ಕನ್ನಡ ಚಿತ್ರರಂಗದಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗಿದೆ: ರವಿಚಂದ್ರನ್
‘ಗೋಳಾಡಿದರೆ ಜನ ಯಾವತ್ತೂ ಸಿನಿಮಾ ನೋಡುವುದಿಲ್ಲ. ಸಿನಿಮಾ ಚೆನ್ನಾಗಿದ್ದರೆ, ಪ್ರೇಕ್ಷಕ ಕೊಡುವ ಗೆಲುವು ದೊಡ್ಡದು. ನಾನು 40 ವರ್ಷದಿಂದ ಚಿತ್ರರಂಗದಲ್ಲಿರುವುದೇ ಪ್ರೇಕ್ಷಕ ಕೊಟ್ಟ ಗೆಲುವಿನಿಂದ’ ಎಂದು ಅವರು ಹೇಳಿದರು.;
ಇತ್ತೀಚಿನ ದಿನಗಳಲ್ಲಿ ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರುತ್ತಿಲ್ಲ. ಈ ಸಮಸ್ಯೆ ಎಲ್ಲಾ ಭಾಷೆಯ ಚಿತ್ರರಂಗಗಳಲ್ಲೂ ಇದೆ ಮತ್ತು ಕನ್ನಡದಲ್ಲಿ ಸ್ವಲ್ಪ ಜಾಸ್ತಿಯೇ ಇದೆ. ಇಷ್ಟಕ್ಕೂ ಜನ ಯಾಕೆ ಬರುತ್ತಿಲ್ಲ ಎಂಬ ಪ್ರಶ್ನೆ ಇಡೀ ಚಿತ್ರರಂಗವನ್ನು ಕಾಡುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾದ ಕಾರಣ, ಜನ ಚಿತ್ರಮಂದಿರಗಳಿಗೆ ಚಿತ್ರ ನೋಡುವುದಕ್ಕೆ ಬರುತ್ತಿಲ್ಲ ಎಂದು ನಟ-ನಿರ್ದೇಶಕ ರವಿಚಂದ್ರನ್ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ, ‘ಭುವನಂ ಗಗನಂ’ ಚಿತ್ರದ 25ನೇ ದಿನದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು, ಚಿತ್ರರಂಗ ಎದುರಿಸುತ್ತಿರುವ ಹಲವು ಸಮಸ್ಯೆಗಳ ಕುರಿತು ಮಾತನಾಡಿದರು.
ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ನಗುವಿಲ್ಲ. ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಒಂದು ಚಿತ್ರ ಯಶಸ್ವಿ 25 ದಿನ ಪ್ರದರ್ಶನವಾಗಿರುವುದು ಖುಷಿಯ ವಿಚಾರ. ಈ ಮೂರು ತಿಂಗಳಲ್ಲಿ ಎಷ್ಟು ಚಿತ್ರಗಳು ಬಿಡುಗಡೆಯಾಗಿವೆ? ಎಷ್ಟು ಚಿತ್ರಗಳನ್ನು ಜನ ನೋಡಿದ್ದಾರೆ? ಹೋಗಲಿ, ಇಲ್ಲಿ ಕೂತಿರುವವರು ಎಷ್ಟು ಜನ, ಎಷ್ಟು ಸಿನಿಮಾ ನೋಡಿದ್ದಾರೆ? ಇಲ್ಲಿರುವವರೇ ಬಹಳಷ್ಟು ಜನ ಚಿತ್ರಗಳನ್ನು ನೋಡಿರುವುದಿಲ್ಲ. ಇನ್ನು, ಜನ ನೋಡಿಲ್ಲ ಎಂದು ಆರೋಪ ಮಾಡುವುದು ಸರಿಯಲ್ಲ. ಸಿನಿಮಾ ಚೆನ್ನಾಗಿದ್ದರೆ ಜನ ಬರುತ್ತಾರೆ’ ಎಂದು ಅವರು ಹೇಳಿದ್ದಾರೆ.
ಚಿತ್ರ ಚೆನ್ನಾಗಿದ್ದರೆ ಜನ ಬರುತ್ತಾರೆ, ಅದಕ್ಕೆ ತಮ್ಮ ‘ಪ್ರೇಮ ಲೋಕ’ವೇ ಸಾಕ್ಷಿ ಎಂದಿರುವ ರವಿಚಂದ್ರನ್, ‘ಚಿತ್ರ ಚೆನ್ನಾಗಿದ್ದಾಗ ಜನ ಹುಡುಕಿಕೊಂಡು ಬಂದು ಚಿತ್ರಗಳನ್ನು ನೋಡಿದ್ದಾರೆ. ನಾವು ಟ್ರಾಫಿಕ್ ಜಾಮ್ ಮಾಡುತ್ತಿದ್ದೇವೆ. ವಾರಕ್ಕೆ ನಮ್ಮದೇ 10 ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಬೇರೆ ಭಾಷೆಗಳದ್ದೆಲ್ಲಾ ಸೇರಿ ವಾರಕ್ಕೆ 40 ಸಿನಿಮಾ ಬಿಡುಗಡೆಯಾದರೆ, ಟ್ರಾಫಿಕ್ ಜಾಮ್ ಆಗುತ್ತದೆ. 40ರಲ್ಲಿ ಆರಿಸಿಕೊಳ್ಳಿ ಎಂದರೆ ಜನ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಬೇರೆ ಭಾಷೆಯ ಸಿನಿಮಾಗಳು ಇಲ್ಲಿ ಚೆನ್ನಾಗಿ ಓಡುತ್ತವೆ ಎಂಬ ಮಾತಿದೆ. ಬೇರೆ ಭಾಷೆಗಳಿಂದ ಕೆಲವು ಆಯ್ದ ಸಿನಿಮಾಗಳು ಮಾತ್ರ ಬರುತ್ತವೆ. ಎಲ್ಲ ಸಿನಿಮಾಗಳೂ ಬರುವುದಿಲ್ಲ. ಎಲ್ಲ ಸಿನಿಮಾಗಳು ಬಂದರೆ ಟ್ರಾಫಿಕ್ ಜಾಮ್ ಇನ್ನೂ ಹೆಚ್ಚಾಗುತ್ತದೆ. ಕೆಲವು ಸಿನಿಮಾಗಳು ಮಾತ್ರ ಇಲ್ಲಿ ಬರುತ್ತವೆ ಮತ್ತು ಆ ಚಿತ್ರಗಳು ಮಾತ್ರ ನಮಗೆ ಕಾಣುತ್ತವೆ’ ಎಂದರು ರವಿಚಂದ್ರನ್.
ಚಿತ್ರಮಂದಿರಗಳ ಎದುರು ಗೋಳಾಡುವುದರಲ್ಲಿ ಅರ್ಥವಿಲ್ಲ ಎನ್ನುವ ಅವರು, ‘ಗೋಳಾಡಿದರೆ ಜನ ಯಾವತ್ತೂ ಸಿನಿಮಾ ನೋಡುವುದಿಲ್ಲ. ಸಿನಿಮಾ ಚೆನ್ನಾಗಿದ್ದರೆ, ಪ್ರೇಕ್ಷಕ ಕೊಡುವ ಗೆಲುವು ದೊಡ್ಡದು. ನಾನು 40 ವರ್ಷದಿಂದ ಚಿತ್ರರಂಗದಲ್ಲಿರುವುದೇ ಪ್ರೇಕ್ಷಕ ಕೊಟ್ಟ ಗೆಲುವಿನಿಂದ’ ಎಂದು ಅವರು ಹೇಳಿದರು.