ಕಿರುತೆರೆಯ ‘ಮಹಾನಟಿ’ ಹಿರಿತೆರೆಗೆ; ರಾಣಗೆ ನಾಯಕಿಯಾದ ಪ್ರಿಯಾಂಕಾ ಆಚಾರ್

ಈ ಹಿಂದೆ ತರುಣ್ ಸುಧೀರ್‍ ಜೊತೆಗೆ ಕೆಲಸ ಮಾಡಿದ್ದ ಪುನೀತ್‍ ರಂಗಸ್ವಾಮಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರವನ್ನು ತರುಣ್‍ ಸುಧೀರ್ ಮತ್ತು ಅಟ್ಲಾಂಟ ನಾಗೇಂದ್ರ ಜೊತೆಯಾಗಿ ನಿರ್ಮಾಣ ಮಾಡುತ್ತಿದ್ದಾರೆ.;

Update: 2025-02-07 04:47 GMT
ಪ್ರಿಯಾಂಕಾ ಆಚಾರ್

ಕಳೆದ ವರ್ಷ ಜೀ ಕನ್ನಡದಲ್ಲಿ ‘ಮಹಾನಟಿ’ ಎಂಬ ರಿಯಾಲಿಟಿ ಕಾರ್ಯಕ್ರಮ ಪ್ರಸಾರವಾಗಿತ್ತು. ಈ ಕಾರ್ಯಕ್ರಮದ ತೀರ್ಪುಗಾರರಾಗಿ ರಮೇಶ್‍ ಅರವಿಂದ್‍, ಪ್ರೇಮ್‍, ತರುಣ್ ಸುಧೀರ್ ಮತ್ತು ನಿಶ್ವಿಕಾ ನಾಯ್ಡು ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮೈಸೂರಿನ ಪ್ರಿಯಾಂಕಾ ಆಚಾರ್‍ ಗೆದ್ದಿದ್ದರು. ಆ ನಂತರ ಅವರ ಸುದ್ದಿಯೇ ಇರಲಿಲ್ಲ.

ಇದೀಗ, ಪ್ರಿಯಾಂಕಾ ಆಚಾರ್ ಸದ್ದಿಲ್ಲದೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ರಾಣ ಅಭಿನಯದ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಇಂಥದ್ದೊಂದು ಅವಕಾಶವನ್ನು ಕೊಟ್ಟಿರುವುದು ತರುಣ್ ಸುಧೀರ್. ಆ ಕಾರ್ಯಕ್ರಮದ ತೀರ್ಪುಗಾರರಲ್ಲೊಬ್ಬರಾಗಿದ್ದ ತರುಣ್‍ ಇದೀಗ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ಪ್ರಿಯಾಂಕಾಗೆ ನಾಯಕಿಯಾಗುವ ಅವಕಾಶವನ್ನು ಕೊಟ್ಟಿದ್ದಾರೆ.

ಈ ಹಿಂದೆ ತರುಣ್ ಸುಧೀರ್ ಜೊತೆಗೆ ಕೆಲಸ ಮಾಡಿದ್ದ ಪುನೀತ್‍ ರಂಗಸ್ವಾಮಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರವನ್ನು ತರುಣ್‍ ಸುಧೀರ್ ಮತ್ತು ಅಟ್ಲಾಂಟ ನಾಗೇಂದ್ರ ಜೊತೆಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ನೈಜ ಘಟನೆಯೊಂದನ್ನು ಆಧರಿಸಿರುವ ಈ ಚಿತ್ರಕ್ಕೆ ‘ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ’ ಎಂಬ ಟ್ಯಾಗ್‍ಲೈನ್‍ ಇದೆ.

ಇದೊಂದು ಪ್ರೇಮಕಥೆಯಾಗಿದ್ದು, 2000ದಲ್ಲಿ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ನೈಜಕಥೆಯನ್ನು ಆಧರಿಸಿದೆಯಂತೆ. ಈ ಚಿತ್ರದ ಕುರಿತು ಮಾತನಾಡಿರುವ ತರುಣ್, ‘ಬಹುತೇಕರಿಗೆ ಗೊತ್ತಿರುವ ನೈಜ ಘಟನೆಯಾದರೂ, ಅದರ ಹಿಂದೆ ಹಲವು ಥ್ರಿಲ್ಲಿಂಗ್‍ ಅಂಶಗಳಿವೆ. ಈ ಕಥೆಯನ್ನು ಆಧರಿಸಿ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ’ ಎನ್ನುತ್ತಾರೆ.

ತರುಣ್ ಸುಧೀರ್ ಈ ಹಿಂದೆ ‘ರಾಬರ್ಟ್’ ಚಿತ್ರದ ಮೂಲಕ ಆಶಾ ಭಟ್ ಅವರನ್ನು ನಾಯಕಿಯನ್ನಾಗಿ ಪರಿಚಯಿಸಿದ್ದರು. ಮೊದಲ ಚಿತ್ರದಲ್ಲೇ ಆಶಾ ಭಟ್‍ ಗಮನಸೆಳೆದಿದ್ದರು. ಆ ನಂತರ ‘ಕಾಟೇರ’ ಚಿತ್ರದ ಮೂಲಕ ಮಾಲಾಶ್ರೀ ಪುತ್ರಿ ಆರಾಧನ ರಾಮ್‍ ಅವರನ್ನು ನಾಯಕಿಯರನ್ನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಆರಾಧನಾ ಸಹ ಮೊದಲ ಚಿತ್ರದಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಅವರಿಬ್ಬರೂ ಇನ್ನೂ ಎರಡನೆಯ ಚಿತ್ರದಲ್ಲಿ ನಟಿಸಿಲ್ಲ. ಅವಕಾಶಗಳ ಕೊರತೆಯೋ ಅಥವಾ ಅವರಿಗೆ ಕಥೆಗಳು ಇಷ್ಟವಾಗುತ್ತಿಲ್ಲವೋ ಗೊತ್ತಿಲ್ಲ. ಹೀಗಿರುವಾಗಲೇ, ಪ್ರಿಯಾಂಕಾ ಆಚಾರ್ ಅವರನ್ನು ತಮ್ಮ ಹೊಸ ಚಿತ್ರದ ಮೂಲಕ ಪರಿಚಯಿಸುತ್ತಿದ್ದಾರೆ ತರುಣ್

ಸದ್ದಿಲ್ಲದೆ ಚಿತ್ರೀಕರಣ ಪ್ರಾರಂಭವಾಗಿರುವ ಈ ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದೆ.

Tags:    

Similar News