ಅನಾರೋಗ್ಯ | ಶಸ್ತ್ರಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಲಿರುವ ಶಿವರಾಜಕುಮಾರ್‌

ಡಿಸೆಂಬರ್‌ ತಿಂಗಳಲ್ಲಿ ಅವರು ಅಮೆರಿಕಾಗೆ ಹೋಗಲಿದ್ದು, ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಅವರೇ ಹೇಳುವಂತೆ ಒಂದಿಷ್ಟು ದಿನಗಳ ವಿಶ್ರಾಂತಿ ಪಡೆದು ಜನವರಿ ಕೊನೆಯ ಹೊತ್ತಿಗೆ ಚಿತ್ರೀಕರಣಕ್ಕೆ ಮರಳಲಿದ್ದಾರೆ..;

Update: 2024-11-14 01:30 GMT

ಕನ್ನಡ ಚಿತ್ರರಂಗದ ಅತ್ಯಂತ ಬೇಡಿಕೆಯ ನಟರೆಂದರೆ ಅದು ಶಿವರಾಜಕುಮಾರ್. 62ರ ವಯಸ್ಸಿನಲ್ಲೂ ಅತ್ಯಂತ ಸಕ್ರಿಯವಾಗಿರುವ ಅವರು, ಹಲವು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಈ ವರ್ಷ ಅವರ ಅಭಿನಯದ ‘ಕರಟಕ ದಮನಕ’ ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ನಾಳೆ (ನ.15) ‘ಭೈರತಿ ರಣಗಲ್‍’ ಬಿಡುಗಡೆಯಾಗುತ್ತಿದೆ. ಈ ನಡುವೆ ‘45’ ಚಿತ್ರವನ್ನು ಅವರು ಮುಗಿಸಿದ್ದಾರೆ. ಇದರ ಜೊತೆಗೆ ಒಂದಿಷ್ಟು ಚಿತ್ರಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ‌

ಹೀಗಿರುವಾಗಲೇ, ಅವರಿಗೆ ಆರೋಗ್ಯದ ಸಮಸ್ಯೆ ಎದುರಾಗಿದೆ ಮತ್ತು ಚಿಕಿತ್ಸೆ ಪಡೆಯುವುದಕ್ಕೆ ಅವರು ಡಿಸೆಂಬರ್‍ ತಿಂಗಳಲ್ಲಿ ಅಮೆರಿಕಾಗೆ ಹೋಗಲಿದ್ದಾರೆ ಎಂಬ ಸುದ್ದಿ ಇದೆ. ಇಷ್ಟಕ್ಕೂ ಶಿವರಾಜಕುಮಾರ್ ಅವರಿಗ ಆಗಿರುವ ಸಮಸ್ಯೆ ಏನು?

ಶಿವರಾಜಕುಮಾರ್ ಅವರಿಗೆ ಹೀಗಾಗುತ್ತಿರುವುದು ಇದು ಮೊದಲೇನಲ್ಲ. ಹಿಂದೊಮ್ಮೆ ಸಮಾರಂಭವೊಂದರಲ್ಲಿ ತಲೆಗೆ ಪೆಟ್ಟು ಬಿದ್ದು ರಕ್ತ ಹೆಪ್ಪುಗಟ್ಟಿತ್ತು. ಆ ನಂತರ ಅವರಿಗೆ ಹೃದಯದ ಸಮಸ್ಯೆಯೂ ಆಗಿತ್ತು. ಆದರೆ, ತಮಗೆ ಏನೂ ಆಗಿಲ್ಲವೆಂಬಂತೆ 62ರ ವಯಸ್ಸಿನಲ್ಲೂ ಶಿವಣ್ಣ, ಲವಲವಿಕೆಯಿಂದ ಒಂದರ‌ ಹಿಂದೊಂದು ಚಿತ್ರಗಳನ್ನು ಮಾಡುತ್ತಲೇ ಇದ್ದಾರೆ. ಈಗಲೂ ಕನ್ನಡದಲ್ಲಿ ಯಾರಾದರೂ ಹೀರೋ ಕೈಯಲ್ಲಿ ಅಷ್ಟೊಂದು ಚಿತ್ರಗಳಿವೆ ಎಂದರೆ ಶಿವಣ್ಣ ಒಬ್ಬರೇ. ಹೀಗಿರುವಾಗಲೇ, ಶಿವರಾಜಕುಮಾರ್‍ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ವಿಷಯ ಕೆಲವು ದಿನಗಳಿಂದ ಚಿತ್ರರಂಗದಲ್ಲಿ ಕೇಳಿಬರುತ್ತಲೇ ಇದೆ. ಈ ಸಂಬಂಧ ಚಿಕಿತ್ಸೆ ಪಡೆಯುವುದಕ್ಕೆ ಅವರು ಅಮೆರಿಕಾಗೆ ಹೋಗುತ್ತಿದ್ದಾರೆ ಎಂಬ ಸುದ್ದಿಯೂ ಇದೆ.

ಆದರೆ, ಶಿವರಾಜಕುಮಾರ್‍ ಆಗಲೀ, ಅವರ ಆಪ್ತವರ್ಗದವರಾಗಲೀ ಕೆಲವು ದಿನಗಳ ಹಿಂದಿನವರೆಗೂ ಈ ವಿಷಯವನ್ನು ಬಹಿರಂಗಪಡಿಸಿರಲಿಲ್ಲ. ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುತ್ತಿದ್ದರು. ಆದರೆ, ಈ ವಿಷಯವಿದ ಕುರಿತು ಇತ್ತೀಚೆಗೆ ಮೌನ ಮುರಿದಿದ್ದಾರೆ. ತಮಗೆ ಆರೋಗ್ಯ ಸಮಸ್ಯೆ ಇರುವುದರು ನಿಜವೆಂದು ಮತ್ತು ಅದಕ್ಕೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಅಮೆರಿಕಾಗೆ ಹೋಗುತ್ತಿರುವುದಾಗಿ ಇತ್ತೀಚೆಗೆ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಪಿತ್ತಕೋಶದ ಸಮಸ್ಯೆಯಿಂದ ಬಳಲುತ್ತಿರುವ ಶಿವಣ್ಣ

ಇಷ್ಟಕ್ಕೂ ಶಿವರಾಜಕುಮಾರ್ ಅವರಿಗೆ ಆಗಿರುವ ಅನಾರೋಗ್ಯವೇನು? ಎಂಬ ಪ್ರಶ್ನೆ ಬರುವುದು ಸಹಜ. ಈ ಕುರಿತು ಅವರು ನಿರ್ಧಿಷ್ಟವಾಗಿ ಹೇಳುವುದಿಲ್ಲವಾದರೂ, ಮೂಲಗಳ ಪ್ರಕಾರ ಅವರು ಪಿತ್ತಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಪಿತ್ತಕೋಶದಲ್ಲಿ ಸೋಂಕು ಇರುವುದು ಗೊತ್ತಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರಂತೆ. ಹಾಗಂತ ಅವರು ಕೆಲಸವನ್ನು ನಿಲ್ಲಿಸಿಲ್ಲ. ಇತ್ತೀಚೆಗೆ ಅವರು ಯಾವುದೇ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿಲ್ಲದಿದ್ದರೂ, ‘45’ ಚಿತ್ರದ ಕೆಲಸಗಳನ್ನು ಮುಗಿಸಿಕೊಟ್ಟಿದ್ದಾರೆ. ನ.15ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ‘ಭೈರತಿ ರಣಗಲ್‍’ ಚಿತ್ರದ ಪ್ರಚಾರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಿದ್ದಾರೆ. ಡಿಸೆಂಬರ್‌ ತಿಂಗಳಲ್ಲಿ ಅವರು ಅಮೆರಿಕಾಗೆ ಹೋಗಲಿದ್ದು, ಅಪರೇಷನ್‍ಗೆ ಒಳಗಾಗಲಿದ್ದಾರೆ. ಅವರೇ ಹೇಳುವಂತೆ ಒಂದಿಷ್ಟು ದಿನಗಳ ವಿಶ್ರಾಂತಿ ಪಡೆದು ಜನವರಿ ಕೊನೆಯ ಹೊತ್ತಿಗೆ ಕೆಲಸಕ್ಕೆ ಮರಳಲಿದ್ದಾರಂತೆ.

ತಮ್ಮ ಅನಾರೋಗ್ಯದ ಸಮಸ್ಯೆಯು ಕುರಿತು ಮಾಧ್ಯಮದ ಜತೆ ಮಾತನಾಡಿದ ಶಿವರಾಜಕುಮಾರ್‌ "ಎಲ್ಲರಂತೆ ನಾನೂ ಮನುಷ್ಯನೇ. ನನಗೆ ಆರೋಗ್ಯ ಸರಿ ಇಲ್ಲ. ಚಿಕಿತ್ಸೆ ಪಡೆಯುತ್ತಿದ್ದೇನೆ. ಆರಂಭದಲ್ಲಿ ನನಗೂ ಸ್ವಲ್ಪ ಭಯವಿತ್ತು. ಆದರೆ, ಎಲ್ಲರೂ ಧೈರ್ಯ ತುಂಬಿದ್ದಾರೆ. ನಾಲ್ಕು ತರಹದ ಚಿಕಿತ್ಸೆ ಇದೆ. ಆ ನಂತರ ಒಂದು ಆಪರೇಷನ್‍ ಇದೆ. ಅದಾದ ಮೇಲೆ ಒಂದು ತಿಂಗಳು ಚಿಕಿತ್ಸೆ ಪಡೆಯುಬೇಕಾಗುತ್ತದೆ. ಜನವರಿ ಕೊನೆಯ ಹೊತ್ತಿಗೆ ಎಲ್ಲ ಸರಿ ಹೋಗುತ್ತದೆ. ಅಮೆರಿಕಾದ ಫ್ಲೋರಿಡಾದಲ್ಲಿ ಆಪರೇಷನ್‍ ನಡೆಯುವ ಸಾ‍ಧ್ಯತೆ ಇದೆ. ಈಗ ಎರಡು ಹಂತದ ಚಿಕಿತ್ಸೆ ಮುಗಿದಿದೆ. ನವೆಂಬರ್‍ 15ರಂದು ‘ಭೈರತಿ ರಣಗಲ್‍’ ಚಿತ್ರ ಬಿಡುಗಡೆ ಇದೆ. ವೈದ್ಯರು ಹೆಚ್ಚು ಸುಸ್ತು ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಊಟ, ವ್ಯಾಯಾಮ ಎಲ್ಲವೂ ಎಂದಿನಂತೆಯೇ ನಡೆಯುತ್ತಿದೆ. ಅದಕ್ಕೆ ಯಾವುದೇ ನಿರ್ಬಂಧ ಇಲ್ಲ. ಅದರೊಟ್ಟಿಗೆ ಚಿಕಿತ್ಸೆಯೂ ನಡೆಯುತ್ತಿದೆ. ಕೆಲವೊಮ್ಮೆ ಸುಸ್ತಾಗುತ್ತದೆ. ಆದರೆ, ನಮ್ಮ ಕುಟುಂಬದವರು ಚಿತ್ರರಂಗದವರು ಸುಸ್ತಾಗುವುದಕ್ಕೆ ಬಿಡುತ್ತಿಲ್ಲ. ಸುದೀಪ್‍, ‘ದುನಿಯಾ’ ವಿಜಯ್, ಯಶ್‍, ಡಾಲಿ ಧನಂಜಯ್‍ ಎಲ್ಲರೂ ಪ್ರೀತಿ, ವಿಶ್ವಾಸ ತೋರಿಸುವ ಮೂಲಕ ಶಕ್ತಿ ತುಂಬುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಚಿಕಿತ್ಸೆ ನಡೆಯುತ್ತಿದೆ; ನಾನು ಹುಷಾರಾಗಿದ್ದೇನೆ’

ತಮ್ಮ ಆರೋಗ್ಯದ ಬಗ್ಗೆ ಆತಂಕಪಡುವಂತದ್ದೇನೂ ಇಲ್ಲ ಎಂದಿರುವ ಶಿವರಾಜಕುಮಾರ್‍, ‘ನಾನು ಹುಷಾರಾಗಿಯೇ ಇದ್ದೇನೆ. ನನ್ನ ಆರೋಗ್ಯದ ಬಗ್ಗೆ ಆತಂಕಪಡುವಂತದ್ದೇನೂ ಇಲ್ಲ. ಚಿಕಿತ್ಸೆ ಪಡೆಯುತ್ತಿರುವಾಗಲೇ ‘45’ ಚಿತ್ರದ ಚಿತ್ರೀಕರಣ ಮುಗಿಸಿದೆ. ಸಾಹಸ ದೃಶ್ಯಗಳಲ್ಲಿ ಭಾಗವಹಿಸಿದೆ. ಸದ್ಯ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ನಲ್ಲಿ ಭಾಗವಹಿಸುತ್ತಿದ್ದೇನೆ. ‘ಭೈರತಿ ರಣಗಲ್‍’ ಚಿತ್ರದ ಪ್ರಮೋಷನ್‍ನಲ್ಲಿ ತೊಡಗಿಸಿಕೊಂಡಿದ್ದೇನೆ. ನಮ್ಮ ನಿರ್ಮಾಪಕರಿಗೆಲ್ಲರಿಗೂ ಈ ವಿಷಯದ ಬಗ್ಗೆ ಗೊತ್ತಿದೆ. ಗೊತ್ತಿರಬೇಕು. ಏಕೆಂದರೆ, ನಾಳೆ ಇವನು ನಮಗೆ ಯಾಕೆ ಹೇಳಲಿಲ್ಲ ಎನ್ನಬಾರದು. ಹಾಗಾಗಿ, ಹೇಳಿದ್ದೇನೆ. ಈ ವಿಷಯದಲ್ಲಿ ಸುಳ್ಳು ಹೇಳಬಾರದು. ನಾನು ಫೋಟೋ ಎಂದು ಬಂದವರಿಗೆ ಯಾವತ್ತೂ ಇಲ್ಲ ಎನ್ನುವುದಿಲ್ಲ. ಆದರೆ, ಇನ್ಫೆಕ್ಷನ್‍ ಆಗುವ ಭಯದಿಂದ ಸ್ವಲ್ಪ ದೂರ ನಿಲ್ಲುತ್ತಿದ್ದೇನೆ. ಶಿವಣ್ಣ ಹೀಗ್ಯಾಕೆ ದೂರ ನಿಲ್ಲುತ್ತಿದ್ದಾರೆ ಎಂಬ ಭಾವನೆ ಜನರಿಗೆ ಬರಬಾರದು. ಹಾಗಾಗಿ, ದೂರ ನಿಲ್ಲಿಎಂದೇ ಹೇಳುತ್ತಿದ್ದೇನೆ’ ಎಂದಿದ್ದಾರೆ.

ಆಪರೇಷನ್‍ ಮುಗಿದರೆ, ಎಲ್ಲವೂ ಸರಿ ಹೋಗುತ್ತದೆ ಎಂದಿರುವ ಶಿವರಾಜಕುಮಾರ್, ‘ನಾನು ಈ ವಿಷಯವನ್ನು ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಮಾಧ್ಯಮದವರಿಗೆ ಗೊತ್ತಿದ್ದರೂ ಅವರು ಸುದ್ದಿ ಮಾಡಲಿಲ್ಲ. ಆದರೂ ನಾನೇ ಯಾಕೆ ಹೊರಬಂದು ಈ ವಿಷಯವನ್ನು ಬಹಿರಂಗಪಡಿಸಿದೆ ಎನ್ನುವುದಕ್ಕೂ ಕಾರಣವಿದೆ. ನಾವು ಎಲ್ಲಾ ಸಂದರ್ಭಗಳಲ್ಲಿ ಎಲ್ಲ ವಿಷಯಗಳನ್ನೂ ಹೇಳುತ್ತೇವೆ. ಈ ವಿಷಯವನ್ನು ಮುಚ್ಚಿಡುವಂತದ್ದೇನೂ ಇಲ್ಲ. ಈ ವಿಷಯವನ್ನು ಮುಚ್ಚಿಟ್ಟು, ಅದು ಜನರಿಗೆ ಗೊತ್ತಾಗಿ, ಅದರಿಂದ ಅವರಿಗೆ ಶಾಕ್‍ ಆಗಬಾರದು. ಹಾಗಾಗಿ, ಅವರಿಗೆ ಗೊತ್ತಿರಬೇಕು. ಹಾಗಾಯೇ ನನ್ನ ಆರೋಗ್ಯದ ಬಗ್ಗ ಊಹಾಪೋಹಗಳು ಏಳಬಾರದು. ಹಾಗಾಗಿ, ನಾನಾಗಿಯೇ ಇದನ್ನು ಬಹಿರಂಗಪಡಿಸುತ್ತಿದ್ದೇನೆ. ಸದ್ಯ ಚಿಕಿತ್ಸೆ ನಡೆಯುತ್ತಿದೆ. ಯಾವುದೇ ಸಮಸ್ಯೆ ಇಲ್ಲ. ನಾನು ಸಹ ಸ್ಪಂದಿಸುತ್ತಿದ್ದೇನೆ. ನವೆಂಬರ್‍ 27ರವರೆಗೂ ಚಿಕಿತ್ಸೆ ನಡೆಯಲಿದೆ. ಅಲ್ಲಿಂದ ಎರಡು ವಾರಗಳ ನಂತರ ಆಪರೇಷನ್‍ ಇದೆ. ಆಪರೇಷನ್‍ ಮುಗಿದರೆ ಎಲ್ಲವೂ ಸರಿ ಹೋಗುತ್ತದೆ’ ಎಂದ ಹೇಳಿದ್ದಾರೆ.

ಅನಾರೋಗ್ಯದಿಂದ ಚಿತ್ರಗಳಿಗೆ ಸಮಸ್ಯೆ ಆಗದು

ಅನಾರೋಗ್ಯದಿಂದ ಶಿವರಾಜಕುಮಾರ್ ಅವರ ಚಿತ್ರಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎಂಬ ಪ್ರಶ್ನೆ ಬರಬಹುದು. ಮೊದಲೇ ಹೇಳಿದಂತೆ, ಶಿವರಾಜಕುಮಾರ್‍ ‘45’ ಚಿತ್ರದ ಕೆಲಸಗಳನ್ನು ಮುಗಿಸಿಕೊಟ್ಟಿದ್ದಾರೆ. ಇನ್ನು, ರೋಹಿತ್ ಪದಕಿ ನಿರ್ದೇಶನದ ‘ಉತ್ತರಕಾಂಡ’ ಮತ್ತು ಕಾರ್ತಿಕ್‍ ಅದ್ವೈತ್‍ ನಿರ್ದೇಶನದ ‘ಶಿವಣ್ಣ 131’ ಚಿತ್ರಗಳಲ್ಲಿ ಅವರು ನಟಿಸತ್ತಿದ್ದಾರೆ. ಈ ಪೈಕಿ ‘ಉತ್ತರಕಾಂಡ’ ಚಿತ್ರದ ಚಿತ್ರೀಕರಣ ಶೇ. 30ರಷ್ಟು ಮುಗಿದರೆ, ವರಮಹಾಲಕ್ಷ್ಮೀ ಹಬ್ಬದಂದು ‘ಶಿವಣ್ಣ 131’ ಚಿತ್ರದ ಮುಹೂರ್ತವಾಗಿದ್ದು, ಇನ್ನಷ್ಟೇ ಚಿತ್ರೀಕರಣ ಶುರುವಾಗಬೇಕಿದೆ. ಇದಲ್ಲದೆ, ರಾಮ್‍ ಚರಣ್‍ ತೇಜ ಅಭಿನಯದ ಹೊಸ ಚಿತ್ರ, ‘ಭೈರವನ ಕೊನೆಯ ಪಾಠ’, ‘ದಳವಾಯಿ’ ಮುಂತಾದ ಚಿತ್ರಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಆದರೆ, ಈ ಚಿತ್ರಗಳ್ಯಾವುವೂ ಶುರುವಾಗಿಲ್ಲ. ಶಿವರಾಜಕುಮಾರ್‍ ಚೇತರಿಸಿಕೊಂಡು ಬಂದ ನಂತರ ಈ ಚಿತ್ರಗಳು ಒಂದೊಂದೇ ಶುರುವಾಗಲಿವೆ ಎಂದು ಹೇಳಲಾಗುತ್ತಿದೆ.

ಇನ್ನು, ಶಿವರಾಜಕುಮಾರ್ ಅವರ ಅನಾರೋಗ್ಯದಿಂದಾಗಿ ‘ಉತ್ತರಕಾಂಡ’ ನಿಂತಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಆದರೆ, ಇದು ಸುಳ್ಳು. ಶಿವರಾಜಕುಮಾರ್‍ ಅವರು ವಾಪಸ್ಸು ಬಂದ ನಂತರ ಚಿತ್ರೀಕರಣ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಪ್ರತಿಕ್ರಿಯಿಸಿರುವ ಕಾರ್ತಿಕ್‍, ‘ಚಿತ್ರ ಯಾವುದೇ ಕಾರಣಕ್ಕೂ ನಿಂತಿಲ್ಲ. ಆದರೆ, ಕಾರಣಾಂತರಗಳಿಂದ ಸ್ವಲ್ಪ ತಡೆಹಿಡಿದಿದ್ದೇವೆ. ಈಗಾಗಲೇ ಶೇ. 30ರಷ್ಟು ಚಿತ್ರೀಕರಣ ಮುಗಿದಿದೆ. ಶಿವಣ್ಣ ವಾಪಸ್ಸು ಬಂದ ನಂತರ ಚಿತ್ರೀಕರಣ ಮುಂದುವರೆಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ, ಸದಾ ಸಕ್ರಿಯವಾಗಿರುವ ಶಿವರಾಜಕುಮಾರ್ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಸದ್ಯದಲ್ಲೇ ಅಮೆರಿಕಾಗೆ ಪ್ರಯಾಣ ಬೆಳೆಸಲಿದ್ದಾರೆ. ಅವರು ಶೀಘ್ರವೇ ಗುಣಮುಖರಾಗಿ ಮತ್ತೊಮ್ಮೆ ಸಕ್ರಿಯರಾಗಿ ಒಂದಿಷ್ಟು ಚಿತ್ರಗಳಲ್ಲಿ ನಟಿಸಲಿ ಎಂಬುದು ಅವರ ಅಭಿಮಾನಿಗಳ ಪ್ರಾರ್ಥನೆ ಮತ್ತು ಹಾರೈಕೆ. ಅದಕ್ಕೆ ಸರಿಯಾಗಿ ಶಿವಣ್ಣ ಚಿಕಿತ್ಸೆಗೆ ಸ್ಪಂದಿಸಿ ಬೇಗ ಗುಣಮುಖರಾಗಿ ಚಿತ್ರಗಳಲ್ಲಿ ನಟಿಸಲಿ.

Tags:    

Similar News