Oscars 2025 | ಆಸ್ಕರ್‌ಗೆ ಅರ್ಹತೆ ಪಡೆದ ಕನ್ನಡ ಕಿರುಚಿತ್ರ 'ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು'

ಚಿದಾನಂದ ಎಸ್ ನಾಯಕ್ ನಿರ್ದೇಶಿಸಿದ ಕನ್ನಡ ಕಿರುಚಿತ್ರ 'ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು' (Sunflowers Were the First Ones to Know) ಕಿರುಚಿತ್ರ ಆಸ್ಕರ್ 2025ಕ್ಕೆ ಅರ್ಹತೆ ಪಡೆದಿದೆ.;

Update: 2024-11-05 13:03 GMT
ಆಸ್ಕರ್‌ಗೆ ಅರ್ಹತೆ ಪಡೆದ ಕನ್ನಡದ ಕಿರುಚಿತ್ರ 'ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು'
Click the Play button to listen to article

ಚಿದಾನಂದ ಎಸ್ ನಾಯಕ್ ನಿರ್ದೇಶಿಸಿದ ಕನ್ನಡ ಕಿರುಚಿತ್ರ 'ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು' (Sunflowers Were the First Ones to Know) ಕಿರುಚಿತ್ರ ಆಸ್ಕರ್ 2025 ಗೆ ಅರ್ಹತೆ ಪಡೆದಿದೆ.

ಚಿದಾನಂದ ಅಧ್ಯಯನ ಮಾಡಿದ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (FTII) ಈ ಚಿತ್ರವನ್ನು ನಿರ್ಮಿಸಿದೆ. ಎಫ್‌ಟಿಐಐ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಚಿತ್ರ ಆಸ್ಕರ್‌ಗೆ ಅರ್ಹತೆ ಪಡೆದುಕೊಂಡಿರುವ ಸುದ್ದಿಯನ್ನು ಹಂಚಿಕೊಂಡಿದ್ದು, ಚಿತ್ರದ ಯಶಸ್ಸಿನ ಹಿಂದಿನ ವಿದ್ಯಾರ್ಥಿ ತಂಡವನ್ನು ಅಭಿನಂದಿಸಿದೆ.

Full View

ʼಸನ್‌ ಫ್ಲವರ್ಸ್ ವರ್ ದಿ ಫಸ್ಟ್ ಒನ್ಸ್ ಟು ನೋʼ ಎಂಬ ಕಿರುಚಿತ್ರವು ಮೇ ತಿಂಗಳಲ್ಲಿ ಕಾನ್‌ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕಿರು ಚಿತ್ರ (ಲಾ ಸಿನೆಫ್) ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದಿತ್ತು. ಇದು 16 ನಿಮಿಷಗಳ ಕಿರುಚಿತ್ರವಾಗಿದ್ದು, ಈ ಕಿರುಚಿತ್ರವು ಹುಂಜವನ್ನು ಕದಿಯುವ ಮುದುಕಿಯ ಕುರಿತಾದ ಕನ್ನಡ ಜಾನಪದ ಕಥೆಯನ್ನು ಆಧರಿಸಿದೆ. ಈ ಕಿರುಚಿತ್ರದ ತಂಡದಲ್ಲಿ ಸೂರಜ್ ಠಾಕೂರ್ ಛಾಯಾಗ್ರಾಹಕ, ಮನೋಜ್ ವಿ ಸಂಕಲನ ಮತ್ತು ಅಭಿಷೇಕ್ ಕದಮ್ ಅವರು ಧ್ವನಿ ನೀಡಿದ್ದಾರೆ. 

Full View

ಈ ಕುರಿತು ಮಾತನಾಡಿರುವ ನಿರ್ದೇಶಕ ಚಿದಾನಂದ್, 'ನನಗೆ ನೆನಪಿರುವಷ್ಟು ಸಮಯದಿಂದ ಈ ಕಥೆಯನ್ನು ಹೇಳಲು ಬಯಸಿದ್ದೆ. ಈ ಕಥೆಯನ್ನು ಕೇಳುವುದು ಮಾತ್ರವಲ್ಲದೆ ಅದನ್ನು ಮರುಸೃಷ್ಟಿಸುವುದು ನಮ್ಮ ಗುರಿಯಾಗಿತ್ತು. ಈ ಕಥೆ ಪ್ರಪಂಚದಾದ್ಯಂತ ಇರುವ ಪ್ರೇಕ್ಷಕರನ್ನು ಪ್ರತಿಧ್ವನಿಸಲಿದೆ ಎಂದು ಭಾವಿಸುತ್ತೇನೆ' ಎಂದಿದ್ದಾರೆ.

ಶಿವಮೊಗ್ಗ ಮೂಲದವರಾದ  ಚಿದಾನಂದ ಎಸ್‌. ನಾಯ್ಕ್‌ ಅವರು ನಿರ್ದೇಶಿಸಿರುವ 16 ನಿಮಿಷದ ಕಿರುಚಿತ್ರದಲ್ಲಿ ಬಂಜಾರ ಸಮುದಾಯದ ಹಳ್ಳಿಯೊಂದರಲ್ಲಿ ಹುಂಜವನ್ನು ಕದ್ದೊಯ್ದಾಗ ಗ್ರಾಮದಲ್ಲಿ ಬೆಳಕೇ ಮೂಡದೆ ಅಂಧಕಾರದಲ್ಲಿ ವೃದ್ಧೆ ಪರಿತಪಿಸುತ್ತಿರುವ ಕುರಿತು ಚಿತ್ರಿಸಲಾಗಿದೆ. 'ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದುʼ ಈ ಕಿರುಚಿತ್ರ ಬೆಂಗಳೂರು ಅಂತರರಾಷ್ಟ್ರೀಯ ಕಿರು ಚಿತ್ರೋತ್ಸವದಲ್ಲಿ ಅತ್ಯುತ್ತಮ ಭಾರತೀಯ ಸ್ಪರ್ಧಾತ್ಮಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದೆ. ಇದೀಗ ವಿಶ್ವ ಸಿನಿಮಾದ ಪ್ರತಿಷ್ಠಿತ ಪ್ರಶಸ್ತಿಯ ಹೊಸ್ತಿಲಲ್ಲಿ ನಿಂತಿದೆ.

Tags:    

Similar News