ರಿಷಭ್, ಯಶ್, ರಕ್ಷಿತ್ ಶೆಟ್ಟಿ ಸಿನಿಮಾ ಮಾತ್ರ ನೋಡುತ್ತೇವೆ ಎನ್ನುವುದು ಸರಿಯಲ್ಲ: ಸಿಂಪಲ್ ಸ್ಟಾರ್ ಮನದಾಳ
ರಕ್ಷಿತ್ ಶೆಟ್ಟಿ ಕೆನಡಾದ ಕನ್ನಡ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಹೊಸಬರ ಸಿನಿಮಾ ಸಹ ಅಷ್ಟೇ ಮುಖ್ಯ, ತಿಂಗಳಿಗೆ ಒಂದು ಒಳ್ಳೆಯ ಚಿತ್ರವಾದರೂ ಬರಲೇ ಬೇಕು" ಎಂದಿದ್ದಾರೆ;
ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ 2’ ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಿತ್ತು. ಈ ವರ್ಷ ಅವರ ಅಭಿನಯದ ಮತ್ತು ನಿರ್ದೇಶನದ ‘ರಿಚರ್ಡ್ ಆ್ಯಂಟೋನಿ‘ ಚಿತ್ರವು ಶುರುವಾಗಬಹುದು ಎಂಬ ಅವರ ಅಭಿಮಾನಿಗಳ ನಂಬಿಕೆ ಸುಳ್ಳಾಗಿದೆ. ರಕ್ಷಿತ್ ಶೆಟ್ಟಿ ಹೇಳಿಕೊಂಡಂತೆ ಅವರು ಒಂದಿಷ್ಟು ಅಧ್ಯಯನದಲ್ಲಿ ನಿರತರಾಗಿದ್ದಾರಂತೆ. ಅದೆಲ್ಲಾ ಮುಗಿದು ಚಿತ್ರ ಪ್ರಾರಂಭವಾಗುವುದಕ್ಕೆ ಇನ್ನೊಂದಿಷ್ಟು ಸಮಯ ಖಂಡಿತಾ ಆಗುತ್ತದೆ.
ರಕ್ಷಿತ್ ಶೆಟ್ಟಿ ಈ ಮಧ್ಯೆ, ಕೆನಡಾದ ಟೊರೊಂಟೋ ಕನ್ನಡ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಭಾಗವಹಿಸಿ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ವರ್ಷಕ್ಕೆ ಒಂದೆರಡು ಚಿತ್ರಗಳು ಗೆದ್ದರೆ, ಅದರಿಂದ ಚಿತ್ರರಂಗಕ್ಕೆ ಯಾವುದೇ ಉಪಯೋಗವಿಲ್ಲ ಎಂದು ಹೇಳಿದ್ದಾರೆ.
ಅನಿವಾಸಿ ಕನ್ನಡಿಗರೊಂದಿಗಿನ ಸಂವಾದದಲ್ಲಿ ಮಾತನಾಡಿರುವ ಅವರು, ‘ವರ್ಷಕ್ಕೆ ಕಡಿಮೆ ಎಂದರೂ 15 ಸಿನಿಮಾಗಳು ಯಶಸ್ವಿಯಾಗಬೇಕು. ವರ್ಷಕ್ಕೆ ಎರಡು ಸಿನಿಮಾ ಹಿಟ್ ಆದರೆ, ಅದು ಉದ್ಯಮ ಅಂತನಿಸಿಕೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ನಾವು ಬಹಳ ಹಿಂದುಳಿದಿದ್ದೇವೆ. ಪರಂವಾ ಸ್ಟುಡಿಯೋಸ್ ಬ್ಯಾನರ್ ಅಡಿ ಪ್ರತಿ ವರ್ಷ 10-12 ಸಿನಿಮಾಗಳನ್ನು ನಿರ್ಮಿಸುವುದು ನಮ್ಮ ಗುರಿ. ಸಮಸ್ಯೆ ಎಲ್ಲಿದೆಯೆಂದರೆ, ವರ್ಷಕ್ಕೆ ಒಂದೋ ಎರಡೋ ಸಿನಿಮಾಗಳು ಯಶಸ್ವಿಯಾದರೆ, ಮಧ್ಯದಲ್ಲಿ ಒಂದು ಒಳ್ಳೆಯ ಸಿನಿಮಾ ಬಂದರೆ ಅದು ಕಾಣದಿರಬಹುದು. ಹಾಗಾಗಿ, ನಿರಂತರವಾಗಿ ಒಳ್ಳೆಯ ಸಿನಿಮಾಗಳು ಬರುತ್ತಿರಬೇಕು. ಜನರಿಗೆ ಒಪ್ಪೊತ್ತೂಟ ಅಭ್ಯಾಸವಾಗಿಬಿಟ್ಟರೆ, ದಿನಕ್ಕೊಂದು ಹೊತ್ತು ಊಟ ಮಾತ್ರ ನಿರೀಕ್ಷೆ ಮಾಡುತ್ತಾರೆ. ಒಪ್ಪೊತ್ತಿನ ಊಟಕ್ಕಾಗಿ ಕಾಯುತ್ತಾರೆ. ಅದು ಸರಿಯಲ್ಲ’ ಎಂದು ಹೇಳಿದ್ದಾರೆ.
ನಾವು ಬರೀ ರಿಷಭ್ ಶೆಟ್ಟಿ, ಯಶ್, ರಕ್ಷಿತ್ ಶೆಟ್ಟಿ ಸಿನಿಮಾ ಮಾತ್ರ ನೋಡುತ್ತೇವೆ ಎಂದು ಕಾಯುವುದು ಸರಿಯಲ್ಲ ಎಂದಿರುವ ಅವರು, ‘ಹೊಸಬರ ಸಿನಿಮಾ ಸಹ ಅಷ್ಟೇ ಮುಖ್ಯ. ಹೊಸಬರ ಸಿನಿಮಾ ಕಾಣಿಸದಿದ್ದರೆ, ಒಳ್ಳೆಯ ಸಿನಿಮಾ ಹಾಳಾಗಿ ಬಿಡುತ್ತವೆ. ಹಾಗಾಗಿ, ತಿಂಗಳಿಗೆ ಒಂದು ಒಳ್ಳೆಯ ಚಿತ್ರವಾದರೂ ಬರಲೇ ಬೇಕು. ಆಗ ಪ್ರೇಕ್ಷಕರಿಗೆ ಒಂದು ಹಸಿವಿರುತ್ತದೆ. ಈ ತಿಂಗಳು ಈ ಸಿನಿಮಾ ನೋಡಿದೆ, ಮುಂದಿನ ತಿಂಗಳೂ ಸಿನಿಮಾ ನೋಡುವುದಕ್ಕೆ ಬಜೆಟ್ ಇಡಬೇಕು ಎಂದನಿಸಬೇಕು. ಹಾಗಾಗಿ, ನಿರಂತರವಾಗಿ ಸಿನಿಮಾ ಸಪ್ಲೈ ಆಗುತ್ತಿರಬೇಕು. ವರ್ಷಕ್ಕೆ 10-12 ಒಳ್ಳೆಯ ಚಿತ್ರಗಳಾದರೂ ಬರಬೇಕು’ ಎಂದಿದ್ದಾರೆ.
ಇನ್ನು, ರಕ್ಷಿತ್ ನಿರ್ದೇಶನದ ‘ರಿಚರ್ಡ್ ಆ್ಯಂಟೋನಿ’ ಇದೇ ವರ್ಷ ಆರಂಭವಾಗಿರಬೇಕಿತ್ತು. ಆದರೆ, ಕಾರಣಾಂತರಗಳಿಂದ ಇನ್ನೂ ಆಗಿಲ್ಲ. ಈ ಕುರಿತು ಮಾತನಾಡಿರುವ ರಕ್ಷಿತ್, ‘’ರಿಚರ್ಡ್ ಆ್ಯಂಟೋನಿ’ ಚಿತ್ರದ ಬರವಣಿಗೆ ಇನ್ನೂ ಪೂರ್ತಿ ಆಗಿಲ್ಲ. ಆ ಪಾತ್ರದ ಬಗ್ಗೆ ಹೆಚ್ಚು ಅಧ್ಯಯನ ಮಾಡುವ ನಿಟ್ಟಿನಲ್ಲಿ ಊರೂರು ಸುತ್ತುತ್ತಿದ್ದೀನಿ. ಚಿತತ್ರದ ನಾಯಕ ರಿಚ್ಚಿ ಬೇರೆಬೇರೆ ಜಾಗಗಳಿಗೆ ಹೋಗುತ್ತಾನೆ. ಅಲ್ಲಿ ಬೇರೆಬೇರೆ ಜನರನ್ನು ಭೇಟಿಯಾಗುತ್ತಾನೆ. ಆ ನಾನು ಕಳೆದ 10 ವರ್ಷಗಳಲ್ಲಿ ಯಾವುದೇ ಪಾತ್ರಗಳನ್ನು ಸ್ಟಡಿ ಮಾಡಿಲ್ಲ. ಹಾಗಾಗಿ, ಬೇರೆಬೇರೆ ಜನರನ್ನು ಭೇಟಿ ಮಾಡಿ ಆ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ,. ಒಂದಿಷ್ಟು ಕಡೆ ಸುತ್ತಾಡಿದರೆ, ಜನರನ್ನು ನೋಡಿ ಏನಾದರೂ ವಿಷಯ ಸಿಗಬಹುದು ಎನ್ನುವ ಕಾರಣಕ್ಕೆ ಈ ಸುತ್ತಾಟ ನಡೆಸಿದ್ದೇನೆ’ ಎನ್ನುತ್ತಾರೆ ರಕ್ಷಿತ್.
ಇನ್ನು, ಸುದೀಪ್ ಅಭಿನಯದಲ್ಲಿ ‘ಥಗ್ಸ್ ಆಫ್ ಮಾಲ್ಗುಡಿ’ ಚಿತ್ರ ನಿರ್ದೇಶಿಸುವ ವಿಷಯವೇನಾಯಿತು ಎಂಬ ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸಿರುವ ರಕ್ಷಿತ್, ‘ನನ್ನ ಮುಂದಿನ ಆರು ಸಿನಿಮಾಗಳ ಪಟ್ಟಿಯಲ್ಲಿ, ‘ಥಗ್ಸ್ ಆಫ್ ಮಾಲ್ಗುಡಿ’ ಸಹ ಒಂದು. ಆದರೆ, ಯಾವಾಗ ಎಂದು ನನಗೆ ಇನ್ನೂ ಗೊತ್ತಿಲ್ಲ. ನನ್ನ ಮುಂದಿನ ಮೂರು ಚಿತ್ರಗಳು ‘ರಿಚರ್ಡ್ ಆ್ಯಂಟೋನಿ’, ‘ಪುಣ್ಯಕೋಟಿ’ ಮತ್ತು ‘ಮಿಡ್ವೇ ಟು ಮೋಕ್ಷ’ ಚಿತ್ರಗಳಾಗಿರುತ್ತವೆ. ಈ ಚಿತ್ರಗಳನ್ನು ಮುಗಿಸಿದ ಮೇಲೆ ಬೇರೆ ಚಿತ್ರಗಳು. ‘ಥಗ್ಸ್ ಆಫ್ ಮಾಲ್ಗುಡಿ’ ಚಿತ್ರ ಮಾಡುವುದಂತೂ ಹೌದು. ಆದರೆ, ಯಾವಾಗ ಶುರುವಾಗುತ್ತದೆ ಎಂಬುದು ಈಗಲೇ ಗೊತ್ತಿಲ್ಲ’ ಎಂದು ಹೇಳಿದ್ದಾರೆ.
ತಾನು ಡಾ. ರಾಜಕುಮಾರ್ ಅವರ ಪೌರಾಣಿಕ ಚಿತ್ರಗಳ ಅಭಿಮಾನಿ ಎಂದು ಹೇಳಿರುವ ರಕ್ಷಿತ್, ಅವರ ಎಲ್ಲಾ ಚಿತ್ರಗಳನ್ನೂ ಎರಡೆರಡು ಬಾರಿ ನೋಡಿರುವುದಾಗಿ ಹೇಳಿಕೊಂಡಿದ್ದಾರೆ.