'ಕಾಂತಾರ' ಕ್ರಾಂತಿಗೆ ಪಿವಿಆರ್ ಐನಾಕ್ಸ್ ಸಾಥ್: ಸ್ವಾತಂತ್ರ್ಯೋತ್ಸವಕ್ಕೆ ಲಾಂಛನದಲ್ಲಿ 'ಅಗ್ನಿ' ಸೇರ್ಪಡೆ
ಭಾರತದ ಅತಿದೊಡ್ಡ ಮತ್ತು ಅತ್ಯಂತ ಪ್ರೀಮಿಯಂ ಸಿನಿಮಾ ಪ್ರದರ್ಶಕ ಸಂಸ್ಥೆ ಪಿವಿಆರ್ ಐನಾಕ್ಸ್, ಹೊಂಬಾಳೆ ಫಿಲ್ಮ್ಸ್ ಜೊತೆಗೂಡಿ ಹೊಸತನ ಮತ್ತು ವೈಶಿಷ್ಟ್ಯಪೂರ್ಣ ಪ್ರೇಕ್ಷಕ ಅನುಭವಗಳನ್ನು ನೀಡುತ್ತಿದೆ.;
ಪಿವಿಆರ್ ಐನಾಕ್ಸ್ ತನ್ನ ಲೋಗೋಗೆ ಕಾಂತಾರ ಚಿತ್ರದ ಪ್ರಮುಖ ಅಂಶವಾದ ಅಗ್ನಿ ಸೇರಿಸಿ ಬಿಡುಗಡೆಗೊಳಿಸಿದೆ.
ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದ 'ಕಾಂತಾರ' ಚಿತ್ರದ ಎರಡನೇ ಅಧ್ಯಾಯದ ಬಿಡುಗಡೆಗೆ ಮುನ್ನವೇ, ಹೊಂಬಾಳೆ ಫಿಲ್ಮ್ಸ್ ಮತ್ತು ದೇಶದ ಅತಿದೊಡ್ಡ ಸಿನಿಮಾ ಪ್ರದರ್ಶಕ ಸಂಸ್ಥೆ ಪಿವಿಆರ್ ಐನಾಕ್ಸ್ ಜಂಟಿಯಾಗಿ ವಿಶಿಷ್ಟ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿವೆ. 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಪಿವಿಆರ್ ಐನಾಕ್ಸ್ ತನ್ನ ಅಧಿಕೃತ ಲಾಂಛನಕ್ಕೆ 'ಕಾಂತಾರ' ಚಿತ್ರದ ಆತ್ಮದಂತಿರುವ 'ಅಗ್ನಿ'ಯ ಅಂಶವನ್ನು ಸೇರಿಸಿ, ಪ್ರೇಕ್ಷಕರಿಗೆ ವಿಶಿಷ್ಟ ಅನುಭವ ನೀಡಲು ಮುಂದಾಗಿದೆ.
ಅಕ್ಟೋಬರ್ 2 ರಂದು ಬಿಡುಗಡೆಯಾಗಲಿರುವ, ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಕಾಂತಾರ: ಚಾಪ್ಟರ್ 1' ಕ್ಕಾಗಿ ಈ ಪೂರ್ವಭಾವಿ ಸಿದ್ಧತೆ ನಡೆದಿದೆ. ಗುರುವಾರದಿಂದಲೇ ('ಕೂಲಿ' ಮತ್ತು 'ವಾರ್ 2' ಚಿತ್ರಗಳ ಬಿಡುಗಡೆಯ ದಿನ) ದೇಶಾದ್ಯಂತ ಇರುವ ಎಲ್ಲಾ ಪಿವಿಆರ್ ಐನಾಕ್ಸ್ ಚಿತ್ರಮಂದಿರಗಳ ಬೃಹತ್ ಪರದೆಗಳ ಮೇಲೆ, 'ಅಗ್ನಿ'ಯನ್ನು ಒಳಗೊಂಡ ಈ ವಿಶೇಷ ಅನಿಮೇಟೆಡ್ ಲಾಂಛನವು ಪ್ರದರ್ಶನಗೊಳ್ಳುತ್ತಿದೆ. ಅತ್ಯಾಧುನಿಕ ಪ್ರೊಜೆಕ್ಷನ್ ಮತ್ತು ಡಿಜಿಟಲ್ ತಂತ್ರಜ್ಞಾನದ ನೆರವಿನಿಂದ ರೂಪಿಸಲಾಗಿರುವ ಈ ಲಾಂಛನವು, 'ಕಾಂತಾರ' ಚಿತ್ರದ ಮೂಲಶಕ್ತಿ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುತ್ತಿದೆ.
ಈ ಬಗ್ಗೆ ಮಾತನಾಡಿದ ಪಿವಿಆರ್ ಐನಾಕ್ಸ್ ಲಿಮಿಟೆಡ್ನ ಸಿಇಒ ಗೌತಮ್ ದತ್ತಾ, "ಸಿನಿಮಾ ಎಂಬುದು ಕೇವಲ ಮನರಂಜನೆಯಲ್ಲ, ಅದು ಇಡೀ ರಾಷ್ಟ್ರವನ್ನು ಒಂದುಗೂಡಿಸುವ ಭಾವನೆ. ನಮ್ಮ ಲಾಂಛನಕ್ಕೆ 'ಕಾಂತಾರ' ಚಿತ್ರದ ಶಕ್ತಿಯನ್ನು ಸೇರಿಸುವ ಮೂಲಕ ನಾವು ಭಾರತದ ಶ್ರೀಮಂತ ಸಾಂಸ್ಕೃತಿಕ ಕಥನಗಳಿಗೆ ಗೌರವ ಸಲ್ಲಿಸುತ್ತಿದ್ದೇವೆ. ಇದು ಕೇವಲ ಲಾಂಛನದ ಬದಲಾವಣೆಯಲ್ಲ, ಬದಲಿಗೆ ಪ್ರೇಕ್ಷಕರು ಮರೆಯಲಾಗದ ಕಥಾ ಪ್ರಪಂಚಕ್ಕೆ ಕಾಲಿಡಲು ನೀಡುತ್ತಿರುವ ಆಹ್ವಾನ," ಎಂದು ಹೇಳಿದರು.
ಕಾಂತಾರ ಮ್ಯೂಸಿಕ್, ಕಾಂತಾರ ಶೀರ್ಷಿಕೆ, ಶೈಲಿಯನ್ನೂ ಈ ವಿಡಿಯೋದಲ್ಲಿ ಕಾಣಬಹುದು. ಈ ಮೂಲಕ ಬಹುನಿರೀಕ್ಷಿತ ಚಿತ್ರದ ಪ್ರಚಾರವೂ ಪ್ರಾರಂಭವಾಗಿದೆ.
ಹೊಂಬಾಳೆ ಫಿಲಂಸ್ನ ನಿರ್ಮಾಪಕ ಮತ್ತು ಸ್ಥಾಪಕ ವಿಜಯ್ ಕಿರಗಂದೂರು ಅವರು ಈ ಸಹಯೋಗದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. "ಭಾರತದ ಅತಿ ದೊಡ್ಡ ಮಲ್ಟಿಪ್ಲೆಕ್ಸ್ ಜಾಲವಾಗಿರುವ ಪಿವಿಆರ್ ಐನಾಕ್ಸ್, ಜಾಗತಿಕವಾಗಿ ಅತಿ ಹೆಚ್ಚು ಪ್ರೇಕ್ಷಕರನ್ನು ತಲುಪುವ ಸಾಮರ್ಥ್ಯ ಹೊಂದಿದೆ. ನಮ್ಮ 'ಕಾಂತಾರ' ಚಿತ್ರವನ್ನು ಇಷ್ಟು ವಿಶಿಷ್ಟವಾಗಿ ಆಚರಿಸಲು ಅವರು ಮುಂದಾಗಿರುವುದು ನಮಗೆ ಹೆಮ್ಮೆಯ ವಿಷಯ. ವಿಶೇಷವಾಗಿ ಸ್ವಾತಂತ್ರ್ಯ ದಿನದಂದು ನಮ್ಮ ಸಂಸ್ಕೃತಿಯನ್ನು ಈ ರೀತಿಯಲ್ಲಿ ಸಂಭ್ರಮಿಸುವುದು ಒಂದು ಅದ್ಭುತ ಕಲ್ಪನೆ. ನಮ್ಮ ಸಂಸ್ಕೃತಿಯಲ್ಲಿ ಬೇರೂರಿರುವ ಕಥೆಗಳನ್ನು ಇಂತಹ ದೊಡ್ಡ ಪಾಲುದಾರರೊಂದಿಗೆ ಸೇರಿ ಜಗತ್ತಿಗೆ ತಲುಪಿಸುತ್ತಿರುವುದು ಹೆಮ್ಮೆಯ ಸಂಗತಿ," ಎಂದರು.
ಈ ಲಾಂಛನದ ವೀಡಿಯೋದಲ್ಲಿ 'ಕಾಂತಾರ'ದ ಸಂಗೀತ ಮತ್ತು ಶೀರ್ಷಿಕೆಯ ಶೈಲಿಯನ್ನೂ ಬಳಸಿಕೊಳ್ಳಲಾಗಿದ್ದು, ಇದು ಚಿತ್ರದ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದಂತಾಗಿದೆ. ಮುಂಬರುವ ವಾರಗಳಲ್ಲಿ ಪಿವಿಆರ್ ಐನಾಕ್ಸ್ ಮತ್ತು ಹೊಂಬಾಳೆ ಫಿಲ್ಮ್ಸ್ ಇನ್ನಷ್ಟು ಹೊಸತನದ ಪ್ರಚಾರ ತಂತ್ರಗಳೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದು, ಚಿತ್ರದ ಬಿಡುಗಡೆಗೆ ಮುನ್ನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುವ ಗುರಿ ಹೊಂದಿವೆ.