ಸು ಫ್ರಮ್ ಸೋ: ಚಿತ್ರ ಮಾಡಬೇಕು ಎಂಬ ಉದ್ದೇಶ ಬಿಟ್ಟರೆ ಬೇರೆ ಉದ್ದೇಶ ಇರಲಿಲ್ಲ: ಜೆ.ಪಿ. ತುಮಿನಾಡು ಶುಕ್ರವಾರ ಬಿಡುಡೆಯಾದ ‘ಸು ಫ್ರಮ್ ಸೋ’,
‘ಸು ಫ್ರಮ್ ಸೋ’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ, ಜೆ.ಪಿ. ತುಮಿನಾಡು, ಶನೀಲ್ ಗೌತಮ್, ದೀಪಕ್ ರೈ ಪಣಾಜೆ, ಮೈಮ್ ರಾಮದಾಸ್, ಸಂಧ್ಯಾ ಅರೆಕೆರೆ ಮುಂತಾದವರು ನಟಿಸಿದ್ದಾರೆ.;
ಶುಕ್ರವಾರ ಬಿಡುಡೆಯಾದ ‘ಸು ಫ್ರಮ್ ಸೋ’, ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಂಚಲನ ಹುಟ್ಟುಹಾಕಿದೆ. ಈ ವರ್ಷ ಸಾಕಷ್ಟು ಸೋಲು ಮತ್ತು ನಷ್ಟ ಅನುಭವಿಸಿದ್ದ ಕನ್ನಡ ಚಿತ್ರರಂಗಕ್ಕೆ, ಈ ಚಿತ್ರದ ಮೂಲಕ ಒಂದೊಳ್ಳೆಯ ಹಿಟ್ ಚಿತ್ರ ಸಿಕ್ಕಿದೆ. ಚಿತ್ರವು ಎರಡೇ ದಿನಗಳಲ್ಲಿ ಮೂರು ಕೋಟಿ ಗಳಿಕೆ ಮಾಡುವುದರ ಜೊತೆಗೆ ದೊಡ್ಡ ಪ್ರಮಾಣದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಈ ಚಿತ್ರದ ಗೆಲುವಿನಿಂದ ನಿರ್ದೇಶಕ ಮತ್ತು ನಟ ಜೆ.ಪಿ. ತುಮಿನಾಡು ಸಹ ಮುನ್ನಲೆಗೆ ಬಂದಿದ್ದಾರೆ. ಈ ಹಿಂದೆ ‘ಸಪ್ತ ಸಾಗರದಾಚೆ ಎಲ್ಲೋ’ ಸೇರಿದಂತೆ ಕೆಲವು ಚಿತ್ರಗಳಿಗೆ ಕೆಲಸ ಮಾಡಿರುವ ಜೆ.ಪಿಗೆ ಇದು ಮೊದಲ ನಿರ್ದೇಶನದ ಚಿತ್ರ. ಅಷ್ಟೇ ಅಲ್ಲ, ಅವರು ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ರೂಪುಗೊಂಡಿದ್ದು ಹೇಗೆ? ಇಂಥದ್ದೊಂದು ಕಥೆ ಹೊಳೆದಿದ್ದು ಹೇಗೆ? ಎಂದು ಜೆಪಿ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಈ ಚಿತ್ರದ ಕುರಿತು ಮಾತನಾಡಿರುವ ಅವರು, ‘2019ರಲ್ಲಿ ಈ ಕಥೆ ಬರೆದಿಟ್ಟುಕೊಂಡೆ. ಆ ನಂತರ ಕರೊನಾ, ಲಾಕ್ಡೌನ್ ಎಂದು ಮೂರು ವರ್ಷ ಹೋಯ್ತು. ಆ ನಂತರ ರಾಜ್ ಬ್ಯುಸಿಯಾಗಿದ್ದರು. ನಾನು ಬೇರೆ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದೆ. ಆಗ ಬರೆದ ಕಥೆಯನ್ನು ಈ ಆರು ವರ್ಷಗಳಲ್ಲಿ ಸಾಕಷ್ಟು ತಿದ್ದಿತೀಡಿದ್ದೇವೆ. ಬಹುಶಃ ಆರು ವರ್ಷಗಳ ಕಾಲ ಸಮಯ ಸಿಕ್ಕಿದ್ದು ನಮಗೆ ಇನ್ನಷ್ಟು ಅನುಕೂಲವಾಯ್ತು ಎಂದು ಈಗನಿಸುತ್ತಿದೆ. ನಾನು ಕಥೆ ಬರೆದಾಗ ಇದೆಲ್ಲಾ ತಲೆ ಕೆಡಿಸಿಕೊಂಡಿರಲಿಲ್ಲ. ಏನು ಹೇಳಬೇಕು, ಹೇಗೆ ಮನರಂಜಿಸಬೇಕು ಎಂಬುದರ ಬಗ್ಗೆ ಮಾತ್ರ ನಾವು ತಲೆ ಕೆಡಿಸಿಕೊಂಡಿದ್ದೆವು. ಬಜೆಟ್ ಎಷ್ಟಾಗಬಹುದು? ಇದು ದೊಡ್ಡ ಚಿತ್ರವೋ ಚಿಕ್ಕ ಚಿತ್ರವೋ? ಎಂದೆಲ್ಲಾ ಯೋಚನೆ ಮಾಡಿರಲಿಲ್ಲ. ನನ್ನ ಮಟ್ಟಕ್ಕೆ ಇದು ದೊಡ್ಡ ಚಿತ್ರವೇ. ನನಗಿದ್ದಿದ್ದು ಒಂದೇ ಉದ್ದೇಶ, ಅದು ಚಿತ್ರ ಮಾಡಬೇಕು ಎಂದು. ಒಂದು ಮನರಂಜನೆಯ ಪ್ಯಾಕೇಜ್ ಆಗಬೇಕು ಎಂಬ ಉದ್ದೇಶದಿಂದ ಈ ಚಿತ್ರ ಮಾಡಿದೆ’ ಎನ್ನುತ್ತಾರೆ.
ಜೆಪಿಗೆ ಕಳೆದ 14 ವರ್ಷಗಳಿಂದ ನನಗೆ ರಂಗಭೂಮಿಯ ನಂಟು ಇದೆಯಂತೆ. ‘ರಂಗಭೂಮಿಯಲ್ಲಿ ಪ್ರತೀ ವರ್ಷ ನಾಟಕ ಬರೀಬೇಕಿತ್ತು. ಮಂಗಳೂರು ಭಾಗದಲ್ಲಿ ಕಾಮಿಡಿ ನಾಟಕಕಗಳಿಗೆ ಹೆಚ್ಚು ಪ್ರಾಮುಖ್ಯತೆ ಇದೆ. ಹಾಗಾಗಿ ಕಾಮಿಡಿ ನಾಟಕಗಳನ್ನು ಬರೆಯುತ್ತಿದ್ದೆ. ಅದು ಸಿನಿಮಾದಲ್ಲಿ ಎಷ್ಟು ವರ್ಕ್ ಆಗುತ್ತದೆ ಎಂದು ಗೊತ್ತಿರಲಿಲ್ಲ. ನಾಟಕ ಮಾಡುವಾಗ ಇದನ್ನು ಸಿನಿಮಾ ಮಾಡಬಹುದಿತ್ತು ಎಂದು ಕೆಲವರು ಹೇಳಿದ್ದರು. ಆಗ ಸಿನಿಮಾ ಮಾಡಬೇಕು ಎಂದನಿಸಿತ್ತು. ಒಂದಿಷ್ಟು ಕಥೆಗಳನ್ನು ಮಾಡಿಟ್ಟುಕೊಂಢಿದ್ದೆ. ರಾಜ್ ಅವರನ್ನು ಭೇಟಿ ಮಾಡಿದಾಗ ಸಿನಿಮಾದ ದೃಷ್ಟಿಕೋನ ಬದಲಾಯ್ತು. ಸಿನಿಮಾ ಎಂದರೆ ಬೇರೆ, ನಾವಂದುಕೊಂಡಷ್ಟು ಸುಲಭವಲ್ಲ ಎಂದು ಗೊತ್ತಾಯ್ತು. ಅಲ್ಲಿಂದು ಶುರುವಾಗಿದ್ದೇ ‘ಸು ಫ್ರಮ್ ಸೋ’. ಆ ನಂತರ ಸಾಕಷ್ಟು ಕಲಿತೆ. ಹೇಮಂತ್ ರಾವ್, ರಾಜ್ ಶೆಟ್ಟಿ ಮುಂತಾದವರ ಜೊತೆಗೆ ಕೆಲಸ ಕಲಿತೆ. ಅದರಿಂದ ಈ ಚಿತ್ರಕ್ಕೆ ತುಂಬಾ ಸಹಾಯವಾಯ್ತು’ ಎನ್ನುತ್ತಾರೆ.
ಈ ಚಿತ್ರದಲ್ಲಿರುವ ಕೆಲವು ಪಾತ್ರಗಳನ್ನು ಊರಲ್ಲಿ ನೋಡಿದ್ದಾಗಿ ಹೇಳುವ ಅವರು, ‘ವಿಶೇಷ ಎನಿಸುವ ಪಾತ್ರಗಳು ಇದ್ದವು. ಅದನ್ನು ಕಾಲ್ಪನಿಕ ಕಥೆಗೆ ತಂದು ಹಾಸ್ಯದ ರೂಪದಲ್ಲಿ ನೋಡಿದೆ. ಕರಾವಳಿ ಭಾಗದ ಕಥೆ ಮಾಡಲಿಲ್ಲ. ಒಂದು ಸಿನಿಮಾ ಮಾಡಿದೆ ಅಷ್ಟೇ. ಯಾವ ಭಾಷೆಯಲ್ಲಿ ಹಿಡಿತವಿದೆಯೋ, ಆ ಭಾಷೆಯಲ್ಲಿ ನಾನು ನೋಡಿದ ಪ್ರಪಂಚವನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡಿದೆ. ಅದು ಎಲ್ಲಾ ಭಾಗಗಳಿಗೂ ಕನೆಕ್ಟ್ ಆಗುತ್ತದೆ ಎಂಬ ನಂಬಿಕೆ ಇತ್ತು. ಮದುವೆ, ಸಾವು, ದೆವ್ವ ಎಲ್ಲಾ ಭಾಗಗಳಲ್ಲೂ ಒಂದೇ. ಅದನ್ನು ಬೇರೆ ರೀತಿ ಹೇಳುವ ಪ್ರಯತ್ನ ಮಾಡಿದ್ದೇನೆ’ ಎನ್ನುತ್ತಾರೆ.
‘ಸು ಫ್ರಮ್ ಸೋ’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ, ಜೆ.ಪಿ. ತುಮಿನಾಡು, ಶನೀಲ್ ಗೌತಮ್, ದೀಪಕ್ ರೈ ಪಣಾಜೆ, ಮೈಮ್ ರಾಮದಾಸ್, ಸಂಧ್ಯಾ ಅರೆಕೆರೆ ಮುಂತಾದವರು ನಟಿಸಿದ್ದಾರೆ. ಚಂದ್ರಶೇಖರ್ ಛಾಯಾಗ್ರಹಣ, ಸುಮೇಧ್ ಕೆ ಸಂಗೀತ ಈ ಚಿತ್ರಕ್ಕಿದೆ.