Trisha Krishnan: ನಟ ವಿಜಯ್‌ಗಾಗಿ ರಾಜಕೀಯ ಪ್ರವೇಶಿಸುತ್ತಾರೆಯೇ ತ್ರಿಶಾ? ತಾಯಿಯ ಸ್ಪಷ್ಟನೆಯೇನು?

Trisha Krishnan: ನಟಿ ತ್ರಿಶಾ ರಾಜಕೀಯಕ್ಕೆ ಸೇರುತ್ತಾರೆ ಎಂಬ ವರದಿಗಳನ್ನು ಅವರ ತಾಯಿ ಉಮಾ ಕೃಷ್ಣನ್ ತಳ್ಳಿಹಾಕಿದ್ದಾರೆ. ನಟಿಗೆ ಚಿತ್ರರಂಗ ತೊರೆಯುವ ಉದ್ದೇಶವಿಲ್ಲ ಹಾಗೂ ರಾಜಕೀಯ ಸೇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.;

Update: 2025-01-26 11:02 GMT
ಸಂಗ್ರಹ ಚಿತ್ರ

ಎರಡು ದಶಕಗಳಿಂದ ಚಿತ್ರರಂಗವನ್ನು ಆಳುತ್ತಿರುವ ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರು ಸಹನಟ ವಿಜಯ್ ಅವರ ಹೆಜ್ಜೆಗಳನ್ನು ಅನುಸರಿಸಿ ರಾಜಕೀಯಕ್ಕೆ ಸೇರುತ್ತಾರೆ ಎಂಬುವ ಸುದ್ದಿ ಜೋರಾಗಿ ಹರಡಿದೆ. ಆದರೆ, ತ್ರಿಶಾ ಅವರ ತಾಯಿ ಈ ಊಹಾಪೋಹಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ.

ʼಮಲಯಾಳಂ ಮನೋರಮಾʼ ಸಂದರ್ಶನದಲ್ಲಿ ಮಾತನಾಡಿದ ತಾಯಿ ಉಮಾ ಕೃಷ್ಣನ್, ವರದಿಗಳು ʼಆಧಾರರಹಿತʼ ಎಂದು ತಳ್ಳಿಹಾಕಿದ್ದಾರೆ. ತ್ರಿಶಾ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಮತ್ತು ಚಿತ್ರರಂಗದಲ್ಲಿಯೇ ಮುಂದುವರಿಯುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಚಲನಚಿತ್ರಗಳಿಂದ ವಿರಾಮ?

ವಿಜಯ್ ಅಭಿನಯದ ಆಕ್ಷನ್ ಥ್ರಿಲ್ಲರ್, ಲಿಯೋ ಮತ್ತು ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ 2 ಚಿತ್ರಗಳಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ತ್ರಿಶಾ, ಚಲನಚಿತ್ರಗಳಿಂದ ವಿರಾಮ ತೆಗೆದುಕೊಳ್ಳುತ್ತಿದ್ದಾರೆ ಎಂಬ ವರದಿಗಳು ಹೊರಬಂದಿದ್ದವು.

ಕ್ರಿಸ್ಮಸ್ ಸಮಯದಲ್ಲಿ ತನ್ನ ಪ್ರೀತಿಯ ನಾಯಿ ʼಜೊರೊʼ ಸತ್ತಾಗ ಇನ್ಸ್ಟಾಗ್ರಾಮ್ ಪೋಸ್ಟ್‌ ಹಾಕಿದ್ದ ತ್ರಿಶಾ, "ಜೀವನಕ್ಕೆ ಯಾವುದೇ ಅರ್ಥವಿಲ್ಲ, ಕೆಲಸದಿಂದ ವಿರಾಮ ತೆಗೆದುಕೊಳ್ಳುತ್ತೇನೆ," ಎಂದು ಹೇಳಿದ್ದರು. ಇದು ನಟಿ ರಾಜಕೀಯಕ್ಕೆ ಪ್ರವೇಶಿಸಲು ಸಜ್ಜಾಗಿದ್ದಾರೆ ಮತ್ತು ವಿಜಯ್ ಅವರ ರಾಜಕೀಯ ಪಕ್ಷ ʼತಮಿಳ್‌ ವೆಟ್ರಿ ಕಳಗಂʼ ಸೇರಬಹುದು ಎಂಬ ಊಹಾಪೋಹಗಳಿಗೆ ಕಾರಣವಾಯಿತು. ಈ ವೇಳೆ, ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ತ್ರಿಶಾ ರಾಜಕೀಯಕ್ಕೆ ಕಾಲಿಟ್ಟರೂ ನಟನೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ರಾಜಕೀಯ ಪ್ರವೇಶ?

ಸಿನೆಮಾದಿಂದ ಭ್ರಮನಿರಸನಗೊಂಡಿದ್ದರಿಂದ ತ್ರಿಶಾ ರಾಜಕೀಯಕ್ಕೆ ಪ್ರವೇಶಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. ಮನೋರಮಾ ವರದಿಯ ಪ್ರಕಾರ, ಈ ವಿಷಯದ ಬಗ್ಗೆ ತ್ರಿಷಾ ಮತ್ತು ಅವರ ತಾಯಿಯ ನಡುವೆ ಭಿನ್ನಾಭಿಪ್ರಾಯಗಳಿವೆ. ಉಮಾ ಕೃಷ್ಣನ್ ಈ ಹೇಳಿಕೆಗಳನ್ನು ನಿರಾಕರಿಸಿದ್ದು, ತ್ರಿಶಾ ರಾಜಕೀಯಕ್ಕಾಗಿ ಸಿನಿಮಾ ಜಗತ್ತನ್ನು ತೊರೆಯುವ ಯಾವುದೇ ಯೋಜನೆ ಹೊಂದಿಲ್ಲ ಎಂದು ಹೇಳಿದ್ದಾರೆ.

ವಿಜಯ್ ಅವರೊಂದಿಗಿನ ತ್ರಿಷಾ ಅವರ ಸ್ನೇಹವು ಈ ಊಹಾಪೋಹಗಳಿಗೆ ಮತ್ತಷ್ಟು ತುಪ್ಪ ಸುರಿದಿದೆ. ಡಿಸೆಂಬರ್ 12ರಂದು ನಡೆದ ನಟಿ ಕೀರ್ತಿ ಸುರೇಶ್ ವಿವಾಹದಲ್ಲಿ ತ್ರಿಶಾ ಮತ್ತು ವಿಜಯ್ ಒಟ್ಟಿಗೆ ಕಾಣಿಸಿಕೊಂಡಿದ್ದರು.

ತ್ರಿಷಾ ಮತ್ತು ವಿಜಯ್ ಖಾಸಗಿ ವಿಮಾನದಲ್ಲಿ ಜತೆಯಾಗಿ ಹೋಗಿ ಮದುವೆಯ ಸ್ಥಳದಿಂದ ಒಟ್ಟಿಗೆ ನಿರ್ಗಮಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಮುಂಬರುವ ಚಲನಚಿತ್ರಗಳು

ನಟಿಯ ಕೈಯಲ್ಲಿ ಹಲವಾರು ಪ್ರಾಜೆಕ್ಟ್‌ಗಳಿವೆ. ಅಜಿತ್ ಅವರೊಂದಿಗಿನ 'ವಿದಾಮುಯಾರ್ಚಿ' ಮತ್ತು ಸೂರ್ಯ ಜತೆಗಿನ 'ಸೂರ್ಯ 45' ಅವುಗಳಲ್ಲಿ ಪ್ರಮುಖವಾದುವು ಈ ಮೂಲಕ ಎರಡು ದಶಕಗಳ ನಂತರ ಸೂರ್ಯ ಅವರೊಂದಿಗೆ ನಟಿಸಲಿದ್ದಾರೆ ತ್ರಿಶಾ. ಇತ್ತೀಚೆಗೆ ಮಲಯಾಳಂ ನಟ ಟೊವಿನೊ ಥಾಮಸ್ ಅವರೊಂದಿಗೆ ʼಐಡೆಂಟಿಟಿʼ ಎಂಬ ಚಿತ್ರವನ್ನು ಮಾಡಿದ್ದರು. ಇದು ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ.

ಕಮಲ್ ಹಾಸನ್ ಅವರೊಂದಿಗೆ ಮಣಿರತ್ನಂ ಅವರ ಮುಂಬರುವ 'ಥಗ್ ಲೈಫ್' ಚಿತ್ರದಲ್ಲೂ ತ್ರಿಶಾ ಕಾಣಿಸಿಕೊಳ್ಳಲಿದ್ದಾರೆ.

ಎರಡು ದಶಕಗಳ ಹಿಂದೆ, ಅಮೀರ್ ನಿರ್ದೇಶನದ ಮೌನಂ ಪೆಸಿಯಾಧೆ ಎಂಬ ರೊಮ್ಯಾಂಟಿಕ್ ಚಿತ್ರದ ಮೂಲಕ ತ್ರಿಶಾ ಸಿನಿಮಾ ಕ್ಷೇತ್ರ ಪ್ರವೇಶ ಮಾಡಿದ್ದರು.  

Tags:    

Similar News