ಇದು ಸ್ಮರಣೀಯ; ಮೊದಲ ರಾಷ್ಟ್ರ ಪ್ರಶಸ್ತಿ ಗೆದ್ದ ಶಾರುಖ್ ಖಾನ್ ಪ್ರತಿಕ್ರಿಯೆ
ನಾನು ಕೃತಜ್ಞತೆ, ಹೆಮ್ಮೆಯ ಕ್ಷಣದಲ್ಲಿ ಮೌನಿಯಾಗಿದ್ದೇನೆ. ರಾಷ್ಟ್ರ ಪ್ರಶಸ್ತಿ ದೊರೆಯುವುದು ನನ್ನ ಜೀವನದುದ್ದಕ್ಕೂ ಸ್ಮರಣೀಯ ಕ್ಷಣವಾಗಿದೆ ಎಂದು ನಟ ಶಾರುಕ್ ಖಾನ್ ಸಂತಸ ವ್ಯಕ್ತಪಡಿಸಿದ್ದಾರೆ.;
ಶಾರುಖ್ ಖಾನ್
ತಮ್ಮ ಮೂರು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಸೂಪರ್‌ಸ್ಟಾರ್ ಶಾರುಖ್ ಖಾನ್ ಖುಷಿಯಲ್ಲಿದ್ದಾರೆ. 'ಜವಾನ್' ಚಿತ್ರದ ಅಮೋಘ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶುಕ್ರವಾರ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಸಂದೇಶ ಹಂಚಿಕೊಂಡ 59 ವರ್ಷದ ನಟ, "ನಾನು ಕೃತಜ್ಞತೆ, ಹೆಮ್ಮೆಯ ಕ್ಷಣದಲ್ಲಿ ಮೌನಿಯಾಗಿದ್ದೇನ. ರಾಷ್ಟ್ರ ಪ್ರಶಸ್ತಿ ದೊರೆಯುವುದು ನನ್ನ ಜೀವನದುದ್ದಕ್ಕೂ ಸ್ಮರಣೀಯ ಕ್ಷಣವಾಗಿದೆ," ಎಂದು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಶಾರುಖ್ ಅವರು '12th ಫೇಲ್' ಚಿತ್ರದ ನಟನೆಗಾಗಿ ವಿಕ್ರಾಂತ್ ಮಾಸ್ಸಿ ಅವರೊಂದಿಗೆ ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. 'ಜವಾನ್' ಚಿತ್ರದಲ್ಲಿ ಸೇನಾಧಿಕಾರಿ ವಿಕ್ರಮ್ ರಾಥೋಡ್ ಮತ್ತು ಅವರ ಮಗ ಆಜಾದ್ ಎಂಬ ದ್ವಿಪಾತ್ರದಲ್ಲಿನ ಶಾರುಖ್ ನಟಿಸಿದ್ದರು.
"ಈ ಪ್ರಶಸ್ತಿಯು ನನ್ನ ಕೆಲಸಕ್ಕೆ ಮಹತ್ವವಿದೆ ಎಂಬುದನ್ನು ಸ್ಮರಿಸಿದೆ. ಇದು ಕೇವಲ ಅಂತಿಮ ಗೆರೆಯಲ್ಲ, ಬದಲಿಗೆ ಮತ್ತಷ್ಟು ಶ್ರಮಿಸಲು, ಕಲಿಯಲು ಮತ್ತು ಚಿತ್ರರಂಗಕ್ಕೆ ಸೇವೆ ಸಲ್ಲಿಸಲು ಪ್ರೇರಣೆ," ಎಂದು ಶಾರುಖ್ ಹೇಳಿದ್ದಾರೆ.
ಮುಂಬರುವ 'ಕಿಂಗ್' ಚಿತ್ರದ ಚಿತ್ರೀಕರಣದ ವೇಳೆ ಗಾಯಗೊಂಡಿದ್ದರಿಂದ ಶಾರುಖ್ ಬಲಗೈಗೆ ಬ್ಯಾಂಡೇಜ್ ಹಾಕಲಾಗಿದೆ. ತಮ್ಮ ಸಂದೇಶದಲ್ಲಿ ಅವರು ಪ್ರಶಸ್ತಿ ಆಯ್ಕೆ ಸಮಿತಿ, ನಿರ್ದೇಶಕ ಅಟ್ಲೀ, ತಮ್ಮ ತಂಡ, ಕುಟುಂಬ ಮತ್ತು ಅಭಿಮಾನಿಗಳಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇದೇ ವೇಳೆ ಅವರು " ಪಾಪ್‌ಕಾರ್ನ್ ರೆಡಿಮಾಡಿಕೊಳ್ಳಿ. ನಾನು ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ನಿಮ್ಮ ಮುಂದೆ ಬರುತ್ತೇನೆ," ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.