
ಶಿವರಾಜ್‌ಕುಮಾರ್
ಭಾಷೆ ಮುಖ್ಯವಲ್ಲ..ಭಾವ ಮುಖ್ಯ- ವಿಶೇಷ ಸಂದರ್ಶನದಲ್ಲಿ ಶಿವಣ್ಣ ಹೇಳಿದ್ದೇನು ಗೊತ್ತಾ?
ಬಹುನಿರೀಕ್ಷಿತ ʼ45ʼ ಚಿತ್ರದ ಬಗ್ಗೆ ʼದ ಫೆಡರಲ್ ಕರ್ನಾಟಕʼ ಜತೆ ನಟ ಶಿವರಾಜ್ ಕುಮಾರ್ ಮಾತನಾಡಿದ್ದಾರೆ.
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ಚೊಚ್ಚಲ ಸಿನಿಮಾ 45 ಡಿಸೆಂಬರ್ 25 ರಂದು ರಾಜ್ಯಾದ್ಯಂತ ಅಬ್ಬರಿಸಲು ಸಜ್ಜಾಗಿದೆ. ಈಗಾಗಲೇ ಚಿತ್ರತಂಡ ಕೊನೆಯ ಹಂತದ ಪ್ರಚಾರ ಕಾರ್ಯದಲ್ಲಿ ತೊಡಗಿದೆ.
ಇನ್ನುಅದೇ ದಿನ ಕಿಚ್ಚ ಸುದೀಪ್ ನಟನೆ ʻಮಾರ್ಕ್ʼ ಸಿನಿಮಾ ಕೂಡ ರಿಲೀಸ್ ಆಗಲಿದ್ದು, ಒಂದೇ ದಿನ ಬಿಡುಗಡೆ ಆದರೂ ಸಹ ಪರಸ್ಪರ ಎದುರಾಳಿಗಳು ಆಗದಂತೆ ಕೆಲ ಎಚ್ಚರಿಕೆಗಳನ್ನು ಚಿತ್ರತಂಡಗಳು ವಹಿಸಿಕೊಂಡಿವೆ. ಎರಡೂ ಸಿನಿಮಾಗಳು ಪೇಯ್ಡ್ ಪ್ರೀಮಿಯರ್ ಶೋ ಅಥವಾ ವಿಶೇಷ ಶೋಗಳನ್ನು ಆಯೋಜಿಸುತ್ತಿದ್ದು, ಈ ವಿಶೇಷ ಶೋಗಳ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಈಗಾಗಲೇ ಆರಂಭವಾಗಿದೆ. 45’ ಸಿನಿಮಾ ಡಿಸೆಂಬರ್ 24ರ ರಾತ್ರಿಯೇ ಶೋ ಪ್ರದರ್ಶನ ಮಾಡುತ್ತಿದೆ. ಡಿಸೆಂಬರ್ 24ರ ರಾತ್ರಿಯೇ ವಿಶೇಷ ಶೋ ಅನ್ನು ‘45’ ಚಿತ್ರತಂಡ ಆಯೋಜಿಸಿದ್ದು, ರಾತ್ರಿ 7 ಗಂಟೆಗೆ ಕೆಲವೆಡೆ, 7:30ಕ್ಕೆ ಮತ್ತೆ ಕೆಲವೆಡೆ ಶೋಗಳು ಪ್ರದರ್ಶನಗೊಳ್ಳಲಿವೆ. ಇನ್ನು ಈ ನಡುವೆ ನಟ ಶಿವರಾಜ್ ಕುಮಾರ್ 'ದ ಫೆಡರಲ್ ಕರ್ನಾಟಕʼಕ್ಕೆ ವಿಶೇಷ ಸಂದರ್ಶನ ನೀಡಿದ್ದು, ಚಿತ್ರ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಂದರ್ಶನದ ಸಂಪೂರ್ಣ ವಿವರ ಇಲ್ಲಿದೆ
45 ಅಂದರೆ ನಿಮ್ಮ ವಯಸ್ಸಾ ಶಿವಣ್ಣ..?
ಶಿವಣ್ಣ: ನನಗೆ ಅಷ್ಟಾಗಿದೆಯಾ? ಬಹುಶಃ ನಾನು, ಉಪ್ಪಿ, ರಾಜ್ ಮೂವರ ವಯಸ್ಸು ಸೇರಿಸಿಯೇ ಇಟ್ಟಿರಬೇಕು ಅನ್ಸುತ್ತೆ ಅರ್ಜುನ್ ಜನ್ಯ.
ಹೊಸ ವರ್ಷದಲ್ಲಿ ನಿಮ್ಮ ನಿರೀಕ್ಷೆಗಳೇನು?
ಶಿವಣ್ಣ: ನಿರೀಕ್ಷೆಯೇ ಕಳೆದುಕೊಂಡು ಈ ವರ್ಷಕ್ಕೆ ಕಾಲಿಟ್ಟವನು ನಾನು. ಅಭಿಮಾನಿಗಳು ಮತ್ತು ಕುಟುಂಬ ನೀಡಿದ ಶಕ್ತಿ ನನ್ನನ್ನು ಜೀವಂತ ಉಳಿಸಿದೆ. ಹೊರಗಡೆ ತಲೆಯೇ ಕೆಡಿಸಿಕೊಳ್ಳದ ಹಾಗೆ ಕಾಣಿಸಿರಬಹುದು. ಆದರೆ ನನ್ನ ನಿರೀಕ್ಷೆಗಳನ್ನು ತೊಡೆದು ಹಾಕಿದ ದಿನಗಳು ಅವು. ಈಗ ನಿಜಕ್ಕೂ ನಿರೀಕ್ಷೆಗಳನ್ನು ಇಟ್ಟುಕೊಳ್ಳದಿರುವುದು ಕಲಿತಿದ್ದೇನೆ. ಅಂದರೆ ಎಲ್ಲಾನೂ ಬಂದಹಾಗೆ ಸ್ವೀಕರಿಸುವುದು ಅಷ್ಟೇ. ಹಾಗಂತ ಎಚ್ಚರಿಕೆ ಇಲ್ಲ ಅಂತ ಅಲ್ಲ. ಪ್ರತಿಯೊಂದು ಮುಂಜಾಗ್ರತೆಯ ಸೂಚನೆಗಳನ್ನು ಹೆಚ್ಚು ಹೆಚ್ಚು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತೇನೆ.
45 ಪಾತ್ರ ನಿಮ್ಮ ಈ ಹಿಂದಿನ ಯಾವುದಾದರೂ ಪಾತ್ರವನ್ನು ನೆನಪಿಸುತ್ತಾ?
ಶಿವಣ್ಣ: ಖಂಡಿತವಾಗಿ ಇಲ್ಲ. ನಾನು ಪಾತ್ರಗಳನ್ನು ಆಯ್ಕೆ ಮಾಡುವುದೇ ಅವುಗಳ ವೈವಿಧ್ಯತೆಗಾಗಿ. ಕಥೆಯ ಕಾರಣಕ್ಕಾಗಿ ಕೆಲವೊಂದು ಪಾತ್ರಗಳು ರಿಪೀಟ್ ಆಗಿರಬಹುದು. ಉದಾಹರಣೆಗೆ ನಾನು ಪೊಲೀಸಾಗಿ ಕಾಮಿಡಿನೂ ಮಾಡಿದ್ದೀನಿ, ಕೌಟುಂಬಿಕನು ಮಾಡಿದ್ದೀನಿ, ಕ್ರೈಮ್ ಥ್ರಿಲ್ಲರ್ ಕೂಡ ಮಾಡಿದ್ದೀನಿ. ಆದರೆ ಇದು ಅವೆಲ್ಲಕ್ಕಿಂತ ವಿಭಿನ್ನ. ಒಬ್ಬ ವ್ಯಕ್ತಿಯನ್ನು ತಿದ್ದುವಂಥ ಪಾತ್ರ.
ಮೂರು ಪಾತ್ರಗಳಲ್ಲಿ ನಿಮಗೆ ಪರ್ಸನಲ್ ಫೇವರಿಟ್ ಯಾವುದು?
ಶಿವಣ್ಣ: ನನಗೆ ಅರ್ಜುನ್ ಜನ್ಯ ಮೊದಲು ಹೇಳಿದ್ದೇ ಈಗ ನಾನು ಮಾಡಿರುವ ಪಾತ್ರವನ್ನು. ನನಗೆ ಅದು ಇಷ್ಟವಾಗಿತ್ತು ಕೂಡ. ಪೂರ್ತಿ ಕಥೆ ಕೇಳಿದಾಗ ಉಳಿದ ಎರಡು ಪಾತ್ರಗಳು ಕೂಡ ಪ್ರಧಾನವಾಗಿವೆ ಅಂತ ಅನಿಸಿತು. ನನ್ನ ಇಮೇಜ್ ಗೆ ಇದೇ ಹೆಚ್ಚು ಹೊಂದಿಕೊಳ್ಳಬಹುದು ಅನಿಸಿದೆ. ಪೂರ್ತಿ ಚಿತ್ರವೇ ಇಷ್ಟವಾಗಿರುವ ಕಾರಣ ಪ್ರತಿ ಪಾತ್ರಗಳು ಫೇವರೇಟ್ ಆಗಿವೆ.
"ಅಫ್ರೋ ಟಪಾಂಗ್" ಹಾಡನ್ನು ಪ್ರಚಾರಕ್ಕೆ ಮಾತ್ರ ಬಳಸಲಾಗಿದೆ. ಆದರೆ ಸಿನಿಮಾದಲ್ಲೂ ಈ ಹಾಡು ನಿರೀಕ್ಷಿಸುವವರಿಗೆ ಏನು ಹೇಳುತ್ತೀರಿ?
ಶಿವಣ್ಣ: ಅದರ ಅಗತ್ಯವಿಲ್ಲ. ಈ ಹಾಡು ಪಾತ್ರಗಳ ರೀತಿಯನ್ನು ತೋರಿಸಲೆಂದೇ ಸೃಷ್ಟಿಸಲಾಗಿದೆ. ಇದು ಅಷ್ಟು ಅಗತ್ಯ ಇಲ್ಲ ಎನ್ನುವ ಕಾರಣದಿಂದಲೇ ಶೂಟಿಂಗ್ ಕೂಡ ಆಮೇಲೆ ಮಾಡಲಾಗಿತ್ತು. ಇದನ್ನು ಕೂಡ ಮುಗಿಸಿಯೇ ನಾನು ಅಮೆರಿಕದ ಚಿಕಿತ್ಸೆಗೆ ಹೋಗುವುದಾಗಿ ಹೇಳಿದ್ದೆ. ಆದರೆ ಇದು ಬಂದ ಬಳಿಕ ಶೂಟ್ ಮಾಡಿದ್ರೂ ಓಕೆ. ಅಷ್ಟೇನೂ ಅರ್ಜೆಂಟ್ ಇಲ್ಲ ಅಂತ ಅರ್ಜುನ್ ಜನ್ಯ ಹೇಳಿದ್ದರು. ಸಿನಿಮಾದೊಳಗೆ ಈ ಹಾಡಿನ ಅಗತ್ಯ ಬರುವುದಿಲ್ಲ. ಅದು ಪ್ರೇಕ್ಷಕರಿಗೂ ಅರ್ಥವಾಗಬಹುದು.
ರಾಜ್ ಬಿ ಶೆಟ್ಟಿಯವರ ಬಗ್ಗೆ ಏನು ಹೇಳುತ್ತೀರಿ?
ಶಿವಣ್ಣ: ರಾಜ್ ಬಿ ಶೆಟ್ಟಿ ಟ್ಯಾಲೆಂಟ್ ಬಗ್ಗೆ ನನಗೆ ಗೊತ್ತಿತ್ತು. ಆದರೆ ಮೊದಲ ಸಲ ಜತೆಯಾಗಿ ನಟಿಸಿದ್ದೇವೆ. ನಾನು ನಟಿಸಬಲ್ಲ ಕಲಾವಿದ ಮಾತ್ರ. ಆದರೆ ಅವರಿಗೆ ನಟನೆ, ನಿರ್ದೇಶನದ ಜತೆ ಬರವಣಿಗೆ ಕೂಡ ಒಲಿದಿದೆ. ಬುದ್ಧಿವಂತರು. ನಾನು ಓದಿರುವುದು ತುಂಬ ಕಡಿಮೆ. ಕಾಲೇಜ್‌ಗೇನೇ ಓದು ನಿಲ್ಲಿಸಿಬಿಟ್ಟೆ. 21ನೇ ವರ್ಷದ ಬಳಿಕ ನಾನು ಪುಸ್ತಕವನ್ನೇ ಓದಿಲ್ಲ. ಮಕ್ಕಳು ಕೂಡ ಓದಿ ಕಷ್ಟ ಪಡೋದನ್ನು ನೋಡೋಕೆ ನನ್ನಿಂದ ಆಗಲ್ಲ! ಆದರೆ ಓದಿರುವವರು ಸರಸ್ವತಿ ಪುತ್ರರು ಅಂತ ಗೊತ್ತು. ರಾಜ್ ಬಿ ಶೆಟ್ಟಿ ಕೂಡ ಹಾಗೆಯೇ. ತುಂಬಾನೇ ತಿಳ್ಕೊಂಡಿದ್ದಾರೆ.
ಚಿತ್ರದಲ್ಲಿ ರಾಜ್ ಬಿ ಶೆಟ್ಟಿಯವರ ಭಾಷೆ ನಿಮಗಿಂತ ಭಿನ್ನವಾಗಿರುವ ಹಾಗಿದೆ?
ಶಿವಣ್ಣ: ಇಲ್ಲಿ ಭಾಷೆ ಮುಖ್ಯವಲ್ಲ. ಭಾಷೆಗಿಂತ ಭಾವ ಮುಖ್ಯ. ಈ ಚಿತ್ರದಲ್ಲಿ ಎಲ್ಲರ ಭಾವಗಳು ಕೂಡ ಪ್ರಾಧಾನ್ಯತೆ ಪಡೆಯುತ್ತವೆ.
ನೀವು ಹೆಣ್ಣಾಗಿ ಕ್ಲಾಸಿಕಲ್ ಡ್ಯಾನ್ಸ್ ಮಾಡಿದ್ದೀರಾ?
ಶಿವಣ್ಣ: ಹೌದು. ಪೂರ್ತಿ ಒಂದು ಹಾಡಲ್ಲಿ ಕಾಣಿಸಿಲ್ಲ. ಆದರೆ ಸಣ್ಣದೊಂದು ಭಾಗದಲ್ಲಿ ಬರುತ್ತೇನೆ.

