Sandalwood | ಮುಗ್ಧ ಮಕ್ಕಳ ಹೋರಾಟದ ಬದುಕಿನ ಚಿತ್ರಣವೇ 'ಲಕ್ಷ್ಯ'
'ಲಕ್ಷ್ಯ' ಎನ್ನುವ ಮಕ್ಕಳ ಚಿತ್ರದ ಮೂಲಕ ಹೊಸ ನಿರ್ದೇಶಕ ಅರ್ಜುನ್ ಪಿ. ಡೋಣೂರು ಪ್ರೇಕ್ಷಕರ ಮುಂದೆ ಬಂದಿದ್ದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.;
ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ಚಿತ್ರಗಳ ಕೊರತೆಯ ನಡುವೆಯೇ ಹೊಸಬರ ಪ್ರಯತ್ನ ಮತ್ತು ಪ್ರಯೋಗಗಳು ನಿರಂತರವಾಗಿ ನಡೆಯುತ್ತಲೇ ಇವೆ.
ಈ ವಾರ 'ಲಕ್ಷ್ಯ' ಎನ್ನುವ ಮಕ್ಕಳ ಚಿತ್ರದ ಮೂಲಕ ಹೊಸ ನಿರ್ದೇಶಕ ಅರ್ಜುನ್ ಪಿ. ಡೋಣೂರು ಪ್ರೇಕ್ಷಕರ ಮುಂದೆ ಬಂದಿದ್ದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಸಂಪೂರ್ಣ ಉತ್ತರ ಕರ್ನಾಟಕ ಭಾಗದ ಕಥಾ ಹಂದರ ಹೊಂದಿರುವ ಲಕ್ಷ್ಯ ಚಿತ್ರದಲ್ಲಿ 1990ರ ಕಾಲ ಘಟ್ಟದ ಚಿತ್ರಣವನ್ನು ಪ್ರೇಕ್ಷಕರ ಮುಂದೆ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ತಮ್ಮ ಊರಿನ ಹತ್ತಿರದ ಜಾತ್ರೆಗೆ ಹೋಗಲು ಶಾಲೆಯ ನಾಲ್ಕು ಮಕ್ಕಳು ಏನೆಲ್ಲಾ ಹರಸಾಹಸ ಮಾಡುತ್ತಾರೆ. ಅವರ ಪ್ರಯತ್ನಕ್ಕೆ ಏನೆಲ್ಲಾ ಅಡ್ಡಿ ಆತಂಕಗಳು ಎದುರಾಗುತ್ತವೆ. ಅವುಗಳನ್ನು ಎದುರಿಸಿ ಅವರು ಹೇಗೆ ತಮ್ಮ ಗುರಿ ಸಾಧಿಸುತ್ತಾರೆ ಎನ್ನುವುದೇ ಚಿತ್ರದ ಒನ್‌ಲೈನ್ ತಿರುಳು.
ಅಷ್ಟೆಲ್ಲಾ ಹೋರಾಟ ಮಾಡುವ ಮಕ್ಕಳು ಕೊನೆಗೆ ಜಾತ್ರೆಗೆ ಹೋಗುತ್ತಾರೋ ಇಲ್ಲವೋ ಎನ್ನುವುದನ್ನು ತಿಳಿಯಲು ಒಂದು ಸಾರಿ ಚಿತ್ರಮಂದಿರಕ್ಕೆ ಭೇಟಿ ನೀಡಿ ಸಿನೆಮಾ ನೋಡಬಹುದು.
ಮಕ್ಕಳ ಕನಸು ಈಡೇರಿಸಲು ನಡೆಸುವ ಪಯತ್ನದ ಜೊತೆಗೆ ನಿರ್ದೇಶಕರು 90 ರ ಕಾಲ ಘಟ್ಟದ ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಸಾಮಾಜಿಕ ವ್ಯವಸ್ಥೆಯ ಚಿತ್ರಣವನ್ನು ಅನಾವರಣಗೊಳಿಸಿದ್ದಾರೆ. ಆ ಭಾಗದ ಗೌಡಕಿಯ ವ್ಯವಸ್ಥೆ. ಅದರ ವಿರುದ್ಧ ಪರೋಕ್ಷವಾಗಿ ಕಾನೂನು ವ್ಯವಸ್ಥೆಯನ್ನು ಜಾರಿಗೆ ತರಲು ಪಯತ್ನಿಸುವ ಶಿಕ್ಷಕಿ, ಮಕ್ಕಳ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತು ವ್ಯವಸ್ಥೆಯ ವಿರುದ್ಧ ಬಂಡಾಯ ಸಾರುವುದು ಅಂದಿನ ಕಾಲದ ಗ್ರಾಮೀಣ ಜೀವನ ಕಣ್ಣ ಮುಂದೆ ಬಂದು ಹೋಗುತ್ತದೆ. ಅಂದಿನ ಕಾಲದ ಗ್ರಾಮೀಣ ಬದುಕನ್ನು ತೋರಿಸಲು ಮಕ್ಕಳನ್ನು ಚಿತ್ರ ಮಂದಿರಕ್ಕೆ ಕರೆದುಕೊಂಡು ಹೋಗಲು ಅಡ್ಡಿಯಿಲ್ಲ.
ಕೂಲಿ ಕೆಲಸ ಮಾಡುವ ತಂದೆ ತಾಯಿಗೆ ಹೊರೆಯಾಗಬಾರದು ಎಂದು ಮೋಸ, ಕಪಟ, ವಂಚನೆ ಅರಿಯದ ಮುಗ್ಧ ಮಕ್ಕಳು ಜಾತ್ರೆಗೆ ಹೋಗುವ ತಮ್ಮ ಗುರಿ ತಲುಪಲು ನಡೆಸುವ ನಿರಂತರ ಪ್ರಯತ್ನ ಬಡ ಮಕ್ಕಳ ಅಂತರಾಳದಲ್ಲಿರುವ ಕನಸುಗಳ ನನಸು ಮಾಡಿಕೊಳ್ಳಲು ಏನೆಲ್ಲಾ ಸಾಹಸಕ್ಕೆ ಕೈ ಹಾಕುತ್ತಾರೆ ಎನ್ನುವುದನ್ನು ತೋರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
ಮಕ್ಕಳು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಶಿಕ್ಷಕಿಯಾಗಿ ನಿಧಿ, ಊರಿನ ಯುವಕರಾಗಿ ರಿತೇಶ್ ಹಿರೇಮಠ, ಭೀಮಾ ಪಾಗೋಜಿ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಊರಿನ ಗೌಡರಾಗಿ ಸಂತೋಷ ಉಪ್ಪಿನ, ಶೆಟ್ಟಿಯಾಗಿ ಸಂಗಮೇಶ ಉಪಾಸೆ ಗಮನ ಸೆಳೆಯುತ್ತಾರೆ.
ಶಂಕರ ಪಾಗೋಜಿಯವರ ಉತ್ತರ ಕರ್ನಾಟಕ ಶೈಲಿಯ ಸಂಭಾಷಣೆ ಅಲ್ಲಿನ ಗ್ರಾಮೀಣ ಸೊಗಡನ್ನು ಕಟ್ಟಿಕೊಟ್ಟಿದೆ. ಆರವ್ ರಿಷಿಕ್ ಅವರ ಸಂಗೀತದಲ್ಲಿ ಮೂರು ಹಾಡುಗಳಿದ್ದು, ಶಂಕರ ಪಾಗೋಜಿ ಬರೆದಿರುವ ಬದುಕು ಬಯಲು ಸೀಮೆಯೋ ಅಣ್ಣಾ ತತ್ವಪದ ಗುನುಗುವಂತಿದೆ. ಎಂ.ಬಿ. ಅರಳಿಕಟ್ಟಿ ಉತ್ತರ ಕರ್ನಾಟಕದ ಗ್ರಾಮೀಣ ಚಿತ್ರಣವನ್ನು ತಮ್ಮ ಕ್ಯಾಮರಾದಲ್ಲಿ ಕಟ್ಟಿ ಕೊಟ್ಟಿದ್ದಾರೆ. ನಿರ್ದೇಶಕ ಅರ್ಜುನ್ ಡೋಣೂರು ತಮ್ಮದೇ ಸಾಮ್ರಾಟ್ ಪೊಡಕ್ಷನ್ ಬ್ಯಾನರ್ ಅಡಿ ಚಿತ್ರ ನಿರ್ಮಿಸಿದ್ದು, ಶಿವಾನಂದ ಭೂಶಿಯವರು ಸಾಥ್ ನೀಡಿದ್ದಾರೆ.