Sandalwood in 2025 | ಮೊದಲೆರಡು ತಿಂಗಳು ಫುಲ್; ಆ ನಂತರ ನಾಲ್ಕು ತಿಂಗಳು ಖಾಲಿ
ಮುಂದಿನ ಎರಡು ತಿಂಗಳಲ್ಲಿ ಕನ್ನಡದಲ್ಲಿ ಒಂದಿಷ್ಟು ಹೊಸ ಚಿತ್ರಗಳ ಸುಗ್ಗಿ. ಆ ನಂತರ ಮೂರ್ನಾಲ್ಕು ಚಿತ್ರಗಳ ಅಭಾವವಷ್ಟೇ ಅಲ್ಲ, ಚಿತ್ರಮಂದಿರಗಳು ಖಾಲಿ ಹೊಡೆಯುತ್ತವೆ. ಇದಕ್ಕೆ ಕಾರಣವೇನು?;
ಕಳೆದ ವರ್ಷ ಬಹಳ ಸೋಲು ಮತ್ತು ನಷ್ಟಗಳನ್ನು ನೋಡಿದ ಕನ್ನಡ ಚಿತ್ರರಂಗ ವರ್ಷದ ಕೊನೆಯಲ್ಲಿ ಒಂದಿಷ್ಟು ಯಶಸ್ಸು ನೋಡುವಂತಾಯ್ತು. ಪ್ರಮುಖವಾಗಿ, ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬಂದು ಕನ್ನಡ ಚಿತ್ರಗಳನ್ನು ನೋಡಿದರು. ಇದೆಲ್ಲದರಿಂದ ಹೊಸ ವರ್ಷ ಹೊಸ ಉತ್ಸಾಹದಿಂದ ಪ್ರಾರಂಭವಾಗಿದೆ.
ಮುಂದಿನ ಎರಡು ತಿಂಗಳಲ್ಲಿ ಕನ್ನಡದಲ್ಲಿ ಒಂದಿಷ್ಟು ಹೊಸ ಚಿತ್ರಗಳ ಸುಗ್ಗಿ. ಆ ನಂತರ ಮೂರ್ನಾಲ್ಕು ಚಿತ್ರಗಳ ಅಭಾವವಷ್ಟೇ ಅಲ್ಲ, ಚಿತ್ರಮಂದಿರಗಳು ಖಾಲಿ ಹೊಡೆಯುತ್ತವೆ. ಇದಕ್ಕೆ ಕಾರಣವೇನು?
ಎರಡು ತಿಂಗಳಲ್ಲಿ ಆಶಾಭಾವನೆ
ಈ ವರ್ಷದ ಮೊದಲ ಶುಕ್ರವಾರ ಬಿಡುಗಡೆಯಾದ ‘ಗನ್ಸ್ ಆ್ಯಂಡ್ ರೋಸಸ್’ ಮತ್ತು ‘ಸ್ವೇಚ್ಛಾ’ ಚಿತ್ರಗಳಿಗೆ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ಸಿಗದಿದ್ದರೂ, ಮುಂದಿನ ಎರಡು ತಿಂಗಳು ಕನ್ನಡ ಚಿತ್ರರಂಗಕ್ಕೆ ಆಶಾಭಾವನೆ ಮೂಡಿಸಿವೆ. ಈ ಎರಡು ತಿಂಗಳಲ್ಲಿ 30ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಶರಣ್ ಅಭಿನಯದ ‘ಛೂ ಮಂತರ್’, ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಅಭಿನಯದ ‘ಸಂಜು ವೆಡ್ಸ್ ಗೀತಾ 2’, ‘ಟೆಡ್ಡಿ ಬೇರ್’, ರಾಘವೇಂದ್ರ ರಾಜಕುಮಾರ್ ಅಭಿನಯದ ‘ಕಣ್ಣಾಮುಚ್ಚೆ ಕಾಡೇಗೂಡೇ’, ರಿಷಿ ಅಭಿನಯದ ‘ರುದ್ರ ಗರುಡ ಪುರಾಣ’, ವಿರಾಟ್ ಅಭಿನಯದ ‘ರಾಯಲ್’, ಅನೀಶ್ ತೇಜೇಶ್ವರ್ ಮುಂತಾದವರು ನಟಿಸಿರುವ ‘ಫಾರೆಸ್ಟ್’, ಪ್ರಜ್ವಲ್ ಅಭಿನಯದ ‘ಗಣ’, ಪ್ರಮೋದ್ ಮತ್ತು ಪೃಥ್ವಿ ಅಂಬಾರ್ ಅಭಿನಯದ ‘ಭುವನಂ ಗಗನಂ’, ಗುರುನಂದನ್ ಅಭಿನಯದ ‘ರಾಜು ಜೇಮ್ಸ್ ಬಾಂಡ್’ ಮತ್ತು ಯೋಗಿ ಅಭಿನಯದ ‘ಸಿದ್ಲಿಂಗು 2’, ಶ್ರೇಯಸ್ ಮಂಜು ಅಭಿನಯದ ‘ವಿಷ್ಣುಪ್ರಿಯ’, ಪ್ರಜ್ವಲ್ ಅಭಿನಯದ ‘ರಾಕ್ಷಸ’ ಚಿತ್ರಗಳೂ ಬಿಡುಗಡೆಯಾಗಲಿದೆ.
ಇಷ್ಟರ ಜೊತೆಗೆ ಇನ್ನೊಂದಿಷ್ಟು …
ಈ ಎಲ್ಲ ಚಿತ್ರಗಳ ಬಿಡುಗಡೆ ದಿನಾಂಕ ಈಗಾಗಲೇ ಘೋಷನೆಯಾಗಿವೆ. ಇದಲ್ಲದೆ ‘ಶ್ಯಾನುಭೋಗರ ಮಗಳು’, ‘ತಲ್ವಾರ್’, ‘ಮಾಂಕ್ ದಿ ಯಂಗ್’, ’31 ಡೇಸ್’ ಸೇರಿದಂತೆ ಒಂದಿಷ್ಟು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಆದರೆ, ಆ ಚಿತ್ರಗಳ ಬಿಡುಗಡೆ ದಿನಾಂಕಗಳು ಇನ್ನೂ ಘೋಷಣೆಯಾಗಿಲ್ಲ. ಏನೇ ಆದರೂ ಫೆಬ್ರವರಿ ತಿಂಗಳೊಳಗೆ ಒಂದಿಷ್ಟು ಚಿತ್ರಗಳು ಬಿಡುಗಡೆ ಆಗಲಿವೆ. ಕಾರಣ ಮಾರ್ಚ್ ತಿಂಗಳಿಂದ ಪರೀಕ್ಷೆಗಳು ಶುರುವಾಗಲಿವೆ. ಏಪ್ರಿಲ್ನಲ್ಲಿ ಇದು ಮುಂದುವರೆಯುವುದರಿಂದ ಆ ಸಂದರ್ಭದಲ್ಲಿ ಯಾರೂ ಚಿತ್ರಮಂದಿರಗಳತ್ತ ಬರುವುದಿಲ್ಲ. ಹಾಗಾಗಿ, ಅಷ್ಟರಲ್ಲಿ ತಮ್ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಈ ಎರಡು ತಿಂಗಳಲ್ಲಿ ಹಲವರು ಸಿದ್ಧತೆ ನಡೆಸಿದ್ದಾರೆ.
ಮಾರ್ಚ್ನಿಂದ ನಾಲ್ಕು ತಿಂಗಳು ಖಾಲಿ
ಮೊದಲೆರೆಡು ತಿಂಗಳಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ದೊಡ್ಡ ಪೈಪೋಟಿ ಇದ್ದರೆ, ಆ ನಂತರ ಚಿತ್ರಮಂದಿರಗಳು ಖಾಲಿಯಾಗಲಿವೆ. ಅದಕ್ಕೆ ಕಾರಣವೂ ಇದೆ. ಮಾರ್ಚ್ 14ರಿಂದ ಮೇ 25ರವರೆಗೂ ಇಂಡಿಯನ್ ಪ್ರೀಮಿಯರ್ ಲೀಗ್‍ನ 18ನೇ ಅವತರಣಿಕೆ ನಡೆಯಲಿದೆ. ಈ ಸಂದರ್ಭದಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಬಹಳಷ್ಟು ಮಂದಿ ಹೆದರುತ್ತಾರೆ. ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವುದೇ ಮಧ್ಯಾಹ್ನದ ಮೇಲೆ. ಬೆಳಿಗ್ಗೆ ಹೊತ್ತು ಅಭಿಮಾನಿಗಳೂ ಮತ್ತು ಕಾಲೇಜ್ ವಿದ್ಯಾರ್ಥಿಗಳನ್ನು ಹೊರತುಪಡಿಸಿದರೆ, ಫ್ಯಾಮಿಲಿ ಪ್ರೇಕ್ಷಕರು ಬರುವುದಿಲ್ಲ. ಅವರು ಬರುವುದೇನಿದ್ದರೂ ಸಂಜೆ ಮತ್ತು ರಾತ್ರಿಯ ಪ್ರದರ್ಶನಗಳಿಗೆ. ಆದರೆ, ಐಪಿಲ್ ಮ್ಯಾಚುಗಳು ಶುರುವಾಗುವುದೇ ಸಂಜೆಯಾದ್ದರಿಂದ ಎರಡು ಪ್ರದರ್ಶನಗಳಿಗೆ ಜನ ಇರುವುದಿಲ್ಲ. ಹಾಗಾಗಿ, ಇಂಥ ಸಂದರ್ಭದಲ್ಲಿ ಬಹಳಷ್ಟು ಚಿತ್ರಗಳನ್ನು ಬಿಡುಗಡೆ ಮಾಡುವದಕ್ಕೆ ಚಿತ್ರತಂಡಗಳು ಮುಂದಾಗುವುದಿಲ್ಲ. ಅದರಲ್ಲೂ ರಜೆ ಸೀಸನ್ ಇದ್ದರೂ ದೊಡ್ಡ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಹಿಂದೇಟು ಹಾಕುತ್ತವೆ.
ಜುಲೈನಿಂದ ಚಿತ್ರರಂಗ ಮತ್ತೆ ಯಥಾಸ್ಥಿತಿಗೆ
ಹಾಗಂತ ಜೂನ್ ತಿಂಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದರ್ಥವಲ್ಲ. ಏಕೆಂದರೆ, ಜೂನ್ ತಿಂಗಳಲ್ಲಿ ಶಾಲೆ-ಕಾಲೇಜುಗಳು ಪ್ರಾರಂಭವಾಗುವುದರಿಂದ ಮತ್ತು ದೊಡ್ಡ ಖರ್ಚು ಇರುವುದರಿಂದ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವುದಕ್ಕೆ, ಚಿತ್ರಗಳನ್ನು ನೋಡುವುದಕ್ಕೆ ಹಿಂದೇಟು ಹಾಕುತ್ತಾರೆ. ಜೊತೆಗೆ ಜೂನ್ ತಿಂಗಳಲ್ಲಿ ಮಳೆಯೂ ಹೆಚ್ಚಿರುವುದರಿಂದ ಆ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆಯೇ. ಹಾಗಾಗಿ, ಇನ್ನೇನಿದ್ದರೂ ಪ್ರೇಕ್ಷಕರು ಚಿತ್ರಮಂದಿರಗಳ ಕಡೆ ಬರುವುದು ಜುಲೈ ಆಗುತ್ತದೆ. ಕಳೆದ ಕೆಲವು ವರ್ಷಗಳಿಂದ ಇದೇ ನಡೆಯುತ್ತಿದೆ. ಅದರಲ್ಲೂ ಕಳೆದ ಎರಡು ವರ್ಷಗಳಲ್ಲಿ ಮೇ ತಿಂಗಳಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಿದ್ದವು. ಈ ಸಂದರ್ಭದಲ್ಲಿ ಪರಿಸ್ಥಿತಿ ಕೆಟ್ಟದಾಗಿತ್ತು. ಬರೀ ಚಿತ್ರ ಬಿಡುಗಡೆ ಅಷ್ಟೇ ಅಲ್ಲ, ಬೇರೆ ಚಟುವಟಿಕೆಗಳು ಸಹ ಅಷ್ಟಾಗಿ ಇರಲಿಲ್ಲ. ಈ ವರ್ಷ ಚುನಾವಣೇ ಇಲ್ಲ ಎನ್ನುವುದು ಬಿಟ್ಟರೆ, ಮಿಕ್ಕಂತೆ ಎಲ್ಲವೂ ಮುಂದುವರೆಯಲಿದೆ. ಜುಲೈ ನಂತರ ಚಿತ್ರರಂಗ ಯಥಾಸ್ಥಿತಿಗೆ ಮರಳಲಿದೆ. ಅಲ್ಲಿಯವರೆಗೂ ಒಂದಿಷ್ಟು ಚಿತ್ರಗಳೇನೋ ಬಿಡುಗಡೆಯಾಗುತ್ತವೆ. ಆದರೆ, ಅವೆಲ್ಲವೂ ಹೊಸಬರ ಚಿತ್ರಗಳೇ ಜಾಸ್ತಿ. ಈ ಚಿತ್ರಗಳಿಂದ ಚಿತ್ರರಂಗಕ್ಕೂ ಹೆಚ್ಚು ಪ್ರಯೋಜನವಿಲ್ಲ. ಚಿತ್ರತಂಡದವರಿಗೂ ಹೆಚ್ಚು ಪ್ರಯೋಜನವಾಗುವುದಿಲ್ಲ. ಶಾಸ್ತ್ರಕ್ಕೆ ಬಿಡುಗಡೆಯಾದವು ಎಂಬ ವಿಷಯವನ್ನು ಬಿಟ್ಟರೆ, ಮಿಕ್ಕಂತೆ ಆ ಚಿತ್ರಗಳಿಂದ ಹೆಚ್ಚೇನನ್ನೋ ನಿರೀಕ್ಷಿಸುವುದು ಕಷ್ಟವಾಗುತ್ತದೆ.
ಬೇಕು ಎಂದರೂ ದೊಡ್ಡ ಚಿತ್ರಗಳಿಲ್ಲ
ಹಾಗ ನೋಡಿದರೆ, ಒಂದಿಷ್ಟು ಸಣ್ಣ ಮತ್ತು ಮೀಡಿಯಂ ಬಜೆಟ್ ಚಿತ್ರಗಳು ಬಿಡುಗಡೆಗೆ ಪೈಪೋಟಿ ನಡೆಸಿರುವುದು ಬಿಟ್ಟರೆ, ಮುಂದಿನ ಕೆಲವು ತಿಂಗಳುಗಳ ಕಾಲ ಯಾವುದೋ ದೊಡ್ಡ ಹೀರೋನ ನಿರೀಕ್ಷಿತ ಚಿತ್ರಗಳು ಬಿಡುಗಡೆಗೆ ಸಜ್ಜಾಗಿಲ್ಲ. ಧ್ರುವ ಸರ್ಜಾ ಅಭಿನಯದ ‘ಕೆಡಿ – ದಿ ಡೆವಿಲ್’ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ. ಹಬ್ಬದ ಸೀಸನ್‍ನಲ್ಲಿ ಚಿತ್ರ ಬಿಡುಗಡೆ ಎಂದು ಪ್ರೇಮ್ ಹೇಳಿಕೊಂಡಿದ್ದಾರಾದರೂ, ಅದು ಯುಗಾದಿಯೋ, ವರಮಹಾಲಕ್ಷ್ಮಿ ಹಬ್ಬವೋ ಎಂದು ಪ್ರೇಮ್ ಖಾತ್ರಿಪಡಿಸಿಲ್ಲ.
ಹಾಗಾಗಿ, ಸದ್ಯ ಚಿತ್ರ ಬಿಡುಗಡೆ ಆಗಬಹುದೆಂಬ ನಂಬಿಕೆ ಯಾರಿಗೂ ಇಲ್ಲ. ಇನ್ನು, ಶಿವರಾಜಕುಮಾರ್ ಅಭಿನಯದ ‘45’ ಚಿತ್ರದ ಕೆಲಸಗಳು ಮುಗಿಯುತ್ತಾ ಬಂದಿದೆಯಾದರೂ, ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿಲ್ಲ. ಹಾಗಾಗಿ, ಕಳೆದ ವರ್ಷದಂತೆಯೇ ಈ ವರ್ಷವೂ ದೊಡ್ಡ ಬಜೆಟ್ ಅಥವಾ ದೊಡ್ಡ ಹೀರೋಗಳ ಚಿತ್ರಗಳು ಬೇಕು ಎನ್ನುವರು ಜುಲೈವರೆಗೂ ಕಾಯಬೇಕು. ಈಗ ದೊಡ್ಡ ಹೀರೋಗಳ ಒಂದಿಷ್ಟು ಚಿತ್ರಗಳ ಕೆಲಸ ನಡೆಯುತ್ತಿದ್ದು, ಜುಲೈ ನಂತರ ಆ ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.
ಇದು ಈ ವರ್ಷದ ಸದ್ಯದ ಟ್ರೆಂಡ್. ಮುಂದಿನ ದಿನಗಳಲ್ಲಿ ಚಿತ್ರರಂಗ ಏನೆಲ್ಲಾ ತಿರುವುಗಳನ್ನು ಪಡೆಯುತ್ತದೆ ಎಂದು ಕಾದು ನೋಡಬೇಕಿದೆ.