23ನೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ‘ಸು ಫ್ರಮ್ ಸೋ’

ಚಿತ್ರವು ಜುಲೈ 25ರಂದು ಬಿಡುಗಡೆಯಾಯಿತು. ಅದಕ್ಕೂ ಮೊದಲು ಮೂರು ದಿನಗಳ ಕಾಲ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಶಿವಮೊಗ್ಗದಲ್ಲಿ ಪ್ರೀ-ಪೇಯ್ಡ್ ಪ್ರೀಮಿಯರ್‌ಗಳನ್ನು ಆಯೋಜಿಸಲಾಗಿತ್ತು.;

Update: 2025-08-17 04:36 GMT

ಕನ್ನಡ ಚಿತ್ರರಂಗದಲ್ಲಿ 100 ಕೋಟಿ ರೂ. ಕ್ಲಬ್ ಸೇರಿ ಮೂರು ವರ್ಷಗಳೇ ಆಗಿದ್ದವು. 2022ರಲ್ಲಿ ಬಿಡುಗಡೆಯಾದ ‘ಕೆಜಿಎಫ್ 2’, ‘ಕಾಂತಾರ’, ‘ವಿಕ್ರಾಂತ್ ರೋಣ’, ‘ಜೇಮ್ಸ್’ ಮತ್ತು ‘777 ಚಾರ್ಲಿ’ ಚಿತ್ರಗಳ ನಂತರ, ಯಾವುದೇ ಕನ್ನಡ ಚಿತ್ರ ಈ ಹೆಗ್ಗಳಿಕೆಗೆ ಪಾತ್ರವಾಗಿರಲಿಲ್ಲ. ದರ್ಶನ್ ಅಭಿನಯದ ‘ಕಾಟೇರ’ ಮತ್ತು ಉಪೇಂದ್ರ ಅಭಿನಯದ ‘ಕಬ್ಜ’ ಚಿತ್ರಗಳು 100 ಕೋಟಿ ರೂ. ಕ್ಲಬ್ ಸೇರಿವೆ ಎಂದು ವರದಿಯಾಗಿದ್ದರೂ, ಅದು ನಂತರ ಸುಳ್ಳು ಎಂದು ದೃಢಪಟ್ಟಿತು.

ಈ ನಡುವೆ, ಸುಮಾರು ಮೂರು ವರ್ಷಗಳ ನಂತರ 'ಸು ಫ್ರಮ್ ಸೋ' ಚಿತ್ರವು 100 ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಿದೆ. ಚಿತ್ರ ಬಿಡುಗಡೆಯಾದ 23ನೇ ದಿನದ ಕೊನೆಯಲ್ಲಿ ಜಾಗತಿಕವಾಗಿ, ಎಲ್ಲಾ ಭಾಷೆಗಳಿಂದ ಒಟ್ಟು 100 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗಿದೆ. ಈ ಗಳಿಕೆಯಲ್ಲಿ, ಕರ್ನಾಟಕದ ಪಾಲು 75 ಕೋಟಿ ರೂ. ದಾಟಿದೆ. ಚಿತ್ರವು ತೆಲುಗು ಮತ್ತು ಮಲಯಾಳಂಗೆ ಡಬ್ ಆಗಿದ್ದು, ಆ ಅವತರಣಿಕೆಗಳ ಗಳಿಕೆ ಮತ್ತು ವಿದೇಶಗಳ ಗಳಿಕೆಯನ್ನು ಒಟ್ಟುಗೂಡಿಸಿದರೆ 100 ಕೋಟಿ ರೂ. ದಾಟಿದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ ಸ್ಯಾಕ್ನಿಕ್ ಡಾಟ್ ಕಾಮ್ ತಿಳಿಸಿದೆ.

ಯಾರೂ ನಿರೀಕ್ಷಿಸಿರದ ಯಶಸ್ಸು

'ಸು ಫ್ರಮ್ ಸೋ' ಚಿತ್ರವು ಇಂತಹ ದೊಡ್ಡ ಗಳಿಕೆ ಮಾಡಬಹುದೆಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಇದು ಕರಾವಳಿಯ ಹೊಸಬರ ತಂಡವೊಂದು ಯಾವುದೇ ದೊಡ್ಡ ಪ್ರಚಾರವಿಲ್ಲದೆ, ಹೆಚ್ಚು ಸುದ್ದಿಯಾಗದೆ ಮಾಡಿದ ಚಿತ್ರ. ಚಿತ್ರ ಬಿಡುಗಡೆಗೆ ಒಂದು ವಾರ ಮೊದಲು, ಚಿತ್ರತಂಡವು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಜುಲೈ 25ರಂದು ಚಿತ್ರ ಬಿಡುಗಡೆಯಾಗುತ್ತಿದೆ ಎಂದು ತಿಳಿಸಿತ್ತು, ಅಷ್ಟೇ ಹೊರತು ಬೇರೆ ಯಾವುದೇ ಪ್ರಚಾರ ನಡೆದಿರಲಿಲ್ಲ. ಚಿತ್ರದಲ್ಲಿ ಯಾರು ನಟಿಸಿದ್ದಾರೆ, ವಿಶೇಷತೆಗಳೇನು ಎಂಬ ಬಗ್ಗೆ ಹೆಚ್ಚು ಸುದ್ದಿ ಇರಲಿಲ್ಲ. ಟ್ರೇಲರ್ ನೋಡಿದ ಕೆಲವರು ಮೆಚ್ಚಿಕೊಂಡಿದ್ದರೂ, ಹೆಚ್ಚಿನವರಿಗೆ ಚಿತ್ರದ ಹೆಸರು ಹೇಳಲು ಸಹ ಗೊತ್ತಿರಲಿಲ್ಲ.

75 ಲಕ್ಷದಿಂದ 75 ಕೋಟಿ ರೂ.ಗಳವರೆಗೆ

ಚಿತ್ರವು ಜುಲೈ 25ರಂದು ಬಿಡುಗಡೆಯಾಯಿತು. ಅದಕ್ಕೂ ಮೊದಲು ಮೂರು ದಿನಗಳ ಕಾಲ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಶಿವಮೊಗ್ಗದಲ್ಲಿ ಪ್ರೀ-ಪೇಯ್ಡ್ ಪ್ರೀಮಿಯರ್‌ಗಳನ್ನು ಆಯೋಜಿಸಲಾಗಿತ್ತು. ಅಲ್ಲಿ ಚಿತ್ರ ನೋಡಿದವರು ಉತ್ತಮ ಪ್ರತಿಕ್ರಿಯೆ ನೀಡಿದರು. ಚಿತ್ರ ಬಿಡುಗಡೆಯಾದ ನಂತರ, ಸಕಾರಾತ್ಮಕ ವಿಮರ್ಶೆಗಳು ಬರುತ್ತಿದ್ದಂತೆ, ಜನರು ಚಿತ್ರ ನೋಡಲು ಪ್ರಾರಂಭಿಸಿದರು. ಮೊದಲ ದಿನ 75 ಲಕ್ಷ ರೂ. ಇದ್ದ ಗಳಿಕೆ, ನಂತರದ ದಿನಗಳಲ್ಲಿ ಕ್ರಮೇಣ ಹೆಚ್ಚಾಯಿತು. ಈಗ ಒಟ್ಟಾರೆಯಾಗಿ, ಕರ್ನಾಟಕದಲ್ಲೇ ಚಿತ್ರವು 75 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ.

ಹಿಂದಿ ಸೇರಿದಂತೆ ಇತರೆ ಭಾಷೆಗಳಿಗೆ

ಈ ಚಿತ್ರ ಮೊದಲು ಕೇವಲ ಕನ್ನಡದಲ್ಲಿ ಬಿಡುಗಡೆಯಾಗಿತ್ತು. ಇದೀಗ ಚಿತ್ರಕ್ಕೆ ಸಿಕ್ಕ ಭಾರಿ ಯಶಸ್ಸು ಮತ್ತು ಪ್ರತಿಕ್ರಿಯೆಯಿಂದ, ಚಿತ್ರದ ಬೇರೆ ಭಾಷೆಗಳ ಡಬ್ಬಿಂಗ್ ಹಕ್ಕುಗಳಿಗೆ ಸಾಕಷ್ಟು ಬೇಡಿಕೆ ಉಂಟಾಗಿದೆ. ಮೊದಲ ಹಂತವಾಗಿ ಚಿತ್ರವು ಆಗಸ್ಟ್ 1ರಂದು ಮಲಯಾಳಂನಲ್ಲಿ ಬಿಡುಗಡೆಯಾಯಿತು ಮತ್ತು ಅದರ ಮುಂದಿನ ವಾರ, ಅಂದರೆ ಆಗಸ್ಟ್ 8ರಂದು ತೆಲುಗಿನಲ್ಲಿ ಬಿಡುಗಡೆಯಾಗಿದೆ. ಇದರ ಜೊತೆಗೆ, ಹಿಂದಿಯ ಜನಪ್ರಿಯ ವಿತರಕ ಅನಿಲ್ ತಡಾನಿ ಅವರು ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕುಗಳನ್ನು ಖರೀದಿಸಿದ್ದಾರೆ ಎಂದು ಹೇಳಲಾಗಿದೆ. 'ಸು ಫ್ರಮ್ ಸೋ' ಚಿತ್ರದ ಹಿಂದಿ ಅವತರಣಿಕೆಯನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲು ಅವರು ಮುಂದಾಗಿದ್ದಾರೆ. ಡಬ್ಬಿಂಗ್ ಕೆಲಸಗಳು ನಡೆಯುತ್ತಿದ್ದು, ಬಿಡುಗಡೆಯ ದಿನಾಂಕ ಇನ್ನೂ ಅಂತಿಮವಾಗಿಲ್ಲ.

ಜೆ.ಪಿ. ತುಮಿನಾಡು ನಿರ್ದೇಶನದ ಈ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ, ಜೆ.ಪಿ. ತುಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ. ತುಮಿನಾಡು, ದೀಪಕ್ ರೈ ಪಣಜೆ, ಮೈಮ್ ರಾಮದಾಸ್ ಮುಂತಾದವರು ನಟಿಸಿದ್ದಾರೆ.

Tags:    

Similar News