ಈ ವರ್ಷ ಕಣ್ಣೀರು ತರಿಸಿದ ಏಕೈಕ ಬಾಲಿವುಡ್ ಲವ್ ಸ್ಟೋರಿ: ‘ಸೈಯಾರಾ’

ಆಹಾನ್ ಮತ್ತು ಅನಿತ್ ಅವರ ಕಣ್ಣುಗಳಲ್ಲಿ ಪರಸ್ಪರ ಹಂಬಲ ಮತ್ತು ಪ್ರೀತಿಯನ್ನು ನೋಡಿ ಪ್ರೇಕ್ಷಕರು ಭಾವುಕರಾಗುತ್ತಿದ್ದಾರೆ.;

Update: 2025-07-23 08:35 GMT

ಸೈಯಾರ

ಜನವರಿಯಿಂದ ಇಲ್ಲಿಯವರಿಗೆ ಅನೇಕ ಬಾಲಿವುಡ್ ಸಿನಿಮಾಗಳು ಬಿಡುಗಡೆಯಾಗಿವೆ. ಸಲ್ಮಾನ್ ಖಾನ್ ಅವರ 'ಸಿಕಂದರ್' ಸೇರಿದಂತೆ ಅನೇಕ ದೊಡ್ಡ ಸ್ಟಾರ್‌ಗಳ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಿರಲಿಲ್ಲ. ಆದರೆ ಇದೀಗ ಹೊಸದಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿರುವ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ನಟಿಸಿರುವ 'ಸೈಯಾರಾ' ಸಿನಿಮಾ ಪ್ರೇಕ್ಷಕರನ್ನು ಕಣ್ಣೀರಿಸುವಂತೆ ಮಾಡಿದೆ. ಚಿತ್ರಮಂದಿರಗಳಿಂದ  ಹೊರಬರುತ್ತಿರುವ ಪ್ರೇಕ್ಷಕರು ಭಾವುಕರಾಗುತ್ತಿದ್ದಾರೆ. ಅಂತಹದ್ದೇನಿದೆ ಈ ಸಿನಿಮಾದಲ್ಲಿ? 

`ಸೈಯಾರಾ' ಎಂದರೆ ನಕ್ಷತ್ರಗಳಲ್ಲಿನ ಒಂಟಿ ತಾರೆ, ತನ್ನನ್ನು ತಾನು ಸುಟ್ಟುಕೊಂಡು ಇಡೀ ಜಗತ್ತನ್ನು ಬೆಳಗಿಸುವವಳು ಎಂದರ್ಥ. ನಿರ್ದೇಶಕ ಮೋಹಿತ್ ಸೂರಿ 'ಆಶಿಕಿ 2', 'ಏಕ್ ವಿಲನ್', 'ಹಮಾರಿ ಅಧುರಿ ಕಹಾನಿ'ಯಂತಹ ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ಅವರು 'ಸೈಯಾರಾ' ಸಿನಿಮಾದ ಮೂಲಕ ಪ್ರೇಕ್ಷಕರ ಹೃದಯಗಳನ್ನು ತಟ್ಟುವ ಕಥೆಯನ್ನು ಪ್ರಸ್ತುತಪಡಿಸಿದ್ದಾರೆ.

'ಸೈಯಾರಾ' ಸಿನಿಮಾದ ಮೂಲಕ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಪದಾರ್ಪಣೆ ಮಾಡಿದ್ದಾರೆ. ಇಬ್ಬರೂ ತಮ್ಮ ಮೊದಲ ಚಿತ್ರದಲ್ಲೇ ಅದ್ಭುತ ಅಭಿನಯ ನೀಡಿದ್ದಾರೆ. ಆಹಾನ್ ಮತ್ತು ಅನೀತ್ ಅವರ ಕಣ್ಣುಗಳಲ್ಲಿ ಪರಸ್ಪರ ಹಂಬಲ ಮತ್ತು ಪ್ರೀತಿಯನ್ನು ನೋಡಿ ಪ್ರೇಕ್ಷಕರು ಭಾವುಕರಾಗುತ್ತಿದ್ದಾರೆ. ಸಿನಿಪ್ರೇಮಿಗಳು ಈ ಹೊಸ ಜೋಡಿಯನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಈ ಸಿನಿಮಾ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಆದಿತ್ಯ ಚೋಪ್ರಾ ನಿರ್ಮಿಸಿರುವ ಈ ಚಿತ್ರ, ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದೆ.

Full View

`ಸೈಯಾರಾ' ಕಥೆ ಏನು? 

'ಸೈಯಾರಾ' ಸಿನಿಮಾದ ಕಥೆಯು ಸಂಗೀತ ಲೋಕದಲ್ಲಿ ಮಿಂಚುಲು ಕನಸು ಕಾಣುವ ಉದಯೋನ್ಮುಖ ಕಲಾವಿದ ಕೃಷ್ ಕಪೂರ್ (ಅಹಾನ್ ಪಾಂಡೆ) ಕುರಿತಾಗಿದೆ. ಅಹಾನ್ ಅವರ ಪ್ರವೇಶ ದೃಶ್ಯವೇ  'ಆಶಿಕಿ 2' ರ ಆರ್‌ಜೆ ಮತ್ತು 'ರಾಕ್‌ಸ್ಟಾರ್'ನ ಜೆಜೆ ಮಾದರಿಯ ನಿರ್ಲಕ್ಷ್ಯ, ಕೋಪಗೊಂಡ, ಸಿಗರೇಟ್ ಸೇದುವ ವ್ಯಕ್ತಿ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ವಾಣಿ ಬಾತ್ರಾ (ಅನೀತ್ ಪಡ್ಡಾ) ಶಾಂತ, ಬುದ್ಧಿವಂತ, ತನ್ನ ಪಾಡಿಗೆ ತಾನು ಇರುವ ಹುಡುಗಿ, ಇತ್ತೀಚೆಗೆ ನೋವಿನ ಬ್ರೇಕಪ್‌ನಿಂದ ಹೊರಬಂದಿರುತ್ತಾಳೆ. ಆದರೆ, ಇಬ್ಬರೂ ಪ್ರತಿಭಾವಂತರು.

ಕೃಷ್‌ಗೆ ಹಾಡುಗಳನ್ನು ರಚಿಸಿ ಅವುಗಳಿಗೆ ಸಂಗೀತ ನೀಡುವ ಕಲೆ ತಿಳಿದಿದ್ದರೆ, ವಾಣಿ ಅದ್ಭುತ ಸಾಹಿತ್ಯ ಬರೆಯುತ್ತಾಳೆ. ಹೀಗಾಗಿ ಇಬ್ಬರೂ ಭೇಟಿಯಾದಾಗ ಪರಸ್ಪರರ ಜೀವನದಲ್ಲಿ ಹೊಸ ಬಣ್ಣ ತುಂಬುತ್ತಾರೆ. ಅವರ ಕನಸುಗಳು ರೆಕ್ಕೆ ಪುಕ್ಕ ಪಡೆದು ಹಾರಲು ಪ್ರಾರಂಭಿಸುತ್ತವೆ. ಆದರೆ ಇದು ಮೋಹಿತ್ ಸೂರಿ ಅವರ ಸಿನಿಮಾವಾಗಿರುವುದರಿಂದ, ಕಥೆಯಲ್ಲಿ ದುರಂತವೂ ಇರುವುದು ಅನಿವಾರ್ಯ. ವಾಣಿಗೆ ಯಾವುದೋ ಸಮಸ್ಯೆ ಸಂಭವಿಸುತ್ತದೆ. ಆ ಸಮಸ್ಯೆ ಅವಳನ್ನು ತನ್ನ ಪ್ರೇಮಿಯಿಂದ ದೂರವಾಗಿರಿಸಲು ಒತ್ತಾಯಿಸುತ್ತದೆ. ಹೀಗಿರುವಾಗ, ಕೃಷ್ ತನ್ನ ಪ್ರೀತಿ ಮತ್ತು ಕನಸುಗಳಲ್ಲಿ ಯಾವುದನ್ನು ಆರಿಸಿಕೊಳ್ಳುತ್ತಾನೆ? ಅವರ ಪ್ರೇಮ ಕಥೆ ಯಾವ ತಿರುವು ತೆಗೆದುಕೊಳ್ಳುತ್ತದೆ? ಎಂಬುವುದು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. 

 Gen-Z ಜನರ ಹೃದಯ ಗೆದ್ದ ಪ್ರೇಮಕಥೆ

'ಸೈಯಾರ' ಭಾವನಾತ್ಮಕ ಸಿನಿಮಾವಾಗಿದ್ದು, Gen-Z ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿದೆ. ಸಿನಿಮಾದಲ್ಲಿ ಬರುವ ಕೃಷ್ಣ ಕಪೂರ್ ಮತ್ತು ವಾಣಿ ಅವರ ಪ್ರೇಮಕಥೆ ನೋವು, ಹಂಬಲ, ದುಃಖ ಮತ್ತು ಸಾಂತ್ವನಗಳೆಲ್ಲವನ್ನೂ ಒಳಗೊಂಡಿದೆ. ಬಹಳ ದಿನಗಳ ದಿನಗಳ ಬಳಿಕ ಇಷ್ಟು ಗಂಭೀರತೆ ಮತ್ತು ಪ್ರಾಮಾಣಿಕತೆಯಿಂದ ಪ್ರಸ್ತುತಪಡಿಸಿದ ಪ್ರೇಮಕಥೆಯೊಂದು ತೆರೆಕಂಡಿದೆ. ಇದೇ ಕಾರಣಕ್ಕೆ ಚಿತ್ರಮಂದಿರಗಳಲ್ಲಿ ಯುವಕರು, ವಿಶೇಷವಾಗಿ ಪ್ರೇಮಿಗಳ ದೊಡ್ಡ ದಂಡೇ ಸಿನಿಮಾ ವೀಕ್ಷಿಸಲು ಚಿತ್ರಮಂದಿರಗಳತ್ತ ತೆರಳುತ್ತಿದ್ದಾರೆ. 'ಸೈಯಾರ' ಅನೇಕರಿಗೆ ಅವರ ಮೊದಲ ಪ್ರೀತಿಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಹೀಗಾಗಿ ಸಿನಿಮಾ ಮುಗಿದ ನಂತರ ಪ್ರೇಕ್ಷಕರು ಭಾವುಕರಾಗಿ ಹೊರಬರುತ್ತಿರುವುದು ಎಲ್ಲೆಡೆ ವೈರಲ್‌ ಆಗುತ್ತಿದೆ. 

 ಹಾಡುಗಳು ವಿಶೇಷ

ಮೋಹಿತ್ ಸೂರಿ ಅವರ ಸಿನಿಮಾದ ಹಾಡುಗಳು ಯಾವಾಗಲೂ ಹಿತವಾಗಿರುತ್ತವೆ. ಹಾಡುಗಳನ್ನು ಕೇಳುತ್ತಲೇ ಕಳೆದುಹೋಗುವ ಶಕ್ತಿ ಹಾಡುಗಳಿಗಿವೆ. ಈ ಬಾರಿಯೂ ಅವರು ತಮ್ಮ  'ಸೈಯಾರಾ' ಸಿನಿಮಾದಲ್ಲಿ ಸುಂದರವಾದ ಹಾಡುಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. 'ಸೈಯಾರಾ', 'ತುಮ್ ಹೋ ತೋ', 'ಹಮ್ಸಫರ್' ಹಾಡುಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿದೆ. 

ಶ್ರದ್ಧಾ ಕಪೂರ್ ಮತ್ತು ಆದಿತ್ಯ ಕಪೂರ್ ಅವರಂತೆಯೇ, ಅಹಾನ್ ಪಾಂಡೆ ಮತ್ತು ಅನಿತ್ ಪಡ್ಡಾ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಶಿಕಿ-2 ಶ್ರದ್ಧಾ ಮತ್ತು ಆದಿತ್ಯ ಅವರ ಮೊದಲ ಚಿತ್ರವಾಗಿತ್ತು. ಶ್ರದ್ಧಾ ಅವರ ಮುಗ್ಧತೆ ಮತ್ತು ಆದಿತ್ಯ ರಾಯ್ ಕಪೂರ್ ಅವರ ಲವರ್‌ಬಾಯ್ ಲುಕ್‌ಗಳನ್ನು ಪ್ರೇಕ್ಷಕರು ಚೆನ್ನಾಗಿ ಇಷ್ಟಪಟ್ಟರು. ಈಗ ಸೈಯ್ಯಾರ ನಟಿ ಅನೀತ್ ಮತ್ತು ಶ್ರದ್ಧಾ ಅವರ ಲುಕ್‌ಗಳನ್ನು ಸಹ ಹೋಲಿಸಲಾಗುತ್ತಿದೆ. ಬಹಳ ದಿನಗಳ ನಂತರ ಅಂತಹ ಮುಗ್ಧ ಮುಖವನ್ನು ಪರದೆಯ ಮೇಲೆ ನೋಡಲಾಗಿದೆ. 

 ಬಾಕ್ಸ್ ಆಫೀಸ್ ಕಮಾಲ್‌ 

‘ಸೈಯಾರಾ’ ಮೊದಲ ದಿನ (ಶುಕ್ರವಾರ) 21 ಕೋಟಿ ರೂ.ಗಳ ಅದ್ಭುತ ಕಲೆಕ್ಷನ್‌ನೊಂದಿಗೆ ತೆರೆಕಂಡಿತು. ಶನಿವಾರ 26 ಕೋಟಿ ರೂ.ಗಳಿಗೆ ಏರಿತು. ಭಾನುವಾರ ಅಂದಾಜು 35.75 ಕೋಟಿ ರೂ.ಗಳನ್ನು ತಲುಪಿತು. ಸೋಮವಾರ 22.50 ಕೋಟಿ ರೂ.ಗಳನ್ನು ಗಳಿಸುವ ಮೂಲಕ 100 ಕೋಟಿ ರೂ.ಗಳ ಕ್ಲಬ್‌ಗೆ ಸೇರಿದೆ. ಮಂಗಳವಾರ 25 ಕೋಟಿ ರೂ.ಗಳನ್ನು ಈ ಸಿನಿಮಾ ಗಳಿಸಿದೆ. 

 ಪ್ರಚಾರವಿಲ್ಲದೆ ಗೆದ್ದ ಸಿನಿಮಾ 

ಯಾವುದೇ ಪ್ರಚಾರವಿಲ್ಲದೆ ನೇರವಾಗಿ ಸಿನಿಮಾದಲ್ಲಿ ತಾರೆಯರನ್ನು ಪ್ರಸ್ತುತಪಡಿಸಿದ ರೀತಿ ಕೆಲಸ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ  ಬಿಡುಗಡೆಯಾದಾಗೆಲ್ಲ ಅದನ್ನು ಬಹಳ ಅಬ್ಬರದಿಂದ ಪ್ರಚಾರ ಮಾಡಲಾಗುತ್ತದೆ. ಆದರೆ ಅಹಾನ್ ಮತ್ತು ಅನಿತ್ ಇಬ್ಬರನ್ನೂ ಮಾಧ್ಯಮಗಳಿಂದ ದೂರವಿಡಲಾಗಿತ್ತು. ಈ ಚಿತ್ರದ ಬಗ್ಗೆ ಯಾವುದೇ ಅಬ್ಬರದ ಪ್ರಚಾರ ಮಾಡಲಾಗಿಲ್ಲ. ಬಹುಶಃ ಇದೇ ಕಾರಣಕ್ಕೆ ಈಗ ಪ್ರೇಕ್ಷಕರೇ ಚಿತ್ರವನ್ನು ಪ್ರಚಾರ ಮಾಡುತ್ತಿದ್ದಾರೆ.

Tags:    

Similar News