಾವು ಕೇಳುತ್ತಿರುವುದು ಏಕರೂಪ ಟಿಕೆಟ್‌ ದರ ನಿಗದಿ. ಏಕೆಂದರೆ, ಟಿಕೆಟ್‌ ದರ ಹೆಚ್ಚಾದರೆ ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರಲು ಹಿಂಜರಿಯುತ್ತಾರೆ”.

ಮಹಾರಾಷ್ಟ್ರ ಮಾದರಿ

ಕರ್ನಾಟಕ ಚಲನಚಿತ್ರ ಮಂಡಳಿ ಈ ರೂ.200 ಗರಿಷ್ಠ ಮಿತಿಯನ್ನು ಲೆಕ್ಕಾಚಾರ ಮಾಡಿದ್ದು ಹೇಗೆ? ಈ ಪ್ರಶ್ನೆಗೆ ಉತ್ತರ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ, ನಿರ್ಮಾಪಕ ಎಸ್.‌ ವಿ. ರಾಜೇಂದ್ರ ಸಿಂಗ್‌ ಬಾಬು ಅವರಲ್ಲಿದೆ. ಅವರು ಹೇಳುವುದು ಈ ರೀತಿ; “ 2016ರಲ್ಲಿ ಕನ್ನಡ ಚಲನಚಿತ್ರ ನೀತಿ ಕುರಿತು ಅಧ್ಯಯನ ನಡೆಸಲು ನನ್ನ ನೇತೃತ್ವದಲ್ಲಿ 14 ಸದಸ್ಯರ ಸಮಿತಿಯೊಂದು ರಚನೆಯಾಯಿತು. ಆ ವರದಿಯಲ್ಲಿ ಎಲ್ಲ ರಾಜ್ಯಗಳ ಟಿಕೆಟ್‌ ದರವನ್ನು ಗಮನಿಸಿ ರೂ.200 ನಿಗದಿ ಪಡಿಸಲಾಯಿತು. ಇದರ ಆಧಾರದ ಮೇಲೆಯೇ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಗರಿಷ್ಠ ಟಿಕೆಟ್‌ ದರವನ್ನು ರೂ.200ಕ್ಕೆ ನಿಗದಿ ಪಡಿಸಿ ರಾಜ್ಯ ಬಜೆಟ್ ನಲ್ಲಿ ಪ್ರಕಟಿಸಿತು. ನಮ್ಮ ತೀರ್ಮಾನಕ್ಕೆ ನಾವು ಬಳಸಿದ ಮಾನದಂಡ ಪಕ್ಕದ ಮಹಾರಾಷ್ಟ್ರ ಸರ್ಕಾರದ್ದು. ಅಲ್ಲಿ ಪ್ರೇಕ್ಷಕರಿಗೆ ಟಿಕೆಟ್‌ ದರ ಕೈಗೆಟಕುವಂತಿದೆ. ಅಷ್ಟೇ ಅಲ್ಲ. ಪ್ರತಿ ಚಿತ್ರಮಂದಿರದಲ್ಲೂ, ಕನಿಷ್ಠ ಎರಡು ದೇಖಾವೆ (shows)ಗಲ್ಲಿ ಮರಾಠಿ ಚಿತ್ರ ಪ್ರದರ್ಶಿಸಬೇಕೆಂಬ ನಿಯಮವಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಸಾಧ್ಯವಾದದ್ದು, ಕರ್ನಾಟಕದಲ್ಲೇಕೆ ಸಾಧ್ಯವಿಲ್ಲ?” ಎನ್ನುವುದು ಅವರ ಪ್ರಶ್ನೆ.

ಸರ್ಕಾರ ಕೂಡಲೇ ಕ್ರಮಕೈಗೊಳ್ಳದಿದ್ದಲ್ಲಿ ಮಲ್ಟಿಪ್ಲೆಕ್ಸ್‌ ಗೆ ಮುತ್ತಿಗೆ ಹಾಕುವ ತೀರ್ಮನವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಲೆಕ್ಕಾಚಾರ ಮಾಡಿ ತೆಗೆದುಕೊಂಡಿದೆ. ಅದಕ್ಕಾಗಿ ಕನ್ನಡದ ತಿಂಗಳಾದ ನವೆಂಬರ್‌ ಅನ್ನು ಆಯ್ಕೆ ಮಾಡಿಕೊಂಡಿದೆ.

ಹಾಗೇನಾದರೂ, ಸರ್ಕಾರ ಸರಿಯಾದ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಸದ್ಯ ಬಿಡುಗಡೆಗಾಗಿ ಕಾಯುತ್ತಿರುವ ತೆಲುಗಿನ ಅಲ್ಲೂ ಅರ್ಜುನ್‌ ಅವರ ʻಪುಷ್ಪಾ-2ʼ ಚಿತ್ರವೇ, ಕನ್ನಡ ಚಿತ್ರರಂಗದ ಆಕೋಷಕ್ಕೆ ಬಲಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರ ಜೊತೆಯಲ್ಲಿ ʻಭೂಲ್‌ ಭುಲಯ್ಯ-2, ಸಿಂಗಂ ಎಗೈನ್‌, ಹನಿ ಬನ್ನಿ ವೋಹ್‌ ಲಡಕಿ ಹೈ ಕಹಾ, ರೈಡ್‌-2 ಚಿತ್ರಗಳು ತೊಂದರೆಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ, ಎನ್ನಲಾಗುತ್ತಿದೆ.

Tags:    

Similar News