ರಾಜಕೀಯಕ್ಕೆ ಸಂಜಯ್‌ ದತ್‌ ಎಂಟ್ರಿ: ಏನಂದ್ರು ಹಿರಿಯ ನಟ?

ಐದು ಬಾರಿ ಕಾಂಗ್ರೆಸ್ ಸಂಸದನಾಗಿದ್ದ ದಿವಂಗತ ಸುನೀಲ್ ದತ್ ಅವರ ಮಗ ಸಂಜಯ್‌ ದತ್‌ ರಾಜಕೀಯದಿಂದ ದೂರ ಉಳಿದಿದ್ದಾರೆ.

Update: 2024-04-09 13:12 GMT
ನಟ ಸಂಜಯ್‌ ದತ್‌
Click the Play button to listen to article

ಬಾಲಿವುಡ್‌ನ ಪ್ರಸಿದ್ದ ತಾರೆಗಳಾದ ಕಂಗನಾ ರಾನಾವತ್ ಮತ್ತು ಗೋವಿಂದ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಕಂಗನಾ ರಾನಾವತ್ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿಯಿಂದ ಸ್ಪರ್ಧಿಸುವುದರೊಂದಿಗೆ ಸಕ್ರಿಯ ರಾಜಕೀಯಕ್ಕೆ ಕಾಲಿಡುತ್ತಿದ್ದಾರೆ. ಆದರೆ ಒಬ್ಬ ಪ್ರಮುಖ ನಟ ರಾಜಕೀಯದಿಂದ ದೂರ ಉಳಿದಿದ್ದಾರೆ.

ಐದು ಬಾರಿ ಕಾಂಗ್ರೆಸ್ ಸಂಸದನಾಗಿದ್ದ ದಿವಂಗತ ಸುನೀಲ್ ದತ್ ಅವರ ಮಗ ಸಂಜಯ್‌ ದತ್‌ ರಾಜಕೀಯದಿಂದ ದೂರ ಉಳಿದಿದ್ದಾರೆ. 64 ವರ್ಷದ ನಟ ಹರಿಯಾಣದ ಕರ್ನಾಲ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ವದಂತಿಗಳಿತ್ತು. ಆದರೆ ಈ ವದಂತಿಗಳಿಗೆ ನಟ ಸಂಜಯ್ ದತ್ ತೆರೆ ಎಳೆದಿದ್ದಾರೆ.

ರಾಜಕೀಯಕ್ಕೆ ಸೇರುವ ಬಗ್ಗೆ ನಡೆಯುತ್ತಿರುವ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ. ಈ ಕುರಿತು X ನಲ್ಲಿ ಸೋಮವಾರ (ಏ. 8) ರಂದು ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಅವರು ʼʼನಾನು ಯಾವುದೇ ರಾಜಕೀಯ ಪಕ್ಷವನ್ನು ಸೇರುವ ಅಥವಾ ಚುನಾವಣೆಗೆ ಸ್ಪರ್ಧಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ. ರಾಜಕೀಯಕ್ಕೆ ಬಂದರೆ ನಾನೇ ಘೋಷಣೆ ಮಾಡುವುದಾಗಿʼʼ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸಂಜಯ್ ದತ್‌ ಅವರ ತಂದೆ ಸುನೀಲ್‌ ದತ್‌ ಅನೇಕ ಹಿಂದಿ ಸಿನಿಮಾಗಳಲ್ಲಿ ನಟಿಸಿ ಪ್ರಸಿದ್ಧ ನಟರಾಗಿ ಗುರುತಿಸಿಕೊಂಡಿದ್ದರು. ಮುಂಬೈ ವಾಯುವ್ಯ ಕ್ಷೇತ್ರದಿಂದ ದೀರ್ಘಕಾಲ ಸೇವೆ ಸಲ್ಲಿಸಿದ ಕಾಂಗ್ರೆಸ್ ಸಂಸದರಾಗಿದ್ದಾರೆ.

ಸಲ್ಮಾನ್ ಖಾನ್ ಜೊತೆ 'ಬಿಗ್ ಬಾಸ್' ಕಾರ್ಯಕ್ರಮವನ್ನೂ ನಡೆಸಿಕೊಟ್ಟಿದ್ದ ಸಂಜಯ್ ದತ್‌ ರಾಜಕೀಯ ಸೇರುವುದಿಲ್ಲ ಎಂಬ ನಿರ್ಧಾರ ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಒಬ್ಬ ಅಭಿಮಾನಿ ರಾಜಕೀಯ ಅಥವಾ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಬೇಡಿ, ನೀವು ಶ್ರೇಷ್ಠರು ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೊಬ್ಬ ಅಭಿಮಾನಿ "ರಾಜಕೀಯವು ಸೆಲೆಬ್ರಿಟಿಗಳಿಗೆ ಕೆಟ್ಟದಾಗಿದೆ. ನಿಮ್ಮ ಅಭಿಮಾನಿಯಾಗಿ ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಸಿನಿಮಾಗಳಲ್ಲಿ ಅದ್ಬುತವಾಗಿ ನಟಿಸಿ, ದಯವಿಟ್ಟು ಚುನಾವಣೆಯಿಂದ ದೂರವಿರಿ" ಎಂದು ತಿಳಿಸಿದ್ದಾರೆ.

ವಿವಾದಾತ್ಮಕ ಜೀವನ

ಸಂಜಯ್ ದತ್ ಅವರ ಜೀವನವು ಅವರಂತೆಯೇ ವಿವಾದಾತ್ಮಕವಾಗಿದೆ. 1993ರಲ್ಲಿ ನಡೆದ ಮುಂಬೈ ಸರಣಿ ಸ್ಫೋಟದ ಆರೋಪಿಗಳಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದಕ್ಕಾಗಿ ಟಾಡಾ ಪ್ರಕರಣದ ಅಡಿಯಲ್ಲಿ ಜೈಲಿಗೆ ಹೋಗಿದ್ದರು. ಅವರ ಜೀವನಾಧಾರಿತ ‘ಸಂಜು’ ಸಿನಿಮಾ ಕೂಡ ತೆರೆಗೆ ಬಂದಿದೆ.

ಸಂಜಯ್‌ ದತ್‌ ರಾಜಕೀಯ ಸೇರ್ಪಡೆಯ ವಂದತಿ ಬಂದಿರುವುದು ಇದೇ ಮೊದಲೇನಲ್ಲ. 2019 ರಲ್ಲಿ ಮಹಾರಾಷ್ಟ್ರದ ಸಚಿವ ಮಹದೇವ್ ಜಾಂಕರ್, ದತ್‌ ರಾಷ್ಟ್ರೀಯ ಸಮಾಜ ಪಕ್ಷ ಸೇರುತ್ತಾರೆ ಎಂಬ ಹೇಳಿಕೆಯನ್ನು ನೀಡಿದ್ದರು.

ಈ ಹಿಂದೆ ಅವರು ಆಪ್ತ ಸ್ನೇಹಿತ ಮನವೊಲಿಸಿದಕ್ಕಾಗಿ 2009 ರ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ (SP) ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆದರೆ ಅವರು ಅದರಿಂದ ಮತ್ತೆ ಹಿಂದೆ ಸರಿದರು. ಬಳಿಕ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರೂ ಡಿಸೆಂಬರ್ 2010ರಂದು ಅವರು ಹುದ್ದೆ ತ್ಯಜಿಸಿದ್ದರು.

ಸದ್ಯ ಸಂಜಯ್ ದತ್‌ ಅವರ ಕೈಯಲ್ಲಿ ಕೆಲವು ಸಿನಿಮಾಗಳಿದ್ದು, ಕಾಮಿಡಿ ಹಾರರ್ ಸಿನಿಮಾ 'ದಿ ವರ್ಜಿನ್ ಟ್ರೀ' ಸಂಜಯ್‌ ದತ್‌ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸನ್ನಿ ಸಿಂಗ್, ಮೌನಿ ರಾಯ್ ಮತ್ತು ಪಾಲಕ್ ತಿವಾರಿ ಇದ್ದಾರೆ. ಸಂಜಯ್‌ ದತ್‌ ಅವರು 'ವೆಲ್‌ಕಮ್ ಟು ದಿ ಜಂಗಲ್' ಸಿನಿಮಾದಲ್ಲೂ ನಟಿಸುತ್ತಿದ್ದು, ಡಿಸೆಂಬರ್ 20, 2024 ರಂದು ಸಿನಿಮಾ ತೆರೆಗೆ ಬರಲಿದೆ.

Tags:    

Similar News