ಕಿಚ್ಚ Vs ದರ್ಶನ್ ಫ್ಯಾನ್ಸ್: ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಶೀತಲ ʼಸಮರʼ
ಹಿರಿಯ ನಟ ಶರತ್ ಲೋಹಿತಾಶ್ವ, ನಟಿ ಶರಣ್ಯ ಶೆಟ್ಟಿ ಮತ್ತು ನಿರ್ಮಾಪಕ ಉಮೇಶ್ ಬಣಕಾರ್ ಅವರು ಅಭಿಮಾನಿಗಳು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ದರ್ಶನ್ ಮತ್ತು ಸುದೀಪ್ ನಡುವೆ ಸ್ಟಾರ್ ವಾರ್ ನಡೆಯುತ್ತಿದೆ.
ಸ್ಯಾಂಡಲ್‌ವುಡ್‌ನಲ್ಲಿ ನಟ ಕಿಚ್ಚ ಸುದೀಪ್ ಹಾಗೂ ನಟ ದರ್ಶನ್ ಅಭಿಮಾನಿಗಳ ನಡುವೆ ಮತ್ತೆ ಶೀತಲ ಸಮರ ಶುರುವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ವಾಕ್ಸಮರ ತಾರಕಕ್ಕೇರಿದೆ.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ತಮ್ಮ ಮುಂಬರುವ ಚಿತ್ರ 'ಮಾರ್ಕ್'ನ ಪ್ರಚಾರದ ವೇಳೆ ಸುದೀಪ್ ನೀಡಿದ ಹೇಳಿಕೆ ಈ ವಿವಾದಕ್ಕೆ ಕಾರಣವಾಗಿದೆ. ಡಿಸೆಂಬರ್ 25ರಂದು ಸಿನಿಮಾ ತೆರೆಕಾಣಲಿದ್ದು, ಅಂದು ತಮ್ಮ ಬೆಂಬಲಿಗರು `ಯುದ್ಧ ಆರಂಭಿಸಲಿದ್ದಾರೆ' ಎಂದು ಸುದೀಪ್ ಗುಡುಗಿದ್ದರು. ಇದು ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಗುರಿಯಾಗಿಸಿಕೊಂಡು ನೀಡಿದ ಹೇಳಿಕೆ ಎಂದು ದರ್ಶನ್ ಅಭಿಮಾನಿಗಳು ಕೆಂಡಾಮಂಡಲರಾಗಿ ಸಾಮಾಜಿಕ ಜಾಲತಾಣಗಳಲ್ಲಿ ʼಯುದ್ಧʼವೇ ಆರಂಭಿಸಿದ್ದರು.
ಈ ಬೆಳವಣಿಗೆಯ ಬೆನ್ನಲ್ಲೇ ದಾವಣಗೆರೆಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸುದೀಪ್ ಹೆಸರು ಹೇಳದೆ ಪರೋಕ್ಷವಾಗಿ ತಿರುಗೇಟು ನೀಡಿದ್ದರು."ಕೆಲವರು ದರ್ಶನ್ ಅನುಪಸ್ಥಿತಿಯಲ್ಲಿ ವೇದಿಕೆಗಳ ಮೇಲೆ ಅಥವಾ ಸಂದರ್ಶನಗಳಲ್ಲಿ ಅವರ ಬಗ್ಗೆ ತಪ್ಪಾಗಿ ಮಾತನಾಡುತ್ತಿದ್ದಾರೆ. ದರ್ಶನ್ ಎದುರಿಗಿಲ್ಲ ಎಂಬ ಕಾರಣಕ್ಕೆ ಈ ರೀತಿ ಸುಮ್ಮನೆ ಅಬ್ಬರಿಸುತ್ತಿದ್ದಾರೆ" ಸುದೀಪ್ ಅವರಿಗೆ ಟಾಂಟ್ ಕೊಟ್ಟಿದ್ದಾರೆ. ದರ್ಶನ್ ಪ್ರಸ್ತುತ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಈ ಸಂಕಷ್ಟದ ಸಮಯದಲ್ಲಿ ಇಂತಹ ಹೇಳಿಕೆಗಳು ಅಭಿಮಾನಿಗಳನ್ನು ಕೆರಳಿಸಿವೆ.
ಡಿಸೆಂಬರ್ 11ರಂದು ಬಿಡುಗಡೆಯಾದ ದರ್ಶನ್ ಅಭಿನಯದ 'ಡೆವಿಲ್' ಚಿತ್ರಕ್ಕೆ ಉತ್ತಮ ಸ್ಪಂದನೆ ದೊರೆತಿತ್ತು. ಈಗ ಸುದೀಪ್ ಅವರ 'ಮಾರ್ಕ್' ಬಿಡುಗಡೆಯ ಹೊತ್ತಿನಲ್ಲಿ ಉಭಯ ನಟರ ಅಭಿಮಾನಿಗಳ ನಡುವೆ ಜಿದ್ದಾಜಿದ್ದಿ ಶುರುವಾಗಿದ್ದು, ಮಾಧ್ಯಮಗಳಲ್ಲೂ ಇದು ದೊಡ್ಡ ಸುದ್ದಿಯಾಗಿದೆ. ಸುದೀಪ್ ಅವರ ಈ ʻಯುದ್ಧʼದ ಮಾತು ಪೈರಸಿ ವಿರುದ್ಧವೋ ಅಥವಾ ವ್ಯಕ್ತಿಗತವೋ ಎಂಬ ಚರ್ಚೆಗಳು ನಡೆಯುತ್ತಿದ್ದರೂ, ವಿಜಯಲಕ್ಷ್ಮಿ ಅವರ ಪ್ರತಿಕ್ರಿಯೆ ಸ್ಯಾಂಡಲ್‌ವುಡ್ ಸ್ಟಾರ್ ವಾರ್‌ಗೆ ಹೊಸ ತಿರುವು ನೀಡಿದೆ.
ಸ್ಟಾರ್ ವಾರ್ ಕುರಿತು 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿರುವ ಹಿರಿಯ ನಟ ಶರತ್ ಲೋಹಿತಾಶ್ವ ಅವರು, ʻʻಅಭಿಮಾನಿಗಳ ನಡುವಿನ ಈ ಕಿತ್ತಾಟ ನನ್ನ ಗಮನಕ್ಕೂ ಬಂದಿದೆ, ಆದರೆ ಅಂತಿಮವಾಗಿ ಎಲ್ಲವೂ ಶಾಂತಿಯ ಕಡೆಗೆ ಸಾಗಬೇಕು. ನಟ ಸುದೀಪ್ ಆಗಲಿ ಅಥವಾ ವಿಜಯಲಕ್ಷ್ಮಿ ಅವರಾಗಲಿ ಎಲ್ಲಿಯೂ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿಲ್ಲ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ಮಧ್ಯದಲ್ಲಿರುವ ಅಭಿಮಾನಿಗಳು ಅನಗತ್ಯ ಪ್ರಚೋದನೆಗೆ ಒಳಗಾಗದೆ ಸೌಹಾರ್ಧಯುತವಾಗಿ ಇರಬೇಕುʼʼ ಎಂದು ಅವರು ಕಿವಿಮಾತು ಹೇಳಿದ್ದಾರೆ.
ಇದೇ ವಿಷಯವಾಗಿ ಪ್ರತಿಕ್ರಿಯಿಸಿರುವ ನಟಿ ಶರಣ್ಯ ಶೆಟ್ಟಿ ಅವರು, ʻʻಸ್ಟಾರ್ ವಾರ್ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವಳಲ್ಲದಿದ್ದರೂ, ಎಲ್ಲಾ ಸ್ಟಾರ್ ನಟರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಮರೆಯಬಾರದು. ಪ್ರತಿಯೊಬ್ಬ ಕಲಾವಿದನು ಬಹಳಷ್ಟು ಶ್ರಮ ಮತ್ತು ಖುಷಿಯಿಂದ ಸಿನಿಮಾ ಮಾಡಿರುತ್ತಾನೆ. ಹೀಗಾಗಿ ಅಭಿಮಾನಿಗಳು ದ್ವೇಷವನ್ನು ಬದಿಗಿಟ್ಟು ಸಿನಿಮಾವನ್ನು ಸಂಭ್ರಮಿಸುವುದರ ಕಡೆಗೆ ಗಮನ ಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಚಿತ್ರರಂಗದ ಒಳಿತಿಗಾಗಿ ಎಲ್ಲರೂ ಒಟ್ಟಾಗಿ ನಡೆಯುವುದು ಇಂದಿನ ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತೊಂದೆಡೆ, ನಿರ್ಮಾಪಕ ಉಮೇಶ್ ಬಣಕಾರ್ ಅವರು ಈ ಫ್ಯಾನ್ಸ್ ವಾರ್ ಕನ್ನಡ ಚಿತ್ರರಂಗದ ಭವಿಷ್ಯದ ಮೇಲೆ ಬೀರುವ ಕೆಟ್ಟ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ʻʻಅಭಿಮಾನಿಗಳ ಹೆಸರಿನಲ್ಲಿರುವ ಕೆಲ ಕಿಡಿಗೇಡಿಗಳು ಮಾಡುತ್ತಿರುವ ಇಂತಹ ಕೃತ್ಯಗಳು ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೆ, ರಾಜ್ಯದ ಕಾನೂನು ಸುವ್ಯವಸ್ಥೆಗೂ ಧಕ್ಕೆ ತರುತ್ತವೆ. ಸುದೀಪ್ ಅವರು ಬಹಿರಂಗವಾಗಿ ಹೇಳಿಕೆ ನೀಡಲು ಕೆಲವು ಅಭಿಮಾನಿಗಳ ಅತಿರೇಕದ ಕಾಮೆಂಟ್‌ಗಳೇ ಕಾರಣವಿರಬಹುದು. ಇಂತಹ ಸಂದರ್ಭಗಳಲ್ಲಿ ಸಂಬಂಧಪಟ್ಟ ನಟರೇ ಮುಂಚೂಣಿಗೆ ಬಂದು ಅಭಿಮಾನಿಗಳನ್ನು ತಡೆಯುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ನಟಿ ರಮ್ಯಾ ಅವರು ದೂರು ನೀಡುವ ಮೂಲಕ ಇಂತಹ ಪ್ರವೃತ್ತಿಗೆ ಲಗಾಮು ಹಾಕಲು ಮುಂದಾಗಿರುವುದನ್ನು ಸ್ಮರಿಸಿದ ಅವರು, ಸರ್ಕಾರವೂ ಇಂತಹ ಸೈಬರ್ ಕಿರುಕುಳಗಳ ವಿರುದ್ಧ ಕಠಿಣ ಕಾನೂನು ತರಬೇಕು'' ಎಂದು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ಇಬ್ಬರು ಧ್ರುವತಾರೆಗಳ ಅಭಿಮಾನಿಗಳ ನಡುವಿನ ಈ ಸಂಘರ್ಷ ಕೇವಲ ಸಾಮಾಜಿಕ ಜಾಲತಾಣಕ್ಕೆ ಸೀಮಿತವಾಗದೆ, ಚಿತ್ರರಂಗದ ಘನತೆಗೂ ಧಕ್ಕೆ ತರುತ್ತಿದೆ. ಕಲಾವಿದರು ತಮ್ಮ ಸಿನಿಮಾಗಳ ಪ್ರಚಾರಕ್ಕಾಗಿ ಬಳಸುವ ಪದಗಳು ಅಭಿಮಾನಿಗಳಿಂದ ತಪ್ಪಾಗಿ ಅರ್ಥೈಸಲ್ಪಡುತ್ತಿರುವುದು ವಿಷಾದನೀಯ.