Sandalwood in 2025 | ಚಂದನವನದಿಂದ ದೂರಾಗುತ್ತಿರುವ ಹಳೆಯ ನಿರ್ಮಾಪಕರು

ಕನ್ನಡ ಚಿತ್ರಗಳನ್ನು ಪರಭಾಷಾ ನಿರ್ಮಾಪಕರು ನಿರ್ಮಿಸುತ್ತಿರುವುದು ಹೊಸ ವಿಷಯವೇನಲ್ಲ. ಚಿತ್ರರಂಗ ಪ್ರಾರಂಭವಾದಾಗಿನಿಂದ ಪರಭಾಷೆಯ ಜನಪ್ರಿಯ ನಿರ್ಮಾಪಕರು ಮತ್ತು ನಿರ್ಮಾಣ ಸಂಸ್ಥೆಗಳು ಕನ್ನಡ ಚಿತ್ರಗಳ ನಿರ್ಮಾಣದಲ್ಲಿ ತೊಡಿಗಿಕೊಂಡೇ ಬಂದಿವೆ. ಇತ್ತೀಚಿನ ದಿನಗಳಲ್ಲಿ ಆ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವುದು ವಿಶೇಷ.;

Update: 2025-01-06 06:25 GMT
ಈ ವರ್ಷ ತೆರೆಕಂಡ ಸಿನಿಮಾಗಳು
Click the Play button to listen to article

ತೆಲುಗಿನ ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಪೀಪಲ್‍ ಮೀಡಿಯಾ ಫ್ಯಾಕ್ಟರಿ, ಗಣೇಶ್‍ ಅಭಿನಯದ ‘ಪಿನಾಕ’ ಚಿತ್ರವನ್ನು ನಿರ್ಮಿಸುವುದಕ್ಕೆ ಮುಂದಾಗಿದೆ.

ಪೀಪಲ್‍ ಮೀಡಿಯಾ ಫ್ಯಾಕ್ಟರಿಯ ಟಿ.ಜಿ. ವಿಶ್ವಪ್ರಸಾದ್‍ ಈ ಹಿಂದೆ ಕನ್ನಡದಲ್ಲಿ ಕೆಲವು ವರ್ಷಗಳ ಹಿಂದೆ ಶರಣ್‍ ಅಭಿನಯದ ‘ಅಧ್ಯಕ್ಷ ಇನ್‌ ಅಮೇರಿಕಾ’ ಮತ್ತು ಚಿರಂಜೀವಿ ಸರ್ಜಾ ಅಭಿನಯದ ‘ಆದ್ಯ’ ಚಿತ್ರಗಳನ್ನು ನಿರ್ಮಿಸಿದ್ದರು. ಇದೀಗ ಅವರು ಗಣೇಶ್‍ ಅಭಿನಯದ ‘ಪಿನಾಕ’ ಚಿತ್ರವಷ್ಟೇ ಅಲ್ಲ, ಶ್ರೀಮುರಳಿ ಅಭಿನಯದಲ್ಲೂ ಒಂದು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಬೇರೆ ಹೀರೋಗಳೊಂದಿಗೂ ಚಿತ್ರ ಮಾಡುವುದಕ್ಕೆ ಮುಂದಾಗಿದ್ದಾರೆ.

ಆ ಕುರಿತು ಮಾತನಾಡಿದ ಅವರು, ‘ಕಳೆದ ಎರಡು ವರ್ಷಗಳಿಂದ ನಾವು ಕನ್ನಡದ ಹಲವು ಜನಪ್ರಿಯ ಹೀರೋಗಳ ಜೊತೆಗೆ ಚಿತ್ರ ಮಾಡುವುದಕ್ಕೆ ಮಾತುಕತೆ ನಡೆಸಿದ್ದೇವೆ. ಉಪೇಂದ್ರ ಒಬ್ಬರನ್ನು ಭೇಟಿ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಮಿಕ್ಕಂತೆ ಶ್ರೀಮುರಳಿ ಜೊತೆಗೆ ಒಂದು ಚಿತ್ರ ಈಗಾಗಲೇ ಘೋಷಣೆಯಾಗಿದೆ. ಶಿವರಾಜಕುಮಾರ್‌ ಮತ್ತು ಧ್ರುವ ಸರ್ಜಾ ಜೊತೆಗೆ ಮಾತುಕತೆಯಾಗಿದ್ದು, ಕಥೆ ಫೈನಲ್‍ ಆಗಿಲ್ಲ. ಗಣೇಶ್‍ ಅಭಿನಯದ ‘ಪಿನಾಕ’ ಚಿತ್ರವು ಫೆಬ್ರವರಿಯಲ್ಲಿ ಪ್ರಾರಂಭವಾಗುತ್ತಿದೆ. ಕನ್ನಡದಲ್ಲಿ ಮುಂದಿನ ದಿನಗಳಲ್ಲಿ ಒಟ್ಟು ನಾಲ್ಕು ಚಿತ್ರಗಳು ನಿರ್ಮಿಸುತ್ತಿದ್ದೇವೆ’ ಎಂದರು.

ಪರಭಾಷೆಗಳ ಪ್ರತಿಷ್ಠಿತ ನಿರ್ಮಾಪಕರು ಕನ್ನಡಕ್ಕೆ

ಇದಲ್ಲದೆ, ಇನ್ನೊಂದಿಷ್ಟು ಪರಭಾಷಾ ನಿರ್ಮಾಪಕರು ಕನ್ನಡ ಚಿತ್ರಗಳತ್ತ ಬರುತ್ತಿದ್ದಾರೆ. ಪ್ರಮುಖವಾಗಿ, ಈಗಾಗಲೇ ಸುದೀಪ್‍ ಅಭಿನಯದ ‘ಮ್ಯಾಕ್ಸ್’ ಚಿತ್ರವನ್ನು ತಮಿಳಿನ ಜನಪ್ರಿಯ ನಿರ್ಮಾಪಕರಾದ ಕಲೈಪುಲಿ ಎಸ್‍ ಧನು ನಿರ್ಮಿಸಿದ್ದಾರೆ. ‘ಹನುಮಾನ್‍’ ಚಿತ್ರವನ್ನು ಪ್ರೈಮ್‍ ಶೋ ಎಂಟರ್‍ಟೈನ್‍ಮೆಂಟ್ ಸಂಸ್ಥೆಯಡಿ ಕೆ. ನಿರಂಜನ್‍ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ನಿರ್ಮಿಸುತ್ತಿದ್ದಾರೆ. ಇದೊಂದು ಪ್ಯಾನ್‍ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ತೆಲುಗಿನಲ್ಲಿ ‘ಈಗ’ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ವರಾಹಿ ಚಲನಚಿತ್ರಂನ ಸಾಯಿ ಕೊರ್ರಪಾಟಿ, ‘ಜ್ಯೂನಿಯರ್’ ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹೀಗೆ ಇನ್ನೊಂದಿಷ್ಟು ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಲೇ ಇದೆ.

ಕಡಿಮೆಯಾದ ಕನ್ನಡದ ರೆಗ್ಯುಲರ್ ನಿರ್ಮಾಪಕರು

ಒಂದು ಕಡೆ ಪರಭಾಷೆಯ ಚಿತ್ರಗಳ ನಿರ್ಮಾಪಕರರು ಕನ್ನಡದತ್ತ ಹುಡುಕಿಕೊಂಡು ಬಂದರೆ, ಇನ್ನೊಂದು ಕಡೆ ಕನ್ನಡದಲ್ಲಿ ಸತತವಾಗಿ ಚಿತ್ರ ಮಾಡುವ ನಿರ್ಮಾಪಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಕಳೆದ ವರ್ಷವನ್ನೇ ತೆಗೆದುಕೊಂಡರೆ, ಬಿಡುಗಡೆಯಾದ 15-20 ಚಿತ್ರಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಕಳೆದ ವರ್ಷ 200ಕ್ಕೂ ಹೆಚ್ಚು ಹೊಸ ನಿರ್ಮಾಪಕರು ಬಂದಿದ್ದಾರೆ. ಹೊಂಬಾಳೆ ಫಿಲಂಸ್‍ನ ವಿಜಯ್‍ ಕಿರಗಂದೂರು (ಯುವ ಮತ್ತು ಬಘೀರ), ರಾಕ್‍ಲೈನ್ ವೆಂಕಟೇಶ್‍ (ಕರಟಕ ದಮನಕ), ಉಮಾಪತಿ ಶ್ರೀನಿವಾಸ ಗೌಡ (ಉಪಾಧ್ಯಕ್ಷ), ದೇವರಾಜ್‍ (ಸ್ಕಾಮ್‍ 1770), ರಕ್ಷಿತ್ ‍ಶೆಟ್ಟಿ (ಬ್ಯಾಚುಲರ್‌ ಪಾರ್ಟಿ ಮತ್ತು ಇಬ್ಬನಿ ತಬ್ಬಿದ ಇಳೆಯಲಿ), ರಿಷಭ್‍ ಶೆಟ್ಟಿ (ಶಿವಮ್ಮ ಎರೆಹಂಚಿನಾಳ ಮತ್ತು ಲಾಫಿಂಗ್‍ ಬುದ್ಧ), ಉದಯ್ ಮೆಹ್ತಾ (ಮಾರ್ಟಿನ್‍), ಗೀತಾ ಶಿವರಾಜಕುಮಾರ್ (ಭೈರತಿ ರಣಗಲ್‍), ವಿಖ್ಯಾತ್‍ (ರಂಗನಾಯಕ), ಕೃಷ್ಣಸಾರ್ಥಕ್‍ (ಭೀಮ), ಪರಮೇಶ್‍ (ಪ್ರಣಯಂ) ಸೇರಿದಂತೆ ಒಂದಿಷ್ಟು ಈಗಾಗಲೇ ಚಿತ್ರಗಳನ್ನು ನಿರ್ಮಿಸಿರುವ, ಹೆಸರು ಮತ್ತು ಯಶಸ್ಸನ್ನು ಕಂಡಿರುವ ನಿರ್ಮಾಪಕರು ಕಳೆದ ವರ್ಷ ಅದೃಷ್ಟಪರೀಕ್ಷೆಗೆ ಇಳಿದಿದ್ದರು. ಈ ಪೈಕಿ ಒಂದಿಬ್ಬರನ್ನು ಹೊರತುಪಡಿಸಿದರೆ, ಮಿಕ್ಕವರೆಲ್ಲಾ ಸೋತಿದ್ದಾರೆ. ಈ ವರ್ಷ ಸಹ ಇದಕ್ಕಿಂತ ಹೊರತಲ್ಲ. ಈ ವರ್ಷವೂ 200ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆ ಆಗುತ್ತಿದ್ದು, ಈ ಪೈಕಿ ಹೊಸ ನಿರ್ಮಾಪಕರ ಪಾಲು ಶೇ. 95ರಷ್ಟಾದರೆ, ಹಳಬರ ಪಾಲು ಶೇ. 5ರಷ್ಟು ಮತ್ತು ಅದಕ್ಕಿಂತ ಕಡಿಮೆ.

ಕನ್ನಡದಲ್ಲಿ ಉಳಿದಿರುವ ಬೆರಳಣಿಕೆ ನಿರ್ಮಾಪಕರು

ಒಂದು ಕಾಲದಲ್ಲಿ ಕನ್ನಡದಲ್ಲಿ ಸಾಕಷ್ಟು ಜನಪ್ರಿಯ ನಿರ್ಮಾಣ ಸಂಸ್ಥೆಗಳು ಮತ್ತು ನಿರ್ಮಾಪಕರು ಸತತವಾಗಿ ಚಿತ್ರಗಳನ್ನು ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ಈಗ ಒಂದು ದಶಕದಿಂದೀಚೆಗೆ, ಅವರಲ್ಲಿ ಬಹಳಷ್ಟು ಜನ ಚಿತ್ರ ನಿರ್ಮಾಣದಿಂದ ದೂರವಾಗಿದ್ದಾರೆ. ಕೋವಿಡ್‍ ನಂತರದ ಕಾಲಘಟ್ಟದಲ್ಲಿ ರೆಗ್ಯುಲರ್‌ ನಿರ್ಮಾಪಕರ ಸಂಖ್ಯೆ ಕಡಿಮೆಯಾಗಿದೆ. ಹಳೆಯ ನಿರ್ಮಾಪಕರೆಲ್ಲಾ ಟ್ರೇಲರ್‌ ಮತ್ತು ಹಾಡು ಬಿಡುಗಡೆ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಹೊಸ ನಿರ್ಮಾಪಕರಿಗೆ ಶುಭಕೋರುವುದನ್ನು ಬಿಟ್ಟರೆ, ಮಿಕ್ಕಂತೆ ಕನ್ನಡ ಚಿತ್ರರಂಗದಿಂದ ದೂರವಾಗಿದ್ದಾರೆ. ಹೊಂಬಾಳೆ ಫಿಲಂಸ್‍, KRG ಸ್ಟುಡಿಯೋಸ್, ಗೀತಾ ಪಿಕ್ಚರ್ಸ್, KVN ಪ್ರೊಡಕ್ಷನ್ಸ್ ಮುಂತಾದ ಬೆರಳಣಿಕೆಯಷ್ಟು ಸಂಸ್ಥೆಗಳು ಮಾತ್ರ ಸಿನಿಮಾಗಳನ್ನು ಮುಂದವರೆಸಿವೆ. ಆ ಸಂಸ್ಥೆಗಳು ಸಹ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಲಾಭವನ್ನೇನೂ ನೋಡಿಲ್ಲ.

ಪರಭಾಷೆಗಳತ್ತ ದೊಡ್ಡ ನಿರ್ಮಾಪಕರು

ಇದರಲ್ಲಿ ಸ್ಥಿತಿವಂತರಾಗಿರುವ ನಿರ್ಮಾಪಕರು ಸಹ ಕನ್ನಡಕ್ಕಿಂತ ಬೇರೆ ಭಾಷೆಗಳತ್ತ ಮುಖ ಮಾಡುತ್ತಿದ್ದಾರೆ. ಹೊಂಬಾಳೆ ಫಿಲಂಸ್‍ನ ವಿಜಯ್‍ ಕಿರಗಂದೂರು, ತೆಲುಗಿನಲ್ಲಿ ಹೆಚ್ಚುಹೆಚ್ಚು ಸಕ್ರಿಯರಾಗುತ್ತಿದ್ದಾರೆ. ಪ್ರಭಾಸ್‍ ಅಭಿನಯದಲ್ಲಿ ಮೂರು ಚಿತ್ರಗಳನ್ನು ನಿರ್ಮಿಸುವುದಾಗಿ ಅವರು ಇತ್ತೀಚೆಗೆ ಘೋಷಿಸಿದ್ದರು. ಈ ಮೂರು ಚಿತ್ರಗಳಿಂದ ಅವರು ಹೂಡಿಕೆ ಮಾಡುತ್ತಿರುವ ಮೊತ್ತ 1000 ಕೋಟಿಗೂ ಹೆಚ್ಚು ಎಂದು ಹೇಳಲಾಗುತ್ತಿದೆ. KVN ಪ್ರೊಡಕ್ಷನ್ಸ್ ಸಂಸ್ಥೆಯು ಈಗಾಗಲೇ ತಮಿಳಿನಲ್ಲಿ ವಿಜಯ್‍ ಅಭಿನಯದ ಚಿತ್ರವೊಂದನ್ನು ನಿರ್ಮಿಸುತ್ತಿದೆ. ಈ ಚಿತ್ರದ ಬಜೆಟ್‍ 500 ಕೋಟಿ ರೂ. ಮೀರುತ್ತದೆ ಎಂಬ ಗುಸುಗುಸು ಇದೆ. ಇದಲ್ಲದೆ ಮಲಯಾಳಂನಲ್ಲೂ KVN ಪ್ರೊಡಕ್ಷನ್‌ ಕೋನ ವೆಂಕಟ್‍ ನಾರಾಯಣ್‍ ಚಿತ್ರ ನಿರ್ಮಿಸುತ್ತಿದ್ದಾರೆ.

ಕರ್ನಾಟಕ ಮೂಲದ ನಿರ್ಮಾಪಕರು ಪರಭಾಷೆಗಳಲ್ಲಿ ಹೀಗೆ ದೊಡ್ಡ ಹೂಡಿಕೆ ಮಾಡುತ್ತಿರುವುದು ಖುಷಿಯ ವಿಚಾರವಾದರೂ, ಕನ್ನಡ ಚಿತ್ರರಂಗಕ್ಕೆ ಹೆಚ್ಚು ಪ್ರಯೋಜನವಿಲ್ಲ. ಈ ಪೈಕಿ ವಿಜಯ್‍ ಕಿರಗಂದೂರು, ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಅಧ್ಯಾಯ 1’ ಚಿತ್ರವನ್ನು ಮತ್ತು ವೆಂಕಟ್‍ ನಾರಾಯಣ್‍ ಅವರು ಯಶ್‍ ಅಭಿನಯದ ‘ಟಾಕ್ಸಿಕ್‍’ ಮತ್ತು ಧ್ರುವ ಸರ್ಜಾ ಅಭಿನಯದ ’ಕೆಡಿ – ದಿ ಡೆವಿಲ್‍’ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ದರ್ಶನ್‍ ಅಭಿನಯದಲ್ಲಿ ಹೊಸ ಚಿತ್ರವನ್ನು ಅವರು ಘೋಷಿಸಿದರೂ ಆ ಚಿತ್ರ ಯಾವಾಗ ಶುರು ಗೊತ್ತಿಲ್ಲ.

ದೂರಾಗುತ್ತಿರುವುದಕ್ಕೆ ನೂರೆಂಟು ಕಾರಣಗಳು

ಮಿಕ್ಕಂತೆ ರೆಗ್ಯುಲರ್ ನಿರ್ಮಾಪಕರ ಪೈಕಿ ಹಲವರು ಚಿತ್ರ ನಿರ್ಮಾಣ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಕೆಲವರು ಚಿತ್ರ ನಿರ್ಮಾಣದ ಸಹವಾಸವೇ ಸಾಕು ಎಂದು ದೂರವಾಗಿಬಿಟ್ಟಿದ್ದಾರೆ. ಬಹುತೇಕರು ಕನ್ನಡದಲ್ಲಿ ಇಂದು ಚಿತ್ರ ನಿರ್ಮಾಣ ಮಾಡುವುದಕ್ಕೆ ಪೂರಕವಾದ ವಾತಾವರಣ ಇಲ್ಲ ಎಂದು ಅಭಿಪ್ರಾಯಪಡುತ್ತಾರೆ. ‘ಇಲ್ಲಿ ಪ್ರತಿ ಹೆಜ್ಜೆಗೂ ಸಮಸ್ಯೆ. ನಾಯಕರ ದುಬಾರಿ ಸಂಭಾವನೆ. ಚಿತ್ರೀಕರಣ ಮಾಡುವುದಕ್ಕೆ ಸೂಕ್ತ ಸ್ಟುಡಿಯೋಗಳಿಲ್ಲ. ಪರಭಾಷೆಗಳ ಚಿತ್ರಗಳ ಪೈಪೋಟಿ, ಚಿತ್ರಮಂದಿರಗಳ ಸಮಸ್ಯೆ, ಹೆಚ್ಚುತ್ತಿರುವ ಬಜೆಟ್‍, ಪ್ರೇಕ್ಷಕರ ಅಭಾವ, ಬದಲಾದ ಪ್ರೇಕ್ಷಕರ ಅಭಿರುಚಿ, ಎಷ್ಟು ಮಾಡಿದರೂ ಸಾಲದ ಪ್ರಚಾರ, ಓಟಿಟಿ ಮತ್ತು ಟಿವಿ ಚಾನಲ್‍ಗಳ ನಿರಾಸಕ್ತಿ … ಇವೆಲ್ಲದರಿಂದ ಚಿತ್ರ ನಿರ್ಮಾಣ ಮಾಡುವುದು ಕಷ್ಟವಾಗುತ್ತಿದೆ’ ಎಂದು ಹೇಳುತ್ತಾರೆ ಹೆಸರು ಹೇಳಲು ಇಚ್ಛಿಸದ ಹಿರಿಯ ನಿರ್ಮಾಪಕರೊಬ್ಬರು.

ಸಿನಿಮಾ ಮಾಡಲು ನಿರ್ಮಾಪಕರ ಹೆದರಿಕೆ

ಕಳೆದ ವರ್ಷ ಬಿಡುಗಡೆಯಾದ ‘ಪ್ರಣಯಂ’ ಚಿತ್ರದ ಸಮಾರಂಭದಲ್ಲಿ ನಿರ್ಮಾಪಕ ಪರಮೇಶ್‍ ಬಹಿರಂಗವಾಗಿಯೇ ತಮ್ಮ ಅಳಲನ್ನು ತೋಡಿಕೊಂಡಿದ್ದರು. ‘ಇಲ್ಲಿ ನಿರ್ಮಾಪಕರಿಗೆ ಇರುವ ಸಮಸ್ಯೆಗಳು ಬೇರೆ ಯಾರಿಗೂ ಇಲ್ಲ. ಕೆಲವರು ಮಾತ್ರ ಬದುಕುತ್ತಾರೆ. ಒಂದು ಸಿನಿಮಾ ಮಾಡುತ್ತೀನಿ ಅಂದರೆ ಎಲ್ಲರೂ ಇರುತ್ತಾರೆ. ಆದರೆ, ನಂತರ ಯಾರೂ ಇರುವುದಿಲ್ಲ. ಈಗಂತೂ ಸಿನಿಮಾ ಮಾಡಬಹುದು. ಬಿಡುಗಡೆ ಮಾಡೋಕೆ ಹೊರಟರೆ, ನಿಜಕ್ಕೂ ಗಂಡೆದೆ ಇರಬೇಕು. ಹೆರಿಗೆ ನೋವಿಗಿಂತ ದೊಡ್ಡ ನೋವು ಅದು. ಒಂದು ಸಿನಿಮಾ ಬಿಡುಗಡೆ ಮಾಡೋಕೆ ಪ್ರಮೋಷನ್‍ಗೆ ಎರಡೂವರೆ ಕೋಟಿ ಬಜೆಟ್‍ ಕೊಡುತ್ತಾರೆ. ಇನ್ನು, ಚಿತ್ರಮಂದಿರಗಳು ಕನ್ನಡ ಚಿತ್ರಗಳಿಗೆ ಕೊಡೋದೇ ಇಲ್ಲ. ಇಲ್ಲ ಯಾವುದೇ ನಾಯಕತ್ವವಿಲ್ಲ. ಒಂದು ಕಾಲಕ್ಕೆ ಸಿನಿಮಾ ಕ್ಷೇತ್ರ ಬಹಳ ಚೆನ್ನಾಗಿತ್ತು. ನಾನು ಚಿತ್ರರಂಗಕ್ಕೆ ಬಂದಾಗ ಸಿನಿಮಾ ಮಾಡೋಕೆ ಖುಷಿಯಾಗುತ್ತಿತ್ತು. ಈಗ ಸಿನಿಮಾ ಮಾಡೋದು, ಬಿಡುಗಡೆ ಮಾಡೋದು ಬಹಳ ಭಯ ಆಗುತ್ತದೆ’ ಎಂದು ಹೇಳಿಕೊಂಡಿದ್ದರು.

ಇವೆಲ್ಲವನ್ನು ಸಹಿಸಿಕೊಳ್ಳಲು ಶಕ್ತಿ ಇರುವ ನಿರ್ಮಾಪಕರು ಮಾತ್ರ ಉಳಿಯುತ್ತಿದ್ದಾರೆ. ಹಾಗಾಗಿ, ಕನ್ನಡದಲ್ಲಿ ಶಕ್ತಿ ಇರುವಂತಹ ನಿರ್ಮಾಪಕರು ಮಾತ್ರ ಸಿನಿಮಾ ನಿರ್ಮಾಣ ಮುಂದುವರೆಸಿದ್ದಾರೆ. ಮಿಕ್ಕಂತೆ ಕೆಲವರು ಚಿತ್ರರಂಗದ ಸಹವಾಸವೇ ಬೇಡ ಎಂದು ದೂರ ಇದ್ದುಬಿಟ್ಟಿದ್ದಾರೆ. ಮಿಕ್ಕಂತೆ ಒಂದಿಷ್ಟು ಹೊಸಬರು, ಹೊಸಬರನ್ನೇ ಹಾಕಿಕೊಂಡು ಕಡಿಮೆ ಬಜೆಟ್‍ನ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಅದರಿಂದಲಾದರೂ ಏನಾದರೂ ಸಹಾಯವಾಗಬಹುದಾ? ಎಂದರೆ, ಅವರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಹಾಗಿರುವಾಗ ಮುಂದೇನು? ಕಾಲವೇ ಉತ್ತರಿಸಬೇಕು.

Tags:    

Similar News