ಚಿತ್ರ ಬಿಡುಗಡೆಗಾಗಿ 4.5 ಕೋಟಿ ಮೌಲ್ಯದ ಸೈಟು ಜಾಮೀನಿಗಿಟ್ಟ ನಿರ್ಮಾಪಕ

ಚಂದ್ರ ಲೇಔಟ್‍ನಲ್ಲಿದ್ದ ನಾಲ್ಕೂವರೆ ಕೋಟಿ ಮೌಲ್ಯದ ನನ್ನ ಎರಡು ಸೈಟುಗಳನ್ನು ಜಾಮೀನಾಗಿ ನೀಡಿದೆ. ತಕ್ಷಣವೇ ಪತ್ರಗಳನ್ನು ಅಡವಿಟ್ಟು ಪ್ರದರ್ಶನಕ್ಕೆ ಅನುಮತಿ ಪಡೆದುಕೊಂಡು ಬಂದಿದ್ದೇನೆ ಎನ್ನುತ್ತಾರೆ ಛಲವಾದಿ ಕುಮಾರ್.;

Update: 2025-01-16 12:25 GMT

‘ಸಂಜು ವೆಡ್ಸ್ ಗೀತಾ 2’ ಚಿತ್ರವು ನಾಳೆ ಶುಕ್ರವಾರ (ಜನವರಿ 17) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಳೆದ ವಾರವೇ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ನ್ಯಾಯಾಲಯವು ತಡೆಯಾಜ್ಞೆ ವಿಧಿಸಿದ್ದರಿಂದ ಚಿತ್ರದ ಬಿಡುಗಡೆ ನಿಂತಿತ್ತು. ಹೀಗಿರುವಾಗಲೇ, ನಿರ್ಮಾಪಕ ಛಲವಾದಿ ಕುಮಾರ್ ತಡಯಾಜ್ಞೆ ತೆರುವು ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಷ್ಟಕ್ಕೂ ಅವರು ಏನು ಮಾಡಿದರು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಅವರು ತಮ್ಮ ನಾಲ್ಕೂವರೆ ಕೋಟಿ ಮೌಲ್ಯದ ಸೈಟುಗಳನ್ನು ಜಾಮೀನು ನೀಡಿ ಈ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದಾರೆ. ಈ ವಿಷಯವನ್ನು ಅವರೇ ಬಹಿರಂಗಪಡಿಸಿದ್ದಾರೆ.

ಈ ಕುರಿತು ಮತನಾಡಿರುವ ನಿರ್ಮಾಪಕ ಛಲವಾದಿ ಕುಮಾರ್, ‘ಕೆಲವು ಕಡೆ ನಾನು ಆರು ಕೋಟಿ ಸಾಲ ಮಾಡಿಕೊಂಡಿದ್ದೆ, ಅದನ್ನು ತೀರಿಸದೇ ಇದ್ದುದರಿಂದ ಫೈನಾನ್ಶಿಯರ್ ತಡೆಯಾಜ್ಞೆ ತಂದು, ಚಿತ್ರದ ಬಿಡುಗಡೆಯನ್ನು ನಿಲ್ಲಿಸಿದರು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಇದು ಸುಳ್ಳು. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ’ ಎನ್ನುತ್ತಾರೆ.

ಹಾಗಾದರೆ, ನಿಜಕ್ಕೂ ಆಗಿದ್ದು ಏನು ಎಂಬ ಪ್ರಶ್ನೆ ಸಹಜ. ಈ ಕುರಿತು ಮಾತನಾಡುವ ಕುಮಾರ್, ‘ನಾಗಶೇಖರ್ ಈ ಹಿಂದೆ ತೆಲುಗಿನಲ್ಲಿ ‘ಗುರ್ತುಂದ ಸೀತಾಕಾಲಂ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಅದಕ್ಕೆ ಪಾಲುದಾರರಾಗಿದ್ದರು. ಆ ಚಿತ್ರ ಸೋತರೆ ಇನ್ನೊಂದು ಚಿತ್ರ ಮಾಡಿಕೊಡುತ್ತೀನಿ ಆ ಚಿತ್ರದ ಪಾಲುದಾರರಾಗಿದ್ದ ರಾಮರಾವ್‍ ಎಂಬುವವರಿಗೆ ಹೇಳಿದ್ದರಂತೆ. ಅದಾಗದಿದ್ದರೆ, ತಮ್ಮ ನಿರ್ಮಾಣದ ಮುಂದಿನ ಚಿತ್ರದಲ್ಲಿ ಬರುವ ಲಾಭಾಂಶದಲ್ಲಿ ದುಡ್ಡು ಕೊಡುವುದಾಗಿ ಹೃಳಿದ್ದರಂತೆ. ಚಿತ್ರದ ಪೋಸ್ಟರ್‍ನಲ್ಲಿ ನಾಗಶೇಖರ್ ಮೂವೀಸ್ ಅಂತ ಇದ್ದದ್ದನ್ನು ನೋಡಿ, ಆ ನಿರ್ಮಾಪಕರು ತಮಗೆ ದುಡ್‍ಡು ಬಂದಿಲ್ಲ ಎಂಬ ಸಿಟ್ಟಿನಲ್ಲಿ ನ್ಯಾಯಾಲಯಕ್ಕೆ ಹೋಗಿ ನಮ್ಮ ಚಿತ್ರದ ವಿರುದ್ಧ ಸ್ಟೇ ತಂದಿದ್ದಾರೆ. ತಡೆಯಾಜ್ಞೆ ತಂದಿದ್ದು ಹೈದರಾಬಾದ್‍ನಲ್ಲಿ. ಬಿಡುಗಡೆಯ ಹಿಂದಿನ ದಿನವಷ್ಟೇ ಸ್ಟೇ ತಂದಿದ್ದರಿಂದ ಸಿನಿಮಾ ಬಿಡುಗಡೆಯಾಗಲಿಲ್ಲ. ತಕ್ಷಣ ಲಾಯರ್ ಜತೆ ಹೈದರಾಬಾದ್‍ಗೆ ಹೋದೆ. ಈ ಚಿತ್ರಕ್ಕೆ ನಾನೊಬ್ಬನೇ ನಿರ್ಮಾಪಕ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟೆ. ನಾಗಶೇಖರ್ ನಮ್ಮ ಚಿತ್ರದ ನಿರ್ದೇಶಕ ಮಾತ್ರ. ಅವರಿಗೂ ನಿರ್ಮಾಣಕ್ಕೂ ಸಂಬಂಧವಿಲ್ಲ. ಈ ಚಿತ್ರವನ್ನು ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿ ನಿರ್ಮಿಸಲಾಗಿದೆ. ಈ ಸಂಸ್ಥೆಗೆ ನಾನು ಮತ್ತು ನನ್ನ ಮಗ ಮಾತ್ರ ಪಾಲದಾರರು’ ಎನ್ನುತ್ತಾರೆ ಕುಮಾರ್.

ತಡೆಯಾಜ್ಞೆ ತೆರವು ಸುಲಭವಾಗಿರಲಿಲ್ಲ ಎನ್ನುವ ಕುಮಾರ್, ‘ತಡೆಯಾಜ್ಞೆ ತೆರವು ಮಾಡವ ಪ್ರಕ್ರಿಯೆಗೆ ಸ್ವಲ್ಪ ಕಾಲಾವಕಾಶ ಬೇಕು, ಅಲ್ಲಿಯವರೆಗೆ ನಾಲ್ಕೂವರೆ ಕೋಟಿ ಜಾಮೀನು ನೀಡಿ ಎಂದು ನ್ಯಾಯಾಧೀಶರು ಹೇಳಿದರು. ಬೇರೆ ದಾರಿ ಇರಲಿಲ್ಲ. ಕಡಿಮೆ ಸಮಯದಲ್ಲಿ ಅಷ್ಟೊಂದು ಹಣವನ್ನು ಹೊಂದಿಸುವುದು ಸುಲಭವಾಗಿರಲಿಲ್ಲ. ಕೊನೆಗೆ ಚಂದ್ರ ಲೇಔಟ್‍ನಲ್ಲಿದ್ದ ನಾಲ್ಕೂವರೆ ಕೋಟಿ ಮೌಲ್ಯದ ನನ್ನ ಎರಡು ಸೈಟುಗಳನ್ನು ಜಾಮೀನಾಗಿ ನೀಡಿದೆ. ತಕ್ಷಣವೇ ಪತ್ರಗಳನ್ನು ಅಡವಿಟ್ಟು ಪ್ರದರ್ಶನಕ್ಕೆ ಅನುಮತಿ ಪಡೆದುಕೊಂಡು ಬಂದಿದ್ದೇನೆ. ನಾನು ಮಾಡದ ತಪ್ಪಿಗೆ ಬೆಲೆ ಕಟ್ಟುವಂತಹ ಪರಿಸ್ಥಿತಿ ಬಂದಿದೆ. ಆ ಪತ್ರಗಳನ್ನು ಬಿಡಿಸಿಕೊಳ್ಳುತ್ತೇನೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಕುಮಾರ್.

‘ಸಂಜು ವೆಡ್ಸ್ ಗೀತಾ 2’ ಚಿತ್ರದ ನಿರ್ಮಾಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ ನಿರ್ದೇಶಕ ನಾಗಶೇಖರ್, ‘ಇದರ ಹಣಕಾಸಿನ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ. ‘ಸಂಜು ವೆಡ್ಸ್ ಗೀತಾ’ ಹೆಸರಲ್ಲಿ ಸಿನಿಮಾ ಮಾಡೋದು ಕಷ್ಟ. ಈ ಹಿಂದೆ ಸಹ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇನೆ. ಬೀದಿಬೀದಿಯಲ್ಲಿ ನಿಂತು ದುಡ್ಡು ಎತ್ತಿದ್ದೇನೆ. ಅಷ್ಟೆಲ್ಲಾ ಕಷ್ಟಪಟ್ಟ ನಂತರ, ಚಿತ್ರದ ಮೊದಲ ಭಾಗ ದೊಡ್ಡ ಯಶಸ್ಸು ಪಡೆಯಿತು. ಈಗ ಈ ಚಿತ್ರ ಸಹ ಹಲವು ಅಡೆತಡೆಗಳನ್ನು ಎದುರಿಸಿದೆ. ಅದೆಲ್ಲವನ್ನೂ ದಾಟಿ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ಈ ಚಿತ್ರ ಸಹ ದೊಡ್ಡ ಗೆಲುವು ಸಿಗಲಿದೆ ಎಂಬ ನಂಬಿಕೆ ನನಗಿದೆ’ ಎನ್ನುತ್ತಾರೆ.

‘ಸಂಜು ವೆಡ್ಸ್ ಗೀತಾ 2’ ಚಿತ್ರದಲ್ಲಿ ರೇಶ್ಮೆ ಬೆಳೆಗಾರನಾಗಿ ಶ್ರೀನಗರ ಕಿಟ್ಟಿ ಅವರು ಕಾಣಿಸಿಕೊಂಡಿದ್ದು, ನಾಯಕಿಯಾಗಿ ರಚಿತಾ ರಾಮ್ ಅಭಿನಯಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಸಾಧುಕೋಕಿಲ, ತಬಲಾ ನಾಣಿ ಸಂಪತ್ ಮುಂತಾದವರು ನಟಿಸಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈ ಚಿತ್ರಕ್ಕೆ ಸುದೀಪ್‍ ಕಾನ್ಸಪ್ಟ್ ಕೊಟ್ಟರೆ, ನಾಗಶೇಖರ್‍ ಕಥೆ-ಚಿತ್ರಕಥೆ ಬರೆದಿದ್ದಾರಂತೆ. ಇನ್ನು, ಚಕ್ರವರ್ತಿ ಚಂದ್ರಚೂಡ್‍ ಚಿತ್ರಕಥೆ ವಿಸ್ತರಣೆಯಲ್ಲಿ ಜೊತೆಯಾಗಿದ್ದಾರೆ.

Tags:    

Similar News