ಶಾರುಖ್‌ ಆಸೆಗೆ ಮೌನ ಮುರಿದ ರಾಕಿಂಗ್‌ ಸ್ಟಾರ್‌; ಮುಂದಿನ ಮೂರು ವರ್ಷ ಮೂರು ಸಿನಿಮಾ

ಯಶ್‍ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಎರಡೂವರೆ ವರ್ಷಗಳಾಗಿವೆ.. ಟಾಕ್ಸಿಕ್’ ಚಿತ್ರವು 2025ರಲ್ಲಿ; ‘ರಾಮಾಯಣ’ ಚಿತ್ರದ ಮೊದಲ ಭಾಗ 2026 ಹಾಗೂ ಎರಡನೆಯ ಭಾಗ 2027ರಲ್ಲಿ ಬಿಡುಗಡೆಯಾಗಲಿದೆ.

Update: 2024-11-10 01:30 GMT

ಯಶ್‍ ಇದೀಗ ಬರೀ ಕನ್ನಡ ನಟರಾಗಷ್ಟೇ ಉಳಿದಿಲ್ಲ. ‘ಕೆಜಿಎಫ್‍’ ಚಿತ್ರಗಳ ನಂತರ ಅವರು ಪ್ಯಾನ್‍ ಇಂಡಿಯಾ ನಟರಾಗಿದ್ದಾರೆ. ಅದಕ್ಕೆ ಸರಿಯಾಗಿ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಹಾಗಾಗಿಯೇ, ಅವರು ಅಳೆದು ತೂಗಿ ಚಿತ್ರವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದೀಗ ಅವರು ‘ಟಾಕ್ಸಿಕ್‍’ ಮತ್ತು ‘ರಾಮಾಯಣ’ ಚಿತ್ರಗಳಲ್ಲಿ ನಟಿಸುತ್ತಿದ್ದು, ಚಿತ್ರದ ಕೆಲಸಗಳು ಪ್ರಗತಿಯಲ್ಲಿವೆ. ಇತ್ತೀಚೆಗೆ ಬಾಲಿವುಡ್‍ ನಟ ಶಾರುಖ್‍ ಖಾನ್‍ ಸಹ ಯಶ್‍ ಚಿತ್ರವನ್ನು ನೋಡುವುದಕ್ಕೆ ಕಾಯುತ್ತಿರುವುದಾಗಿ ಹೇಳಿದ್ದರು. ತಮ್ಮಂತೆಯೇ ಅವರು ಸಹ ಬೇಗಬೇಗ ಚಿತ್ರ ಮಾಡಲಿ ಎಂದು ಆಶಿಸಿದ್ದರು. ಅದಕ್ಕೆ ಉತ್ತರವಾಗಿ ಯಶ್‍ ಅಭಿನಯದ ಮೂರು ಚಿತ್ರಗಳು ಮುಂದಿನ ಮೂರು ವರ್ಷಗಳಲ್ಲಿ ಬಿಡುಗಡೆ ಆಗುವುದಕ್ಕೆ ಸಜ್ಜಾಗುತ್ತಿವೆ.

ಯಶ್‍ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಎರಡೂವರೆ ವರ್ಷಗಳೇ ಆಗಿವೆ. ಅವರ ಕೊನೆಯ ಚಿತ್ರ ‘ಕೆಜಿಎಫ್‍ 2’ ಚಿತ್ರವು ಬಿಡುಡೆಯಾಗಿದ್ದ 2022ರ ಏಪ್ರಿಲ್‍ 14ರಂದು. ಆ ನಂತರ ಅವರ ಯಾವೊಂದು ಚಿತ್ರವೂ ಬಿಡುಗಡೆ ಆಗಿಲ್ಲ. ಯಶ್‍ ಚಿತ್ರ ಬಿಡುಗಡೆ ಯಾವಾಗ ಎನ್ನುವವರಿಗೆ ಇದೀಗ, ಮುಂದಿನ ಮೂರು ವರ್ಷಗಳಲ್ಲಿ ಯಶ್‍ ಅಭಿನಯದ ಮೂರು ಚಿತ್ರಗಳು ಬಿಡುಗಡೆ ಆಗುವುದಾಗಿ ಘೋಷಣೆ ಆಗಿವೆ.

ಈ ಪೈಕಿ ‘ಟಾಕ್ಸಿಕ್’ ಚಿತ್ರವು 2025ರಲ್ಲಿ ಬಿಡುಗಡೆಯಾದರೆ, ‘ರಾಮಾಯಣ’ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಮೊದಲ ಭಾಗ 2026ರ ದೀಪಾವಳಿಗೆ ಬಿಡುಗಡೆಯಾದರೆ, ಎರಡನೆಯ ಭಾಗ 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ನಿರ್ಮಾಪಕ ನಮಿತ್‍ ಮಲ್ಹೋತ್ರಾ ಇತ್ತೀಚೆಗೆ ಘೋಷಣೆ ಮಾಡಿದ್ದಾರೆ. ಅಲ್ಲಿಗೆ ಯಶ್‍ ಚಿತ್ರ ಮಾಡುತ್ತಿಲ್ಲ ಎಂದು ಬೇಸರದಲ್ಲಿದ್ದ ಅವರ ಅಭಿಮಾನಿಗಳಿಗೆ, ಈ ವಿಷಯ ಕೇಳಿ ಸ್ವಲ್ಪ ಮಟ್ಟಿಗಾದರೂ ಖುಷಿಯಾಗಿದೆ.

ಒಂದೂವರೆ ವರ್ಷಗಳ ಕಾಲ ಯಶ್‍ ಮೌನ

‘ಕೆಜಿಎಫ್‍ 2’ ಚಿತ್ರ ಬಿಡುಡೆಯಾಗಿ ಸುಮಾರು ಒಂದೂವರೆ ವರ್ಷಗಳ ಕಾಲ, ತಮ್ಮ ಮುಂದಿನ ನಡೆ ಏನು ಎಂಬುದನ್ನೇ ಯಶ್‍ ಬಿಟ್ಟುಕೊಟ್ಟಿರಲಿಲ್ಲ. ಕ್ರಮೇಣ, ಅವರು ಕೆ.ವಿ.ಎನ್‍. ಪ್ರೊಡಕ್ಷನ್ಸ್ ನಿರ್ಮಾಣದ ಚಿತ್ರವೊಂದರಲ್ಲಿ ನಟಿಸುತ್ತಾರೆ, ಮಲಯಾಳಂ ನಿರ್ದೇಶಕಿ ಗೀತೂ ಮೋಹನ್‍ ದಾಸ್‍ ಆ ಚಿತ್ರವನ್ನು ನಿರ್ದೇಶಿಸುತ್ತಾರೆ ಎಂಬಂತಹ ಸುದ್ದಿಗಳು ಕೇಳಿ ಬಂದವು. ಇನ್ನು, ಯಾವುದೇ ಹಬ್ಬ ಬಂದರೂ ಯಶ್‍ ಅಭಿನಯದ ಹೊಸ ಚಿತ್ರದ ಘೋಷಣೆ ಆಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ, ಅದಾಗಲೇ ಇಲ್ಲ. ಇಷ್ಟಕ್ಕೂ ಯಶ್‍ ಯಾಕೆ ಇಷ್ಟೊಂದು ತಡ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ, ಅವರೇ ಒಮ್ಮೆ ಉತ್ತರ ನಿಡಿದ್ದರು.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾತನಾಡಿದ್ದ ಯಶ್‍, ‘ನನಗೆ ಅಭಿಮಾನಿಗಳ ಕಾತುರ ಅರ್ಥವಾಗುತ್ತದೆ. ಆದರೆ, ನಾನು ಸುಮ್ಮನೆ ಕುಳಿತಿಲ್ಲ. ಒಂದು ದೊಡ್ಡ ಕೆಲಸಕ್ಕೆ ಸಜ್ಜಾಗುತ್ತಿದ್ದೇನೆ. ನನಗೆ ಸಾಧಾರಣವಾದ ಕೆಲಸ ಮಾಡಲು ಇಷ್ಟವಿಲ್ಲ. ಎಲ್ಲರೂ ಹೆಮ್ಮೆಪಡುವಂತಹ ಕೆಲಸವನ್ನೇ ಮಾಡುತ್ತೇನೆ. ನಾನು ಹೊಸ ಚಿತ್ರದೊಂದಿಗೆ ಬರುವುದಕ್ಕೆ ಉತ್ಸುಕನಾಗಿದ್ದೇನೆ. ಅಡುಗೆ ರೆಡಿಯಾದ ಮೇಲೆ ಬಡಿಸಿದರೆನೇ ಚೆಂದ. ಅರ್ಧಂಬರ್ಧ ಅಡುಗೆ ಮಾಡಿ ಊಟಕ್ಕೆ ಕರೆಯುವುದು ಸರಿ ಹೋಗುವುದಿಲ್ಲ’ ಎಂದು ಹೇಳಿದ್ದರು. ಈ ಮೂಲಕ ಸದ್ದಿಲ್ಲದೆ ಒಂದು ಚಿತ್ರದ ತಯಾರಿಯಲ್ಲಿರುವುದಾಗಿ ಹೇಳಿದ್ದರು.

ಕಳೆದ ವರ್ಷ ‘ಟಾಕ್ಸಿಕ್‍’ ಘೋಷಣೆ

ಅದು ನಿಜವಾಗಿದ್ದು, ಕಳೆದ ವರ್ಷದ ಕೊನೆಯಲ್ಲಿ. ಕಳೆದ ವರ್ಷದ ಕೊನೆಯಲ್ಲಿ ‘ಟಾಕ್ಸಿಕ್‍’ ಚಿತ್ರದ ಘೋಷಣೆಯಾಯ್ತು. ಕೆಲವು ತಿಂಗಳುಗಳ ಹಿಂದೆ, ಆಗಸ್ಟ್ 08ರಂದು ಚಿತ್ರದ ಚಿತ್ರೀಕರಣವೂ ಪ್ರಾರಂಭವಾಯ್ತು. ಹೀಗಿರುವಾಗಲೇ, ಹಿಂದಿಯ ರಾಮಾಯಣದಲ್ಲಿ ಯಶ್‍, ರಾವಣನಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಸುದ್ದಿಯಾಯ್ತು. ಈ ಚಿತ್ರದಲ್ಲಿ ಯಶ್‍ ಬರೀ ನಟರಷ್ಟೇ ಅಲ್ಲ, ಈ ಚಿತ್ರದ ನಿರ್ಮಾಣದಲ್ಲಿ ಯಶ್‍ ಅವರ ಮಾನ್ಸ್ಟರ್‍ ಮೈಂಡ್‍ ಕ್ರಿಯೇಷನ್ಸ್ ಸಹ ತೊಡಗಿಸಿಕೊಂಡಿದೆ ಎಂದು ಹೇಳಲಾಯ್ತು. ಆದರೆ, ಈ ವಿಷಯವಾಗಿ ಯಶ್‍ ಯಾವೊಂದು ವಿಷಯವನ್ನೂ ಬಹಿರಂಗಪಡಿಸಿರಲಿಲ್ಲ.

ಹೀಗಿರುವಾಗಲೇ, ‘ದಿ ಹಾಲಿವುಡ್‍ ರಿಪೋರ್ಟರ್‍’ ಜಾಲತಾಣದೊಂದಿಗೆ ಮಾತನಾಡಿದ್ದ ಯಶ್‍, ‘ರಾಮಾಯಣ’ದ ಭಾಗವಾಗಿದ್ದು ಹೇಗೆ ಎಂದು ವಿವರಿಸಿದ್ದರು. ‘ನಾನು ‘ಟಾಕ್ಸಿಕ್‍’ ಚಿತ್ರದ VFX ಕೆಲಸದಲ್ಲಿ ತೊಡಗಿಸಿಕೊಂಡಿದ್ದಾಗ, DNEG ಮತ್ತು ಪ್ರೈಮ್‍ ಫೋಕಸ್‍ ಸಂಸ್ಥೆಗಳ ನಮಿತ್‍ ಮಲ್ಹೋತ್ರಾ ಅವರನ್ನು ಭೇಟಿ ಮಾಡುವ ಸಂದರ್ಭ ಒದಗಿ ಬಂತು. ಆಗ ನಮಿತ್‍, ತಾವು ನಿರ್ಮಿಸುತ್ತಿರುವ ‘ರಾಮಾಯಣ’ ಚಿತ್ರದ ಬಗ್ಗೆ ಹೇಳಿದರು. ಚಿತ್ರವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಮುಟ್ಟಿಸಬೇಕು ಎಂಬ ನಮಿತ್‍ ಅವರ ದೃಷ್ಟಿಕೋನ ಇಷ್ಟವಾಯಿತು. ಅವರ ಕಲ್ಪನೆಗೆ ಕೈಜೋಡಿಸಬೇಕು ಎಂದನಿಸಿ, ‘ರಾಮಾಯಣ’ ಚಿತ್ರದ ಭಾಗವಾದೆ’ ಎಂದು ಹೇಳಿದ್ದರು.

ರಾವಣನ ಪಾತ್ರಕ್ಕೆ ಹಲವು ಮಜಲುಗಳಿವೆ

ರಾವಣ ಪಾತ್ರವಲ್ಲದೆ ಬೇರೆ ಯಾವ ಪಾತ್ರವಾಗಿದ್ದರೆ ಒಪ್ಪುತ್ತಿರಲಿಲ್ಲ ಎಂದಿದ್ದ ಯಶ್‍, ‘ಅದೊಂದು ಅದ್ಭುತವಾದ ಪಾತ್ರ. ಅದೇ ಕಾರಣಕ್ಕೆ ನಾನು, ‘ರಾಮಾಯಣ’ದಲ್ಲಿ ರಾವಣನಾಗಿ ನಟಿಸುವುದಕ್ಕೆ ಒಪ್ಪಿಕೊಂಡೆ. ಬಹುಶಃ ಅದಲ್ಲದೆ ಬೇರೆ ಯಾವುದಾದರೂ ಪಾತ್ರವಾಗಿದ್ದರೆ, ನಾನು ಒಪ್ಪುತ್ತಿರಲಿಲ್ಲ. ರಾವಣನ ಪಾತ್ರಕ್ಕೆ ಹಲವು ಮಜಲುಗಳಿವೆ ಮತ್ತು ಒಬ್ಬ ನಟನಾಗಿ ಆ ತರಹದ ಪಾತ್ರ ಮಾಡುವುದು ಬಹಳ ಇಷ್ಟ. ಒಬ್ಬ ನಟನಾಗಿ ಆ ಪಾತ್ರ ನಿರ್ವಹಿಸಲು ಕಾತುರದಿಂದ ಕಾಯುತ್ತಿದ್ದೇನೆ’ ಎಂದು ಯಶ್‍ ಹೇಳಿದ್ದರು.

ಹೀಗೆ ಸತತವಾಗಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಯಶ್‍, ಸದ್ಯ ‘ಟಾಕ್ಸಿಕ್‍’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅದನ್ನು ಮುಗಿಸಿ, ‘ರಾಮಾಯಣ’ದ ಭಾಗವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ‘ಟಾಕ್ಸಿಕ್‍’ ಚಿತ್ರವು ಮೊದಲು 2025ರ ಏಪ್ರಿಲ್‍ 10ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗುತ್ತಿತ್ತು. ಆದರೆ, ಚಿತ್ರೀಕರಣ ಪ್ರಾರಂಭವಾಗಿದ್ದು ತಡವಾದ್ದರಿಂದ, ಚಿತ್ರ ಅಂದುಕೊಂಡಂತೆಯೇ ಏಪ್ರಿಲ್‍ 10ರಂದು ಬಿಡುಗಡೆಯಾಗುತ್ತಿಲ್ಲ. ಅದರ ಬದಲು, ಮುಂದಿನ ವರ್ಷ ಇನ್ನೊಂದು ದಿನ ಬಿಡುಗಡೆಯಾಗುತ್ತದೆ ಎಂಬ ಮಾಹಿತಿ ಇದೆ. ಆದರೆ, ಚಿತ್ರತಂಡ ಹೊಸ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಈ ಮಧ್ಯೆ, ‘ರಾಮಾಯಣ’ ಚಿತ್ರಗಳ ನಿರ್ಮಾಪಕ ನಮಿತ್‍ ಮಲ್ಹೋತ್ರಾ ಸೋಷಿಯಲ್‍ ಮೀಡಿಯಾದಲ್ಲಿ, ಮೊದಲ ಭಾಗ 2026ರ ದೀಪಾವಳಿಗೆ ಬಿಡುಗಡೆಯಾದರೆ, ಎರಡನೆಯ ಭಾಗ 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲಿಗೆ, ಯಶ್‍ ಅಭಿನಯದ ಮೂರು ಚಿತ್ರಗಳು ಸತತವಾಗಿ ಮೂರು ವರ್ಷಗಳಲ್ಲಿ ಬಿಡುಗಡೆ ಆಗಲಿದೆ.

ತಾನು ಸುಮ್ಮನೆ ಕೂತಿಲ್ಲ, ಚಿತ್ರೀಕರಣ ಮಾಡದಿದ್ದರೂ ನಿರಂತರವಾಗಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ ಎಂಬ ಯಶ್‍ ಮಾತು ಇದೀಗ ನಿಜವಾಗಿದೆ. ಅವರು ಚಿತ್ರೀಕರಣದಲ್ಲಿ ಭಾಗವಹಿಸದಿದ್ದರೂ, ತೆರೆಯ ಮರೆಯಲ್ಲಿ ‘ಟಾಕ್ಸಿಕ್‍’ ಮತ್ತು ‘ರಾಮಾಯಣ’ ಚಿತ್ರಗಳಲ್ಲಿ ತಮ್ಮದೇ ರೀತಿಯಲ್ಲಿ ತೊಡಗಿಸಿಕೊಂಡಿದ್ದರು. ಅದೀಗ ಒಂದೊಂದೇ ಬಹಿರಂಗವಾಗುತ್ತಿದೆ. ಮುಂದಿನ ವರ್ಷದಲ್ಲಿ ಮೂರು ವರ್ಷಗಳ ಕಾಲ ಯಶ್‍ ಚಿತ್ರಗಳು ಬಿಡುಗಡೆಯಾಗಲಿವೆ. ಈ ಚಿತ್ರಗಳಿಗೆ ಅವರು ಯಾವ ರೀತಿ ಶ್ರಮ ಹಾಕಿದ್ದರು ಎಂಬುದು ಚಿತ್ರ ಬಿಡುಗಡೆಯಾದ ಮೇಲೆ ಗೊತ್ತಾಗಲಿದೆ.

Tags:    

Similar News