ಬೆಳ್ಳಿಪರದೆ ಮೇಲೆ ನಾಯಕ-ನಾಯಕಿಯಾದ ಅಂಧ ದಂಪತಿ!
ಈ ಕಿರುಚಿತ್ರ ಮಾಡಿದ ಹಿನ್ನೆಲೆಯನ್ನು ವಿವರಿಸುವ ನಿರ್ದೇಶಕ ಜಗದೀಶ್, ‘ನಾನು ಮದುವೆಯೊಂದರಲ್ಲಿ ಕಣ್ಣು ಕಾಣದ ದಂಪತಿಯನ್ನು ನೋಡಿದೆ. ಸಾಮಾನ್ಯವಾಗಿ, ಹುಡುಗ-ಹುಡುಗಿ ಪರಸ್ಪರ ನೋಡಿ ಒಪ್ಪಿಕೊಂಡು ಮದುವೆಯಾಗುತ್ತಾರೆ. ಇವರು ಹೇಗೆ ಮದುವೆಯಾದರು ಎಂಬ ಪ್ರಶ್ನೆ ಬಂತು
ಸಿನಿಮಾದ ನಾಯಕ-ನಾಯಕಿಯರು ನಿಜಜೀವನದಲ್ಲಿ ದಂಪತಿಗಳಾದ ಹಲವು ಉದಾಹರಣೆಗಳಿವೆ. ಅದೇ ರೀತಿ, ನಿಜಜೀವನದ ಹಲವು ದಂಪತಿಗಳು ಬೆಳ್ಳಿಪರದೆಯ ಮೇಲೆ ನಾಯಕ-ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಜಗತ್ತಿನಲ್ಲೇ ಮೊದಲ ಬಾರಿಗೆ ಅಂಧ ದಂಪತಿ, ತೆರೆಯ ಮೇಲೆ ನಾಯಕ ಮತ್ತು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅದು ‘ಶರತ್ ಮತ್ತು ಶರಧಿ’ ಎಂಬ ಕಿರುಚಿತ್ರದಲ್ಲಿ.
ನಿಜಜೀವನದಲ್ಲಿ ದಂಪತಿಯಾಗಿರುವ ವೀರೇಶ್ ಹಾಗೂ ಅಶ್ವಿನಿ, ‘ಶರತ್ ಮತ್ತು ಶರಧಿ’ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ, ’ಏಪ್ರಿಲ್‌ನ ಹಿಮಬಿಂದು’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಎಂ.ಜಗದೀಶ್ ಈ ಕಿರುಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿ, ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಟಾಕ್‌ಗುರು ಕ್ರಿಯೇಷನ್ಸ್ ಅಡಿಯಲ್ಲಿ ಗಣೇಶ್ ಬಿ.ಎಂ ಈ ಚಿತ್ರವನ್ನು ನಿರ್ಮಿಸಿದ್ದಾರೆ. ವೀರೇಶ್ ಮತ್ತು ಅಶ್ವಿನಿ ಜೊತೆಗೆ ಹಿರಿಯ ನಟ ದತ್ತಣ್ಣ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ನಟಿಸುವುದಕ್ಕೆ ಅವರು ಸಂಭಾವನೆ ಪಡೆಯದೇ ನಟಿಸಿದ್ದಾರೆ.
ಈ ಕಿರುಚಿತ್ರ ಮಾಡಿದ ಹಿನ್ನೆಲೆಯನ್ನು ವಿವರಿಸುವ ನಿರ್ದೇಶಕ ಜಗದೀಶ್, ‘ನಾನು ಮದುವೆಯೊಂದರಲ್ಲಿ ಕಣ್ಣು ಕಾಣದ ದಂಪತಿಯನ್ನು ನೋಡಿದೆ. ಸಾಮಾನ್ಯವಾಗಿ, ಹುಡುಗ-ಹುಡುಗಿ ಪರಸ್ಪರ ನೋಡಿ ಒಪ್ಪಿಕೊಂಡು ಮದುವೆಯಾಗುತ್ತಾರೆ. ಇವರು ಹೇಗೆ ಮದುವೆಯಾದರು ಎಂಬ ಪ್ರಶ್ನೆ ಬಂತು. ಇಂಥದ್ದೊಂದು ವಿಷಯ ಇಟ್ಟುಕೊಂಡು ಚಿತ್ರ ಮಾಡಬೇಕು ಎಂದು ಯೋಚಿಸಿದೆ. ಆ ಸಂದರ್ಭದಲ್ಲಿ ವೀರೇಶ್ ಮತ್ತು ಅಶ್ವಿನಿ ಅವರ ಪರಿಚಯವಾಯಿತು. ಅವರು ಸಿನಿಮಾದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರು. ಈ ಚಿತ್ರದಲ್ಲಿ ಸನ್ನಿವೇಶವೊಂದರಲ್ಲಿ ನಮಗೆ ಕರೆಂಟ್ ಬಿಲ್ ಬೇಕಿಲ್ಲ ಎಂಬ ಸಂಭಾಷಣೆಯೊಂದನ್ನು ಬರೆದಿದ್ದೆ. ಆ ಸಂಭಾಷಣೆಯನ್ನು ತೆಗೆದುಬಿಡಿ ಎಂದರು. ನಮಗೆ ಕತ್ತಲೆ ಇರಬಹುದು, ನಮ್ಮ ಮನೆಗೆ ಕತ್ತಲೆ ಇರಬಾರದು. ರಸ್ತೆಗೆ ಅದು ಕತ್ತಲೆ ಮನೆ ಎಂದಾಗಿಬಿಡುತ್ತದೆ. ಹಾಗಾಗಿ, ಆ ಸಂಭಾಷಣೆ ಬೇಡ ಎಂದರು. ಅವರಿಗೆ ಕಣ್ಣಿಲ್ಲದಿರಬಹುದು, ಜೀವನವನ್ನು ಬಹಳ ಪಾಸಿಟಿವ್ ಆಗಿ ತೆಗೆದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ತೊಂದರೆ ಇದೆ ಎಂದು ತೋರಿಸಿಲ್ಲ. ನಾವು ಕಣ್ಣು ಮುಚ್ಚಿಕೊಂಡು ನೋಡಿದರೆ, ಇದೊಂದು ಸಾಮಾನ್ಯ ದಂಪತಿಯ ಸಿನಿಮಾ ಎಂದೆನಿಸುತ್ತದೆ. ನಾವು ಕಣ್ಣು ತೆರೆದು ನೋಡಿದರೆ ಮಾತ್ರ, ಇದು ಅಂಧ ದಂಪತಿಯ ಕಥೆ ಎಂದು ಗೊತ್ತಾಗುತ್ತದೆ’ ಎನ್ನುತ್ತಾರೆ.
ವೀರೇಶ್ ಮತ್ತು ಅಶ್ವಿನಿ ಎಲ್ಲರಂತೆ ಬಹಳ ಸಹಜವಾಗಿ ಬದುಕುತ್ತಿದ್ದಾರೆ ಎನ್ನುವ ಜಗದೀಶ್, ‘ಅವರು ಪ್ರತಿ ತಿಂಗಳು ಒಂದು ಚಿತ್ರ ನೋಡುತ್ತಾರೆ. ಎಲ್ಲರಂತೆ ಸಹಜವಾಗಿಯೇ ಬದುಕುತ್ತಿದ್ದಾರೆ. ಅದನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಚಿತ್ರದಲ್ಲಿ ದತ್ತಣ್ಣ ಅವರದ್ದು ಪ್ರಮುಖ ಪಾತ್ರವಿದೆ. ಅವರು ಕಿರುಚಿತ್ರ ಮಾಡುವುದಿಲ್ಲ. ಹಾಗಾಗಿಯೇ, ಅವರು ಒಪ್ಪುತ್ತಾರೋ, ಇಲ್ಲವೋ ಎಂಬ ಹಿಂಜರಿಕೆ ಇತ್ತು. ಆದರೆ, ದತ್ತಣ್ಣ ಕಥೆ ಕೇಳಿ ತಕ್ಷಣ ಒಪ್ಪಿಕೊಂಡರು. ಯಾವುದೇ ಸಂಭಾವನೆ ಇಲ್ಲದೆ ಕಿರುಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರು. ಮೊದಲು ಈ ಕಿರುಚಿತ್ರವು ಒಂದು ವೆಬ್‍ಸರಣಿಯ ಎಪಿಸೋಡ್ ಆಗಿತ್ತು. ಆದರೆ, ಅದರಲ್ಲಿ ಕಳೆದು ಹೋಗಬಾರದು ಮತ್ತು ಪ್ರತ್ಯೇಕವಾಗಿ ನಿಲ್ಲಬೇಕು ಎಂದು ಈ 14 ನಿಮಿಷಗಳ ಕಿರುಚಿತ್ರ ಮಾಡಿದ್ದೇವೆ. ಇದನ್ನು ಹಿಂದಿಗೆ ಡಬ್ ಮಾಡುತ್ತಿದ್ದೇವೆ. ಮುಂದೆ ಈ ಕಿರುಚಿತ್ರವನ್ನು ಪೂರ್ಣಪ್ರಮಾಣದ ಚಿತ್ರ ಬೇಕಾದರೂ ಮಾಡಬಹುದು’ ಎನ್ನುತ್ತಾರೆ.
ಚಿತ್ರದಲ್ಲಿ ಅಭಿನಯಿಸಿರುವ ಅಶ್ವಿನಿ ಮಾತನಾಡಿ, ‘ದತ್ತಣ್ಣ ಸಾಕಷ್ಟು ತಿದ್ದಿ, ಚೆನ್ನಾಗಿ ನಟಿಸುವಂತೆ ಪ್ರೇರೇಪಿಸಿದರು. ಸಿನಿಮಾದಲ್ಲೇನಿತ್ತೋ ನಿಜಜೀವನದಲ್ಲೂ ಹಾಗೆಯೇ ಇತ್ತು. ಇವರು ಹೇಗೆ ಜೀವನ ಮಾಡುತ್ತಾರೆ ಎಂದು ಹಲವರಿಗೆ ಪ್ರಶ್ನೆಗಳಿದ್ದವು. ನಮ್ಮ ತಂದೆ-ತಾಯಿಗೂ ಅಂಥ ಪ್ರಶ್ನೆ ಇತ್ತು. ದೃಷ್ಟಿಹೀನತೆ ಇರುವ ಸಾಕಷ್ಟು ಜೋಡಿಗಳು ನಮ್ಮ ನಡುವೆ ಇದ್ದಾರೆ. ಎಲ್ಲರ ತರಹ ನಾವು ಜೀವನ ಮಾಡುತ್ತಿದ್ದೇವೆ. ಕೆಲವು ಸವಾಲುಗಳು ಸಹಜವಾಗಿಯೇ ಇರುತ್ತವೆ. ದಿವ್ಯಾಂಗರ ಕುಟುಂಬದವರು ಹೆದರುವ ಅವಶ್ಯಕತೆ ಇಲ್ಲ. ನಿಮ್ಮ ಮಕ್ಕಳನ್ನು ಚೆನ್ನಾಗಿ ಪೋಷಿಸಿ. ಅವರು ಸಹ ಎಲ್ಲರಂತೆ ಜೀವನ ನಡೆಸಬಹುದು’ ಎಂದು ಅಭಿಪ್ರಾಯಪಡುತ್ತಾರೆ.
ವೀರೇಶ್ ಮಾತನಾಡಿ, ‘ನಾನು ಮೂಲತಃ ದಾವಣಗೆರೆಯವನು. ನಾನು ಬೆಂಗಳೂರಿನಲ್ಲಿ ಸರ್ಕಾರಿ ಉದ್ಯೋಗಿ. ಶಿಕ್ಷಣ ಇಲಾಖೆಯಲ್ಲಿ ಮ್ಯೂಸಿಕ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದೇನೆ. ಶನಿವಾರ-ಭಾನುವಾರಗಳಂದು ಬಿಡುವಿರುತ್ತೇನೆ. ನಟನೆ ಗೊತ್ತಿಲ್ಲ. ಆದರೆ, ಚಿತ್ರತಂಡದ ಸಹಕಾರದಿಂದ ಅಭಿನಯಿಸುವುದಕ್ಕೆ ಸಾಧ್ಯವಾಯಿತು’ ಎನ್ನುತ್ತಾರೆ.
ಈ ಕಿರುಚಿತ್ರಕ್ಕೆ ಸತೀಶ್ ಪದ್ಮನಾಭನ್ ಸಂಗೀತ, ವಿನಯ್ ಹೊಸಗೌಡರ್ ಛಾಯಾಗ್ರಹಣವಿದೆ.