ಜೈಲರ್ 2ನಲ್ಲಿ ನರಸಿಂಹನ ಅಬ್ಬರ: ಈ ಬಾರಿ ಶಿವಣ್ಣನ ಪಾತ್ರ ಹೇಗಿರಲಿದೆ ಗೊತ್ತಾ?

ಸೂಪರ್‌ ಸ್ಟಾರ್ ರಜನಿಕಾಂತ್ ಮತ್ತು ನೆಲ್ಸನ್ ದಿಲೀಪ್ ಕುಮಾರ್ ಕಾಂಬಿನೇಷನ್‌ನ 'ಜೈಲರ್ 2' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಪಾತ್ರದ ಬಗ್ಗೆ ಇದ್ದ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ.

Update: 2025-12-23 09:49 GMT
ನಟ ಶಿವರಾಜ್‌ಕುಮಾರ್‌
Click the Play button to listen to article

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ 'ಜೈಲರ್' ಸೀಕ್ವೆಲ್ ಸಿದ್ಧವಾಗುತ್ತಿದ್ದು, ಇದರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಪಾತ್ರದ ಬಗ್ಗೆ ಈಗ ಅಧಿಕೃತ ಮಾಹಿತಿ ಹೊರಬಂದಿದೆ. ಮೊದಲ ಭಾಗದಲ್ಲಿ ಕೇವಲ ಹತ್ತು ನಿಮಿಷಗಳ ಕಾಲ ಬಂದು ಇಡೀ ಚಿತ್ರಮಂದಿರದಲ್ಲಿ ಸಂಚಲನ ಮೂಡಿಸಿದ್ದ ಶಿವಣ್ಣ, ಈ ಬಾರಿ ಜೈಲರ್ 2 ಸಿನಿಮಾದಲ್ಲಿ ದೀರ್ಘಾವಧಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಕೇವಲ ಅತಿಥಿ ಪಾತ್ರಕ್ಕೆ ಸೀಮಿತವಾಗದೆ, ಕಥೆಯ ಪ್ರಮುಖ ಭಾಗವಾಗಿ ರಜನಿಕಾಂತ್ ಅವರೊಂದಿಗೆ ಪರದೆ ಹಂಚಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಶಿವರಾಜ್‌ಕುಮಾರ್ ಅವರು ಮೊದಲ ಹಂತದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ. ಜನವರಿ ತಿಂಗಳ ಎರಡನೇ ವಾರದಲ್ಲಿ ಅವರು ಮತ್ತೆ ಚಿತ್ರತಂಡವನ್ನು ಸೇರಿಕೊಳ್ಳಲಿದ್ದು, ಸತತ ಮೂರು ದಿನಗಳ ಕಾಲ ಮಹತ್ವದ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರು ಮೊದಲ ಭಾಗಕ್ಕಿಂತಲೂ ಈ ಸೀಕ್ವೆಲ್ ಅನ್ನು ಅತಿ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡುತ್ತಿದ್ದು, ಮೊದಲ ಭಾಗದಲ್ಲಿ 'ಟೈಗರ್' ಮುತ್ತುವೇಲ್ ಪಾಂಡಿಯನ್ ಮತ್ತು 'ನರಸಿಂಹ'ನ ನಡುವೆ ಇದ್ದ ಗೆಳೆತನವನ್ನು ಈ ಭಾಗದಲ್ಲಿ ಮತ್ತಷ್ಟು ಆಳವಾಗಿ ತೋರಿಸುವ ಸಾಧ್ಯತೆ ಇದೆ.

ಈ ಬಾರಿಯೂ ಚಿತ್ರದಲ್ಲಿ ದಕ್ಷಿಣ ಭಾರತದ ಹಲವು ಘಟಾನುಘಟಿ ಕಲಾವಿದರು ಇರಲಿದ್ದು, ಶಿವಣ್ಣನ ಪಾತ್ರವು ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ ಎಂಬುದು ಈಗ ಖಚಿತವಾಗಿದೆ. ಪ್ರಸ್ತುತ ಶಿವರಾಜ್‌ಕುಮಾರ್ ಅವರು ತಮ್ಮ ಕನ್ನಡದ '45' ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಇದರ ನಡುವೆಯೇ ಜೈಲರ್ 2 ಚಿತ್ರಕ್ಕೂ ಸಮಯ ಮೀಸಲಿಟ್ಟಿದ್ದಾರೆ. ಈ ಬಹುನಿರೀಕ್ಷಿತ ಚಿತ್ರವು 2026ರ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

Tags:    

Similar News