ಕುವೆಂಪು ಆಯ್ತು, ಈಗ ಡಿವಿಜಿ ಕುರಿತ ಚಿತ್ರ; ಮೇನಲ್ಲಿ ಬರಲಿದೆ ‘ಮಂಕುತಿಮ್ಮನ ಕಗ್ಗ’

ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಕುರಿತು ‘ರಸಋಷಿ ಕುವೆಂಪು’ ಎಂಬ ಚಿತ್ರ ಕೆಲವು ವರ್ಷಗಳ ಹಿಂದೆ ಬಂದಿತ್ತು. ಕನ್ನಡದ ಭಗವದ್ಗೀತೆ ಎಂದು ಜನಪ್ರಿಯವಾಗಿರುವ ‘ಮಂಕುತಿಮ್ಮನ ಕಗ್ಗ’ ಮತ್ತು ಅದನ್ನು ಬರೆದ ಡಾ.ಡಿ.ವಿ. ಗುಂಡಪ್ಪನವರ ಕುರಿತು ಕನ್ನಡದಲ್ಲಿ ಸದ್ದಿಲ್ಲದೆ ಒಂದು ಚಿತ್ರ ನಿರ್ಮಾಣವಾಗಿದೆ. ಅದೇ ‘ಮಂಕುತಿಮ್ಮನ ಕಗ್ಗ’.;

Update: 2025-04-27 11:09 GMT

ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಕುರಿತು ‘ರಸಋಷಿ ಕುವೆಂಪು’ ಎಂಬ ಚಿತ್ರ ಕೆಲವು ವರ್ಷಗಳ ಹಿಂದೆ ಬಂದಿತ್ತು. ಈ ಚಿತ್ರದಲ್ಲಿ ನಟ-ನಿರ್ದೇಶಕ ಸಿ.ಆರ್. ಸಿಂಹ ಅವರು ಕುವೆಂಪು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದ ಭಗವದ್ಗೀತೆ ಎಂದು ಜನಪ್ರಿಯವಾಗಿರುವ ‘ಮಂಕುತಿಮ್ಮನ ಕಗ್ಗ’ ಮತ್ತು ಅದನ್ನು ಬರೆದ ಡಾ.ಡಿ.ವಿ. ಗುಂಡಪ್ಪನವರ ಕುರಿತು ಕನ್ನಡದಲ್ಲಿ ಸದ್ದಿಲ್ಲದೆ ಒಂದು ಚಿತ್ರ ನಿರ್ಮಾಣವಾಗಿದೆ. ಅದೇ ‘ಮಂಕುತಿಮ್ಮನ ಕಗ್ಗ’.

‘ಮಂಕುತಿಮ್ಮನ ಕಗ್ಗ’ ಎಂಬ ಹೆಸರು ಕೇಳುತ್ತಿದ್ದಂತೆಯೇ ಇದು ಕಗ್ಗದ ಕುರಿತಾದ ಚಿತ್ರ ಅಂತನಿಸಿದರೆ ಆಶ್ಚರ್ಯವಿಲ್ಲ. ಇದು ಡಿ.ವಿ.ಜಿ ಅವರ ಬಾಲ್ಯದ ದಿನಗಳ ಕುರಿತಾದ ಚಿತ್ರ. ರಾಜ ರವಿಶಂಕರ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಎನ್.ಎ. ಶಿವಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.

Full View

‘ಮಂಕುತಿಮ್ಮನ ಕಗ್ಗ’ ಚಿತ್ರದಲ್ಲಿ ಬರೀ ಕಗ್ಗ ಹುಟ್ಟಿದ ರೀತಿ ಅಥವಾ ಅದು ಸಮಾಜದ ಮೇಲಾದ ಪರಿಣಾಮದ ಕುರಿತಾಗಿ ಅಷ್ಟೇ ಅಲ್ಲ, ಚಿತ್ರದಲ್ಲಿ‌‌ ಡಿ.ವಿ.ಜಿ ಅವರ ಬಾಲ್ಯದ ದಿನಗಳ ಬಗ್ಗೆ ತೋರಿಸಲಾಗಿದೆ. ಗುಂಡಪ್ಪನವರ ಮೇಲೆ ಅವರ ಸೋದರ ಮಾವ‌ ತಿಮ್ಮಣ್ಣ ಮೇಷ್ಟ್ರು ಯಾವ ರೀತಿ ಪ್ರಭಾವ ಬೀರಿದರು ಮತ್ತು ಕಗ್ಗ ರಚನೆಗೆ ಹೇಗೆ ಸ್ಫೂರ್ತಿಯಾದರು ಎಂದು ತೋರಿಸಲಾಗಿದೆಯಂತೆ.

ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ರವಿಶಂಕರ್, ‘ಈ ಚಿತ್ರದಲ್ಲಿ‌‌ ಡಿ.ವಿ.ಜಿ ಅವರ ಬಾಲ್ಯದ ದಿನಗಳ ಬಗ್ಗೆ ತೋರಿಸಲಾಗಿದೆ.‌ ಬಾಲ್ಯದಲ್ಲಿ ಡಿ.ವಿ.ಜಿ ಅವರ ಮೇಲೆ ಅತ್ಯಂತ ಪ್ರಭಾವ ಬೀರಿದ್ದು ಅವರ ಸೋದರಮಾವ ತಿಮ್ಮಣ್ಣ ಮೇಷ್ಟ್ರು. ಸೋದರಮಾವ ಹಾಗೂ ಸೋದರಳಿಯನ ಬಾಂಧವ್ಯವನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ತಿಮ್ಮಣ್ಣ ಮೇಷ್ಟ್ರು ಪಾತ್ರದಲ್ಲಿ ಹಿರಿಯ ನಟ ರಾಮಕೃಷ್ಣ, ಸೋಮಿ (ಡಿ.ವಿ.ಜಿ) ಅವರ ಪಾತ್ರದಲ್ಲಿ ಮಾಸ್ಟರ್ ರಣವೀರ್, ಅಲಮೇಲು ಪಾತ್ರದಲ್ಲಿ ಭವ್ಯಶ್ರೀ ರೈ, ವೆಂಕರಮಣಯ್ಯ ಪಾತ್ರದಲ್ಲಿ ರವಿನಾರಾಯಣ್ ಹಾಗೂ ಅಜ್ಜಿಯ ಪಾತ್ರದಲ್ಲಿ ಲಕ್ಷ್ಮೀ ನಾಡಗೌಡ ಅಭಿನಯಿಸಿದ್ದಾರೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಮೇ ಎರಡನೇ ವಾರದಲ್ಲಿ ಬಿಡುಗಡೆಯಾಗಲಿದೆ’ ಎಂದು ಮಾಹಿತಿ ನೀಡಿದರು. ಈ ಕಥೆಯನ್ನು ವಿಸ್ತರಿಸುವುದರ ಜೊತೆಗೆ, ‌ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ ನಿರ್ದೇಶಕ ರಾಜ ರವಿಶಂಕರ್.


ತಮ್ಮ ವೃತ್ತಿಬದುಕಲ್ಲಿ ಅಮೂಲ್ಯ ಚಿತ್ರವಿದು ಎನ್ನುವ ಹಿರಿಯ ನಟ ರಾಮಕೃಷ್ಣ, ‘ಈ ಪಾತ್ರ ನನಗೆ ಯಾಕೆ ಕೊಟ್ಟರು ಗೊತ್ತಿಲ್ಲ. ಅದನ್ನು ನಿರ್ದೇಶಕರೇ ಹೇಳಬೇಕು. ನನ್ನನ್ನು ಬಿಟ್ಟುಬಿಡಿ ಎಂದು ಮೊದಲೇ ಹೇಳಿದ್ದೆ. ಏಕೆಂದರೆ, ಮೊದಲು ನಾವು ಕಗ್ಗವನ್ನು ಓದಬೇಕು. ಅದು ಕನ್ನಡದ ಭಗವದ್ಗೀತೆ. ಅದರ ಬಗ್ಗೆ ಸ್ವಲ್ಪವಾದರೂ ತಿಳಿದುಕೊಳ್ಳಬೇಕು. ಸುಮ್ಮನೆ ಅದನ್ನು ಮುಟ್ಟಬಾರದು ಎಂಬ ನಿಲುವು ನನ್ನದು. ನಮ್ಮಿಬ್ಬರಲ್ಲಿ ಸಾಕಷ್ಟು ವಾದ-ಪ್ರತಿವಾದ ಆಗಿದೆ. ಅವರಿಗೆ ನಾನು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದೇನೆ. ಈ ಚಿತ್ರದಲ್ಲಿ ನಾನು ಗುಂಡಪ್ಪನವರ ಸೋದರ ಮಾವನ ಪಾತ್ರ ಮಾಡಿದ್ದೇನೆ. ನನ್ನ ಮಾತೇ ಕಗ್ಗ ಎಂದು ಅವರು ಹೇಳುತ್ತಾರೆ. ಆದರೆ, ನಾನು ಎಲ್ಲೂ ಕಗ್ಗವನ್ನು ಬಾಯಿಬಿಟ್ಟು ಹೇಳಿಲ್ಲ. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಅಪರೂಫದ ಚಿತ್ರ’ ಎಂದರು.


ಈ ಚಿತ್ರಕ್ಕೆ ಸೋಸಲೆ ಅಯ್ಯ ಶಾಸ್ತ್ರಿಗಳು ಬರೆದಿರುವ ‘ಸ್ವಾಮಿದೇವನೇ …’ ಹಾಡನ್ನು ಬಳಸಿಕೊಳ್ಳಲಾಗಿದ್ದು, ಈ ಹಾಡು ಈಗಾಗಲೇ ಬಿಡುಗಡೆಯಾಗಿದೆ. ಚಿತ್ರಕ್ಕೆ ‌ಎ.ಟಿ.ರವೀಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿ. ನಾರಾಯಣ್ ಛಾಯಾಗ್ರಹಣ ಹಾಗೂ ಆರ್ ಡಿ ರವಿ ಸಂಕಲನ ಈ ಚಿತ್ರಕ್ಕಿದೆ‌.

Tags:    

Similar News