ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪದ ಟಿಕೆಟ್ ದರ: ಜಾರಿಯಾಗದ ದರ ನಿಗದಿ ನಿಯಮ, ಗ್ರಾಹಕರಿಗೆ ನಿರಾಸೆ
ಮಲ್ಟಿಪ್ಲೆಕ್ಸ್‌ಗಳಲ್ಲಿ ಅನ್ಯ ಭಾಷೆಯ ಸಿನಿಮಾಗಳಿಗೂ ಅನ್ವಯವಾಗುವಂತೆ, ತೆರಿಗೆ ಒಳಗೊಂಡು ಟಿಕೆಟ್‌ಗೆ ಗರಿಷ್ಠ 200 ರೂ.ವಿಧಿಸಬಹುದು ಎಂದು ಕರಡು ಅಧಿಸೂಚನೆಯಲ್ಲಿ ಹೇಳಿತ್ತು.;
ಸಾಂದರ್ಭಿಕ ಚಿತ್ರ
ರಾಜ್ಯ ಸರ್ಕಾರ ಆಗಸ್ಟ್ 1 ರಿಂದ ರಾಜ್ಯದ ಎಲ್ಲಾ ಮಲ್ಟಿಫ್ಲೆಕ್ಸ್‌ಗಳಲ್ಲಿ ಏಕರೂಪದ ಟಿಕೆಟ್ ದರ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿದರೂ ದರ ನಿಗದಿ ನಿಯಮ ಅನುಷ್ಟಾನಗೊಂಡಿಲ್ಲ. ಕೆಲ ಚಿತ್ರಮಂದಿರ ಹೊರತುಪಡಿಸಿದರೆ ಬಹುತೇಕ ಕಡೆ ಪೂರ್ಣ ಪ್ರಮಾಣದಲ್ಲಿ ನಿಯಮ ಜಾರಿಗೆ ಬಂದಿಲ್ಲ.
ಬೆಂಗಳೂರು ಸೇರಿ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿರುವ ಬಹುತೇಕ ಮಲ್ಟಿಫ್ಲೆಕ್ಸ್‌ಗಳಲ್ಲಿ ಗರಿಷ್ಠ 200 ರೂ. ದರ ನಿಗದಿ ಕಾರ್ಯರೂಪಕ್ಕೆ ತಂದಿಲ್ಲ.
'ಕರ್ನಾಟಕ ಚಲನಚಿತ್ರ (ನಿಯಂತ್ರಣ) (ತಿದ್ದುಪಡಿ) ಮಸೂದೆ-2025'ರ ಕರಡು ಅಧಿಸೂಚನೆಯಡಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಅನ್ಯ ಭಾಷೆಯ ಸಿನಿಮಾಗಳಿಗೂ ಅನ್ವಯವಾಗುವಂತೆ, ತೆರಿಗೆ ಒಳಗೊಂಡು ಟಿಕೆಟ್‌ಗೆ ಗರಿಷ್ಠ 200 ರೂ.ವಿಧಿಸಬಹುದು ಎಂದು ಸೂಚಿಸಲಾಗಿತ್ತು.
ಕಳೆದ ತಿಂಗಳು ರಾಜ್ಯ ಸರ್ಕಾರ ಮಲ್ಟಿಫ್ಲೆಕ್ಸ್‌ಗಳಲ್ಲಿ ಟಿಕೆಟ್ ದರಗಳನ್ನು ನಿಯಂತ್ರಿಸುವ ಹೊಸ ನಿಯಮ ಪ್ರಕಟಿಸಿತ್ತು. ಈ ನಿಯಮದ ಪ್ರಕಾರ, ಯಾವುದೇ ಮಲ್ಟಿಫ್ಲೆಕ್ಸ್ ಗಳು ಟಿಕೆಟ್ ದರವನ್ನು 200 ರೂ.ಕ್ಕಿಂತ ಹೆಚ್ಚು ನಿಗದಿಪಡಿಸುವಂತಿಲ್ಲ. ಈ ನಿರ್ಧಾರದಿಂದ ಮಧ್ಯಮ ವರ್ಗದ ಪ್ರೇಕ್ಷಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈಗ ಈ ನಿಯಮ ಜಾರಿಯಾಗದಿರುವುದು ಗ್ರಾಹಕರಿಗೆ ನಿರಾಸೆ ಉಂಟು ಮಾಡಿದೆ.
ಉದಾಹರಣೆಗೆ ಈ ತಿಂಗಳಲ್ಲಿ ಬಿಡುಗಡೆಯಾಗಿದ್ದ ಕನ್ನಡದ ʻಸೂ ಫರ್ಮ್ ಸೋʼ ಸಿನಿಮಾ ಸೇರಿದಂತೆ ಅನೇಕ ಪರ ಭಾಷೆಯ ಸಿನಿಮಾಗಳಿಗೆ 300ರೂಗಿಂತ ಹೆಚ್ಚಿನ ದರ ನಿಗದಿಪಡಿಸಲಾಗಿತ್ತು. ಈ ವಾರ ಬಿಡುಗಡೆಯಾಗಲಿರುವ ʼಕೂಲಿʼ ಸಿನಿಮಾ ಸೇರಿದಂತೆ ಹಲವು ಬಹುನಿರೀಕ್ಷಿತ ಸಿನಿಮಾಗಳ ಟಿಕೆಟ್ ದರಗಳು ಈಗಾಗಲೇ ಗಗನಕ್ಕೇರಿವೆ. ಕೆಲವು ಮಲ್ಟಿಫ್ಲೆಕ್ಸ್‌ಗಳಲ್ಲಿ, ಈ ಚಿತ್ರಗಳ ಪ್ರದರ್ಶನ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ ಟಿಕೆಟ್ ದರವನ್ನು 1000 ರಿಂದ 15000 ರೂ. ವರೆಗೆ ನಿಗದಿಪಡಿಸಲಾಗಿದೆ. ಇದರಿಂದ ಮಧ್ಯಮ ವರ್ಗದ ಪ್ರೇಕ್ಷಕರಿಗೆ ಸಿನಿಮಾ ವೀಕ್ಷಣೆ ದುಬಾರಿಯಾಗಲಿದೆ. ಕನ್ನಡ ಚಲನಚಿತ್ರಗಳ ಪ್ರದರ್ಶನಕ್ಕೂ ಇದು ಪರೋಕ್ಷವಾಗಿ ತೊಂದರೆ ಸಮಸ್ಯೆಯಾಗಲಿದೆ.
ತಮಿಳುನಾಡು ಮಾದರಿ ನಿಯಮ ಜಾರಿಗೆ ಒತ್ತಾಯ
ತಮಿಳುನಾಡಿನಲ್ಲಿ ಮಲ್ಟಿಫ್ಲೆಕ್ಸ್‌ಗಳಲ್ಲಿ 200 ರೂ.ಗಳಿಗಿಂತಲೂ ಕಡಿಮೆ ಇದೆ. ಅಲ್ಲಿನ ಸರ್ಕಾರಪ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ತಮಿಳು ಸಿನಿಮಾ ʻಕೂಲಿʼಗೆ ತಮಿಳುನಾಡಿನ ಮಲ್ಟಿಫೆಕ್ಸ್‌ಗಳಲ್ಲಿ 183 ರೂ. ಹಾಗೂ 57 ರೂ. ಇದ್ದರೆ, ಇದೇ ಸಿನಿಮಾಗೆ ಕರ್ನಾಟಕದಲ್ಲಿ 400ರೂ ರಿಂದ1200ರೂ. ದರ ಇದೆ.
ಈ ಬಗ್ಗೆ ʻದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಅವರು, ʻʻಇನ್ನೆರಡು ದಿನಗಳಲ್ಲಿ ಸಿನಿಮಾ ಟಿಕೆಟ್‌ಗಳಿಗೆ ಏಕರೂಪ ದರ ನಿಗದಿ ಜಾರಿಗೆ ಬರಲಿದೆ. ಈ ಕುರಿತು ಸರ್ಕಾರ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು. ಸರ್ಕಾರದ ನಿರ್ಧಾರಕ್ಕೆ ಮಂಡಳಿಯು ಬದ್ಧವಾಗಿರುತ್ತದೆ. ಏಕರೂಪ ದರದ ಆದೇಶ ಏಕೆ ವಿಳಂಬವಾಗುತ್ತಿದೆ ಎಂದು ನಮಗೆ ತಿಳಿದಿಲ್ಲ. ಸರ್ಕಾರ ಇದನ್ನು ಜಾರಿಗೆ ತರಬೇಕು. ಇನ್ನೆರಡು ದಿನದಲ್ಲಿ ಆದೇಶ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದರು.